ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ಸಿಎಂ ಸಿದ್ದರಾಮಯ್ಯಗೆ ಅಭಿನಂಧನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಿಎಂ ಸಿದ್ದರಾಮಯ್ಯ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆರ ಎನ್ನಲಾಗಿದೆ. ಆದರೆ ಈ ನಡುವೆ ಸಿಎಂ ಸಿದ್ದರಾಮಯ್ಯಗೆ ಇಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ. ಬಾಗಲಕೋಟೆಯಲ್ಲಿ ವೀರಶೈವ ಲಿಂಗಾಯತ ಮಠಾಧೀಶರ ಸಭೆ ನಡೆಸಿ, ಸಭೆ ಬಳಿಕ ಸಿಎಂ ಸಿದ್ದರಾಮಯ್ಯಗೆ ಫಕೀರ ದಿಂಗಾಲೇಶ್ವರ ಶ್ರೀ ಎಚ್ಚರಿಕೆ ನೀಡಿದ್ದಾರೆ. ಭಾನುವಾರ ನಡೆಯುವ ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭಕ್ಕೆ ಸಿಎಂ ಸಿದ್ದರಾಮಯ್ಯ ಹೋದ್ರೆ ಕಾಂಗ್ರೆಸ್ ಪಕ್ಷದ ಅವನತಿಗೆ ನಾಂದಿ ಆಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಗೌರವ ಇದೆ.. ಅವರ ಕಾರ್ಯ ದಕ್ಷತೆ ಬಗ್ಗೆ ವಿಶ್ವಾಸ ಇದೆ. ಸಿಎಂ ಅವರಿಗೆ ಈಗಲೂ ಹೇಳೋದಿಷ್ಟೇ. ಲಿಂಗಾಯತ ಸ್ವಾಮೀಜಿಗಳ ಒಕ್ಕೂಟದಿಂದ ಅಂತರ ಕಾಯ್ದುಕೊಳ್ಳಿ. ಯಾಕೆಂದ್ರೆ ಯಾವ ಗುಂಪು ಸಮಾಜ ವಿಂಗಡಿಸುತ್ತೋ ಅಂತಹ ಗುಂಪಿನಲ್ಲಿ ಸಿಎಂ ಪಾಲ್ಗೊಳ್ಳೋದು ಸರಿಯಲ್ಲ. ಭಾನುವಾರದ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಬಾರದು ಎಂದು ಹೇಳಿದ್ದಾರೆ.

ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಆದರೆ ಆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಪಾಲ್ಗೊಳ್ಳಬಾರದು ಎಂದಿದ್ದಾರೆ. ಶಿರಹಟ್ಟಿ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಭೆ ಬಳಿಕ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಭಾನುವಾರ ಅರಮನೆ ಮೈದಾನದಲ್ಲಿ ನಡೆಯುವ ಪ್ರತ್ಯೇಕ ಲಿಂಗಾಯತ ಕಾರ್ಯಕ್ರಮದಲ್ಲಿ ಭಾಗಿಯಾಗಬಾರದು. ಒಂದು ವೇಳೆ ಭಾಗಿಯಾದರೆ ಬಹುಶಃ ಕಾಂಗ್ರೆಸ್ ಪಕ್ಷದ ಅವನತಿಗೆ ನಾಂದಿ ಹಾಡುತ್ತದೆ ಎಂದಿದ್ದಾರೆ. ಹಿಂದೆ ಬಹುದೊಡ್ಡ ನಾಯಕರು, ದೊಡ್ಡ ಸ್ವಾಮೀಜಿಗಳು ಲಿಂಗಾಯತ ಪ್ರತ್ಯೇಕ ಮಾಡಲಿಕ್ಕೆ ಹೋಗಿ ಹಿನ್ನಡೆ ಅನುಭವಿಸಿದ್ದಾರೆ. ಇವತ್ತು ಮತ್ತೆ ವ್ಯರ್ಥ ಪ್ರಯತ್ನ ಮಾಡ್ತಿದ್ದಾರೆ. ಬಹುಶಃ ಪ್ರತಿ ಜಿಲ್ಲೆಯಲ್ಲಿ ಜನತೆಗೆ ವಿನಂತಿ ಮಾಡ್ಕೊಂಡಿದ್ದಾರೆ. ನಾವು ಸಿಎಂಗೆ ಸನ್ಮಾನ ಮಾಡ್ತೇವೆ ಅಂತ. ಜನರು ಬರಬೇಕು ಅಂತ ಹೇಳಿದ್ದಾರೆ. ಬಹಳಷ್ಟು ಮಠಾಧಿಪತಿಗಳಿಗೆ ಫೋನ್ ಕರೆ ಮಾಡಿ ಬಹು ಸಂಖ್ಯೆಯಲ್ಲಿ ಬರಬೇಕು ಅಂತ ತಿಳಿಸಿದ್ದಾರೆ.

ಪ್ರತ್ಯೇಕ ಲಿಂಗಾಯತರು ಅನ್ನುವ ಹೆಸರನ್ನ ಮಾಡ್ತಿರೋದು, ಅಖಂಡ ವೀರಶೈವ ಲಿಂಗಾಯತ ಸಮಾಜಕ್ಕೆ ಮಾಡ್ತಿರೋ ದ್ರೋಹ ಎಂದಿದ್ದು, ಸಮಾಜದ ವಿಘಟನೆ ಕಾರ್ಯ ಆಗಿದೆ ಅಂತ ಸಿಎಂ ಗಮನಕ್ಕೆ ತರಲಿಕ್ಕೆ ಬಯಸುತ್ತೇವೆ. ಇಡೀ ರಾಜ್ಯದ ಮಠಾಧೀಶರ ಒಲವು ಏನಿದೆ ಅನ್ನೋದನ್ನ ಹುಬ್ಬಳ್ಳಿಯ ಸಮಾವೇಶದಲ್ಲಿ ತಿಳಿಸಲಾಗಿದೆ. ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ತೆಲಂಗಾಣ, ಕೇರಳ ಸೇರಿದಂತೆ ಇತರೆ ರಾಜ್ಯದ ಜನರು ಭಾಗಿಯಾಗಿದ್ದರು. ಜನರು ವೀರಶೈವ ಲಿಂಗಾಯತ ಒಂದೇ ಅನ್ನೋದ್ರ ಕಡೆ ಇದ್ದಾರೆ ಹೊರತು, ಪ್ರತ್ಯೆಕದ ಕಡೆಗೆ ಇಲ್ಲ. ಕೆಲವೆ ಬೆರಳೆಣಿಕೆಯ ಸಮಾಜಕ್ಕೆ ಬೇಡವಾದ ಮಠಾಧೀಪತಿಗಳ ಬೇಡಿಕೆಯನ್ನ, ತಾವು ಮನ್ನಿಸುವುದರಿಂದ ತಮ್ಮ ವ್ಯಕ್ತಿತ್ವ, ತಮ್ಮ ಪಕ್ಷಕ್ಕೆ ಹಾನಿ ಉಂಟಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ ಫಕೀರ ದಿಂಗಾಲೇಶ್ವರ ಸ್ವಾಮೀಜಿ.
ಬೆಂಗಳೂರಿನಲ್ಲಿ ಸಚಿವ ಎಂಬಿ ಪಾಟೀಲ್ ಮಾತನಾಡಿ, ನಾನು ಬಸವಣ್ಣನ ಜನ್ಮಭೂಮಿಯಿಂದ ಬಂದವನು. ನನ್ನ ಅಜ್ಜ, ಅಜ್ಜಿ, ಅಪ್ಪನ ಸರ್ಟಿಫಿಕೇಟ್ ಲಿಂಗಾಯತ ಅಂತ ಇದೆ. ವೀರೇಂದ್ರ ಪಾಟೀಲ್, ಬಿ.ಡಿ.ಜತ್ತಿ ಎಲ್ಲರ ಸರ್ಟಿಫಿಕೇಟ್ ಲಿಂಗಾಯತ ಅಂತಾನೆ ಇದೆ. ಸಮೀಕ್ಷೆಯಲ್ಲಿ ಜನ ತಮ್ಮ ತಮ್ಮ ಇಚ್ಛೆಯಂತೆ ಬರೆಸುತ್ತಿದ್ದಾರೆ. ನಾನು ಹೀಗೆ ಬರೆಯಿಸಿ ಎಂದು ಯಾರಿಗೂ ಒತ್ತಾಯ ಮಾಡಿಲ್ಲ ಎಂದಿದ್ದಾರೆ. ಈಶ್ವರ್ ಖಂಡ್ರೆ ವೀರಶೈವ ಲಿಂಗಾಯತ ಸಮಾವೇಶದಲ್ಲಿ ಭಾಗಿಯಾಗಿದ್ದರು. ಅದರೆ ಇಂದಿನ ಕಾರ್ಯಕ್ರಮಕ್ಕೆ ಬೀದರ್‌ನಿಂದ ಸಂಸದ ಸಾಗರ ಖಂಡ್ರೆ ವಿಶೇಷ ರೈಲು ಕಳುಹಿಸಿದ್ದಾರೆ. ಬೀದರ್ ರೈಲು ನಿಲ್ದಾಣದಲ್ಲಿ ಬೆಂಗಳೂರಿನ ಸಮಾವೇಶಕ್ಕೆ ಹೊರಟ ಲಿಂಗಾಯತರನ್ನು ವಿಶೇಷ ರೈಲಿನಲ್ಲಿ ಕಳುಹಿಸಿಕೊಟ್ಟಿದ್ದಾರೆ. ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುಯುವ ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲು ಕಳುಹಿಸಿಕೊಟ್ಟಿದ್ದಾರೆ. ಆದರೆ ಇದೀಗ ಇಕ್ಕಟ್ಟಿನಲ್ಲಿ ಸಿಲುಕಿರುವ ಸಿಎಂ ಕಾರ್ಯಕ್ರಮದಲ್ಲಿ ಭಾಗಿಯಾಗ್ತಾರಾ ಇಲ್ವಾ ಅನ್ನೋ ಪ್ರಶ್ನೆ ಹುಟ್ಟು ಹಾಕಿದೆ.


