ಧರ್ಮಸ್ಥಳದಲ್ಲಿ ನನ್ನ ಮಗಳು ಅನನ್ಯಾ ಭಟ್ ಕಾಣೆಯಾಗಿದ್ದಾಳೆ. ಆಕೆಯ ಅಸ್ಥಿ ಪಂಜರ ಸಿಕ್ಕರೆ ನನಗೆ ಕೊಡಿ, ನಾನು ವೈದಿಕ ಧರ್ಮದ ಪ್ರಕಾರ ಅಂತ್ಯಕ್ರಿಯೆ ನೆರವೇರಿಸುತ್ತೇನೆ ಎಂದು SIT (Special Investigation Team) ಎದುರು ಹೇಳಿಕೊಂಡು ದೂರು ನೀಡಿದ್ದ ಸುಜತಾ ಭಟ್, ಇದೀಗ ನನ್ನನ್ನು ಬಿಟ್ಟು ಬಿಡಿ, ನಾನು ಸಾಯುವುದಕ್ಕೆ ಸಿದ್ಧಳಿದ್ದೇನೆ. ರಸ್ತೆಯಲ್ಲಿ ಬೆತ್ತಲೆಯಾಗಿ ನಿಲ್ಲುತ್ತೇನೆ ಎಂದು ಮಾಧ್ಯಮಗಳ ಎದುರು ಅಸಹಾಯಕ ಸ್ಥಿತಿಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.
ಸುಜಾತ ಭಟ್ ಕೈ ಮುಗಿದು ಹೇಳಿದ್ದೇನು..?

ಬುಧವಾರ ರಾತ್ರಿ (ಎಸ್.ಐ.ಟಿ) ವಿಶೇಷ ತನಿಖಾ ದಳದ 2ನೇ ದಿನದ ವಿಚಾರಣೆ ಮುಗಿಸಿ ಹೊರ ಬರುವಾಗ ಎದುರಾದ ಮಾಧ್ಯಮಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ರೋಷಾ ವೇಷದಲ್ಲಿ ಮಾತನಾಡಿರುವ ಸುಜಾತಾ ಭಟ್, ಯಾಕೆ ನನ್ನನ್ನು ಫಾಲೊ ಮಾಡಿಕೊಂಡು ಬರ್ತೀರಾ..?ನಾನು ಈಗಾಗಲೇ ಬೇಸತ್ತು ಹೋಗಿದ್ದೇನೆ. ದಯವಿಟ್ಟು ನನ್ನನ್ನು ಬಿಟ್ಟು ಬಿಡಿ. ಸಾಯಲು ನಾನು ಸಿದ್ಧನಿದ್ದೇನೆ. ಬೆತ್ತಲೆಯಾಗಿ ರಸ್ತೆ ಮೇಲೆ ನಿಲ್ಲುತ್ತೇನೆ ಎಂದು ಆಕ್ರೋಶ ಭರಿತ ಮಾತುಗಳಿಂದ ಮಾತನಾಡಿದ್ದಾರೆ.
ಸಾಯುವ ಮಾತನ್ನಾಡಿದ್ಯಾಕೆ ಸುಜಾತಾ ಭಟ್..?

ಎರಡು ದಿನಗಳಿಂದ ಸತತ ಎಸ್.ಐ.ಟಿ ತನಿಖೆಯಿಂದ ಸುಜಾತ ಭಟ್ ರೋಸಿ ಹೋಗಿದ್ರಾ..? ಅನ್ನೊ ಮಾತುಗಳು ಕೇಳಿ ಬರುವುದು ಸಹಜ. ಅದೇ ಕಾರಣಕ್ಕೆ ಮಾಧ್ಯಮದವರನ್ನು ನೋಡಿದ ಕೂಡಲೇ ಕೆಂಡದಂತಾ ಕೋಪ ಬಂದಿರಬಹುದು. ಮಂಗಳವಾರ ಸತತ 9 ಗಂಟೆ ಕಾಲ ಹಾಗೂ ಬುಧವಾರ ಸತತ 10 ಗಂಟೆಗಳ ಕಾಲ ಎಸ್.ಐ.ಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಿಂದ ಬೇಸತ್ತು ಮನನೊಂದು ವ್ಯತಿರಿಕ್ತವಾಗಿ ಮಾತನಾಡಿರಲೂ ಬಹುದು. ಆದರೆ ಮಾಧ್ಯಮಗಳ ಸುದ್ಧಿ ಬಿತ್ತರದಿಂದಲೂ ಸುಜಾತ ಭಟ್ ನೊಂದಿದ್ದಾರೆ ಎಂದೇ ಹೇಳಬಹುದು.
ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ.. ತಾಳ್ಮೆ ಇರಲಿ..

ಎಸ್.ಐ.ಟಿ ಎದುರು ದೂರು ನೀಡಿರುವ ಸುಜಾತ ಭಟ್, ಸುಳ್ಳು ಹೇಳಿದ್ದರೆ ವಿಶೇಷ ತನಿಖಾ ತಂಡ ದೂರು ದಾಖಲು ಮಾಡಿಕೊಂಡು ವಿಚಾರಣೆ ನಡೆಸಿ ಕೋರ್ಟ್ ಕಟಕಟೆಗೂ ಎಳೆದು ತಂದು ನಿಲ್ಲಿಸುತ್ತದೆ. ಆದರೆ ಸುಜಾತಾ ಭಟ್ ಬಗ್ಗೆ ವಿಚಾರಣೆಗೂ ಮೊದಲೇ ತನಿಖಾ ಮಾಧ್ಯಮ ಅನ್ನೋ ಹೆಸರಿನಲ್ಲಿ ಮಾನಸಿಕವಾಗಿ ಕುಗ್ಗಿಸುವುದುನ್ನು ಕಂಡ ವೃದ್ಧ ಮಹಿಳೆ ಜೀವನವೇ ಸಾಕು ಅನ್ನೋ ಹಂತಕ್ಕೆ ತಲುಪಿಸುವುದು, ಇಂದಿನ ಮಾಧ್ಯಮರಂಗದ ದುಸ್ಥಿತಿಗೆ ಕೈಗನ್ನಡಿ ಆಗಿದೆ. ಗುರುತರ ಆರೋಪ ಮಾಡಿರುವ ಮಹಿಳೆಗೆ ವಿಚಾರಣೆ ಎದುರಿಸುವ ಶಕ್ತಿ ಇದ್ದೇ ಇರುತ್ತದೆ. ಆದರೆ ಮಾಧ್ಯಮಗಳು ಸ್ವಲ್ಪ ತಾಳ್ಮೆ ವಹಿಸಬೇಕಿದೆ.
ಒಂಟಿ ಜೀವಕ್ಕೆ ಕೋರ್ಟ್ ಆದ ಮಾಧ್ಯಮಗಳು..!

ನನಗೆ ಇದ್ದ ನೋವೆ ಜಾಸ್ತಿ ಆಗಿದೆ. ಬಿಟ್ಟು ಬಿಡಿ ಅಂತಾ ಸುಜಾತಾ ಭಟ್ ಮಾಧ್ಯಮಗಳ ಎದುರು ಗೋಳಾಡಿದ್ದಾರೆ. ಒಂದು ವೇಳೆ ಆ ಮಹಿಳೆ ತಪ್ಪನ್ನೇ ಮಾಡಿದ್ದಾರೆ ಎಂದರೂ ನಿಮ್ಮ ತಾಯಿಯ ವಯಸ್ಸಾಗಿರುವುದನ್ನು ಗಮನದಲ್ಲಿ ಇರಿಸಿಕೊಂಡು ಕ್ಷಮಿಸಿಬಿಡಿ. ಒಂಟಿ ಜೀವ, ತನ್ನ ಕೊನೆಯ ದಿನಗಳಲ್ಲಿ ಕೇಸು, ಪೊಲೀಸ್ ಠಾಣೆ, ಕೋರ್ಟು ಕಚೇರಿ ಸುತ್ತುವ ಅವಶ್ಯಕತೆ ಇರಲಿಲ್ಲ. ಆದರೂ ಬಂದಿದ್ದಾರೆ ಎಂದರೆ, ಅನನ್ಯಾ ಭಟ್ ಇರಬಹುದು ಎಂದೇ ಜನರೂ ಭಾವಿಸಿದ್ದರು. ಅದರೆ ಅನನ್ಯಾ ಭಟ್ ಅನ್ನೋ ಯುವತಿಯೇ ಇಲ್ಲ, ಈಕೆ ಹೇಳಿದ್ದೆಲ್ಲವೂ ಸುಳ್ಳು, ಅನನ್ಯಾ ಭಟ್ ಫೋಟೋ ಕೂಡ ಸುಳ್ಳು ಎಂದು ತೀರ್ಪು ನೀಡಿದರೆ, ಎಸ್ಐಟಿ ತನಿಖೆ ಯಾಕೆ ಬೇಕು..? ಕೋರ್ಟ್ ಯಾಕೆ ಬೇಕು..? ಅಲ್ಲವೇ..? ಸ್ವಲ್ಪ ಮನಸ್ಸು ಶಾಂತಗೊಳಿಸಿ, ತನಿಖೆ ಆಗಲಿ, ತಪ್ಪಿತಸ್ಥರಿಗೆ ಶಿಕ್ಷೆಯೂ ಆಗಲಿ, ಧರ್ಮಸ್ಥಳದ ಸೌಜನ್ಯಳಿಗೂ ನ್ಯಾಯ ಸಿಗಲಿ.


