ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಕಾರ್ಟಿಯರ್ ವಾಚ್ ಧರಿಸಿದ್ದಕ್ಕೆ ಛಲವಾದಿ ನಾರಾಯಣಸ್ವಾಮಿ ಟೀಕೆ ಮಾಡಿ, ಚುನಾವಣಾ ಅಫಿಡವಿಟ್ ಪ್ರದರ್ಶಿಸಿದ್ದಾರೆ. ಡಿ.ಕೆ ಶಿವಕುಮಾರ್ ಬಳಿ ಎರಡೇ ವಾಚ್ ಇರೋದು ಅಂತ ಅಫಿಡವಿಟ್‌ನಲ್ಲಿದೆ. ಅದರಲ್ಲಿ ಒಂದು ಹ್ಯೂಬ್ಲೋಟ್ ವಾಚ್ ಇನ್ನೊಂದು ರೊಲೆಕ್ಸ್ ವಾಚ್. ಇವೆರಡರ ದರ ಎಷ್ಟು ಅಂತೆಲ್ಲ ಅಫಿಡವಿಟ್‌ನಲ್ಲಿದೆ. ಹಾಗಾದ್ರೆ ಈಗ ಹಾಕಿರುವ ಕಾರ್ಟಿಯರ್ ವಾಚ್ ಯಾವುದು..? ಎಲ್ಲಿಯದು..? ಈ ಮೂರನೇಯ ವಾಚ್ ಯಾರು ಕೊಟ್ರು..? ಕಾರ್ಟಿಯರ್ ವಾಚ್ ಯಾರೋ ಕದ್ದು ಕೊಟ್ಟಿದ್ದಾ..? ಖರೀದಿಸಿದ್ದಾ..? ಖರೀದಿಸಿದ್ರೆ ಬಿಲ್ ತೋರಿಸಿ ಎಂದು ಆಗ್ರಹ ಮಾಡಿದ್ದಾರೆ. ಈ ಬಗ್ಗೆ ಸಿಎಂ, ಡಿಸಿಎಂ ಇಬ್ಬರೂ ಪ್ರತಿಕ್ರಿಯೆ ನೀಡಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ವಾಚ್ ವಿಚಾರವಾಗಿ ಛಲವಾದಿ ನಾರಾಯಣಸ್ವಾಮಿ ಮಾತನಾಡಿದ್ದಾರೆ. ನನ್ನ ಅಫಿಡವಿಟ್ ನನಗೆ ಗೊತ್ತು. ನಾನು ವಾಚ್ ಖರೀದಿ ಮಾಡಿದ್ದನ್ನ ಅಫಿಡವಿಟ್‌ನಲ್ಲಿ ತೋರಿಸಿದ್ದೇನೆ. ಅವನಿಗೇನ್ ಗೊತ್ತು, ನನ್ನ ಅಫಿಡವಿಟ್..? ನಾನು ಕ್ರೆಡಿಟ್ ಕಾರ್ಡ್‌ನಲ್ಲಿ ಖರೀದಿಸಿದ್ದನ್ನು ತೋರಿಸಿದ್ದೇನೆ. ಛಲವಾದಿಗೆ ಏನ್ ಗೊತ್ತು..? ಎಂದು ಪ್ರಶ್ನಿಸಿದ್ದಾರೆ. ಇನ್ನು ವಾಚ್ ಕದ್ದಿದ್ದಾ..? ಅನ್ನೋ ಮಾತಿಗೆ ತಿರುಗೇಟು ನೀಡಿದ್ದು, ಹೌದು, ನಾನು ಅವರ ಮನೆಯಿಂದ ವಾಚ್ ಕದ್ದಿದ್ದೇನೆ ಎಂದು ವ್ಯಂಗ್ಯಭರಿತ ಮಾತುಗಳಲ್ಲಿ ಡಿ.ಕೆ ಶಿವಕುಮಾರ್ ಉತ್ತರಿಸಿದ್ದಾರೆ.

ಅಫಿಡವಿಟ್‌ನಲ್ಲಿ ವಾಚ್ ಬಗ್ಗೆ ಮಾಹಿತಿ ಹಾಕಿಲ್ಲ ಎಂದ ಛಲವಾದಿ ನಾರಾಯಣ ಸ್ವಾಮಿ ಹೇಳಿಕೆ ಡಿಸಿಎಂ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದು, ಯಾರು ಹೇಳಿದ್ದು..? ಅವರಿಗೆ ಏನು ಗೊತ್ತು..? ಅವರಿಗೆ ಏನು ಗೊತ್ತು ಅಂತ..? ನನ್ನ ಅಫಿಡವಿಟ್ ನನಗೆ ಗೊತ್ತು, ನಾನು ಕಾಸ್ ಕೊಟ್ಟಿರೋದು ನನಗೆ ಗೊತ್ತು. ನನ್ನ ಕ್ರೆಡಿಟ್ ಕಾರ್ಡ್ ಬಳಸಿರೋದು ನನಗೆ ಗೊತ್ತು. ಎಲ್ಲ ಗೊತ್ತು, ಅರ್ಥ ಆಯ್ತ..? ನಾನು ಅಷ್ಟು ಪಾರದರ್ಶಕವಾಗಿ ಎಲ್ಲವನ್ನೂ ಹೇಳಿದ್ದೇನೆ. ರೋಲೆಕ್ಸ್ ವಾಚ್ ನನ್ನ ಬಳಿ ಇರೋದು ಹೇಳಿದ್ದೇನೆ. ಈಗ ಕಟ್ಟಿರೋ ವಾಚ್ ಬಗ್ಗೆಯೂ ಹೇಳಿದ್ದೇನೆ, ಅರ್ಥ ಆಯ್ತಾ..?. ನಾನು ನಾರಾಯಣ ಸ್ವಾಮಿ ಹತ್ತಿರ ಕಲಿಯಬೇಕಿರೋದು ಏನು ಇಲ್ಲ ಎಂದಿದ್ದಾರೆ.
ಕಾರ್ಟಿಯರ್ ವಾಚ್ ಕದ್ದಿರೋದಾ..? ಎಂಬ ಛಲವಾದಿ ನಾರಾಯಣಸ್ವಾಮಿ ಮಾತಿಗೆ ಅವರ ಮನೆಯಿಂದನೇ ಕದ್ದಿದ್ದೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ರೆ, ಕಾರ್ಟಿಯಾರ್ ವಾಚ್ ಬಗ್ಗೆ ಲೆಕ್ಕಕೊಡಿ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಯಾರ್ ಕೇಳಿದ್ದು..? ಎಂದ ಸಿಎಂ ಸಿದ್ದರಾಮಯ್ಯ, ಛಲವಾದಿ ನಾರಾಯಣಸ್ವಾಮಿ ಎಂದ ಕೂಡಲೇ ನಡೀರಿ ನಡೀರಿ ಎಂದು ತೆರಳಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಮಾತಿಗೆ ಅಷ್ಟೊಂದು ಪ್ರಾಮುಖ್ಯತೆ ಕೊಡುವ ಅಗತ್ಯವಿಲ್ಲ ಎನ್ನುವಂತೆ ಸಿಎಂ ಸಿದ್ದರಾಮಯ್ಯ, ತಿರಸ್ಕಾರದ ಭಾವನೆ ವ್ಯಕ್ತಪಡಿಸಿದ್ದಾರೆ.
ಆದರೆ ವಿಧಾನಸಭಾ ಚಳಿಗಾಲದ ಅಧಿವೇಶನ ಕೆಲವೇ ದಿನಗಳಲ್ಲಿ ಆರಂಭ ಆಗಲಿದ್ದು, ಕಾಂಗ್ರೆಸ್ ಪಕ್ಷದ ವಿರುದ್ಧ ಕೆಂಡಕಾರುವುದಕ್ಕೆ ಬಿಜೆಪಿ ಹಾಗೂ ಜೆಡಿಎಸ್ಗೆ ಬ್ರಹ್ಮಾಸ್ತ್ರವೇ ಸಿಕ್ಕಂತಾಗಿದೆ. ಇಬ್ಬರ ಬಳಿಯೂ ಒಂದೇ ರೀತಿಯ ವಾಚ್ ಇರೋ ಬಗ್ಗೆ ಸಾಕಷ್ಟು ಚರ್ಚೆ ಆಗ್ತಿದೆ. ಇದೀಗ ಸಿಎಂ, ಡಿಸಿಎಂ ಇಬ್ಬರೂ ವಾಚ್ ವಿಚಾರದಿಂದ ಅಂತರ ಕಾಯ್ದುಕೊಂಡು, ಅದೇನು ಮಹತ್ವ ಕೊಡುವ ವಿಚಾರ ಅಲ್ಲ ಎನ್ನುವಂತೆ ಪ್ರತಿಕ್ರಿಯಿಸಿದ್ದಾರೆ. ನಾವು ಯಾರಿಗೂ ಉತ್ತರ ಕೊಡಬೇಕಾಗಿಲ್ಲ ಎನ್ನುವಂತೆ ಮಾತನಾಡಿದ್ದಾರೆ. ಆದರೆ ಸಾರ್ವಜನಿಕ ಬದುಕಿನಲ್ಲಿ ಇರುವ ನಾಯಕರ ಬದುಕು ಕೂಡ ಸಾರ್ವಜನಿಕವಾಗಿ ಪಾರದರ್ಶಕವಾಗಿ ಇದ್ದರೆ ಉತ್ತಮ ಅಲ್ಲವೇ..?


