ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಆಗಸ್ಟ್ 21ರಿಂದ ಬೈಕ್ ಟ್ಯಾಕಿ ಸೇವೆ ಪುನರ್ ಆರಂಭ ಆಗಿದೆ. ಆಟೋ ಮತ್ತು ಕ್ಯಾಬ್ಗಳಿಗೆ ದುಬಾರಿ ಹಣ ನೀಡಲು ಆಗದೆ ಪರದಾಡುತ್ತಿದ್ದ ಜನರಿಗೆ ತುಸು ನೆಮ್ಮದಿ ಸಿಕ್ಕಂತಾಗಿದೆ. ಓಲಾ ಹೊರತುಪಡಿಸಿ ಊಬರ್ ಹಾಗೂ ರ್ಯಾಪಿಡೊ ಆ್ಯಪ್ಗಳಲ್ಲಿ ಮಾತ್ರ ಸೇವೆ ಲಭ್ಯ ಆಗುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ಜೂನ್ 16 ರಿಂದ ಬೈಕ್ ಟ್ಯಾಕ್ಸಿ ಸೇವೆ ಬಂದ್ ಮಾಡಲಾಗಿತ್ತು. ಒಂದು ತಿಂಗಳಲ್ಲಿ ಕಾನೂನು ರೂಪಿಸುವ ಬಗ್ಗೆ ನಿರ್ಧಾರ ಮಾಡಿ ಎಂದು ರಾಜ್ಯ ಸರ್ಕಾರಕ್ಕೂ ಹೈಕೋರ್ಟ್ ನಿರ್ದೇಶನ ನೀಡಿತ್ತು. ಆದರೆ ಸರ್ಕಾರ ಯಾವುದೇ ನಿಲುವು ತೆಗೆದುಕೊಳ್ಳದ ಕಾರಣಕ್ಕೆ ಬೈಕ್ ಟ್ಯಾಕ್ಸಿಗೆ ಹೈಕೋರ್ಟ್ ಅಸ್ತು ಎಂದಿದೆ.
ಬೈಕ್ ಟ್ಯಾಕ್ಸಿ ಸೇವೆ ನಿಷೇಧಕ್ಕೆ ತೀವ್ರ ಪಟ್ಟು ಹಿಡಿದಿದ್ದ ಖಾಸಗಿ ಸಾರಿಗೆ ಸಂಘಟನೆಗಳ ಒತ್ತಡಕ್ಕೆ ಮಣಿದಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಬಂದ್ ಮಾಡುವ ನಿರ್ಧಾರ ಮಾಡಿದ್ದರು. ಆ ಬಳಿಕ ಕೋರ್ಟ್ನಲ್ಲೂ ಬೈಕ್ ಟ್ಯಾಕ್ಸಿ ಚಾಲಕರಿಗೆ ಹಿನ್ನಡೆ ಆಗಿತ್ತು. ಅಂತಿಮವಾಗಿ ಮೇಲ್ಮನವಿ ಹೋದ ಬಳಿಕ ರಾಜ್ಯದಾದ್ಯಂತ ಬೈಕ್ ಟ್ಯಾಕ್ಸಿ ನಂಬಿಕೊಂಡಿದ್ದ 6 ಲಕ್ಷಕ್ಕೂ ಹೆಚ್ಚು ಸವಾರರ ಪರವಾಗಿ ಹೈಕೋರ್ಟ್ ನಿರ್ಣಯ ಮಾಡಿದ್ದು ಸೆಫ್ಟೆಂಬರ್ 22ರ ಒಳಗಾಗಿ ಬೈಕ್ ಟ್ಯಾಕ್ಸಿಗೆ ಸಂಬಂಧಿಸಿದ ಕಾನೂನು ಮಾಡುವ ಬಗ್ಗೆ ನಿಲುವು ತಿಳಿಸಲು ಹೈಕೋರ್ಟ್ ಸೂಚನೆ ಕೊಟ್ಟಿದ್ದು, ಬೈಕ್ ಟ್ಯಾಕ್ಸಿಗೂ ಅಸ್ತು ಎಂದಿದೆ.

ಬೈಕ್ ಟ್ಯಾಕ್ಸಿ ಸಂಬಂಧಿಸಿದಂತೆ ನೀತಿ ನಿಯಮಗಳನ್ನು ಮಾಡಿ ಚೌಕಟ್ಟು ನಿಗದಿಪಡಿಸಲು ಹೈಕೋರ್ಟ್ ಸೂಚನೆ ನೀಡಿದೆ. ರಾಜ್ಯ ಸರ್ಕಾರಕ್ಕೆ ಸೂಚನೆ ಕೊಟ್ಟು ಸೆಪ್ಟೆಂಬರ್ 22 ಕ್ಕೆ ವಿಚಾರಣೆ ಮುಂದೂಡಿದೆ ಹೈಕೋರ್ಟ್. ಈಗಾಗಲೇ ಹೈಕೋರ್ಟ್ ಆದೇಶದ ಅನ್ವಯ ರ್ಯಾಪಿಡೋ ಹಾಗೂ ಊಬರ್ನಲ್ಲಿ ಬೈಕ್ ಸೇವೆ ಆರಂಭ ಆಗಿದೆ. ಬೆಳಗ್ಗೆ ಎದ್ದು ಆಟೋಗೆ ನೂರು ರೂಪಾಯಿ ಕೊಡಬೇಕಲ್ಲ ಎಂದುಕೊಳ್ಳುವ ಮಧ್ಯಮ ಹಾಗೂ ಕೆಳವರ್ಗದ ಜನರು ಬೈಕ್ಗಳಲ್ಲಿ ಓಡಾಡುವುದಕ್ಕೆ ಅನುಕೂಲ ಆಗಿದೆ.
Read | Mahesh Thimarodi Arrest: ಮಹೇಶ್ ತಿಮರೋಡಿ ಅರೆಸ್ಟ್.. ಕಾರಣ ಏನು ಗೊತ್ತಾ..?
ಆಟೋ ಚಾಲಕರು ಸುಖಾಸುಮ್ಮನೆ ಬೈಕ್ ಓಡಿಸುವ ಜನರ ಮೇಲೆ ದಬ್ಬಾಳಿಕೆ ದೌರ್ಜನ್ಯ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಪೊಲೀಸರು ನಾಲ್ಕಾರು ಕಡೆ ಕಠಿಣ ಕ್ರಮ ತೆಗೆದುಕೊಳ್ಳುವ ಮೂಲಕ ಪುಂಡಾಟಕ್ಕೆ ಬ್ರೇಕ್ ಹಾಕಬೇಕಿದೆ. ಒಬ್ಬರು ಹೋಗುವಾಗ ಬೈಕ್ ಟ್ಯಾಕ್ಸಿಯಲ್ಲಿ ಹೋದರೆ ಆಟೋದವರಿಗೆ ಏನು ಸಮಸ್ಯೆ..? ಒಟ್ಟಾರೆಯಾಗಿ ಗ್ರಾಹಕರಿಗೆ ಅನುಕೂಲ ಆಗಬೇಕು. ಬೈಕ್ ಟ್ಯಾಕ್ಸಿಯಿಂದ ಕಡಿಮೆ ಹಣ, ಮನೆ ಬಾಗಿಲಿಗೇ ಬಂದು ಹತ್ತಿಸಿಕೊಳ್ತಾರೆ. ಅಲ್ಲಿಗೆ ಬರಲ್ಲ, ಇಲ್ಲಿಗೆ ಬರಲ್ಲ ಅಂತಾ ಹೇಳಲ್ಲ. ಕಡಿಮೆ ಅವಧಿಯಲ್ಲಿ ಜನರನ್ನು ತಮ್ಮ ಸ್ಥಳಕ್ಕೆ ತಲುಪಿಸುತ್ತಾರೆ. ಇಷ್ಟೆಲ್ಲಾ ಅನುಕೂಲ ಇರುವ ಸೇವೆ ಬಂದ್ ಮಾಡುವುದರಲ್ಲಿ ಅರ್ಥವಿಲ್ಲ ಎನ್ನುವುದು ಹೈಕೋರ್ಟ್ಗೂ ಮನವರಿಕೆ ಆದ ಬಳಿಕವಷ್ಟೇ ಅನುಮತಿ ಕೊಟ್ಟಿರುವುದು. ಇದನ್ನು ಜಾರಿ ಮಾಡುವ ಹೊಣೆ ಪೊಲೀಸರ ಮೇಲಿದೆ.


