ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಳೆ ಆರ್ಭಟ ಜೋರಾಗಿದ್ದು, ಭಾರಿ ಮಳೆಗೆ ರೈಲ್ವೇ ಅಂಡರ್ ಪಾಸ್ ಸಂಪೂರ್ಣ ಮುಳುಗಡೆ ಆಗಿದೆ. ಕಡೂರು ತಾಲೂಕಿನ ಚಿಕ್ಕದೇವನೂರು ಗ್ರಾಮದಲ್ಲಿ ದೇವನೂರು ಕೆರೆ ಕೋಡಿ ನೀರು ಹೆಚ್ಚಾದ ಹಿನ್ನೆಲೆಯಲ್ಲಿ ಅಂಡರ್ ಪಾಸ್ ಮುಳುಗಡೆ ಆಗಿದೆ. ಎರಡು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಬಿಎಸ್ ರಸ್ತೆಯಲ್ಲಿರುವ ರೈಲ್ವೇ ಅಂಡರ್ ಪಾಸ್ ಮುಳುಗಿದೆ. ಕಡೂರು – ಮಂಗಳೂರು ರಸ್ತೆಯ ಸಖರಾಯಪಟ್ಟಣದಿಂದ ಬಿಹೆಚ್ ರಸ್ತೆ ಸಂಪರ್ಕ ಕಲ್ಪಿಸುವ ಬಿಎಸ್ ರಸ್ತೆ ಇದಾಗಿದ್ದು, ರೈಲ್ವೇ ಅಂಡರ್ ಪಾಸ್ ಮುಳುಗಡೆಯಿಂದ ವಾಹನ ಸವಾರರು ಪರದಾಡಿದ್ದಾರೆ. ಸಖರಾಯಪಟ್ಟಣ, ಹೋಚಿಹಳ್ಳಿ, ದೇವನೂರು, ಚಿಕ್ಕದೇವನೂರು, ಬಾಣಾವರ, ಅರಸೀಕೆರೆ ಸಂಪರ್ಕ ಬಂದ್ ಆಗಿದೆ. ಅವೈಜ್ಞಾನಿಕ ಸೇತುವೆ ನಿರ್ಮಾಣದಿಂದಾಗಿ ಪ್ರತಿ ವರ್ಷ ಮುಳುಗಡೆ ಆಗುತ್ತಿದೆ ಎಂದು ಜನರು ಆಕ್ರೋಶ ಹೊರ ಹಾಕಿದ್ದಾರೆ.
ಚಿಕ್ಕಮಗಳೂರಿನ ಬಯಲು ಸೀಮೆಯಲ್ಲಿ ವರುಣಾರ್ಭಟ ಜೋರಾಗಿದ್ದು, ಹಬ್ಬದ ಸಂಭ್ರಮಕ್ಕೆ ವರುಣ ಅಡ್ಡಿ ಮಾಡಿದ್ದಾನೆ. ಭಾರೀ ಮಳೆಗೆ 15ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಚರಂಡಿ ಭರ್ತಿಯಾಗಿ ಮನೆಗಳಿಗೆ ಮಳೆ ನೀರು ನುಗ್ಗಿದೆ. ಕಡೂರು ತಾಲೂಕಿನ ಶ್ರೀರಾಮಪುರ ಗ್ರಾಮದಲ್ಲಿ ಮನೆಯೊಳಗೆ ಮಳೆ ನೀರು ನುಗ್ಗಿ ಕುಟುಂಬಸ್ಥರು ಪರದಾಡಿದ್ದಾರೆ. ಹಬ್ಬದ ದಿನವೇ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಮನೆಯೊಳಗೆ ನೀರು ನುಗ್ಗಿ ಗೃಹೋಪಯೋಗಿ ವಸ್ತುಗಳು ನೀರು ಪಾಲಾಗಿವೆ. ಮನೆಯಲ್ಲಿ ನೀರು ನುಗ್ಗಿ ಕುಟುಂಬಸ್ಥರು ಪರದಾಟ ನಡೆಸಿದ್ದಾರೆ.

ಹಾಸನ ಜಿಲ್ಲೆ ಅರಸೀಕೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಪರದಾಡಿದ್ದಾರೆ. ಭಾರಿ ಮಳೆಗೆ ಸರ್ಕಾರಿ ಆಸ್ಪತ್ರೆ ಜಲಾವೃತವಾಗಿದೆ. ಅರಸೀಕೆರೆಯ ಜೆಸಿ ತಾಲ್ಲೂಕು ಆಸ್ಪತ್ರೆಯಲ್ಲಿ ನೀರಿನೊಳಗೆ ನಡೆದಾಡಿಕೊಂಡು ರೋಗಿಗಳು ಪರದಾಡಿದ್ದಾರೆ. ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ ಕಂಡು ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ಇನ್ನಷ್ಟು ಜೋರು ಮಳೆ ಬಂದರೆ ಸ್ವಿಮ್ಮಿಂಗ್ ಪೂಲ್‌ನಂತೆ ಆಗಲಿದೆ. ಕೂಡಲೇ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸುವಂತೆ ಸಾರ್ವಜನಿಕರು ಆಗ್ರಹ ಮಾಡಿದ್ದಾರೆ.
ಹಾಸನ ಜಿಲ್ಲೆಯ ಹಲವೆಡೆ ವರುಣನ ಅಬ್ಬರಕ್ಕೆ ಜನ ನಲುಗಿದ್ದು, ಬಸ್ ನಿಲ್ದಾಣಕ್ಕೆ ಮಳೆ ನೀರು ನುಗ್ಗಿದೆ. ರಾತ್ರಿ ಸುರಿದ ಧಾರಕಾರ ಮಳೆಗೆ ಅರಸೀಕೆರೆ ಬಸ್ ನಿಲ್ದಾಣ ಸಂಪೂರ್ಣ ಜಲಾವೃತ ಆಗಿದೆ. ಬಸ್ ನಿಲ್ದಾಣದಲ್ಲಿ ಮೊಣಕಾಲು ಉದ್ದ ಮಳೆ ನೀರು ನಿಂತಿತ್ತು. ಪ್ರಯಾಣಿಕರು ನಿಲ್ದಾಣಕ್ಕೆ ಬರಲು ಹರಸಾಹಸ ಮಾಡುವಂತೆ ಆಯ್ತು. ಮಳೆ ನೀರು ಹೊರ ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ನಿಲ್ದಾಣದ ತುಂಬಾ ನೀರು ತುಂಬಿಕೊಂಡ್ರೂ ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವುದು ಜನರ ಆಕ್ರೋಶ ದುಪ್ಪಟ್ಟು ಮಾಡಿತ್ತು. ಕೂಡಲೇ ಮಳೆ ನೀರು ಹೊರ ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಆಗ್ರಹ ಮಾಡಿದ್ದಾರೆ.
ಇನ್ನೆರಡು ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ. ಇವತ್ತು ಹಾಗೂ ನಾಳೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ನಚ್ಚರಿಕೆ ಕೊಟ್ಟಿದೆ ಹವಾಮಾನ ಇಲಾಖೆ. ಕೆಲವು ಜಿಲ್ಲೆಗಳಲ್ಲಿ 115 ಮಿ.ಮೀ ಗೂ ಅಧಿಕ ಮಳೆ ಆಗುವ ಸಾಧ್ಯತೆಯಿದೆ. ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ತುಮಕೂರು, ರಾಮನಗರ ಜಿಲ್ಲೆಯಲ್ಲೂ ಭಾರೀ ಮಳೆ ಆಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


