ಕಲಬುರಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಗೌನಹಳ್ಳಿ ಬಳಿ ನಡೆದ ಭೀಕರ ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸಾವನ್ನಪ್ಪಿದ್ದಾರೆ. ಮಹಾಂತೇಶ್ ಬೀಳಗಿ ರಾಜ್ಯ ಖನಿಜ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಮಹಾಂತೇಶ್ ಬೀಳಗಿ ಹಾಗೂ ಅವರ ಸಹೋದರರು ಪ್ರಯಾಣಿಸುತ್ತಿದ್ದಾಗ ಇನ್ನೋವಾ ಕಾರು ಜೇವರ್ಗಿಯ ಬೈಪಾಸ್ ಬಳಿ ಅಪಘಾತಕ್ಕೀಡಾಗಿದೆ. ದುರಂತದಲ್ಲಿ ಮಹಾಂತೇಶ್ ಬಿಳಗಿ ಹಾಗೂ ಅವರ ಸಹೋದರ ಶಂಕರ ಬೀಳಗಿ ಹಾಗೂ ಈರಣ್ಣ ಶಿರಸಂಗಿ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಧಿಕಾರಿ ಸಾವಿಗೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.

ರಸ್ತೆ ಅಪಘಾತದಲ್ಲಿ ನಿಧನರಾದ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನಿವಾಸಿ. 1974ರ ಮಾರ್ಚ್ 27ರಂದು ಕಡು ಬಡತನದ ಕುಟುಂಬದಲ್ಲಿ ಜನಿಸಿದ ಮಹಾಂತೇಶ್ ಬೀಳಗಿ, ಬಡತನದಲ್ಲೇ ಶಿಕ್ಷಣ ಪಡೆದು ಉನ್ನತ ಹುದ್ದೇಗೇರಿದ್ದರು. ಇದೀಗ ಮಹಾಂತೇಶ್ ಬೀಳಗಿ ಹುಟ್ಟೂರಿನಲ್ಲಿ ನೀರವ ಮೌನ ಆವರಿಸಿದ್ದು, ಮಹಾಂತೇಶ್ ನಿವಾಸದ ಎದುರು ಸಂಬಂಧಿಕರು, ಸಾರ್ವಜನಿಕರು ಜಮಾವಣೆ ಆಗಿದ್ದಾರೆ. ಸಾವಿನ ಸುದ್ದಿ ಕೇಳಿ ಮನೆಯತ್ತ ಧಾವಿಸಿದ್ದಾರೆ ಮಹಾಂತೇಶ್ ಬೀಳಿಗಿಗೆ ಕಲಿಸಿದ ಗುರುಗಳು, ಸ್ನೇಹಿತರು. ಮಹಾಂತೇಶ್ ಬೀಳಗಿ ನೆನೆದು ಭಾವುಕರಾಗಿದ್ದಾರೆ ಸ್ನೇಹಿತರು.

ರಾಮದುರ್ಗದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದಿದ್ದ ಮಹಾಂತೇಶ ಬೀಳಗಿ, ವಿದ್ಯಾರ್ಥಿ ಜೀವನದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದರು. ಬೀಳಗಿ ಅವರ ತಾಯಿ ರೊಟ್ಟಿ ವ್ಯಾಪಾರ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಕಷ್ಟದ ಜೀವನದಲ್ಲಿ ಛಲ ಬಿಡದೇ ಓದಿ. ಕೆಎಎಸ್ ಪಾಸ್ ಮಾಡಿದ್ದ ಮಹಾಂತೇಶ ಬೀಳಗಿ, 2012ರ ಕರ್ನಾಟಕ ಕೇಡರ್ನ IAS ಅಧಿಕಾರಿಯಾಗಿ ಆಯ್ಕೆ ಆಗಿದ್ದರು. ಪ್ರಸ್ತುತ ಅವರು ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಬೆಸ್ಕಾಂ ಎಂಡಿ, ದಾವಣಗೆರೆ ಡಿಸಿ, ಉಡುಪಿ ಸೇರಿದಂತೆ ಕರ್ನಾಟಕದ ಬೇರೆ ಬೇರೆ ಕಡೆ ಕಾರ್ಯನಿರ್ವಹಿಸಿದ್ದರು.
ಸ್ಪರ್ಧಾ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡುತ್ತಿದ್ದ ಮಹಾಂತೇಶ್ ಬೀಳಗಿ, ಬಳಿಕ ಕೆಎಎಸ್ ಪರೀಕ್ಷೆ ಬರೆದು ಪಾಸ್ ಮಾಡಿದ್ದರು. ನೇರವಾಗಿ ಎಸಿಯಾಗಿ ಆಯ್ಕೆ ಆಗಿದ್ದ ಬೀಳಗಿ, ದಾವಣಗೆರೆ ಡಿಸಿ ಆಗಿದ್ದ ವೇಳೆ ಹಲವು ಮಹತ್ವದ ಕೆಲಸ ಮಾಡಿದ್ದರು. ಜನರ ನೆಚ್ಚಿನ ಡಿಸಿಯಾಗಿದ್ದ ಮಹಾಂತೇಶ ಬೀಳಗಿ ಇಂದು ಅಪಘಾತದಲ್ಲಿ ನಿಧನರಾಗಿದ್ದಾರೆ. ಎದುರಿನಿಂದ ಬರುತ್ತಿದ್ದ ಬೈಕ್ ಸವಾರನನ್ನು ರಕ್ಷಣೆ ಮಾಡಲು ಹೋದಾಗ ದುರ್ಘಟನೆ ಸಂಭವಿಸಿದೆ. ಎರಡು ಹೊತ್ತು ಊಟ ಮಾಡಲೂ ಸಾಧ್ಯವಿಲ್ಲದಷ್ಟು ಕಡು ಬಡತನದಲ್ಲಿ ಬೆಳೆದಿದ್ದ ಮಹಾಂತೇಶ್ ಬೀಳಗಿ ಅವರು, ಕರ್ನಾಟಕ ಯುನಿವರ್ಸಿಟಿ ಧಾರವಾಡದಲ್ಲಿ ಪದವಿ ಮುಗಿಸಿ, ತಂದೆ ಮೃತಪಟ್ಟ ಬಳಿಕ ನಾಲ್ಕು ಜನ ಮಕ್ಕಳನ್ನ ತಾಯಿಯೇ ಸಾಕಿದ್ದರು. ಕಷ್ಟ ಪಟ್ಟು ಓದಿ ಕೆಎಎಸ್ನಲ್ಲಿ ನಾಲ್ಕನೇ ರ್ಯಾಂಕ್ ಪಡೆದಿದ್ದರು. ಇದೀಗ 51 ವರ್ಷಕ್ಕೆ ದುರಂತದಲ್ಲಿ ಬಾಳ ಯಾನ ಮುಗಿಸಿದ್ದಾರೆ.


