ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಯಂತೆ SC ಸಮುದಾಯಗಳಿಗೆ ಒಳ ಮೀಸಲಾತಿ ಜಾರಿ ಮಾಡುವಲ್ಲಿ ಯಶಸ್ವಿ ಆಗಿದೆ. ಎಡಗೈ ಹಾಗೂ ಬಲಗೈ ಸಮುದಾಯಗಳನ್ನ ಸಮಾಧಾನ ಪಡಿಸಿದ ಸಿಎಂ ಸಿದ್ದರಾಮಯ್ಯ, ಒಳಮೀಸಲಾತಿಗೆ ಸಂಪುಟ ಸಭೆಯ ಒಪ್ಪಿಗೆ ಪಡೆದಿದ್ದಾರೆ. ಎಡಗೈ ಸಮುದಾಯಕ್ಕೆ ಶೇಕಡ 6 ರಷ್ಟು ಹಾಗೂ ಬಲಗೈ ಸಮುದಾಯಕ್ಕೂ ಶೇಕಡ 6 ರಷ್ಟು ಮತ್ತು ಇತರೆ ವರ್ಗಗಳಿಗೆ ಶೇಕಡ 5ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿದೆ. ಲಂಬಾಣಿ, ಭೋವಿ, ಕೊರಚ, ಕೊರಮ, ಅಲೆಮಾರಿ ಸೇರಿದಂತೆ ಇತರೆ ಉಪಪಂಗಡಗಳನ್ನು ಇತರೆ ಎಂದು ವರ್ಗೀಕರಿಸಿ ಶೇಕಡ 5 ರಷ್ಟು ಮೀಸಲಾತಿ ಕಲ್ಪಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಅಂತಿಮವಾಗಿ ಐದು ಪ್ರವರ್ಗಗಳ ಬದಲು ಮೂರು ಪ್ರವರ್ಗಗಳನ್ನಾಗಿ ವಿಂಗಡಿಸಿ ಮೀಸಲಾತಿ ಹಂಚಿಕೆ ಮಾಡಲಾಗಿದೆ.

ರಾಜ್ಯ ಸಚಿವ ಸಂಪುಟದಲ್ಲಿ ಒಳ ಮೀಸಲಾತಿ ವಿಚಾರಕ್ಕೆ ಅನುಮೋದನೆ ಸಿಗುತ್ತಿದ್ದ ಹಾಗೆ ಒಳ ಮೀಸಲಾತಿ ಜಾರಿಯಲ್ಲಿ ಅನ್ಯಾಯ ಆಗಿದೆ ಎಂದು ಅಲೆಮಾರಿ ಸಮುದಾಯ ಬೇಸರ ಹೊರ ಹಾಕಿದೆ. ವಿಧಾನಸೌಧದ ಕೆಂಗಲ್ ಗೇಟ್ ಬಳಿ ಅಲೆಮಾರಿ ಸಮುದಾಯದ ಮುಖಂಡರು ಸರ್ಕಾರವನ್ನು ಪ್ರಶ್ನಿಸಿ ಗಲಾಟೆ ಮಾಡಿದ್ದಾರೆ. ಆ ಬಳಿಕ ಕೂಡಲೇ ಪೊಲೀಸರು ಎಲ್ಲರನ್ನೂ ಹೊರಕ್ಕೆ ಕಳಿಸಿದ್ದಾರೆ. ಆದರೆ ಫ್ರೀಡಂಪಾರ್ಕ್ನಲ್ಲಿ ಒಳ ಮೀಸಲಾತಿ ಜಾರಿಗಾಗಿ ಪ್ರತಿಭಟನೆ ಮಾಡುತ್ತಿದ್ದ ಸಂಘಟನೆಗಳು ಸಂಭ್ರಮಾಚರಣೆ ಮಾಡಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇಂದು ವಿಧಾನಸಭೆಯಲ್ಲಿ ವರದಿ ಮಂಡನೆ ಮಾಡಿ ಒಪ್ಪಿಗೆ ಪಡೆಯಲಿದ್ದಾರೆ ಎನ್ನಲಾಗಿದೆ. ಆದರೂ ಸಣ್ಣದೊಂದು ಅಸಮಾಧಾನ ಎಡಗೈ ಸಮುದಾಯದಲ್ಲಿ ಉಂಟಾಗಿದೆ.

ಜಸ್ಟೀಸ್ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಒಳ ಮೀಸಲಾತಿ ಜಾರಿಗಾಗಿ ಆಯೋಗ ಮಾಡಲಾಗಿತ್ತು. ನ್ಯಾ. ನಾಗಮೋಹನ್ ದಾಸ್ ಅವರ ಆಯೋಗ ಎಡಗೈ ಸಮುದಾಯಕ್ಕೆ ಶೇಕಡ 6, ಬಲಗೈ ಸಮುದಾಯಕ್ಕೆ ಶೇಕಡ 5 ರಷ್ಟು, ಲಂಬಾಣಿ, ಭೋವಿ ಸಮುದಾಯಕ್ಕೆ ಶೇಕಡ 4, ಅಲೆಮಾರಿಗಳಿಗೆ ಶೇಕಡ 1, ಆದಿ ಕರ್ನಾಟಕ, ಅದಿ ದ್ರಾವಿಡ ಸಮುದಾಯಗಳಿಗೆ ಶೇಕಡ 1 ರಷ್ಟು ಮೀಸಲಾತಿ ನೀಡಲು ನಾಗಮೋಹನ್ ದಾಸ್ ಆಯೋಗ ಶಿಫಾರಸ್ಸು ಮಾಡಿತ್ತು. ಆದರೆ ಇದೀಗ ಲಂಬಾಣಿ, ಭೋವಿ, ಅಲೆಮಾರಿ, ಆದಿ ಕರ್ನಾಟಕ, ಆದಿ ದ್ರಾವಿಡ ಸಮುದಾಯಗಳನ್ನು ಒಟ್ಟುಗೂಡಿಸಿ ಇತರೆ ಎಂದು ವರ್ಗೀಕರಿಸಿ ಶೇಕಡ 6 ರಷ್ಟು ಶಿಫಾರಸ್ಸು ಮಾಡಿದ್ದನ್ನು ಕೈ ಬಿಟ್ಟು ಶೇಕಡ 5ಕ್ಕೆ ಸೀಮಿತ ಮಾಡಲಾಗಿದೆ. ಈ ಸಮುದಾಯಗಳ ಶೇಕಡ 1 ರಷ್ಟನ್ನು ಬಲಗೈ ಸಮುದಾಯಕ್ಕೆ ಹೆಚ್ಚುವರಿಯಗಿ ನೀಡಲಾಗಿದೆ.

ನ್ಯಾ. ನಾಗಮೋಹನ್ ದಾಸ್ ನೇತೃತ್ವದ ಆಯೋಗ ಶಿಫಾರಸ್ಸು ಮಾಡಿದಂತೆ ಎಡಗೈ ಸಮುದಾಯಕ್ಕೆ ಶೇಕಡ 6ರಷ್ಟು ಮೀಸಲಾತಿ ಸಿಕ್ಕಿದೆ. ಆದರೆ ಬಲಗೈ ಸಮುದಾಯ ಶೇಕಡ 5ರಷ್ಟು ಶಿಫಾರಸ್ಸು ಆಗಿದ್ದನ್ನು ರಾಜಕೀಯ ಒತ್ತಡ ಹೇರಿ ಶೇಕಡ 6ಕ್ಕೆ ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ರಾಜ್ಯದಲ್ಲಿ ಎಡಗೈ ಸಮುದಾಯದ ಜನಸಂಖ್ಯೆಯೇ ಹೆಚ್ಚಾಗಿದ್ದು,ಮೀಸಲಾತಿಯಲ್ಲಿ ಹೆಚ್ಚಿನ ಪಾಲು ಕೊಡಬೇಕು ಅನ್ನೋ ಒತ್ತಾಯ ಮಾಡಲಾಗಿತ್ತು. ಆದರೆ ರಾಜಕೀಯ ಪ್ರಭಾವ ಹೊಂದಿರುವ ಬಲಗೈ ಸಮುದಾಯ ಶೇಕಡ 1ರಷ್ಟು ಹೆಚ್ಚುವರಿ ಮೀಸಲಾತಿ ಪಡೆಯುವ ಮೂಲಕ ನಾವು ಪ್ರಭಾವಿಗಳು ಎಂದು ಸಾಬೀತು ಮಾಡಿಕೊಂಡಿದೆ. ರಾಜಕಾರಣಿಗಳು ಮಾತ್ರ ಎಲ್ಲವೂ ಸರಿಯಾಗಿದೆ. ಎಂದು ಸಂಭ್ರಮಾಚರಣೆ ಮಾಡುತ್ತಾ, ಸಿದ್ದರಾಮಯ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸ್ತಿದ್ದಾರೆ. ಜನರು ಯಾವ ಪ್ರತಿಕ್ರಿಯೆ ಕೊಡ್ತಾರೆ ಅನ್ನೋದು ಗೊತ್ತಾಗಬೇಕಿದೆ.


