ದೆಹಲಿಯ ರೆಡ್‌ಫೋರ್ಟ್ ಬಳಿ ಕಾರು ಸ್ಫೋಟ ನಡೆದಿದ್ದು, ಇಡೀ ದೇಶವೇ ಆಕ್ರೋಶದ ಅಲೆಯಲ್ಲಿ ಮುಳುಗಿದೆ. ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ, ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಸ್ಫೋಟದ ಬಳಿಕದ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಅಮಿತ್ ಷಾ ಜೊತೆಗಿನ ಸಭೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್, ಗುಪ್ತಚರ ವಿಭಾಗದ ನಿರ್ದೇಶಕ ತಪನ್ ದೇಖಾ, ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ರು. ಸಭೆ ಬಳಿಕ ಮಾತನಾಡಿದ ಅಮಿತ್ ಶಾ ಅಧಿಕಾರಿಗಳು ಉನ್ನತ ಮಟ್ಟದ ತನಿಖೆ ನಡೆಸ್ತಿದ್ದೇವೆ ಎಂತಾ ತಿಳಿಸಿದ್ದಾರೆ.
ದೆಹಲಿಗೆ ಬೆಳಗ್ಗೆ 8 ಗಂಟೆಗೆ ಬರ್ದಾರ್‌ಪುರ ಗಡಿ ಮೂಲಕ ಐ20 ಕಾರು ಎಂಟ್ರಿ ಆಗಿತ್ತು.. ಮಧ್ಯಾಹ್ನ 1 ಗಂಟೆ ವೇಳೆಗೆ ದರಿಯಾಗಂಜ್ ಮೂಲಕ ಕಾಶ್ಮೀರಿ ಗೇಟ್ ರಸ್ತೆ ಪ್ರವೇಶಿಸಿತ್ತು. ಕೆೆಂಪುಕೋಟೆ ಬಳಿಕ ಸುನೇಹರಿ ಮಸೀದಿ ಬಳಿ ಮಧ್ಯಾಹ್ನ 3.19 ರಿಂದ 6.48ರವರೆಗೆ ಈ ಕಾರನ್ನು ಪಾರ್ಕ್ ಮಾಡಲಾಗಿತ್ತು. ಸುಮಾರು 3 ಗಂಟೆ ಒಂದೇ ಸ್ಥಳದಲ್ಲಿದ್ದ ಐ20 ಕಾರು ಪಾರ್ಕ್ ಮಾಡಲಾಗಿತ್ತು. ಆ ನಂತರ ಮಸೀದಿ ಬಳಿಯಿಂದ ಮೂವ್ ಆಗಿದ್ದ ಕಾರು ಕೆಂಪುಕೋಟೆ ಮಾರ್ಗವಾಗಿ ನಿಧಾನವಾಗಿ ಸಾಗುತ್ತಿತ್ತು. ಮೆಟ್ರೋ ಸ್ಟೇಷನ್ ಸಿಗ್ನಲ್ ಬಳಿ ಸಂಜೆ 6.52ಕ್ಕೆ ಸ್ಫೋಟಗೊಂಡಿತ್ತು.
ಸ್ಫೋಟವಾದ ಕಾರು ಒಬ್ಬರಲ್ಲ ಇಬ್ಬರಲ್ಲ ಐವರ ಕೈ ಬದಲಾಗಿತ್ತು. ಸ್ಫೋಟಗೊಂಡ HR 26 CE 7674 ನೋಂದಣಿಯ i20 ಕಾರು, ಮೊಹಮ್ಮದ್ ಸಲ್ಮಾನ್ ಹೆಸರಿನಲ್ಲಿ 2014ರಲ್ಲಿ ಹರಿಯಾಣದಲ್ಲಿ ನೋಂದಣಿ ಆಗಿತ್ತು. ಒಂದೂವರೆ ವರ್ಷದ ಹಿಂದೆ ಕಾರನ್ನು ಮಾರಾಟ ಮಾಡಿದ್ದ ಮೊಹಮ್ಮದ್ ಸಲ್ಮಾನ್. ದೆಹಲಿ ಮೂಲದ ದೇವೇಂದರ್ ಅನ್ನೋರಿಗೆ ಕಾರು ಮಾರಾಟ ಮಾಡಿದ್ದರು. ಈ ಕಾರನ್ನ ದೇವೇಂದರ್ ಸೋನು ಎಂಬಾತನಿಗೆ ಮಾರಾಟ ಮಾಡಿದ್ದ. ಪುಲ್ವಾಮಾ ಮೂಲದ ತಾರಿಕ್ ಎಂಬ ವ್ಯಕ್ತಿಗೆ ಸೋನು ಕಾರನ್ನು ಮಾರಾಟ ಮಾಡಿದ್ದ. ತಾರಿಕ್ ಡಾ. ಉಮರ್ ಮೊಹಮ್ಮದ್‌ಗೆ ಕಾರು ಮಾರಿದ್ದ. ಈ ಮೂಲಕ ಸ್ಫೋಟಕ್ಕೆ ಪುಲ್ವಾಮಾ ನಂಟು ಬಿಚ್ಚಿಕೊಂಡಿದೆ. ಉಗ್ರರ ಕೈವಾಡದ ಬಗ್ಗೆ ಎನ್ಐಎ ತನಿಖೆ ಚುರುಕುಗೊಳಿಸಿದೆ.. ಸದ್ಯಕ್ಕೆ ಮೊಹಮ್ಮದ್ ಸಲ್ಮಾನ್ ಮತ್ತು ದೇವೇಂದರ್‌ನನ್ನ ವಶಕ್ಕೆ ಪಡೆಯಲಾಗಿದೆ.
ದೆಹಲಿಯಲ್ಲಿ ಕಾರು ಸ್ಫೋಟವಾದ ಪ್ರಕರಣದ ಬಗ್ಗೆ ಬೆಂಗಳೂರಲ್ಲಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ದೆಹಲಿಯಲ್ಲಿ ಇಂಟೆಲಿಜೆನ್ಸ್ ಫೇಲ್ಯೂರ್ ಆಗಿದೆ. ದೆಹಲಿ ನಮ್ಮ ರಾಷ್ಟ್ರದ ಕ್ಯಾಪಿಟಲ್ ಸಿಟಿ. ಅಷ್ಟೊಂದು ದೊಡ್ಡ ಪ್ರದೇಶ. ಹಲವು ಕಡೆ ಚೆಕ್ ಪೋಸ್ಟ್ ಇರುತ್ತದೆ. ಅದನ್ನ ತಪ್ಪಿಸಿ ಹೇಗೆ ಒಳಗೆ ಬರೋಕೆ ಸಾಧ್ಯ..? ಅಂತಾ ಪ್ರಶ್ನಿಸಿದ್ದಾರೆ. ಇದರಲ್ಲಿ ಇಂಟೆಲಿಜೆನ್ಸ್ ಫೇಲ್ಯೂರ್ ಆಗಿದೆ. ಇದರ ಬಗ್ಗೆ ತನಿಖೆ ನಡೆಯಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹ ಮಾಡಿದ್ದಾರೆ.

ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಈ ದೇಶದ ಐಕ್ಯತೆ ಸಮಗ್ರತೆ ಬಗ್ಗೆ, ಉಗ್ರ ಚಟುವಟಿಕೆ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ. ಇಡೀ ಭಾರತ ಶಾಂತಿಯಿಂದ ಇರಬೇಕು. ಕಾಂಗ್ರೆಸ್ ಪಕ್ಷ ಇದನ್ನು ಖಂಡಿಸುತ್ತದೆ. ಈ ದಾಳಿ ಬಗ್ಗೆ ತನಿಖೆ ಆಗಬೇಕು, ಅವರನ್ನು ಬಂಧಿಸಬೇಕು. ಗುಪ್ತಚರ ಇಲಾಖೆ ವೈಫಲ್ಯ ಆಗಿದೆಯಾ ಎಂಬ ಪ್ರಶ್ನೆಗೆ, ನಾವು ಯಾರ ಮೇಲೂ ಆರೋಪ ಮಾಡಲ್ಲ. ಆರೋಪ ಬೇರೆ ಸಮಯದಲ್ಲಿ ಮಾಡೋಣ. ಮೊದಲು ರಕ್ಷಣೆ ಮಾಡುವ ಕೆಲಸ ಮಾಡಬೇಕು ಎಂದಿದ್ದಾರೆ.
ಭೂತಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇವತ್ತು ಭಾರತಕ್ಕೆ ವಾಪಸ್ ಆಗಲಿದ್ದು, ಸಂಜೆ 5.30ಕ್ಕೆ ಕ್ಯಾಬಿನೆಟ್ ಸಭೆ ಕರೆದಿದ್ದಾರೆ. ಅಮಿತ್ ಷಾ ಸೇರಿದಂತೆ ಹಿರಿಯ ಅಧಿಕಾರಿಗಳು ಮೋದಿಗೆ ಕಂಪ್ಲೀಟ್ ಮಾಹಿತಿ ನೀಡಲಿದ್ದಾರೆ. ಈ ನಡುವೆ ಪಾಕಿಸ್ತಾನದ ಇಸ್ಲಮಾಬಾದ್ನಲ್ಲಿ ಬಾಂಬ್ ಸ್ಫೋಟವಾಗಿ 13 ಜನರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನ ಪ್ರಧಾನಿ ಭಾರತ ಪ್ರಚೋದಿತ ಉಗ್ರರ ಕೃತ್ಯ ಎಂದು ಆರೋಪ ಮಾಡಿದ್ದಾರೆ. ಇದೊಂದು ನಾಚಿಕೆಗೇಡು ಎಂದು ಭಾರತ ಸರ್ಕಾರ ತಿರುಗೇಟು ನೀಡಿದ್ದು, ಈ ವಿಚಾರವಾಗಿಗೂ ಪ್ರಧಾನಿ ನರೇಂದ್ರ ಮೋದಿ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ಮಾಡಲಿದ್ದಾರೆ. ಜೊತೆಗೆ ವಿರೋಧ ಪಕ್ಷಗಳೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಸಾಧ್ಯತೆ ಇರುವ ಕಾರಣಕ್ಕೆ ಎಲ್ಲರಿಗೂ ತಕ್ಕ ಉತ್ತರ ಕೊಡಲು ಕೇಂದ್ರ ಸರ್ಕಾರ ಸಜ್ಜಾಗುತ್ತಿದೆ ಎನ್ನಬಹುದು.


