The Public Spot
ಕ್ರೀಡೆ

Indo – Pak T-20 Cricket; ವಿರೋಧದ ನಡುವೆ ದೇಶದ ಜನರ ಮನಸ್ಸು ಗೆದ್ದ ಕ್ರಿಕೆಟ್ ಆಟಗಾರರು..!

ಏಷ್ಯಾ ಕಪ್ ಟಿ -20 ಸರಣಿಯಲ್ಲಿ ಒಂದೇ ಗುಂಪಿನಲ್ಲಿ ಇರುವ ಭಾರತ ಮತ್ತು ಪಾಕಿಸ್ತಾನ ತಂಡಗಳು ಭಾನುವಾರ ಮುಖಾಮುಖಿ ಆಗಿದ್ದವು. ಮೊದಲೇ ಎರಡೂ ಶತ್ರುರಾಷ್ಟ್ರಗಳು. ನಮ್ಮದೇ ದೇಶ ಗೆಲ್ಲಬೇಕು ಅನ್ನೋ ಹಠ ಖಂಡಿತ ಕ್ರಿಕೆಟ್ ಪ್ರೇಮಿಗಳಲ್ಲಿ ಮನೆ ಮಾಡಿತ್ತು. ಆದರೆ ಈ ವರ್ಷ ಪೆಹಲ್ಗಾಮ್ನಲ್ಲಿ ಪಾಕ್ ಪ್ರೇರಿತ ಭಯೋತ್ಪಾದಕ ದಾಳಿ ಆಗಿ, ಆ ದಾಳಿಯಲ್ಲಿ 26 ಜನರು ಅಮಾಯಕರು ಪ್ರಾಣ ಬಿಟ್ಟಿದ್ದರು. ಹೀಗಾಗಿ ಪಾಕಿಸ್ತಾನದ ಜೊತೆಗೆ ಕ್ರಿಕೆಟ್ ಆಟ ಆಡಬಾರದು ಅನ್ನೋ ಅಭಿಪ್ರಾಯ ವ್ಯಕ್ತವಾಗಿತ್ತು. ಭಾರತದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಸಾಥ್ ಕೊಡುವ ಪಾಕಿಸ್ತಾನದ ಜೊತೆಗೆ ಕ್ರಿಕೆಟ್ ಆಟವಾಡುವುದು ದೇಶದ್ರೋಹದ ಕೆಲಸ ಎಂದು ಜಾಲತಾಣಗಳೂ ಸೇರಿದಂತೆ ಎಲ್ಲಾ ಕಡೆ ಕೇಂದ್ರ ಸರ್ಕಾರದ ನಿಲುವು ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು.

ಕಾಂಗ್ರೆಸ್ ಪಕ್ಷವಂತೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರತಿಭಟನೆಯನ್ನೇ ಮಾಡಿತ್ತು. ಭಾರತದ ಮಹಿಳೆಯರ ಸಿಂದೂರ ಅಳಿಸಿದ ಪಾಕಿಸ್ತಾನದ ಜೊತೆಗೆ ಕ್ರಿಕೆಟ್ ಆಡುವ ಮೂಲಕ ಕೇಂದ್ರ ಸರ್ಕಾರ ದೇಶದ್ರೋಹದ ಕೆಲಸ ಮಾಡ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಒಂದು ಕೈಲಿ ಸಿಂದೂರ, ಮತ್ತೊಂದು ಕೈಲಿ ಕ್ಯಾಂಡಲ್ ಹಿಡಿದು ಪ್ರತಿಭಟನೆ ಮಾಡಿದ್ರು. ಆ ಬಳಿಕ ಮಾತನಾಡಿದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ, ಭಯೋತ್ಪಾದಕಕರು ದೇಶದ ಒಳಗೆ ಬಂದು 26 ಜನರನ್ನ ಗುಂಡಿಟ್ಟು ಕೊಂದರು. ಆ ಘಟನೆ ದೇಶದ ಜನರಲ್ಲಿ ರಕ್ತ ಕುದಿಯುವಂತೆ ಮಾಡಿತ್ತು. ನಾವೆಲ್ಲ ಬೀದಿಗೆ ಇಳಿದು ಪ್ರತಿಭಟನೆ ಮಾಡಿದ್ದೆವು. ಆದರೆ ಇಂದು ಪಾಕಿಸ್ತಾನ ದೊಂದಿಗೆ ಕ್ರಿಕೆಟ್ ಪಂದ್ಯ ಆಡಿಸಲಾಗ್ತಿದೆ. ನಮ್ಮ ಹೆಣ್ಣು ಮಕ್ಕಳ ಸಿಂದೂರವನ್ನ ಕಿತ್ತುಕೊಂಡರು, ಪ್ರಧಾನಿ ಮೋದಿ ಅವರೇ, ಅಮಿತ್ ಷಾ ಅವರೇ ಬೇಕಿತ್ತಾ ಈ ಪಂದ್ಯ ಎಂದು ಪ್ರಶ್ನೆ ಮಾಡಿದ್ದರು.

ನಿಮ್ಮ ಮಗ ICC ಅಧ್ಯಕ್ಷ ಇದ್ದಾನೆ ಎಂದು ಅವಕಾಶ ಕೊಟ್ಟಿದ್ದೀರಿ ಅಲ್ಲವೇ ಎಂದು ಅಮಿತ್ ಷಾಗೆ ಪ್ರಶ್ನೆ ಮಾಡಿದ ಸೌಮ್ಯಾ ರೆಡ್ಡಿ, ಮದ್ದೂರು ಗಲಾಟೆಯಲ್ಲಿ ಬೇಳೆ ಬೇಯಿಸಿಕೊಂಡ್ರಲ್ಲ, ಸಿ.ಟಿ ರವಿ, ಆರ್ ಅಶೋಕ್ ಎಲ್ಲರೂ ಹೋಗಿದ್ರಲ್ಲ..! ಈಗ ಯಾಕೆ ಈ ಬಗ್ಗೆ ಮಾತಾಡ್ತಿಲ್ಲ..? ಮಾನ, ಮರ್ಯಾದೆ ಇದ್ರೆ ಪಂದ್ಯ ನಿಲ್ಲಿಸಬೇಕು. ನೀರು ಮತ್ತು ರಕ್ತ ಒಂದೇ ಕಡೆ ಹರಿಯಲ್ಲ ಎಂದಿದ್ದರು. ಈಗ ನೀರು ಬಿಟ್ಟಾಯ್ತು, ಈಗ ಪಂದ್ಯ, ಬಿಜೆಪಿ ಅವರು ನಕಲಿ ಹಿಂದುಗಳು. ಇವರನ್ನೆಲ್ಲ ಸಾಯಿಸಿದ ನಂತರವೂ ಮ್ಯಾಚ್ ನಡೆಸುತ್ತಿದ್ದಾರೆ. ಹಣಕ್ಕಾಗಿ, TRP ಗಾಗಿ ಮ್ಯಾಚ್ ಆಡಿಸುತ್ತಿದ್ದಾರೆ. ಈಗಲಾದರೂ ಜನ ಪ್ರಶ್ನೆ ಕೇಳಬೇಕು. ಭಾರತೀಯರಿಗೆ ಭದ್ರತೆ ಬೇಕು ಎಂದು ಸೌಮ್ಯಾ ರೆಡ್ಡಿ ಆಗ್ರಹಿಸಿದ್ದಾರೆ.

ಕೇವಲ ಕಾಂಗ್ರೆಸ್ ಮಾತ್ರವಲ್ಲ, ಕಾಂಗ್ರೆಸ್ ಸೇರಿದಂತೆ ಇತರೆ ರಾಜಕೀಯ ಪಕ್ಷಗಳೂ ಕೂಡ ಪಂದ್ಯವನ್ನು ವಿರೋಧ ಮಾಡಿದ್ದವು. ಬಿಜೆಪಿ ನಾಯಕರೂ ಕೂಡ ಈ ಪಂದ್ಯದ ಅವಶ್ಯಕತೆ ಇರಲಿಲ್ಲ ಎಂದೇ ಹೇಳಿದ್ದರು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಪೆಹಲ್ಗಾಮ್ ಹತ್ಯಾಕಾಂಡ, ಆಪರೇಷನ್ ಸಿಂದೂರ, ಭಾರತದ ಬಗ್ಗೆ ಪಾಕ್ ಹೇಳಿಕೆಗಳನ್ನು ಪರಿಗಣಿಸಬೇಕು. ಇದೆಲ್ಲದರ ನಡುವೆ ಈ ಮ್ಯಾಚ್ ನಡೆಸದಿದ್ದರೆ ಚೆನ್ನಾಗಿತ್ತು. ಕ್ರೀಡೆ ಇರಬೇಕು, ಆದ್ರೆ ದೇಶ, ದೇಶದ ಜನರ ಭಾವನೆ ಬಹಳ ಮುಖ್ಯ. ಬಿಸಿಸಿಐ ದೇಶದ ಜನರ ಭಾವನೆಗಳಿಗೆ ತಕ್ಕ ನಿರ್ಧಾರ ತೆಗೆದುಕೊಂಡಿಲ್ಲ ಎಂದಿದ್ದಾರೆ. ಅಶ್ವತ್ಥ ನಾರಾಯಣ್ ಮಾತನಾಡಿ, ಈ ಪಂದ್ಯ ಅಗತ್ಯ ಇರಲಿಲ್ಲ. ಆದರೆ ಪಾಕಿಸ್ತಾನ ಪಕ್ಕದ ದೇಶ, ದೂರ ಇಡುವುದಕ್ಕೂ ಆಗಲ್ಲ, ಹತ್ತಿರ ಸೇರಿಸಲೂ ಆಗಲ್ಲ, ಹೀಗಾಗಿ ಪಕ್ಕದಲ್ಲೇ ಇದ್ದು ಹೊಡೆಯಬೇಕು ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ. ಆದರೆ ಹಿಂದುತ್ವ ವಾದವನ್ನೇ ಅಜೆಂಡಾ ಮಾಡಿಕೊಂಡಿರುವ ಯತ್ನಾಳ್ ಮಾತ್ರ, ಈ ಪಂದ್ಯ ಆಯೋಜನೆ ಮಾಡಿದ್ದು ತಪ್ಪು ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಆದರೆ ಆಟಗಾರರು ಎಲ್ಲಾ ವಿರೋಧವನ್ನು ಪರಿಗಣನೆಗೆ ತೆಗೆದುಕೊಂಡು ಗೆದ್ದು ಸೈ ಎನಿಸಿಕೊಂಡಿದ್ದು ಮಾತ್ರವಲ್ಲದೆ ತನ್ನದೇ ಆದ ರೀತಿಯಲ್ಲಿ ಜನರ ಮನ ಗೆದ್ದಿದ್ದಾರೆ.

ಸಾಮಾನ್ಯವಾಗಿ ಯಾವುದೇ ಪಂದ್ಯದಲ್ಲಿ ಸೋಲು ಗೆಲುವು ಏನೇ ಇರಲಿ, ಆ ಪಂದ್ಯದ ಅಂತ್ಯದಲ್ಲಿ ಎಲ್ಲಾ ಆಡಗಾರರು ಪರಸ್ಪರ ಕೈ ಕುಲುಕುವ ಮೂಲಕ ಕ್ರೀಡಾ ಸ್ಪೂರ್ತಿ ಮೆರೆಯಲಾಗುತ್ತದೆ. ಆದರೆ ಈ ಪಂದ್ಯದಲ್ಲಿ ಕೊನೆಯಲ್ಲಿ ಸೂರ್ಯಕುಮಾರ್ ಯಾದವ್ ಗೆಲುವು ಸಾಧಿಸುತ್ತಿದ್ದ ಹಾಗೆ ನೇರವಾಗಿ ಗ್ರೌಂಡ್ನಿಂದ ಹೊರ ಬಂದರು. ಆ ಬಳಿಕ ಪಾಕಿಸ್ತಾನದ ಆಟಗಾರರು ಗ್ರೌಂಡ್ನಿಂದ ಹೊರ ಬರುವಾಗ ಹ್ಯಾಂಡ್ ಶೇಕ್ ಮಾಡಲು ಸಿದ್ದರಿದ್ದರು. ಆದರೆ ಭಾರತೀಯ ಆಟಗಾರರು ನೇರವಾಗಿ ಡ್ರೆಸ್ಸಿಂಗ್ ರೂಂಗೆ ಮರಳಿದ್ದರು. ನಂತರ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್, ನಾವು ಪೆಹಲ್ಗಾಮ್ ದಾಳಿಯಲ್ಲಿ ಸಾವನ್ನಪ್ಪಿದ ಸಂತ್ರಸ್ತರ ಪರವಾಗಿ ನಿಲ್ತೇವೆ ಹಾಗೂ ಈ ಗೆಲುವನ್ನು ಭಾರತೀಯ ಸೇನೆಗೆ ಸಮರ್ಪಣೆ ಮಾಡ್ತೇವೆ ಎಂದಿದ್ದಾರೆ. ಇದಕ್ಕೂ ಮೊದಲು ಟಾಸ್ ಸೋತಾಗಲೂ ಪಾಕಿಸ್ತಾನ್ ಕ್ಯಾಪ್ಟನ್ ಜೊತೆಗೆ ಶೇಕ್ ಹ್ಯಾಂಡ್ ಆಗಲಿಲ್ಲ. ಇದು ಕ್ರೀಡಾಸ್ಪೂರ್ತಿ ಅಲ್ಲ ಎಂದು ಕೆಲವರು ಹೇಳಬಹುದು. ಆದರೆ ಭಾರತೀಯರಿಗೆ ಅಂದು ಪೆಹಲ್ಗಾಮ್ ದಾಳಿ ದಿನ ಆಗಿರುವ ನೋವು ಕೂಡ ಅರಗಿಸಿಕೊಳ್ಳಲು ಆಗಿರಲಿಲ್ಲ ಅಲ್ಲವೇ..?

Related posts

ಟಿ-20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಹಂತಕ್ಕೆ ಲಗ್ಗೆ ಹಾಕಿದ ಟೀಂ ಇಂಡಿಯಾ!

Publicspot

ಚಿನ್ನಸ್ವಾಮಿ ಸ್ಟೇಡಿಯಂ ವಿಚಾರದಲ್ಲೂ ರಾಜಕೀಯ ನಡೀತಿದ್ಯಾ..? ನಾಳಿನ ಪಂದ್ಯ ಕ್ಯಾನ್ಸಲ್​..!!

Publicspot

India Wins Women’s WorldCup: ಚೊಚ್ಚಲ ವಿಶ್ವಕಪ್​ಗೆ ಮುತ್ತಿಟ್ಟ “ಭಾರತಾಂಬೆ” ಮಕ್ಕಳು

Publicspot

19 ವರ್ಷದ ಒಳಗಿನ ಹುಡುಗರಲ್ಲೂ ಭಾರತವೇ ಲೀಡರ್‌.. 6ನೇ ವಿಶ್ವಕಪ್‌..

Publicspot

India Win; ಅಂಗಳದಲ್ಲಿ ಆಪರೇಷನ್​ ಸಿಂದೂರ್​.. ಪಾಕಿಸ್ತಾನಕ್ಕೆ ಮೋದಿ ಗುದ್ದು..

Publicspot

IPL ಕ್ರಿಕೆಟ್‌ ಪಂದ್ಯ ನಡೆಸಲು ಸರ್ಕಾರದ ಸಮ್ಮತಿ..! 11 ಜನರ ಬಲಿ ಬಳಿಕ ಮತ್ತೆ ಪಂದ್ಯ..

Publicspot