The Public Spot
ರಾಜಕೀಯ

ವಾಲ್ಮೀಕಿ ಪ್ರತಿಮೆ ನೆಪದಲ್ಲಿ ಬಳ್ಳಾರಿಯಲ್ಲಿ ರಕ್ತ ರಾಜಕೀಯ.. ತಪ್ಪು ಯಾರದ್ದು..?

ಬಳ್ಳಾರಿಯಲ್ಲಿ ರಕ್ತ ರಾಜಕಾರಣ ಶುರುವಾಗಿದೆ. ಚುನಾವಣಾ ಕಾವು ಇಲ್ಲದೆ ಇರುವಾಗಲೂ ಕಾಂಗ್ರೆಸ್‌ – ಬಿಜೆಪಿ ನಡುವೆ ಗುಂಡಿನ ಕಾಳಗವೇ ನಡೆದಿದೆ. ಗುಂಡೇಟಿಗೆ ಓರ್ವ ಕಾಂಗ್ರೆಸ್‌ ಕಾರ್ಯಕರ್ತ ಹತನಾಗಿದ್ದಾನೆ. ಅಸಲಿಗೆ ಕಾಂಗ್ರೆಸ್‌‌ ಶಾಸಕರ ಪರಮಾಪ್ತ ಸತೀಶ್‌ ರೆಡ್ಡಿ ಗನ್‌ಮ್ಯಾನ್‌ಗಳೇ ಗುಂಡು ಹಾರಿಸಿದ್ದಾರೆ. ಇದೀಗ ಬಿಜೆಪಿ ನಾಯಕ ಶ್ರೀರಾಮುಲು, ಜನಾರ್ದನ ರೆಡ್ಡಿ, ಸೋಮಶೇಖರ ರೆಡ್ಡಿ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧವೇ ದೂರು ದಾಖಲಾಗಿದೆ. ಅಷ್ಟೇ ಅಲ್ಲದೆ ಕಾಂಗ್ರೆಸ್‌ ಶಾಸಕ ನಾ.ರಾ ಭರತ್‌ ರೆಡ್ಡಿ, ಶ್ರೀರಾಮುಲು, ಜನಾರ್ದನ ರೆಡ್ಡಿ ಅವರ ಅಧಿಕೃತ ಗನ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಕೊಪ್ಪಳ ಜಿಲ್ಲೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಸೇರಿದ ಬಳ್ಳಾರಿ ಮನೆ ಮುಂದೆ ವಾಲ್ಮೀಕಿ ಬ್ಯಾನರ್​ ಕಟ್ಟುವ ವಿಚಾರಕ್ಕೆ ಶುರುವಾದ ಗಲಾಟೆ ಒಂದು ಕೊಲೆಯಲ್ಲಿ ಅಂತ್ಯವಾಗಿದೆ. ಜನಾರ್ದನ ರೆಡ್ಡಿ – ಶ್ರೀರಾಮುಲು ಹಾಗೂ ಬಳ್ಳಾರಿ ನಗರ ಶಾಸಕ ನಾ.ರಾ ಭರತ್‌ರೆಡ್ಡಿ ಬೆಂಬಲಿಗರ ನಡುವೆ ಗಲಾಟೆ ನಡೆದು, ಕಲ್ಲು ತೂರಾಟವಾಗಿದೆ. ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಲಾಗಿದ್ದು, ರಾಜಶೇಖರ್​​ ಎಂಬಾತ ಮೃತಪಟ್ಟಿದ್ದಾನೆ. ಸದ್ಯ ಬಳ್ಳಾರಿಯಲ್ಲಿ ಬೂದಿಮುಚ್ಚಿದ ಕೆಂಡದಂಥಾ ಪರಿಸ್ಥಿತಿ ಇದೆ. ಬಳ್ಳಾರಿ ನಗರದಾದ್ಯಂತ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಯಾವುದೇ ಅಹಿತಕರ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.

ಬಳ್ಳಾರಿಯಲ್ಲಿ ಗುಂಡಿನ ದಾಳಿಯಲ್ಲಿ ಮೃತನಾದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಅಂತ್ಯಕ್ರಿಯೆ ನೆರವೇರಿಸಲಾಗಿದೆ.. ಬಿಮ್ಸ್​ನಲ್ಲಿ ರಾಜಶೇಖರ್ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ. ಬಿಮ್ಸ್ ಶವಾಗಾರಕ್ಕೆ ಭೇಟಿ ನೀಡಿದ್ದ ಶಾಸಕ ನಾ.ರಾ ಭರತ್ ರೆಡ್ಡಿ, ಮೃತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಬಿಮ್ಸ್​ನಿಂದ ಬಳ್ಳಾರಿಯ ಹುಸೇನ್ ನಗರಕ್ಕೆ ಮೃತದೇಹ ಕೊಂಡೊಯ್ದು, ಪೂಜೆ ನೆರವೇರಿಸದ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ರಾಜಶೇಖರ್ ಮನೆ ಸುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ವಾಲ್ಮೀಕಿ ಬ್ಯಾನರ್​ ಕಟ್ಟುವಾಗ ಗಲಾಟೆ ನಡೆದಿದೆ. ಈ ಘಟನೆ ಸಂಬಂಧ ಒಟ್ಟು 11 ಜನರ ವಿರುದ್ಧ FIR ದಾಖಲಾಗಿದೆ. ಮಾಜಿ ಸಚಿವ ಜನಾರ್ದನ ರೆಡ್ಡಿ, ಶ್ರೀರಾಮುಲು, ಸೋಮಶೇಖರ್ ರೆಡ್ಡಿ ಸೇರಿದಂತೆ 11 ಜನರ ವಿರುದ್ದ ಚಾನಾಳ್​ ಶೇಖರ್ ನೀಡಿದ ದೂರಿನ ಅನ್ವಯ ಬ್ರೂಸ್ ಪೇಟೆ ಠಾಣೆಯಲ್ಲಿ FIR ದಾಖಲಾಗಿದೆ. ಗಲಾಟೆ ಪ್ರಕರಣದ ಬಳಿಕ ಶಾಸಕ ಜನಾರ್ದನ ರೆಡ್ಡಿ, ಶ್ರೀರಾಮುಲು, ಸೋಮಶೇಖರ್ ರೆಡ್ಡಿ ಹಾಗೂ ಶಾಸಕ ನಾರಾ ಭರತ್ ರೆಡ್ಡಿಗೆ ಸೇರಿದ ಬಂದೂಕುಗಳನ್ನ ವಶಕ್ಕೆ ಪಡೆಯಲಾಗಿದೆ. ನಿನ್ನೆಯ ಪ್ರಕರಣದಲ್ಲಿ ಗುಂಡೇಟಿಗೆ ರಾಜಶೇಖರ್​ ಸಾವನ್ನಪ್ಪಿದ್ರು. ರಾಜಶೇಖರ್​ಗೆ ಬಿದ್ದ ಬುಲೆಟ್ ಯಾವುದು ಅನ್ನೋ ಬಗ್ಗೆ ತನಿಖೆ ನಡೆಬೇಕಿದೆ.

ಮೇಲ್ನೋಟಕ್ಕೆ ಕಾಂಗ್ರೆಸ್‌ ಶಾಸಕ ನಾ.ರ ಭರತ್‌ ರೆಡ್ಡಿ ಹಾಗೂ ಬೆಂಬಲಿಗರದ್ದೇ ತಪ್ಪು ಎನ್ನುವುದು ಕಂಡು ಬರುತ್ತಿದೆ. ಇದೇ ಕಾರಣಕ್ಕೆ ಬಳ್ಳಾರಿ ಉಸ್ತುವಾರಿ ಜಮೀರ್‌ ಅಹ್ಮದ್‌ ನಾ.ರಾ ಭರತ್‌ ರೆಡ್ಡಿಗೆ ಫೋನ್‌ ಮಾಡಿ ಸಿಎಂ ಸಿದ್ದರಾಮಯ್ಯ ಜೊತೆಗೆ ಮಾತನಾಡಿಸುವ ಪ್ರಯತ್ನ ಮಾಡಿದಾಗ ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ದಾರೆ ಎನ್ನಲಾಗಿದೆ. ನಾನು ಮಾತನಾಡುವುದಿಲ್ಲ ಎಂದಿದ್ದಾರೆ ಎನ್ನಲಾಗ್ತಿದೆ. ಇನ್ನು ರಾಜ್ಯ ಬಿಜೆಪಿ ನಾಯಕರು ಹೊಂದಾಣಿಕೆ ರಾಜಕೀಯ ಮಾಡುತ್ತಾರೆ ಅನ್ನೋ ಕಾರಣಕ್ಕೆ ಬಿಜೆಪಿ ಹೈಕಮಾಂಡ್‌ ನೇರವಾಗಿ ಅಖಾಡಕ್ಕೆ ಎಂಟ್ರಿಯಾಗಿದ್ದು, ದೆಹಲಿಯಿಂದ ಸಲಹೆ ಸೂಚನೆಗಳು ಬರುತ್ತಿದ್ದು, ಕಾಂಗ್ರೆಸ್‌ ಸರ್ಕಾರವನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವ ಹೋರಾಟಕ್ಕೆ ಚಾಲನೆ ನೀಡಿದ್ದಾರೆ. ನಾಳೆ ಬಳ್ಳಾರಿ ಚಲೋ ಮಾಡಲು ಬಿಜೆಪಿ ನಿರ್ಧಾರ ಮಾಡಿದೆ.

Related posts

ಮಾಜಿ ಮಿನಿಸ್ಟರ್​ ರಾಜಣ್ಣ.. ಮತ್ತು ಆ ಮೂರು ತಪ್ಪುಗಳು.. ಡಿಕೆಶಿಗೆ ಕೈ ಜೋಡಿಸಿದ್ರಾ ಸಿಎಂ..?

Publicspot

ಉತ್ತರ ಬೇಕಾದವರು ಈ ಪ್ರಶ್ನೆಗಳಿಗೆ ಉತ್ತರಿಸಿ.. ಸಂತೋಷ್​ ಲಾಡ್ ಸವಾಲು..!​​

Publicspot

BiggBoss Congress; ಬಿಗ್​ಬಾಸ್​ ವಿಚಾರದಲ್ಲಿ ಹೊರಬಿತ್ತು ಕಾಂಗ್ರೆಸ್​ ಅಸಮಾಧಾನ!!

Publicspot

ವೀರಶೈವ ಲಿಂಗಾಯತರಿಗೆ ದಾವಣಗೆರೆಯಿಂದ ಹೊಸ ದಿಕ್ಸೂಚಿ ಸಿಕ್ಕಿದೆ: ಬಸವರಾಜ ಬೊಮ್ಮಾಯಿ

admin

ಮನೆ ಮನೆಗೆ ಇ-ಖಾತೆಯನ್ನು ತಲುಪಿಸುವ ಅರ್ಥಪೂರ್ಣ ಕಾರ್ಯಕ್ರಮ ಇ-ಖಾತಾ ಮೇಳ: ಬಿ.ಎಸ್.ಸುರೇಶ್

admin

ನನಗೆ ಸರ್ಕಾರದ ಭತ್ಯೆ ಬೇಡ.. ಊಟ, ತಿಂಡಿ, ಕಾಫಿ, ರೂಮು ಏನೂ ಬೇಡ.. ಸ್ಪೀಕರ್‌ಗೆ ಪತ್ರ..

Publicspot