ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ದ್ವೇಷ ಭಾಷಣ ವಿಧೇಯಕ ಮಂಡನೆ ವಿಚಾರವಾಗಿ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಮಾತನಾಡಿದ್ದಾರೆ. ಸಮಾಜವನ್ನು ಸಮುದಾಯಗಳನ್ನ ಒಟ್ಟಾರೆ ರಾಜ್ಯ, ದೇಶದಲ್ಲಿ ಶಾಂತಿ ಇರಬೇಕು ಎನ್ನುವ ಉದ್ದೇಶದಿಂದ ದ್ವೇಷ ಭಾಷಣ ನಿಷೇಧ ಮಾಡುವ ಸಲುವಾಗಿ ಸರ್ಕಾರ ವಿಧೇಯಕ ಮಂಡನೆ ಮಾಡಲಿದೆ. ಉದ್ದೇಶ ಅನಾವಶ್ಯಕವಾಗಿ ಯಾರು ಸಮಾಜದ ಶಾಂತಿ ಕದಡುವ ಕೆಲಸ ಮಾಡಬಾರದು ಎಂದಿದ್ದಾರೆ. ಸಮಾಜದಲ್ಲಿ ಸುಮಧುರ ಭಾವನೆಯನ್ನ ಕದಡುವ ಕೆಲಸ ಮಾಡಬಾರದು. ಯಾರು ಸಮಾಜದಲ್ಲಿ ಶಾಂತಿ ಬಯಸ್ತಾರೆ ಅವರು ಎಲ್ಲರೂ ಈ ವಿಧೇಯಕ ಬೆಂಬಲಿಸಬೇಕು ಎಂದು ನಿರೀಕ್ಷೆ ಮಾಡ್ತೇವೆ ಎಂದಿದ್ದಾರೆ.
ದ್ವೇಷ ಭಾಷಣವನ್ನು ಯಾರೇ ಮಾಡಲಿ, ಯಾವ ಪಕ್ಷದವರೇ ಮಾಡಲಿ, ಯಾವುದೇ ಗುಂಪಿನವರೇ ಮಾಡಲಿ ಅಂತವರ ವಿರುದ್ಧ ಈ ಕಾನೂನು ಅಸ್ತ್ರ ಬಳಕೆ ಆಗುತ್ತದೆ ಎಂದಿರುವ ಹೆಚ್.ಕೆ ಪಾಟೀಲ್, ಯಾರು ದ್ವೇಷ ಮಾಡ್ತಾರೆ ಅವರಿಗೆ ಈ ಬಗ್ಗೆ ಸ್ವಲ್ಪ ಅಂಜಿಕೆ ಇರಬಹುದು. ಆದರೆ ಈ ಕಾನೂನು ಮಾಡೋದನ್ನ ಬಿಡಲು ಆಗೋದಿಲ್ಲ. ಬಿಜೆಪಿ ಅವರು ಅನುಮಾನಗಳನ್ನ ಹೇಳಲಿ. ಅವರ ಸ್ಪಷ್ಟೀಕರಣಗಳನ್ನ ನಾವು ಕೇಳ್ತೇವಿ. ನಮ್ಮ ಮಾತಿಗೆ ಒಪ್ಪುತ್ತಾರೆ ಎಂದು ನಿರೀಕ್ಷೆ ಮಾಡ್ತೇವೆ ಎಂದಿದ್ದಾರೆ.
ದ್ವೇಷ ಭಾಷಣ ಬಿಲ್ ಮಂಡನೆ ವಿಚಾರವಾಗಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ , ಇವರು ರಾಜಕೀಯ ನಾಯಕರನ್ನ ಟಾರ್ಗೆಟ್ ಮಾಡಿದ್ದಾರೆ. ದ್ವೇಷ ಭಾಷಣ ಮಾಡಿದರೆ ಕಡಿವಾಣ ಇದೆ. ಈಗ ಬೇಕಾದಷ್ಟು ಕಾನೂನುಗಳಿವೆ. ಇದು ಕೋಮು ಸೌಹಾರ್ಧತೆ ಹಾಳು ಮಾಡುವುದಕ್ಕಷ್ಟೇ ಹೊಸ ಕಾನೂನು ಎಂದಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಚನ್ನಬಸಪ್ಪ ( ಚೆನ್ನಿ ) , ಸರ್ಕಾರದಿಂದ ಹೇಟ್ ಸ್ಪೀಚ್ ಬಿಲ್ ಮಂಡನೆ ಮಾಡುವ ಮೂಲಕ ದ್ವೇಷ ಬಿತ್ತುವ ಕೆಲಸ ಮಾಡ್ತಿದೆ ಎಂದಿದ್ದಾರೆ. ಕಾಂಗ್ರೆಸ್ನವರಿಗೆ ಸತ್ಯಸಂಗತಿ ಬೇಕಿಲ್ಲ. ಅದನ್ನು ದ್ವೇಷ ಭಾಷಣ ಅಂದರೆ ಹೇಗೆ..? ವಂದೇ ಮಾತರಂ 150 ವರ್ಷ ಮುಚ್ಚಿಟ್ರು. ಈಗ ಕಾಂಗ್ರೆಸ್ ಈ ಬಿಲ್ ತರೋದಕ್ಕೆ ಹೊರಟಿದೆ. ಇದೆಲ್ಲವೂ ಆಗದ ಮಾತು ಎಂದಿದ್ದಾರೆ.
ದ್ವೇಷ ಭಾಷಣ ಮಾಡಿದರೆ ಈಗಲೂ ಕ್ರಮ ತೆಗೆದುಕೊಳ್ಳುವುದಕ್ಕೆ ಕಾನೂನು ಅವಕಾಶ ಮಾಡಿಕೊಡುತ್ತದೆ. ಆದರೆ ಇದೀಗ ಹೊಸ ರೂಪದಲ್ಲಿ ತರ್ತಿರೋ ಕಾನೂನು ಏನೆಲ್ಲಾ ಅಂಶಗಳನ್ನು ಸೇರಿಸಿದ್ದಾರೆ ಅನ್ನೋದನ್ನು ಕಾದು ನೋಡ್ಬೇಕು. ಯಾವ ಯಾವ ರೀತಿಯ ಮಾತುಗಳು ದ್ವೇಷ ಭಾಷಣದ ಅಡಿಯಲ್ಲಿ ತರುತ್ತಿದ್ದಾರೆ. ಈ ದ್ವೇಷ ಭಾಷಣ ಕಾನೂನು ತರುವುದಕ್ಕೆ ಪ್ರಮುಖವಾಗಿ ಬಿಜೆಪಿಗೆ ಕಡಿವಾಣ ಹಾಕುವ ಉದ್ದೇಶ ಹೊಂದಿದ್ಯಾ..? ಅನ್ನೋದು ಕೂಡ ವಿದೇಯಕ ಮಂಡನೆ ಆದ ಬಳಿಕ ಗೊತ್ತಾಗಬೇಕಿದೆ.


