ಚಿತ್ರದುರ್ಗದ ರೇಣುಕಾಚಾರ್ಯ ಕೊಲೆ ಪ್ರಕರಣದಲ್ಲಿ ಆರೋಪಿ ಆಗಿರುವ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ 7 ಮಂದಿ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿರುವ ಜಾಮೀನು ರದ್ದು ಮಾಡುವಂತೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ಮುಕ್ತಾಯವಾಗಿದ್ದು, ಇಂದು ಸುಪ್ರೀಂಕೋರ್ಟ್ ತನ್ನ ತೀರ್ಪು ನೀಡಲಿದೆ. ಈಗಾಗಲೇ ಸುಪ್ರೀಂಕೋರ್ಟ್‌ನ ಕಾರ್ಯಕಲಾಪದಲ್ಲಿ ದರ್ಶನ್ ಕೇಸ್ ಲಿಸ್ಟ್ ಆಗಿದೆ. ನ್ಯಾಯಮೂರ್ತಿಗಳಾದ J.B ಪರ್ದಿವಾಲಾ ಹಾಗೂ ನ್ಯಾ. R. ಮಹದೇವನ್ ಅವರ ಪೀಠದಲ್ಲಿ ಆದೇಶ ಹೊರಬೀಳಲಿದೆ.

ನಟ ದರ್ಶನ್, ನಾಗರಾಜು, ಅನುಕುಮಾರ್ ಅಲಿಯಾಸ್ ಅನು, ಲಕ್ಷ್ಮಣ್ ಎಂ, ಪವಿತ್ರಾಗೌಡ, ಜಗದೀಶ್ ಅಲಿಯಾಸ್ ಜಗ್ಗ, ಪ್ರದೂಶ್ ಎಸ್ ರಾವ್ ಅಲಿಯಾಸ್ ಪ್ರದೂಶ್ ಜಾಮೀನು ರದ್ದು ಮಾಡುವಂತೆ ಕರ್ನಾಟಕ ಸರ್ಕಾರ ಮನವಿ ಮಾಡಿದೆ. ಈಗಾಗಲೇ ಎಲ್ಲಾ ಆರೋಪಿಗಳ ಪರವಾದ ವಾದ ಆಲಿಸಿರುವ ಸುಪ್ರೀಂಕೋರ್ಟ್, ಇವತ್ತು ಆದೇಶ ನೀಡಲಿದೆ. ಆದರೆ ಸುಪ್ರೀಂಕೋರ್ಟ್ ವಿಚಾರಣೆ ವೇಳೆ ಈಗಾಗಲೆ ಸಾಕಷ್ಟು ಮಾತುಗಳನ್ನು ಹೇಳಿರುವ ಸುಪ್ರೀಂಕೋರ್ಟ್ ಕರ್ನಾಟಕ ಹೈಕೋರ್ಟ್ ಮಾಡಿರುವ ತಪ್ಪನ್ನು ನಾವು ಮಾಡಲ್ಲ ಎಂದಿರುವುದು ಎಲ್ಲರ ಗಮನ ಸೆಳೆಯುತ್ತಿದೆ.
ಕರ್ನಾಟಕ ಹೈಕೋರ್ಟ್ ಆರೋಪಿಗಳಿಗೆ ಜಾಮೀನು ನೀಡುವ ಸಮಯದಲ್ಲಿ ನಿಯಮಗಳನ್ನು ಪಾಲಿಸಿಲ್ಲ ಅನ್ನೋದು ಸುಪ್ರೀಂಕೋರ್ಟ್‌ನ ನೇರ ಮಾತು. ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶವನ್ನು ನೋಡಿದರೆ ಇದು ಖುಲಾಸೆಯ ಪ್ರಕರಣದಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಪೀಠ. ಡಿಸೆಂಬರ್ 13, 2024 ರಂದು ಹೊರಡಿಸಿದ ಆದೇಶ ಸರಿಯಿಲ್ಲ ಎನ್ನುವಂತಹ ಅಂಶಗಳನ್ನು ಉಲ್ಲೇಖಿಸಿತ್ತು.
ಅಕ್ಟೋಬರ್ 30, 2024 ರಂದು ವೈದ್ಯಕೀಯ ಆಧಾರದ ಮೇಲೆ ದರ್ಶನ್‌ಗೆ ಮೊದಲು ಮಧ್ಯಂತರ ಜಾಮೀನು ನೀಡಲಾಗಿತ್ತು. ಆ ಬಳಿಕ ಎಲ್ಲಾ 17 ಆರೋಪಿಗಳು ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಆದರೆ ಕರ್ನಾಟಕ ಹೈಕೋರ್ಟ್ ಮೂಲಕ ಜಾಮೀನು ಪಡೆದ 7 ಆರೋಪಿಗಳ ಜಾಮೀನು ರದ್ದು ಮಾಡಲು ಕರ್ನಾಟಕ ಸರ್ಕಾರ ಮೇಲ್ಮನವಿ ಸಲ್ಲಿಸಿದೆ. ನಟ ದರ್ಶನ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದರು. ಕರ್ನಾಟಕ ಹೈಕೋರ್ಟ್ ಆದೇಶವನ್ನು ಯಾಕೆ ರದ್ದು ಮಾಡಬಾರದು ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಇದೀಗ ಇಡೀ ದರ್ಶನ್ ಅಂಡ್ ಗ್ಯಾಂಗ್‌ಗೆ ಢವಢವ ಎನ್ನುವಂತಾಗಿದೆ.


