The Public Spot
ರಾಜಕೀಯ

ಸಚಿವ ಸಂಪುಟ ಪುನಾರಚನೆ 31 ಶಾಸಕರ ಒತ್ತಾಯ..! ಇದು ಯಾರ ಯೋಜನೆ..?

ಕರ್ನಾಟಕದಲ್ಲಿ ಸಿಎಂ ಕುರ್ಚಿ ಪಡೆಯುವ ಕಿತ್ತಾಟ ನಡೆಯುತ್ತಿರುವ ಮಧ್ಯದಲ್ಲಿ ಕಾಂಗ್ರೆಸ್​ನಲ್ಲಿ ಹೊಸ ಬಿರುಗಾಳಿ ಎದ್ದಿದೆ. ಸಚಿವ ಸಂಪುಟ ಪುನಾರಚನೆ ಮಾಡುವಂತೆ ಒತ್ತಾಯಿಸಿ ಮೊದಲ ಬಾರಿಗೆ ಆಯ್ಕೆ ಆಗಿರುವ ಕಾಂಗ್ರೆಸ್​ನ 31 ಶಾಸಕರು ಹೈಕಮಾಂಡ್‌‌ ಪತ್ರ ಬರೆದಿದ್ದಾರೆ. ಎಲ್ಲರೂ ಒಂದೇ ಪತ್ರದಲ್ಲಿ ಸಹಿ ಮಾಡಿ ಹೈಕಮಾಂಡ್ ನಾಯಕರಿಗೆ ಸಲ್ಲಿಸಿದ್ದಾರೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಣದೀಪ್ ಸಿಂಗ್‌ ಸುರ್ಜೇವಾಲ, ಕೆ.ಸಿ ವೇಣುಗೋಪಾಲ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್‌ಗೂ ಕಳುಹಿಸಿರುವ ಪತ್ರ ಭಾರೀ ವೈರಲ್ ಆಗಿದೆ. ನಾಯಕತ್ವ ಕದನ ತೀರ್ಮಾನಕ್ಕೂ‌ ಮೊದಲೇ 31 ಶಾಸಕರ ಪತ್ರ ಸದ್ದು ಮಾಡ್ತಿದ್ದು, ದಿನಾಂಕ ಇಲ್ಲದ ಪತ್ರ ಭಾರೀ ವೈರಲ್ ಆಗಿದೆ. ಆದರೆ ಮೊದಲ ಬಾರಿ ಗೆದ್ದ ಶಾಸಕರಿಗೂ ಸಚಿವ ಸ್ಥಾನ ಅವಕಾಶ ಕೊಡಬೇಕು ಎಂದು ಪತ್ರ ಬರೆದಿರುವುದನ್ನು ಬಹುತೇಕ ಶಾಸಕರು ಒಪ್ಪಿಕೊಂಡಿದ್ದಾರೆ.

ಸಂಪುಟ‌ ಪುನಾರಚನೆ ಕೋರಿ ಹೊಸ ಶಾಸಕರಿಂದ ಪತ್ರ ಬರೆದ ವಿಚಾರವಾಗಿ ಹಾವೇರಿಯ ರಾಣೇಬೆನ್ನೂರಲ್ಲಿ‌ ಶಾಸಕ‌ ಪ್ರಕಾಶ್ ಕೋಳಿವಾಡ ಮಾತನಾಡಿ, ಬೆಳಗಾವಿ ಅಧಿವೇಶನದ ವೇಳೆ ನಾಲ್ಕೈದು ಜನ ಶಾಸಕರು ಬಂದಿದ್ದರು. ಮೊದಲ ಬಾರಿಗೆ ಶಾಸಕರಾದವರು ಕ್ಯಾಬಿನೆಟ್‌ನಲ್ಲಿ ಇರಬೇಕಾ ಅಂತಾ ಕೇಳಿದ್ರು. ಹೌದು ಇರಬೇಕು ಅಂತೇಳಿ ಸಹಿ ಪಡೆದ್ರು.. ಅದರ ಪರವಾಗಿ ನಾನು ನಿಲ್ತೀನಿ. ಹಳೆ ಬೇರು ಹೊಸ ಚಿಗುರು ಅನ್ನೋ ರೀತಿಯಲ್ಲಿ ಮಾಡಿದರೆ ಒಳ್ಳೆಯದು. ಪಿ ರವಿಕುಮಾರ್ ಗಣಿಗ ನೇತೃತ್ವದಲ್ಲಿ ಸಹಿ ಪಡೆಯುವ ಕೆಲಸ ಆಗಿದೆ ಅನ್ನೋದು ಗೊತ್ತು. ನನ್ನ ಬಳಿ ನಾಲ್ಕೈದು ಜನ ಶಾಸಕರು ಒಟ್ಟಾಗಿ ಬಂದು ಸಹಿ ಪಡೆದಿದ್ದಾರೆ. ಯುವಕರಿಗೆ ಕೇಂದ್ರ ಸಂಪುಟದಲ್ಲಿ, ರಾಜ್ಯ ಸಂಪುಟದಲ್ಲೂ ಪ್ರಾತಿನಿಧ್ಯ ಸಿಗಬೇಕು. ವಿದೇಶ ಪ್ರವಾಸಕ್ಕೂ ನನಗೆ ಆಹ್ವಾನ ಬಂದಿತ್ತು. ಆ ಬಣ ಈ ಬಣ ಅಂತೇನಿಲ್ಲ ಹೊಸ ಶಾಸಕರು ಎಲ್ಲರೂ ಸಹಿ ಹಾಕಿದ್ದಾರೆ. ನಾವು ಎಲ್ಲರೂ ಕೂಡಿ ಸಹಿ ಹಾಕಿಲ್ಲ, ಅವರ ಟೇಬಲ್‌ಗೆ ಹೋಗಿ ಸಹಿ ಪಡೆದ್ರು ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಬಜೆಟ್‌ ಆದ ಬಳಿಕ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕು ಅನ್ನೋ ಬಗ್ಗೆ ಭಾರೀ ಚರ್ಚೆ ಆಗ್ತಿರೋ ಬೆನ್ನಲ್ಲೇ ಬಹುತೇಕ ಡಿ.ಕೆ ಶಿವಕುಮಾರ್‌ ಬೆಂಬಲಿಗರು ಇಂತಹದೊಂದು ಪತ್ರ ಬರೆದಿದ್ದಾರೆ. ಆದರ ನಡುವೆ ಈಗ ವೈರಲ್‌ ಮಾಡುವ ಮೂಲಕ ಹೈಕಮಾಂಡ್‌ಗೆ ನೇರ ಸಂದೇಶ ರವಾನೆ ಮಾಡುತ್ತಿದ್ದಾರೆ. ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್‌ ಅವಕಾಶ ಕೊಟ್ಟರೆ ಮುಖ್ಯಮಂತ್ರಿ ಬದಲಾವಣೆ ಆಗುವುದು ಬಹುತೇಕ ಅನುಮಾನ. ಒಂದು ವೇಳೆ ಸಚಿವ ಸಂಪುಟ ಪುನಾರಚನೆಗೆ ಅವಕಾಶವನ್ನೇ ಕೊಡದಿದ್ದರೆ..! ನಾಯಕತ್ವ ಬದಲಾವಣೆ ಆಗುವ ಸಾಧ್ಯತೆ ಇದೆ ಎನ್ನುವ ಅಂಶಕ್ಕೆ ಪುಷ್ಠಿ ಕೊಟ್ಟಂತೆ ಆಗಲಿದೆ. ಬೆಳಗಾವಿ ಅಧಿವೇಶನದಲ್ಲೇ ಸಹಿ ಪಡೆದಿದ್ದರೂ ಇತ್ತೀಚಿಗೆ ಹೈಕಮಾಂಡ್‌ ತಲುಪಿದೆ ಎನ್ನುವ ಮಾಹಿತಿ ಇದೆ. ಈಗ ಪತ್ರ ವೈರಲ್‌ ಆಗಿದ್ದು, ಮಾಡು ಇಲ್ಲವೇ ಮಡಿ ಹೋರಾಟ ಎನ್ನುವಂತಿದೆ. ಈ ನಡುವೆ ದಲಿತ ಸಿಎಂ ಕೂಗು ಸಹ ಜೋರಾಗಿದ್ದು, ಕಾಂಗ್ರೆಸ್‌ ಹೈಕಮಾಂಡ್‌ಗೆ ಬಿಸಿ ತುಪ್ಪ ಎನ್ನುವಂತಾಗಿದೆ.

ಮಹದೇವಪ್ಪ ದಲಿತ ಸಿಎಂ ವಿಚಾರವಾಗಿ ಚರ್ಚೆ ಹುಟ್ಟು ಹಾಕಿರುವ ಬೆನ್ನಲ್ಲೇ ಉಡುಪಿಯಲ್ಲಿ ಮಾಜಿ ಸಿಎಂ ವೀರಪ್ಪ ಮೊಯ್ಲಿ ಕಿವಿಮಾತು ಹೇಳಿದ್ದು, ಯಾವುದೇ ಕಾರಣಕ್ಕೂ ಈ ಚರ್ಚೆ ಸಾರ್ವಜನಿಕವಾಗಿ ಬರಬಾರದು. ನಾನೊಬ್ಬ ಪಕ್ಷದಲ್ಲಿ ಹಿರಿಯನಾಗಿ ಸಲಹೆ ನೀಡುತ್ತೇನೆ ಎಂದಿದ್ದಾರೆ. ಇನ್ನೂ 30 ಶಾಸಕರು ಸಚಿವರಾಗುವ ಇಚ್ಚೆ ವ್ಯಕ್ತಪಡಿಸಿ ಪತ್ರ ಬರೆದಿರುವ ಬಗ್ಗೆ ಮಾತನಾಡಿ, ಕ್ಯಾಬಿನೆಟ್‌ನಲ್ಲಿ ಕೆಲವರು ಮಾತ್ರ ಇರಲು ಸಾಧ್ಯ. ಒಬ್ಬರು ಮಾತ್ರ ಮುಖ್ಯಮಂತ್ರಿ ಆಗಲು ಸಾಧ್ಯ. ಅನಗತ್ಯ ಚರ್ಚೆಯ ವಿಷಯ ಆಗಬಾರದು ಎಂದಿದ್ದಾರೆ. ಈ ನಡುವೆ ಇತ್ತೀಚಿಗೆ ದೆಹಲಿ ಪ್ರವಾಸ ಮುಗಿಸಿ ಬಂದ ಸತೀಶ್‌ ಜಾರಕಿಹೊಳಿ, ಅದೊಂದು ಸಾಮಾನ್ಯ ಪ್ರವಾಸ. ರಾಜಕೀಯ ಕಾರಣಕ್ಕಾಗಿ ಮಾಡಿದ್ದಲ್ಲ ಎಂದಿದ್ದಾರೆ. ದೆಹಲಿ ಪ್ರವಾಸಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ಹೇಳುವ ಶಕ್ತಿ ನಮಗಿಲ್ಲ. ಅದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂದಿದ್ದಾರೆ.

Related posts

Cabinet Decision revoke Criminal case: ಸತ್ಯವಂತರ ಮೇಲೆ ದಾಖಲಿಸಿದ್ದ ಕೇಸ್​ ವಾಪಸ್..​

Publicspot

JDS ಪಕ್ಷ ಬಿಟ್ಟು ಕಾಂಗ್ರೆಸ್​ ಸೇರ್ತಾರಾ ಶಾಸಕ G.T ದೇವೇಗೌಡ..?

Publicspot

ನನಗೆ ಸರ್ಕಾರದ ಭತ್ಯೆ ಬೇಡ.. ಊಟ, ತಿಂಡಿ, ಕಾಫಿ, ರೂಮು ಏನೂ ಬೇಡ.. ಸ್ಪೀಕರ್‌ಗೆ ಪತ್ರ..

Publicspot

ಕಾಂಗ್ರೆಸ್‌ನಲ್ಲಿ ಮತ್ತೆ ಸಿಎಂ ಕುರ್ಚಿ ಫೈಟ್‌.. ಯತೀಂದ್ರ ಮಾತಾಡಿದ್ರೆ ಡಿಕೆ ಸೈಲೆಂಟ್‌ ಯಾಕೆ..?

Publicspot

‘ಸಿದ್ದರಾಮಯ್ಯ ಇರೋ ತನಕ ನನ್ನ ಭವಿಷ್ಯಕ್ಕೆ ಏನೂ ಆಗಲ್ಲ’ ರಾಜಣ್ಣ ಸವಾಲು..

Publicspot

ಪಾವಗಡದಲ್ಲಿ ವಿದ್ಯುತ್ ಉತ್ಪಾದನೆ ಪ್ಲಾಂಟ್ ಏಷ್ಯಾದಲ್ಲೇ ನಂ 1 ಎಂದ ಸಿಎಂ ಸಿದ್ದರಾಮಯ್ಯ

admin