ಬೆಂಗಳೂರಿನ ಯಲಹಂಕದಲ್ಲಿ ಘನಘೋಈರ ಘಟನೆಯೊಂದು ನಡೆದಿತ್ತು. ಒಂದೇ ಲಾಡ್ಜ್‌ನಲ್ಲಿ ಯುವಕ ಸುಟ್ಟು ಕರಕಲಾಗಿದ್ದರೆ, ಯುವತಿಯೊಬ್ಬಳು ಬಾತ್‌ರೂಮ್‌ನಲ್ಲೇ ಸತ್ತು ಬಿದ್ದಿದ್ದಳು. ಈ ಘಟನೆ ಬಗ್ಗೆ ವಿಚಾರಣೆಗೆ ಇಳಿದ ಪೊಲೀಸರು ಅಚ್ಚರಿಯ ಸಂಗತಿಯನ್ನು ಬಯಲು ಮಾಡಿದ್ದಾರೆ. ಪೊಲೀಸರ ತನಿಖೆ ವೇಳೆ ಹೊರಬಂದಿರುವ ಆಶ್ಚರ್ಯಕರ ಸಂಗತಿ ಏನಂದರೆ, ಬಾಗಲಕೋಟೆ ಮೂಲದ ಮೃತ ಮಹಿಳೆ ಕಾವೇರಿಗೆ ಮದುವೆಯಾಗಿ ಮೂವರು ಮಕ್ಕಳು ಇದ್ದರು. ಗಂಡ ಹಾಗೂ ಮೂವರು ಮಕ್ಕಳನ್ನ ಬಿಟ್ಟು ಕೆಲಸ ಮಾಡ್ತೇನೆ ಎಂದು ಬೆಂಗಳೂರಿಗೆ ಬಂದಿದ್ದ ಮೃತ ಕಾವೇರಿಗೆ ಗದಗ ಮೂಲದ ರಮೇಶ್ ಮೇಲೆ ವ್ಯಾಮೋಹ ಬಂದಿತ್ತು. ಬಾಗಲಕೋಟೆ ಜಿಲ್ಲೆ ಹುನಗುಂದ ಮೂಲದ ಕಾವೇರಿ ಬಡಿಗೇರ್, ಗದಗ ಮೂಲದ ಯುವಕ ರಮೇಶ್ ಜೊತೆಗೆ ಅನೈತಿಕ ಸಂಬಂಧ ಬೆಳೆಸಿಕೊಂಡ ಆರೋಪ ಎದುರಾಗಿದೆ. ಆ ಬಳಿಕ ಮದುವೆ ವಿಚಾರಕ್ಕೆ ಒತ್ತಡ ತಂದಿದ್ದು, ರಮೇಶ್ ಪೆಟ್ರೋಲ್ ಸುರಿದುಕೊಂಡು ಬ್ಲಾಕ್‌ಮೇಲ್ ಮಾಡಲು ಹೋಗಿ ದುರಂತ ಸಂಭವಿಸಿದೆ.
ಮದುವೆ ಆಗಲು ಮಹಿಳೆ ಕಾವೇರಿ ಒಪ್ಪದಿರೋದಕ್ಕೆ ಪೆಟ್ರೋಲ್ ಸುರಿದುಕೊಂಡು ಬೆದರಿಕೆ ಹಾಕಲು ಹೋಗಿ ಬೆಂಕಿಗೆ ಆಹುತಿ ಆಗಿದ್ದಾನೆ. ಯಾವಾಗ ಯುವಕ ರಮೇಶ್ ಬೆಂಕಿ ಹೊತ್ತಿಸಿಕೊಂಡ್ನೋ ಆಗ ಆತನಿಂದ ತಪ್ಪಿಸಿಕೊಂಡ ಮಹಿಳೆ ಕಾವೇರಿ ಬಾತ್ ರೂಮ್ ಒಳಕ್ಕೆ ಹೋಗಿ ಡೋರ್ ಕ್ಲೋಸ್ ಮಾಡಿಕೊಂಡಿದ್ದಾಳೆ. ಈ ವೇಳೆ ಮಹಿಳೆ ಉಸಿರುಗಟ್ಟಿ ಸಾವನ್ನಪ್ಪಿದ್ದಳು. ಬಾತ್ ರೂಮ್ ಕ್ಲೋಸ್ ಮಾಡಿಕೊಂಡು ಸ್ಪಾ ಮಾಲೀಕನಿಗೆ ಕರೆ ಮಾಡಿ, ನಡೆದ ಘಟನೆ ಬಗ್ಗೆ ಮಾಹಿತಿ ಕೊಟ್ಟಿದ್ದಳು. ಆ ಬಳಿಕ ಸ್ಪಾ ಮಾಲೀಕ ಪೊಲೀಸ್ರಿಗೆ ಮಾಹಿತಿ ನೀಡಿದ್ದು, ಸ್ಪಾಟ್‌ಗೆ ಬಂದು ನೋಡುವಷ್ಟರಲ್ಲಿ ಇಬ್ಬರೂ ಸತ್ತು ಬಿದ್ದಿದ್ದರು. ಇಬ್ಬರ ಮೊಬೈಲ್‌ಗಳನ್ನು ವಶಕ್ಕೆ ಪಡೆದು ಪರಿಶೀಲನೆ ಮಾಡಿದ್ದು, ಮೃತ ರಮೇಶ್ ಮೊಬೈಲ್ ನೀರಿನಲ್ಲಿ ಮುಳಗಿದ್ದು, ಆನ್ ಆಗ್ತಿಲ್ಲ. ಮಹಿಳೆ ಮೊಬೈಲ್ ವಶಕ್ಕೆ ಪಡೆದು ಯಲಹಂಕ ನ್ಯೂ ಟೌನ್ ಪೊಲೀಸ್ರು ಪರಿಶೀಲಿಸ್ತಿದ್ದಾರೆ.

ಯಲಹಂಕ ನ್ಯೂಟೌನ್ ಠಾಣೆ ವ್ಯಾಪ್ತಿಯಲ್ಲಿ ಬೆಂಕಿಗೆ ಇಬ್ಬರು ಸಾವನ್ನಪ್ಪಿದ ಬಳಿಕ ಪೂರ್ವ ವಲಯದ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮಾತನಾಡಿ, ಘಟನೆ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗ್ತಿದೆ. ಬೆಂಕಿ ಹೊತ್ತಿಕೊಂಡಾಗ ಮಹಿಳೆ ಬಾತ್ ರೂಮ್ ಒಳಗಡೆ ಹೋಗಿದ್ದಾಳೆ. ರೂಮಿನಲ್ಲಿದ್ದ ವ್ಯಕ್ತಿ ಬೆಂಕಿಗೆ ಸುಟ್ಟು ಮೃತನಾಗಿದ್ದಾನೆ. ಬಾತ್ ರೂಮ್‌ನಲ್ಲಿ ಲಾಕ್ ಆಗಿದ್ದ ಮಹಿಳೆ ಕೂಡ ಉಸಿರಾಟದ ತೊಂದರೆ ಇಂದ ಮೃತಳಾಗಿದ್ದಾಳೆ. ಘಟನೆಗೆ ಕಾರಣ ಏನು..? ಹೇಗೆ ಬೆಂಕಿ ಹೊತ್ತಿಕೊಂಡಿತ್ತು..? ಅವರ ಮಧ್ಯೆ ಜಗಳ ಆಗಿತ್ತಾ..? ಅನ್ನೋ ಬಗ್ಗೆ ತನಿಖೆ ನಡೆಸಲಾಗ್ತಿದೆ. ಮಹಿಳೆ ಬಾಗಲಕೋಟೆಯ ಹುನಗುಂದ ಮೂಲದ ಮಹಿಳೆ. ಮದುವೆಯಾಗಿ ಮೂವರು ಮಕ್ಕಳಿದ್ದರು. ಇತ್ತೀಚಿಗೆ ಆಕೆ ಬೆಂಗಳೂರಿಗೆ ಬಂದಿದ್ದಳು. ಯುವಕ ಗದಗ ಮೂಲದವನು. ಇಬ್ಬರ ಮಧ್ಯೆ ಪರಿಚಯ ಇತ್ತು. ಮಹಿಳೆ ಸ್ಪಾನಲ್ಲಿ ಕೆಲಸ ಮಾಡಿಕೊಂಡಿದ್ದ. ಯುವಕ ಗಾರೆ ಕೆಲಸ ಮಾಡಿಕೊಂಡಿದ್ದ ಎಂದಿದ್ದಾರೆ.

ಇಬ್ಬರೂ ಲಾಡ್ಜ್‌ನಲ್ಲಿ ಇದ್ದಾಗ ಈ ರೀತಿ ಘಟನೆ ಆಗಿದೆ. ಅವರಿಬ್ಬರ ಮಧ್ಯೆ ಏನು ಸಂಬಂಧ ಇತ್ತು, ಜಗಳ ಏನಾಗಿದೆ..? ಬೆಂಕಿ ಹೇಗೆ ಹೊತ್ತಿಕೊಂಡಿತ್ತು ಅಂತಾ ಪರಿಶೀಲನೆ ಮಾಡಲಾಗ್ತಿದೆ. ಮೃತ ಯುವಕ ಬರುವ ಮುನ್ನ ಬೇರೊಬ್ಬ ವ್ಯಕ್ತಿ ಅಲ್ಲಿಗೆ ಬಂದು ಹೋಗಿದ್ದ ಅನ್ನೋ ಮಾಹಿತಿ ಸಿಕ್ಕಿದೆ. ಆಕೆಯ ಸಹೋದರ ಅಂತಾ ಹೇಳಿಕೊಂಡು ಬಂದು ಹೋಗಿದ್ದಾನೆ. ಈ ಯುವಕ ಬಂದು ಹೋದ ಮೇಲೆ ಜಗಳ ಆಗಿರುವ ಬಗ್ಗೆ ಶಂಕೆ ಇದೆ. ಅಲ್ಲಿ ಏನಾಗಿದೆ ಅನ್ನೋ ಬಗ್ಗೆ ತನಿಖೆ ನಡೆಸಲಾಗ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಮಹಿಳೆಗೆ ಮೂರು ಮಕ್ಕಳಿದ್ದು, ಬೆಂಗಳೂರಿಗೆ ದುಡಿಯುವ ಉದ್ದೇಶದಿಂದ ಬಂದಿದ್ದ ಮಹಿಳೆ ಅಕ್ರಮ ಸಂಬಂಧದಿಂದ ತಾನೂ ಪ್ರಾಣ ಕಳೆದುಕೊಂಡಿದ್ದಾಳೆ.. ಮೂವರು ಮಕ್ಕಳನ್ನು ತಬ್ಬಲಿಯನ್ನಾಗಿ ಮಾಡಿ ಹೋಗಿದ್ದಾಳೆ ಅನ್ನೋದೇ ಬೇಸರದ ಸಂಗತಿ.


