ರಾಜ್ಯದಲ್ಲಿ ಸೆಪ್ಟೆಂಬರ್ ಕ್ರಾಂತಿ.. ನವೆಂಬರ್ ಕ್ರಾಂತಿ ಅನ್ನೋ ಮಾತುಗಳು ಪದೇ ಪದೇ ಕೇಳಿ ಬರುತ್ತಲೇ ಇವೆ. ಆದರೆ ಸಿದ್ದರಾಮಯ್ಯ ಮಾತ್ರ ತನಗೂ ಈ ಚರ್ಚೆಗಳಿಗೂ ಸಂಬಂಧವಿಲ್ಲ ಅನ್ನೋ ತರ ತಮ್ಮ ಪಾಡಿಗೆ ತಾವು ಕೆಲಸ ಮಾಡ್ಕೊಂಡು ಹೋಗ್ತಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್ ಸಿಎಂ ಆಗ್ತಾರೆ ಅನ್ನೋ ಮಾತುಗಳಿಗೆ ಪುಷ್ಟಿ ನೀಡುವಂತೆ ಅಲ್ಲೊಮ್ಮೆ ಇಲ್ಲೊಮ್ಮೆ ಬೆಂಬಲಿಗರೂ ಕೂಡ ಅದೇ ಮಾತನ್ನು ಉಲ್ಲೇಖ ಮಾಡುತ್ತಿರುತ್ತಾರೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಸೇರಿದಂತೆ ಪ್ರಮುಖ ನಾಯಕರು ಯಾರೂ ಈ ಬಗ್ಗೆ ಇಲ್ಲೀವರೆಗೂ ಸುಳಿವು ನೀಡಿಲ್ಲ. ಆದರೆ ಇದೀಗ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಸಾಕಷ್ಟು ಗುಮಾನಿಗಳನ್ನು ಸೃಷ್ಟಿ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ರಾಜಕೀಯ ಅಂತಿಮ ಕಾಲದಲ್ಲಿ ಇದ್ದಾರೆ. ಅವರ ನಾಯಕತ್ವವನ್ನು ಮುಂದುವರಿಸಿಕೊಂಡು ಹೋಗಲು ಸತೀಶ್ ಜಾರಕಿಹೊಳಿ ಅವರು ಸೂಕ್ತ ವ್ಯಕ್ತಿ ಎಂದಿದ್ದಾರೆ.

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕಪ್ಪಲಗುದ್ದಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ನಮ್ಮ ತಂದೆಯವರು ತಮ್ಮ ರಾಜಕೀಯ ಕೊನೆಗಾಲದಲ್ಲಿದ್ದಾರೆ. ವೈಚಾರಿಕವಾಗಿ ಪ್ರಗತಿಪರ ತತ್ವ ಸಿದ್ದಾಂತ ಇರುವ ನಾಯಕರು ಬೇಕು. ಸತೀಶ ಜಾರಕಿಹೊಳಿಯವರು ಈ ಜವಾಬ್ದಾರಿ ನಿಭಾಯಿಸುತ್ತಾರೆ. ಸತೀಶ್ ಜಾರಕಿಹೊಳಿ ಅವರು ಮಾದರಿಯಾಗಿ ನಮ್ಮನ್ನು ಮುನ್ನಡೆಸುತ್ತಾರೆ ಎಂದಿದ್ದಾರೆ. ವೇದಿಕೆ ಕಾರ್ಯಕ್ರಮದ ಬಳಿಕ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ತಂದೆಯವರು ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟುಕೊಂಡವರು. ಅದೇ ಸಿದ್ದಾಂತದಲ್ಲಿ ಸತೀಶ್ ಜಾರಕಿಹೊಳಿಯವರು ನಂಬಿಕೆ ಇಟ್ಟುಕೊಂಡು ಹೋಗ್ತಿದ್ದಾರೆ. 2028ರ ಚುನಾವಣೆಯಲ್ಲಿ ತಂದೆಯವರು ನಿಲ್ಲಲ್ಲ ಅಂದಿದ್ದಾರೆ. ಅದು ಆದ ಮೇಲೆ ಜಾತ್ಯಾತೀತ ಕಾಂಗ್ರೆಸ್ ಸಿದ್ದಾಂತ ಇಟ್ಟುಕೊಂಡು ಎಷ್ಟೋ ಜನ ರಾಜಕಾರಣಿಗಳಿದ್ದಾರೆ. ಅವರೆಲ್ಲರನ್ನ ಸತೀಶ್ ಜಾರಕಿಹೊಳಿ ಮುನ್ನಡೆಸಲಿ. 2028 ರ ನಂತರ ಆ ರೀತಿ ಲೀಡ್ ಮಾಡೋರು ಬೇಕು. ಸೈದಾಂತಿಕ ರಾಜಕಾರಣ ಮಾಡುವುದರಲ್ಲಿ ಸತೀಶ್ ಜಾರಕಿಹೊಳಿ ಕೂಡ ಒಬ್ಬರು ಎಂದಿದ್ದಾರೆ.

ಮುಂದಿನ ನಾಯಕತ್ವ ವಿಚಾರವಾಗಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಮಂತ್ರಾಲಯದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಏನ್ ಹೇಳಿದಾರೆ ಅವರನ್ನೇ ಕೇಳಬೇಕು. ಅದರ ಬಗ್ಗೆ ಅವರು ಏನ್ ಹೇಳಿದ್ದಾರೆ ಅವರನ್ನೇ ಕೇಳಿ. ಅದನ್ನು ನನ್ನ ಬಳಿ ಕೇಳಿದ್ರೆ ನಾನ್ ಏನ್ ಹೇಳಲಿ ಎಂದಿದ್ದಾರೆ. ರಾಜ್ಯದಲ್ಲಿ ಮುಂದಿನ ಸಿಎಂ ಯಾರು ಅನ್ನೋ ಚರ್ಚೆ ವಿಚಾರವಾಗಿ ಮಾತನಾಡಿ. ನನ್ನ ಬಗ್ಗೆ ಯಾರೂ ಚರ್ಚೆ ಮಾಡುವ ಅವಶ್ಯಕತೆಯಿಲ್ಲ. ನಾನು, ಸಿದ್ದರಾಮಯ್ಯ ಏನ್ ಹೇಳಿದ್ದೇವೆ..? ಪಾರ್ಟಿ ಏನ್ ಹೇಳುತ್ತೆ ನಾವು ಒಟ್ಟಿಗೆ ಕೆಲಸ ಮಾಡಿಕೊಂಡು ಹೋಗ್ತಿವಿ ಅಂತ ಹೇಳಿದ್ದಿವಿ. ಅದಕ್ಕೆ ನಾನು ಬದ್ದನಾಗಿದ್ದೇನೆ ಎಂದಿದ್ದಾರೆ. ಇನ್ನು ಸರ್ಕಾರ ಬೀಳ್ತದೆ, ಬೀಳ್ತದೆ ಅಂತಾ ಕಾದವ್ರೆ, ಆದರೆ 2028ಕ್ಕೂ ಕಾಂಗ್ರೆಸ್ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರುತ್ತದೆ. ನಾನು ಗುಂಪುಗಾರಿಕೆ ಮಾಡಿಲ್ಲ, ಮಾಡೋದಿಲ್ಲ. ಗುಂಪುಗಾರಿಕೆ ಮಾಡಿದ್ರೆ ಏನೇನೋ ಆಗ್ಬಹುದಿತ್ತು ಎನ್ನುವ ಮೂಲಕ ಯತೀಂದ್ರ ಮಾತಿಗೆ ಕೌಂಟರ್ ಕೊಟ್ಟಿದ್ದಾರೆ.
ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವ ಕನಸು ಕಟ್ಟಿಕೊಂಡು ದೇವಸ್ಥಾನಗಳಿಗೆ ಸುತ್ತುತ್ತಿದ್ದಾರೆ. ಹೈಕಮಾಂಡ್ ನಾಯಕರು ಬಿಹಾರ ಚುನಾವಣೆ ಬಳಿಕ ಯಾವುದಾದರೂ ಒಂದು ನಿರ್ಧಾರಕ್ಕೆ ಬರುವ ಭರವಸೆಯಲ್ಲಿ ಡಿಸಿಎಂ ಇದ್ದಾರೆ. ಆದರೆ ಯಾವುದೇ ಬದಲಾವಣೆ ಮಾಡುವುದಕ್ಕೆ ಅವಕಾಶ ಕೊಡಬಾರದು ಅನ್ನೋ ಚಿಂತನೆಯಲ್ಲಿ ಸಿದ್ದರಾಮಯ್ಯ ಅಂಡ್ ಟೀಂ ಇದೆ. ಅದೇ ಉದ್ದೇಶದಿಂದ ಸಿದ್ದರಾಮಯ್ಯ ರೀತಿ ಜಾತ್ಯಾತೀತ ಮನಸ್ಥಿತಿ ಉಳ್ಳ ನಾಯಕ ಉತ್ತರಾಧಿಕಾರಿ ಆಗ್ಬೇಕು ಅನ್ನೋ ಮಾತುಗಳು ಸಿದ್ದರಾಮಯ್ಯ ಟೀಂನಿಂದ ಹೊರ ಬೀಳುತ್ತಿವೆ. ಒಂದು ವೇಳೆ ಈಗ ಬದಲಾವಣೆ ಮಾಡುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ಎದುರಾದರೆ ಸತೀಶ್ ಜಾರಕಿಹೊಳಿ ಆಯ್ಕೆ ಮಾಡಬೇಕು ಅನ್ನೋ ಒತ್ತಡ ಶುರುವಾಗುತ್ತದೆ. ಇಲ್ಲದಿದ್ದರೆ ಸಿದ್ದರಾಮಯ್ಯ ಅವರೇ ಮುಂದುವರಿಯಲಿ ಅನ್ನೋ ಮಾತುಗಳು ಹೊರ ಬಿದ್ದಾಗ ಡಿಕೆ ಶಿವಕುಮಾರ್ ಅವರ ಬಾಯಿ ಮುಚ್ಚಿಸಬಹುದು ಅನ್ನೋದು ಸಿದ್ದರಾಮಯ್ಯ ಬಣದ ಲೆಕ್ಕಾಚಾರ.


