ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿರುವುದು ಎಲ್ಲರಲ್ಲೂ ಆತಂಕ ಮೂಡಿಸಿದೆ. ಸಾಕಷ್ಟು ಜನರ ರೇಷನ್ ಕಾರ್ಡ್ ಈಗಾಗಲೇ BPL ಕಾರ್ಡ್ಗಳನ್ನು APL ಕಾರ್ಡ್ ಆಗಿ ಬದಲಾವಣೆ ಮಾಡಿದ್ದು, ಈ ತಿಂಗಳಿಂದಲೇ ರೇಷನ್ ಕಾರ್ಡ್ ರದ್ದು ಆಗಿರುವ ಬಗ್ಗೆ ಪಡಿತರ ಅಂಗಡಿಗಳಲ್ಲಿ ಲೀಸ್ಟ್ ಹಾಕಲಾಗಿದೆ. ಸಾಕಷ್ಟು ಜನರು ನಮ್ಮ ರೇಷನ್ ಕಾರ್ಡ್ ರದ್ದಾಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಾರೆ. ಆದರೆ ಈ ಬಗ್ಗೆ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಪ್ರತಿಕ್ರಿಯೆ ನೀಡಿದ್ದು, ಅನ್ನಭಾಗ್ಯ ಜಾರಿಗೆ ತಂದಿರುವ ಉದ್ದೇಶ ಈಡೇರಬೇಕು. ಕಟ್ಟಕಡೆಯ ವ್ಯಕ್ತಿ ಊಟ ಇಲ್ಲ ಎಂದು ಮಲಗಬಾರದು ಎಂದಿದ್ದಾರೆ.
ಉಡುಪಿಯಲ್ಲಿ ಮಾತನಾಡಿರುವ ಕೆ.ಹೆಚ್ ಮುನಿಯಪ್ಪ, ಜನರಿಗೆ ಸೌಲಭ್ಯ ಕೊಡುವುದರಲ್ಲಿ ತಡವಾಗಬಾರದು. ಬಿಪಿಎಲ್ ಕಾರ್ಡ್ಗೆ ಕಾಯುತ್ತಿರುವ ಅರ್ಹ ಬಡ ಜನರಿಗೆ ಮುಂದಿನ ತಿಂಗಳು ನೀಡಲಾಗುವುದು. ಅರ್ಹರಿಗೆ ಅಕ್ಕಿ ಕೊಟ್ಟೇ ಕೊಡುತ್ತೇವೆ ಎಂದು ಮುನಿಯಪ್ಪ ಭರವಸೆ ನೀಡಿದ್ದಾರೆ. ಈಗ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಸಾಮಾನ್ಯವಾಗಿ ಶೇಕಡ 50 ಬಿಪಿಎಲ್ ಕಾರ್ಡ್ ಇರಬೇಕು. ನಮ್ಮದು ಪ್ರಗತಿಪರವಾದ ರಾಜ್ಯ. ನಮ್ಮ ಆರ್ಥಿಕ ಪರಿಸ್ಥಿತಿ ಇತರ ರಾಜ್ಯಗಳಿಗಿಂತ ಚೆನ್ನಾಗಿದೆ. ಆದರೆ ಬೇರೆ ರಾಜ್ಯಗಳಿಗಿಂತಲೂ ನಮ್ಮಲ್ಲಿ ಬಿಪಿಎಲ್ ಕಾರ್ಡ್ದಾರರು ಜಾಸ್ತಿ ಇದ್ದಾರೆ. ಹೀಗಾಗಿ ಪರಿಷ್ಕರಣೆ ಆಗಬೇಕಾಗುತ್ತದೆ ಎಂದಿದ್ದಾರೆ.

ಏಳೂವರೆ ಎಕರೆ ಜಮೀನು, ಸ್ವಂತ ವಾಹನ, ಆದಾಯ ತೆರಿಗೆ ಕಟ್ಟುವವರು ಬಿಪಿಎಲ್ ಕಾರ್ಡ್ ವ್ಯಾಪ್ತಿಗೆ ಬರುವುದಿಲ್ಲ. ಸೂಕ್ಷ್ಮವಾಗಿ ವಿಚಾರ ಮಾಡಿ ಪರಿಷ್ಕರಣೆ ಮಾಡುತ್ತೇವೆ. ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಯಾವುದೇ ತೊಂದರೆ ಆಗಲ್ಲ. ಒಂದು ಕೋಟಿ 28 ಲಕ್ಷ ಕಾರ್ಡುಗಳು ಇವೆ. 4 ಕೋಟಿ 53 ಲಕ್ಷ ಫಲಾನುಭವಿಗಳಿದ್ದಾರೆ. ಕೇಂದ್ರ ಸರ್ಕಾರ 7 ಲಕ್ಷ 70 ಸಾವಿರ ಅನರ್ಹ ಕಾರ್ಡ್ಗಳಿವೆ ಎಂದು ಹೇಳಿದ್ದಾರೆ. ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹರಿಗೆ ಈಗಾಗಲೇ ಕರೆ ಮಾಡಿ, ಸ್ವಇಚ್ಚೆಯಿಂದ ಅವರು ಎಪಿಎಲ್ಗೆ ಬದಲಾಗಬಹುದು. ಅಕ್ಟೋಬರ್ ಮೊದಲ ವಾರದಲ್ಲಿ ಸರಿಯಾದ ಚಿತ್ರಣ ದೊರಕಲಿದೆ ಎಂದಿದ್ದಾರೆ.

ರೇಷನ್ ಕಾರ್ಡ್ ಪರಿಷ್ಕರಣೆ ಈಗಾಗಲೇ ಶುರುವಾಗಿದೆ. ಒಂದೇ ದಿನದಲ್ಲಿ ಬಿಪಿಎಲ್ನಿಂದ ಎಪಿಎಲ್ ಬದಲಾಯಿಸಿ ಕೊಡುತ್ತೇವೆ. ತಹಶೀಲ್ದಾರ್ಗೆ ಅರ್ಜಿ ಕೊಟ್ಟರೆ ಸಾಕು, ಮನೆ ಕಟ್ಟುವಾಗ ಇನ್ಕಂ ಟ್ಯಾಕ್ಸ್ ಫೈಲ್ ಮಾಡಿದವರಿಗೂ ಮಾನದಂಡ ಅನ್ವಯ ಆಗುತ್ತಾ..? ಅನ್ನೋ ಪ್ರಶ್ನೆಗೆ ಅವರ ವಹಿವಾಟಿನಲ್ಲಿ ಟ್ಯಾಕ್ಸ್ ಕಟ್ಟಿದ್ದರೆ ಅನ್ವಯ ಆಗುತ್ತದೆ. ಸ್ವಂತ ವಾಹನ ಇರುವವರಿಗೆ ಬಿಪಿಎಲ್ ಅಕ್ಕಿ ಬೇಕಾ..? ಏಳೂವರೆ ಎಕರೆ ಜಮೀನು ಇರುವವರಿಗೆ ಬಿಪಿಎಲ್ ಕಾರ್ಡ್ ರೇಷನ್ ಬೇಕಾ? ಸ್ವಂತ ಮನೆ ಕಟ್ಟುವ ಶಕ್ತಿ ಇರುವವನು ಬಿಪಿಎಲ್ ವ್ಯಾಪ್ತಿಗೆ ಬರ್ತಾನಾ? ಸರ್ಕಾರಿ ಮನೆಗಳಾದರೆ ಬೇರೆ ವಿಚಾರ, ಸಂತ ಮನೆ ಕಟ್ಟುವವನು ಕನಿಷ್ಠ 5 ಲಕ್ಷವನ್ನಾದರೂ ವೆಚ್ಚ ಮಾಡುತ್ತಾನೆ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
5 ಲಕ್ಷ ರೂಪಾಯಿ ಹೂಡಿಕೆ ಮಾಡುವವನು ಆರ್ಥಿಕವಾಗಿ ಚೆನ್ನಾಗಿ ಇರ್ತಾನೆ. ಕೂಲಿ ಕಾರ್ಮಿಕರು, ಭೂರಹಿತರಿಗೆ ಈ ಅನುಕೂಲ ಬೇಕಾಗುತ್ತದೆ. ಎಲ್ಲವನ್ನು ಸೂಕ್ಷ್ಮವಾಗಿ ಯೋಚನೆ ಮಾಡುತ್ತೇವೆ. ವಹಿವಾಟು ಸ್ಥಗಿತಗೊಳಿಸಿದ್ದರೆ ಅರ್ಜಿ ಹಾಕಿ ಬಿಪಿಎಲ್ ಕಾರ್ಡ್ ಕೇಳಬಹುದು. ನಾನು ಆದಾಯ ತೆರಿಗೆ ಕಟ್ಟುತ್ತಿಲ್ಲ ಎಂದು ಅರ್ಜಿ ಹಾಕಬಹುದು. ಅಕ್ಟೋಬರ್ ತಿಂಗಳಲ್ಲಿ ಹೊಸ ಅರ್ಜಿ ಆಹ್ವಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಈ ಪರಿಷ್ಕರಣೆಯೂ ಅಕ್ಟೋಬರ್ನಲ್ಲಿ ಅಂತಿಮ ಹಂತಕ್ಕೆ ಬರಲಿದ್ದು, ಕಾರ್ಡ್ ಹೋಗಿದ್ದರೂ ಭಯ ಬೇಡ, ಹೊಸದಾಗಿ ಅರ್ಜಿ ಸಲ್ಲಿಸಲುಯ ಅವಕಾಶ ಕೊಡ್ತೇವೆ ಎಂದು ಭರವಸೆ ನೀಡಿದ್ದಾರೆ.


