The Public Spot
ರಾಜ್ಯ

Thimmakka; ಸಾಲು ಮರದ ತಿಮ್ಮಕ್ಕ ಇನ್ನಿಲ್ಲ.. ಬದುಕಿನ ಯಾನ ಮುಗಿಸಿದ ವೃಕ್ಷಮಾತೆ..

ಸಾಲು ಮರದ ತಿಮ್ಮಕ್ಕ, ಹಸಿರನ್ನೇ ಉಸಿರಾಗಿಸಿಕೊಂಡ ವೃಕ್ಷಮಾತೆ. ಸಾವಿರಾರು ಮರಗಳ ಪಾಲಿನ ಮಹಾಮಾತೆ. ಮರಗಳನ್ನೂ ಮಕ್ಕಳಂತೆ ಸಾಕಿಸಲಹಿದ ಕಲಿಯುಗದ ವನಮಾತೆ. ಇವರ ಬಗ್ಗೆ ಎಷ್ಟು ಮಾತನಾಡಿದರೂ ಮಾತುಗಳು ಮುಗಿಯುವುದಿಲ್ಲ. ಮಕ್ಕಳಿಲ್ಲದ ಅನ್ನೋ ನೋವನ್ನು ಈ ತಾಯಿ ಕಳೆದುಕೊಳ್ಳಲು ಮಾಡಿದ ಕೆಲವೇ ವೃಕ್ಷ ಸಾಕಣೆ. ರಸ್ತೆಯುದ್ದಕ್ಕೂ ನೂರಾರು ಮರಗಳನ್ನ ನೆಟ್ಟು ಮಕ್ಕಳಂತೆ ಬೆಳೆಸಿ ಲಾಲನೆ ಪಾಲನೆ ಮಾಡುವ ಮೂಲಕ ತಮ್ಮ ಬದುಕಿನುದ್ದಕ್ಕೂ ಮರಗಳ ರಕ್ಷಣೆಗಾಗಿಯೇ ಜೀವನ ನಡೆಸಿದ ಜೀವ. ಇಂತಹ ವನ ಮಾತೆ ಶುಕ್ರವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ಹಸಿರೇ ಉಸಿರು ಎಂದು ಬದುಕಿದ್ದ ಹಿರಿಯ ಜೀವ ತಿಮ್ಮಕ್ಕ (114) ವರ್ಷ ಬದುಕಿ ಸಾರ್ಥಕ ಬದುಕನ್ನು ಮುಗಿಸಿದ್ದಾರೆ.

ಸಾಲುಮರದ ತಿಮ್ಮಕ್ಕ ಹುಟ್ಟಿದ್ದು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ. 1911ರ ಜೂನ್ 30ರಂದು ಜನಿಸಿದ್ದ ಸಾಲುಮರದ ತಿಮ್ಮಕ್ಕ, ಹುಲಿಕಲ್​​ ಗ್ರಾಮದ ಚಿಕ್ಕಯ್ಯ ಎಂಬುವರ ಜೊತೆಗೆ ಜೀವನ ಯಾನ ಆರಂಭಸಿದ್ರು. ಆದರೆ, ಆ ಭಗವಂತ ತಿಮ್ಮಕ್ಕನಿಗೆ ಸಂತಾನ ಭಾಗ್ಯ ಕರುಣಿಸಿರಲಿಲ್ಲ. ಈ ನೋವನ್ನು ಮರೆಯಲೆಂದೇ ತಮ್ಮೂರಿನ ರಸ್ತೆಯ ಬದಿಯಲ್ಲಿ ಗಂಡ ಹೆಂಡತಿ ಇಬ್ಬರೂ ಸೇರಿ ಸಸಿಗಳನ್ನ ನೆಡುವುದಕ್ಕೆ ಶುರು ಮಾಡಿದ್ರು. ಮರಗಳನ್ನೇ ಮಕ್ಕಳಂತೆ ಭಾವಿಸಿ ಲಾಲನೆ ಪಾಲನೆ ಮಾಡಿದ್ರು. ಗಂಡ ಹೆಂಡತಿ ಸೇರ್ಕೊಂಡು ವರ್ಷಕ್ಕೆ ಇಂತಿಷ್ಟು ಅಂತಾ ಗಿಡಗಳನ್ನು ನೆಡುವುದು, ಅವುಗಳನ್ನ ಮಕ್ಕಳಂತೆ ಸಾಕೋದು. ಬೇಸಿಗೆಯಲ್ಲಿ ಕಿಲೋ ಮೀಟರ್‌ ದೂರದಿಂದ ನೀರನ್ನು ಹೊತ್ತು ತಂದು ಗಿಡಗಳಿಗೆ ಹಾಕುವ ಕೆಲಸ ಮಾಡಿದರು. ಗಂಡನ ಸಾವಿನ ನಂತರ ಒಬ್ಬಂಟಿಯಾದ ತಿಮ್ಮಕ್ಕ, ಸಸಿಗಳನ್ನ ನೆಡುವ ಕಾಯಕ ನಿಲ್ಲಿಸದೆ ಮುಂದುವರಿಸಿದರು. ನೂರಾರು ಮರಗಳನ್ನ ನೆಟ್ಟು, ಕಣ್ಣಲ್ಲಿ ಕಣ್ಣಿಟ್ಟು ಸಾಕ್ತಾರೆ.

ತಿಮ್ಮಕ್ಕ ಅಕ್ಷರಸ್ಥೆ ಅಲ್ಲದಿದ್ದರೂ ತಾವು ಮಾಡಿದ ಸಾಧನೆ ಮಾತ್ರ ಅದ್ವಿತೀಯ ಸಾಧನೆ. ಹೀಗಾಗಿಯೇ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ತಿಮ್ಮಕ್ಕ ಅವರನ್ನು ಅರಸಿ ಬಂದವು. ಕರ್ನಾಟಕ ಸರ್ಕಾರ ಕೊಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಜೊತೆಗೆ 2019ರಲ್ಲಿ ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿಯೂ ತಿಮ್ಮಕ್ಕ ಅವರಿಗೆ ಒಲಿದಿತ್ತು. ಮರಗಳ ಪೋಷಣೆ ಮೂಲಕವೇ ಇಡೀ ದೇಶದಲ್ಲಿ ಹೆಸರುವಾಸಿ ಆಗಿದ್ದ ತಿಮ್ಮಕ್ಕ, ವಯೋ ಸಹಜ ಕಾಯಿಲೆಯಿಂದ ಬಳಲ್ತಿದ್ದ 114 ವರ್ಷದ ತಿಮ್ಮಕ್ಕ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತಿಮ್ಮಕ್ಕ ಕೊನೆಯುಸಿರೆಳೆದಿದ್ದಾರೆ. ಸಾಯುವ ಮೊದಲು ಕರುನಾಡಿನ ಜನತೆಗೆ ತಿಮ್ಮಕ್ಕ ಕೊನೆಯ ಸಂದೇಶವೊಂದನ್ನೂ ಕೊಟ್ಟಿದ್ದಾರೆ.

ನನ್ನ ನಾಡಿನ ಪ್ರೀತಿಯ ಜನತೆಗೆ ನಿಮ್ಮ ಅಜ್ಜಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಮಾಡುವ ನಮಸ್ಕಾರಗಳು. ಈ ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ, ಇರುವಷ್ಟು ದಿನ ಯಾರಿಗೂ ತೊಂದರೆ, ಹಿಂಸೆಯಾಗದಂತೆ ಪ್ರೀತಿಯಿಂದ ಬದುಕಿ. ಬಡವ, ಶ್ರೀಮಂತ, ಭಿಕ್ಷುಕ, ಅಸಹಾಯಕ ಎನ್ನದೆ ಎಲ್ಲರೂ ಒಂದೇ ತರಹ ಬದುಕಿ. ಜೊತೆಗೆ ಗೋ ಕಟ್ಟೆಗಳನ್ನು ಕಟ್ಟಿಸಿ, ಕೆರೆ ಕಟ್ಟಿಸಿ ಮೂಕ ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡಿಸಿ, ಹಣ್ಣು ಬಿಡುವ ಮರಗಳನ್ನು ಬೆಳೆಸಿ, ಹಕ್ಕಿಪಕ್ಷಿಗಳಿಗೆ ಆಧಾರವಾಗಿ. ಮನುಷ್ಯರೆಲ್ಲ ಒಂದೇ, ಹಸಿದವರಿಗೆ ಅನ್ನ ಕೊಡಿ. ನಾನು ಮಾಡಿದ ಗಿಡ ನೆಡುವ ಕಾರ್ಯವನ್ನ ನಿರಂತರವಾಗಿ ಮುಂದುವರಿಸಿ ಅಂತಾ ಭಾವನಾತ್ಮಕ ಸಂದೇಶ ಬರೆದಿಟ್ಟು ಹೋಗಿದ್ದಾರೆ. ಸಾಲುಮರದ ತಿಮ್ಮಕ್ಕಗೆ ಮಕ್ಕಳಿಲ್ಲದ ಕಾರಣಕ್ಕೆ ಗಿಡಗಳನ್ನು ನೆಟ್ಟು ಬೆಳೆಸಿದ ತಿಮ್ಮಕ್ಕ, ಓರ್ವ ಮಗನನ್ನ ಸಾಕು ಮಗನಾಗಿ ಸ್ವೀಕರಿಸಿ, ಕೊನೇಗಾಲದಲ್ಲಿ ಮಗ, ಸೊಸೆ ಮೊಮ್ಮಕ್ಕಳ ಜೊತೆ ಸಂತಸದ ಕ್ಷಣಗಳನ್ನ ಅನುಭವಿಸಿದ್ರು. ತಿಮ್ಮಕ್ಕನ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ ಪುತ್ರ ಉಮೇಶ್ ವನಸಿರಿ, ಹುಳಿಕಲ್ ಗ್ರಾಮ ಹಾಗೂ ಬೇಲೂರಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡ್ತೀವಿ. ಆ ಬಳಿಕ ಬೆಂಗಳೂರಿಗೆ ವಾಪಸ್‌ ತಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡ್ತೀವಿ ಎಂದಿದ್ದಾರೆ.

Related posts

ಪಾವಗಡದಲ್ಲಿ ವಿದ್ಯುತ್ ಉತ್ಪಾದನೆ ಪ್ಲಾಂಟ್ ಏಷ್ಯಾದಲ್ಲೇ ನಂ 1 ಎಂದ ಸಿಎಂ ಸಿದ್ದರಾಮಯ್ಯ

admin

SC INTERNAL RESERVATION; ಒಳ ಮೀಸಲಾತಿ ಜಾರಿ ಮಾಡಿದ ರಾಜ್ಯ ಸರ್ಕಾರ, ಯಾರದ್ದು ಮೇಲುಗೈ..?

Publicspot

ಸ್ವಂತ ಜಮೀನಲ್ಲಿ ನಿಧಿ ಸಿಕ್ಕರೂ ಸರ್ಕಾರಕ್ಕೆ ಸೇರುತ್ತಾ..? ಕಾರಣವೇನು..?

Publicspot

Banu Selection Reaction: ಬಾನು ಆಯ್ಕೆ ಬಗ್ಗೆ ಯಾರು ಏನಂದ್ರು..?

Publicspot

ದುರಾಸೆಯಿಂದ ಪ್ರಕೃತಿಯನ್ನು ನಾಶ ಮಾಡಿದರೆ ನಮ್ಮನ್ನು ನಾವೇ ನಾಶ ಮಾಡಿಕೊಂಡಂತೆ

admin

ಅಪರೂಪದ ಸಮಾಗಮ, ಅಚ್ಚರಿಯ ಬೆಳವಣಿಗೆಗೆ ಕಾರಣವಾದ ಮೋದಿ..!

ಯಶವಂತಿ