ಕಲಬುರಗಿಯಲ್ಲಿ ಧಾರಾಕಾರ ಮಳೆ ನಡುವೆಯೂ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ. ನಿನ್ನೆಯಿಂದ ಮೂರು ದಿನಗಳ ಕಾಲ ಅಹೋರಾತ್ರಿ ಪ್ರತಿಭಟನೆಗೆ ಆಶಾ ಕಾರ್ಯಕರ್ತೆಯರು ನಿರ್ಧಾರ ಮಾಡಿದ್ದಾರೆ. ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದ ರಸ್ತೆಯಲ್ಲಿ ಪ್ರತಿಭಟನೆ ಶುರುವಾಗಿದ್ದು, ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗ್ತಿದೆ. ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನಲೆ ಪ್ಲ್ಯಾಸ್ಟಿಕ್ ನೆಲ ಹಾಸನ್ನ ಹೊದ್ದುಕೊಂಡು ಮಹಿಳೆಯರು ರಾತ್ರಿ ಕಳೆದಿದ್ದಾರೆ.

ಇನ್ನೂ ಬೆಳಗಾವಿಯಲ್ಲೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಮಾಡಿದ್ದಾರೆ. ಡಿಸಿ ಕಚೇರಿ ಆವರಣದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡಲಾಗ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಏಪ್ರಿಲ್‌ನಿಂದ ಪೂರ್ವಾನ್ವಯ ಆಗುವಂತೆ ಹತ್ತು ಸಾವಿರ ಗೌರವಧನ ನೀಡಬೇಕು. ಆಶಾ ಕಾರ್ಯಕರ್ತೆಯರಿಗೂ ಒಂದು ಸಾವಿರ ಪ್ರೋತ್ಸಾಹ ಧನ ನೀಡಬೇಕು. ಅವೈಜ್ಞಾನಿಕ ಪರ್ಫಾಮೆನ್ಸ್ ಅಪ್ರೇಜಲ್ ಕೈ ಬಿಡಬೇಕು. ಪಶ್ಚಿಮ ಬಂಗಾಳ ಮಾದರಿಯಲ್ಲಿ ನಿವೃತ್ತ ಕಾರ್ಯಕರ್ತೆರಿಗೆ ಇಡುಗಂಟು ನೀಡಬೇಕು ಎಂದು ಆಗ್ರಹಿಸಿ ಹೋರಾಟ ಮಾಡಲಾಗ್ತಿದೆ.

ಗದಗದಲ್ಲೂ ಆಶಾ ಕಾರ್ಯಕರ್ತೆಯರು ಮಳೆಯನ್ನು ಲೆಕ್ಕಿಸದೆ ಅಹೋರಾತ್ರಿ ಹೋರಾಟ ನಡೆಸುತ್ತಿದ್ದಾರೆ. ಗದಗ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ನೂರಾರು ಆಶಾ ಕಾರ್ಯಕರ್ತೆಯರು ಮಳೆಯಲ್ಲೇ ಕುಳಿತು ಹೋರಾಟ ಮಾಡುತ್ತಿದ್ದಾರೆ. ಮೂರು ದಿನಗಳ ಕಾಲ ನಡೆಯುತ್ತಿರೋ ಅಹೋರಾತ್ರಿ ಧರಣಿಯಲ್ಲಿ ಸರ್ಕಾರ ಪ್ರೋತ್ಸಾಹ ಧನ ಸೇರಿಸಿ ಕನಿಷ್ಠ 10 ಸಾವಿರ ಗೌರವ ಧನ ನೀಡಬೇಕು ಅನ್ನೋದು ಪ್ರಮುಖ ಬೇಡಿಕೆ ಆಗಿದೆ. ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ 1000 ರೂಪಾಯಿ ಪ್ರೋತ್ಸಾಹ ಧನ ಹೆಚ್ಚಳ ಮಾಡಬೇಕು. ಅವೈಜ್ಞಾನಿಕ ಆಶಾ ಕಾರ್ಯಕರ್ತೆಯರ ಕಾರ್ಯನಿರ್ವಹಣಾ ಮೌಲ್ಯ ಮಾಪನ ಕೈಬಿಡಬೇಕು ಎಂದು ಒತ್ತಾಯ ಮಾಡಲಾಗಿದೆ. ಜೊತೆಗೆ ನಗರದ ಆಶಾ ಕಾರ್ಯಕರ್ತೆಯರಿಗೆ 2000 ಗೌರವ ಧನ ಹೆಚ್ಚಳ ಮಾಡಬೇಕು ಅಂತಾನೂ ಒತ್ತಾಯ ಮಾಡಿದ್ದಾರೆ.
ರಾಜ್ಯದಲ್ಲಿ ಅಧಿವೇಶನ ನಡೆಯುತ್ತಿದ್ದು, ಆಶಾ ಕಾರ್ಯಕರ್ತೆಯರ ಕೂಗು ಸರ್ಕಾರಕ್ಕೆ ಕೇಳುತ್ತಾ ಅನ್ನೋ ಬಗ್ಗೆ ಚರ್ಚೆ ಆಗ್ತಿದೆ. ಪ್ರತಿಬಾರಿಯೂ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುತ್ತಿದ್ದ ಆಶಾ ಕಾರ್ಯಕರ್ತೆಯರು, ಈ ಬಾರಿ ಜಿಲ್ಲಾ ಕೇಂದ್ರಗಳಲ್ಲೇ ಪ್ರತಿಭಟನೆ ನಡೆಸುತ್ತಿದ್ದಾರೆ. ಮೂರು ದಿನಗಳ ಹೋರಾಟದ ಜೊತೆಗೆ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ. ಆದರೆ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ಮಣಿಯುತ್ತಾ..? ಅನ್ನೋದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.


