ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ದೊಡ್ಡೇರಿ ಗಂಗೂರು ನಿವಾಸಿ 21 ವರ್ಷದ ವನಿಷಾ ಹಾಸ್ಟೆಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. BSc ಫೈನಲ್ ಇಯರ್ ಓದುತ್ತಿದ್ದ ವನಿಷಾ, ಶಿವಮೊಗ್ಗ ನಗರದ ಕೋಟೆ ರಸ್ತೆಯಲ್ಲಿರುವ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ವಾಸಿಸುತ್ತಿದ್ದಳು. ಯಾವುದೇ ಸಮಸ್ಯೆ ಇಲ್ಲದೆ ಚೆನ್ನಾಗಿದ್ದ ವನಿಷಾ, ತಾಯಿಗೆ ಫೋನ್ ಮಾಡಿ ಮಾತನಾಡಿದ್ದಳು ಎನ್ನಲಾಗಿದೆ. ಫೋನ್ನಲ್ಲಿ ಮಾತನಾಡುವಾಗಲೂ ಖುಷಿ ಖುಷಿಯಾಗಿಯೇ ಇದ್ದಳಂತೆ. ಆ ಬಳಿಕ ಅದೇನ್ ಆಯ್ತೋ ಏನೋ ಗೊತ್ತಿಲ್ಲ. ಹಾಸ್ಟೆಲ್‌ನ ಟೆರೇಸ್ ಮೇಲೆ ಹೋಗಿದ್ದಳು. ಅಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿದೆ.

ಹೆತ್ತವರು ಮಕ್ಕಳ ಖುಷಿಯಲ್ಲೇ ತಮ್ಮ ಖುಷಿಯನ್ನು ಅನುಭವಿಸ್ತಾರೆ. ಆದರೆ ಮಕ್ಕಳು ಹೆತ್ತವರ ಕಣ್ಣ ಮುಂದೆಯೇ ಕಣ್ಮುಚ್ಚಿದ್ರೆ ಅದಕ್ಕಿಂತ ಹೆಚ್ಚಿನ ನರಕ ಬೇರೆ ಇರೋದಿಲ್ಲ. ಸಂತಾನದ ಶೋಕ ಸಾಯೋವರೆಗೂ ಇರುತ್ತೆ ಅಂತಾರೆ. ಈ ಮಾತು ನೂರಕ್ಕೆ ನೂರು ಸತ್ಯ. ತಮ್ಮ ಮಕ್ಕಳಿಗಾಗಿ ಬದುಕನ್ನೇ ಧಾರೆಯೆರೆಯುವ ಕೆಲಸ ಮಾಡ್ತಾ ಇರ್ತಾರೆ. ಆದರೆ ಅದೇ ಮಕ್ಕಳು ಹೆತ್ತವರ ಕಣ್ಣ ಮುಂದೆಯೇ ಈ ರೀತಿ ತಮ್ಮ ಬದುಕನ್ನು ಅರ್ಧಕ್ಕೆ ಮುಗಿಸಿ ಹೊರಟರೆ ತಡೆಯುವುದು ಹೇಗೆ ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ.
ಮಗಳು ಚೆನ್ನಾಗಿ ಓದಲಿ ಅನ್ನೋ ಕಾರಣಕ್ಕೆ ವನಿಷಾಳನ್ನು ಹಾಸ್ಟೆಲ್ನಲ್ಲಿ ಬಿಟ್ಟು ಓದಿಸ್ತಿದ್ರು. ವನಿಷಾ ಕೂಡ ಓದಿ ಉತ್ತಮ ಮಟ್ಟಕ್ಕೆ ಬೆಳೆಯಬೇಕು ಎಂದು ಬೆಟ್ಟದಷ್ಟು ಕನಸು ಕಟ್ಟಿಕೊಂಡು ಓದುತ್ತಿದ್ದಳು. ಆದರೆ ಅದೇನು ಸಮಸ್ಯೆ ಆಯ್ತು ಅನ್ನೋದು ಯಾರಿಗೂ ಗೊತ್ತಿಲ್ಲ. ಆದರೆ ಕೇವಲ 21 ವರ್ಷದ ವನಿಷಾ ಹಾಸ್ಟೆಲ್ ವಾರ್ಡನ್ ಜೊತೆಗೆ ಗಲಾಟೆ ಆಗಿತ್ತಂತೆ. ಯಾವುದೋ ಕಾರಣಕ್ಕೆ ವನಿಷಾಗೆ ಆವಾಜ್ ಹಾಕಿದ್ರಂತೆ. ಇದ್ರಿಂದ ನೊಂದ ವನಿಷಾ ಆತ್ಮಹತ್ಯೆ ಮಾಡ್ಕೊಂಡಿದ್ದಾಳೆ ಅಂತಾ ಆರೋಪಿಸಲಾಗ್ತಿದೆ. ಆದರೆ ಯಾವ ಕಾರಣಕ್ಕೆ ಗಲಾಟೆ ಆಗಿತ್ತು ಅನ್ನೋ ಬಗ್ಗೆ ಪೊಲೀಸ್ ತನಿಖೆಯಲ್ಲಿ ಹೊರ ಬೀಳಬೇಕಿದೆ.


