ಸಿಎಂ ಸಿದ್ದರಾಮಯ್ಯ ಬಣದ ಶಾಸಕರು ಕಳೆದ ವಾರ ವಿದೇಶ ಪ್ರವಾಸ ಹೋಗಿದ್ದರು. ಇದೀಗ ಡಿಕೆಶಿ ಬಣದ ಶಾಸಕರು ಡಿನ್ನರ್ ಪಾಲಿಟಿಕ್ಸ್ ಶುರು ಮಾಡಿದ್ದಾರೆ. ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಹುಟ್ಟುಹಬ್ಬದ ಪ್ರಯುಕ್ತ ಖಾಸಗಿ ಹೋಟೆಲ್‌ನಲ್ಲಿ ಔತಣಕೂಟ ಆಯೋಜಿಸಿದ್ದರು. ಖಾಸಗಿ ಹೋಟೆಲ್‌ನಲ್ಲಿ ನಡೆದ ಔತಣಕೂಟದಲ್ಲಿ ಸಚಿವ ಡಿ. ಸುಧಾಕರ್, ಮಂಕಾಳ ವೈದ್ಯ, ಶಾಸಕರಾದ ಗಣಿಗ ರವಿ, ಶರತ್ ಬಚ್ಚೇಗೌಡ, ಬಸವರಾಜ್ ಶಿವಗಂಗಾ, ಉದಯ್‌ಗೌಡ, ಮಂಥರ್‌ಗೌಡ, ಆನೇಕಲ್ ಶಿವಣ್ಣ, ಸಿ.ಪಿ.ಯೋಗೇಶ್ವರ್, ಡಾ.ರಂಗನಾಥ್, ಹರೀಶ್‌ಗೌಡ, ನಯನಾ ಮೋಟಮ್ಮ, ಪ್ರಕಾಶ್ ಕೋಳಿವಾಡ, ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದರು. ಫೆಬ್ರವರಿ 28 ರಂದು ಬಾಲಕೃಷ್ಣ ಹುಟ್ಟುಹಬ್ಬ ಇರೋದ್ರಿಂದ ನಿನ್ನೆ ಪಾರ್ಟಿ ಆಯೋಜನೆ ಮಾಡಲಾಗಿತ್ತು ಎನ್ನಲಾಗಿದೆ. ಆದರೆ ಡಿನ್ನರ್ ಪಾಲಿಟಿಕ್ಸ್ ಭಾರೀ ಕುತೂಹಲ ಮೂಡಿಸಿದೆ.

ಮತ್ತೊಂದು ಕಡೆ ರಾಜ್ಯ ಕಾಂಗ್ರೆಸ್‌ನಲ್ಲಿ ದಲಿತ ಸಿಎಂ ಕೂಗು ಎದ್ದಿದೆ. ಸಿದ್ದರಾಮಯ್ಯನವರನ್ನ ಅಧಿಕಾರದಿಂದ ಕೆಳಗಿಳಿಸಿ ಬೇರೆಯವರನ್ನು ಆಯ್ಕೆ ಮಾಡುವುದೇ ಆದರೆ ದಲಿತರನ್ನೇ ಸಿಎಂ ಮಾಡಬೇಕು ಎಂದು ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಾಯ ಮಾಡಿದ್ದಾರೆ. ಡಾ.ಜಿ.ಪರಮೇಶ್ವರ್ ಅವರನ್ನ ಯಾರೂ ಪ್ರಶ್ನೆ ಮಾಡುವಂತಿಲ್ಲ. ಅವರು ಯಶಸ್ವಿಯಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಡಾ ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ ಯಾರನ್ನಾದರೂ ಸಿಎಂ ಮಾಡಲಿ. ಸಿದ್ದರಾಮಯ್ಯರನ್ನ ಕೆಳಗಿಳಿಸಿ ಬೇರೆಯವರನ್ನು ಸಿಎಂ ಮಾಡುವಾಗ ಹೈಕಮಾಂಡ್ ಸೂಕ್ತ ತೀರ್ಮಾನ ಮಾಡಬೇಕಿದೆ. ಸಿದ್ದರಾಮಯ್ಯನವರನ್ನ ಅಧಿಕಾರದಲ್ಲಿ ಮುಂದುವರಿಸಿದ್ರೆ ನಮ್ಮ ಅಭ್ಯಂತರವಿಲ್ಲ ಎಂದು ವಿಧಾನಸೌಧದಲ್ಲಿ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಆಗ್ರಹ ಮಾಡಿದ್ದಾರೆ.

ಮೈಸೂರಲ್ಲಿ ಶಾಸಕ ತನ್ವೀರ್ ಸೇಠ್ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ. ಅಧಿಕಾರ ಹಸ್ತಾಂತರ ವಿಚಾರದಲ್ಲಿ ರಾಜ್ಯದಲ್ಲಿ ಗೊಂದಲವಿದೆ. ಗೊಂದಲ ನಿವಾರಿಸುವಂತೆ ಸುರ್ಜೇವಾಲ ಬಳಿ ಮನವಿ ಮಾಡಿದ್ದೇನೆ. ರಾಜಕೀಯವಾಗಿ ರಾಜ್ಯದಲ್ಲಿ ಯಾವುದೂ ಸರಿಯಿಲ್ಲ ಎಂದಿದ್ದಾರೆ. ರಾಜ್ಯದಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ, ಹೀಗೆ ಆದರೆ ಬೇರೆ ಪಕ್ಷಕ್ಕೂ ನಮ್ಮ ಪಕ್ಷಕ್ಕೂ ಏನು ವ್ಯತ್ಯಾಸ..? ಎಂ ದು ಪ್ರಶ್ನಿಸಿದ್ದಾರೆ. ಪಕ್ಷದ ಕಾರ್ಯಾಧ್ಯಕ್ಷನಾಗಿ ನನಗೂ ಜವಾಬ್ದಾರಿಗಳಿವೆ. ಸನ್ನಿವೇಶಗಳು ಕೈ ತಪ್ಪಿ ಹೋಗುವ ಮುನ್ನ ಎತ್ತೆಚ್ಚುಕೊಳ್ಳಬೇಕು. ಅಂತಹ ಸನ್ನಿವೇಶ ನಮ್ಮಲ್ಲಿ ಸೃಷ್ಠಿ ಆಗಬಾರದು. ಅಧಿಕಾರಿ ಹಂಚಿಕೆ ಚರ್ಚೆ ಆಗಿದ್ದರೆ ಬಹಿರಂಗವಾಗಲಿ, ಒಂದು ವೇಳೆ ಸಿಎಂ ಸ್ಥಾನ ನೀಡುವುದಿದ್ದರೆ ನೀಡಲಿ, ಸಿದ್ದರಾಮಯ್ಯ ಅವರೇ ಮುಂದುವರಿಯುವುದಿದ್ದರೆ ಅದನ್ನೇ ಸ್ಪಷ್ಟಪಡಿಸಲಿ. ಈ ಕುರಿತು ಚರ್ಚೆಗೆ ದೆಹಲಿಗೆ ಬರಲು ಸುರ್ಜಿವಾಲ ತಿಳಿಸಿದ್ದಾರೆ . ಒಬ್ಬನೇ ದೆಹಲಿಗೆ ಹೋಗುತ್ತೇನೆ ಎಂದಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯಗೆ ಸ್ಥಾನ ಬಿಟ್ಟುಕೊಡುವಂತೆ ಹೇಳುವ ಧೈರ್ಯವಿಲ್ಲ. ಒಂದು ವೇಳೆ ಸಿದ್ದರಾಮಯ್ಯಗೆ ಅಧಿಕಾರ ಬಿಟ್ಟುಕೊಡುವಂತೆ ಸೂಚನೆ ಕೊಟ್ಟರೂ ದಲಿತ ಸಿಎಂ ಕೂಗು ಸೃಷ್ಟಿಕಯಾಗುವಂತೆ ನೋಡಿಕೊಳ್ಳಲಾಗ್ತಿದೆ. ದಲಿತ ಸಿಎಂ ವಿಚಾರಕ್ಕೆ ಸರ್ಕಾರ ಅಲ್ಪಮತಕ್ಕೆ ಕುಸಿದರೆ ನಾನು ಹೊಣೆಯಲ್ಲ ಎನ್ನುವ ಸಂದೇಶವನ್ನು ಸಿಎಂ ಸಿದ್ದರಾಮಯ್ಯ ಪರೋಕ್ಷವಾಗಿ ಹೈಕಮಾಂಡ್ ರವಾನಿಸಿದಂತಿದೆ. ಡಿ.ಕೆ ಶಿವಕುಮಾರ್ ಬಣವೂ ದಿನದಿಂದ ದಿನಕ್ಕೆ ಪ್ರಬಲ ಆಗ್ತಿದ್ದು, ನಿನ್ನೆ ರಾತ್ರಿ ಸುಮಾರು 40 ಜನರು ಡಿನ್ನರ್ ಪಾರ್ಟಿಯಲ್ಲಿ ಇದ್ದರು ಎನ್ನಲಾಗ್ತಿದೆ. ಒಟ್ಟಾರೆ ಕಾಂಗ್ರೆಸ್ ಹೈಕಮಾಂಡ್ ಹಿಡಿತದಿಂದ ರಾಜ್ಯ ಕಾಂಗ್ರೆಸ್ ತಪ್ಪಿಸಿಕೊಂಡಿದೆ. ಹೈಕಮಾಂಡ್ ದಿಕ್ಕು ತಪ್ಪಿದ ನಾವಿಕನಂತೆ ಸಾಗಿದಷ್ಟು ದೂರ ಸಾಗಿಬಿಡೋಣ ಅನ್ನೋ ತೀರ್ಮಾನಕ್ಕೆ ಬಂದಂತೆ ಕಾಣ್ತಿದೆ. ಹೀಗೇ ಆದರೆ ಮುಂದೋಂದು ದಿನ ಹಿಮಬಂಡೆಗೆ ಡಿಕ್ಕಿ ಹೊಡೆದರೆ ಅಪಘಾತ ಕಟ್ಟಿಟ್ಟ ಬುತ್ತಿ. ಇಡೀ ನಾವೇಯೇ ಮುಳುಗುವುದು ಶತಸಿದ್ಧ. ಕಾಂಗ್ರೆಸ್ ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ.



