The Public Spot
ರಾಜ್ಯ

ಜಾತಿ ಜನಗಣತಿ ಆರಂಭ.. ಇವತ್ತು ಹೈಕೋರ್ಟ್‌ನಲ್ಲಿ ಸಿಗುತ್ತಾ ಮಧ್ಯಂತರ ತಡೆ..?

ಕರ್ನಾಟಕ ರಾಜ್ಯದಲ್ಲಿ ಜಾತಿ ಜನಗಣತಿ ಆರಂಭ ಆಗಿದೆ. ಬೆಂಗಳೂರು ಹೊರತುಪಡಿಸಿ ರಾಜ್ಯಾದ್ಯಂತ 2 ಲಕ್ಷ ಶಿಕ್ಷಕರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಸರ್ಕಾರದ ಸಿಬ್ಬಂದಿ ಕಿಟ್ ಹಿಡಿದು ಮನೆ ಮನೆಗೆ ಭೇಟಿ ನೀಡಿ ಜಾತಿ ಜನಗಣತಿ ಸಮೀಕ್ಷೆ ನಡೆಸ್ತಿದ್ದಾರೆ. ಕುಟುಂಬ ಸದಸ್ಯರ ಸಂಖ್ಯೆ, ಉದ್ಯೋಗ, ಶೈಕ್ಷಣಿಕ ಅರ್ಹತೆ, ಆಸ್ತಿ ಪಾಸ್ತಿ, ಧರ್ಮ, ಸಮುದಾಯ, ಉಪ ಪಂಗಡ, ಮತಾಂತರ ಆಗಿರುವ ವರದಿ, ಊರು ಕೇರಿ ಎಲ್ಲವನ್ನೂ ದಾಖಲು ಮಾಡಲಾಗ್ತಿದೆ. ಸರ್ಕಾರದ ಜಾತಿಗಣತಿ ವಿಚಾರದಲ್ಲಿ ವಿಪಕ್ಷಗಳು ಹಂಗಾಮವನ್ನೇ ಸೃಷ್ಟಿಸಿವೆ. ಕ್ರಿಶ್ಚಿಯನ್ ಧರ್ಮದ ಹೆಸರಿನ ಜೊತೆ ಮೂಲ ಜಾತಿಯ ಹೆಸರು ಹಾಕಿದ್ದಕ್ಕೆ ಸಿಡಿಮಿಡಿಗೊಂಡಿದ್ದಾರೆ. ಇದೀಗ ಪಟ್ಟಿಯಿಂದ 33 ಕ್ರಿಶ್ಚಿಯನ್ ಜಾತಿಗಳ ಹೆಸರನ್ನ ತೆಗೆಯಲಾಗಿದೆ. ಆದರೂ ಕೂಡ ವಿಪಕ್ಷಗಳ ಸಿಟ್ಟು ಕಡಿಮೆ ಆಗಿಲ್ಲ. ಈ ನಡುವೆ ಹೈಕೋರ್ಟ್‌ನಲ್ಲಿ ಮಧ್ಯಂತರ ತಡೆ ಸಿಗುವ ನಿರೀಕ್ಷೆ ಹೆಚ್ಚಾಗಿದೆ.

ಜಾತಿ ಜನ ಗಣತಿ ಮಾಡುತ್ತಿರುವ ಸರ್ಕಾರದ ಕ್ರಮಕ್ಕೆ ತಡೆ ನೀಡುವಂತೆ ಕೋರಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗೂ ರಾಜ್ಯ ಒಕ್ಕಲಿಗರ ಸಂಘ ಹೈಕೋರ್ಟ್ PIL ಅರ್ಜಿ ‌ಸಲ್ಲಿಸಿದ್ದವು. ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಗಳ ಪೀಠ ಮಧ್ಯಂತರ ತಡೆಗೆ ನಿರಾಕರಿಸಿದೆ. ಆದರೆ ಲಿಖಿತ ವಾದ ಸಲ್ಲಿಸೋಕೆ ಸೂಚನೆ ನೀಡಿ ವಿಚಾರಣೆಯನ್ನ ದಸರಾ ಹಬ್ಬದ ನಂತರ ಮುಂದೂಡಿಕೆ ಮಾಡಲು ನಿರ್ಧಾರ ಮಾಡಿತ್ತು. ಆದರೆ ವಕೀಲರ ವಾದ ಆಲಿಸಿದ ಬಳಿಕ ಆರೋಪದಲ್ಲಿ ಹುರುಳಿದೆ ಅನ್ನೋ ನಿರ್ಧಾರಕ್ಕೆ ಬಂದಿದೆ. ಇವತ್ತು ವಾದ ಆಲಿಸಿ ಮಧ್ಯಂತರ ಆದೇಶದ ಅಗತ್ಯವಿದೆಯಾ ಅನ್ನೋ ಬಗ್ಗೆ ನಿರ್ಧಾರ ಪ್ರಕಟ ಮಾಡಲಿದೆ.

ಜಾತಿ ಜನ ಗಣತಿಗೆ ತಡೆ ಕೋರಿ ಸಲ್ಲಿಕೆ ಆಗಿದ್ದ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ಪೀಠ, ಅರ್ಜಿಯನ್ನು ಇಂದಿಗೆ ಮುಂದೂಡಿಕೆ ಮಾಡಿದೆ. ಅರ್ಜಿದಾರರ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿ ರಾಜ್ಯದಲ್ಲಿ ಸರ್ಕಾರ ಜಾತಿ ಗಣತಿಗೆ ಆದೇಶಿಸಿದೆ. ಸಂವಿಧಾನದ ಆರ್ಟಿಕಲ್ 342A (3)ಗೆ ವಿರುದ್ಧವಾಗಿದೆ. ಹಿಂದುಳಿದ ವರ್ಗಗಳ ಆಯೋಗದ‌ ಹಿಂದಿನ ವರದಿ ಪರಿಗಣಿಸದೇ ಹೊಸ ಪ್ರಕ್ರಿಯೆ ಆರಂಭ ಮಾಡಲಾಗಿದೆ. ಜಾತಿಗಣತಿ ಅಂಕಿ ಅಂಶಗಳನ್ನು ಆಧಾರ್‌ಗೆ ಲಿಂಕ್ ಮಾಡ್ತಿದ್ದಾರೆ. ಜಿಯೋ ಟ್ಯಾಗಿಂಗ್ ಮಾಡಿ ಆಧಾರ್‌ಗೆ ಲಿಂಕ್ ಮಾಡುತ್ತಿದ್ದಾರೆ. ಸರ್ಕಾರದ ಈ ಕ್ರಮ ಕಾನೂನು ಬಾಹಿರ ಎಂದು ವಾದ ಮಂಡಿಸಿದ್ದಾರೆ. ಅರ್ಜಿದಾರರ ಪರ ಹಿರಿಯ ವಕೀಲ ಜಯಕುಮಾರ್ ಎಸ್ ಪಾಟೀಲ್ ವಾದ ಮಾಡಿ, ಜನಗಣತಿಗಿಂತ ಈ ಸರ್ವೆ ಯಾವ ರೀತಿಯಲ್ಲೂ ಕಡಿಮೆಯಲ್ಲ. ಜನಗಣತಿಯನ್ನು ಕೇಂದ್ರ ಸರ್ಕಾರವಷ್ಟೇ ಮಾಡಬೇಕೆಂದು ವಾದ ಮಾಡಲಾಗಿದೆ.

ಅರ್ಜಿದಾರರ ಪರ ಮತ್ತೋರ್ವ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ವಾದ ಮಂಡಿಸಿ, ಹೊಸ ಜಾತಿಗಳನ್ನು ಸರ್ಕಾರ ಸೃಷ್ಟಿ ಮಾಡುತ್ತಿದೆ.. ಒಕ್ಕಲಿಗ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್ ಎಂದು ವಿಂಗಡಿಸಿದ್ದಾರೆ.. ಯಾವುದೇ ಅಂಕಿ ಅಂಶದ ವಿಶ್ಲೇಷಣೆ ಇಲ್ಲದೆಯೂ ಜನಗಣತಿ ಮಾಡಲಾಗ್ತಿದೆ. ಅಸಲಿಗೆ ಜನಗಣತಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ವಾದ ಮಂಡಿಸಿದ್ದಾರೆ. ಹಿರಿಯ ವಕೀಲ ವಿವೇಕ್ ರೆಡ್ಡಿ ವಾದ ಮಾಡಿ, ರಾಜ್ಯದ ಜನರ ಸ್ಥಿತಿಗತಿ ಪರಿಶೀಲನೆ ಹಿಂದುಳಿದ ವರ್ಗಗಳ ಕರ್ತವ್ಯವಲ್ಲ. ರಾಜ್ಯ ಸರ್ಕಾರ ರಾಜಕೀಯ ಉದ್ದೇಶದಿಂದ ಗಣತಿ ಮಾಡುತ್ತಿದೆ ಎಂದು ತಿಳಿಸಿದ್ರು.. ಈ ವೇಳೆ ಎಲ್ಲ ಅರ್ಜಿದಾರರೂ ಸೇರಿ ನಿಮ್ಮ ಲಿಖಿತ ಸಾರಾಂಶ ಸಲ್ಲಿಸಿ, ವಾದಕ್ಕೆ ಪ್ರತಿಯೊಬ್ಬರಿಗೂ ಎಷ್ಟು ಸಮಯ ಬೇಕೆಂದು ತಿಳಿಸಿ ಎಂದು ಸಿಜೆ ವಿಭು ಬಖ್ರು ತಿಳಿಸಿದ್ರು.

ಸರ್ಕಾರದ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿ, ಇದೇ ರೀತಿಯ ಪ್ರಕರಣದಲ್ಲಿ ಹಿಂದೆಯೂ ಮಧ್ಯಂತರ ತಡೆ ನೀಡಿಲ್ಲ. ಜನಗಣತಿ ಮಾಡುತ್ತಿಲ್ಲ ಕೇವಲ ಸರ್ವೆ ಮಾಡುತ್ತಿದ್ದೇವೆ.. ಹೀಗಾಗಿ ಯಾವುದೇ ಮಧ್ಯಂತರ ತಡೆ ನೀಡದಂತೆ ಮನವಿ ಮಾಡಿದ್ರು. ಅಂಕಿ ಅಂಶ ಸಂಗ್ರಹಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಸಾಮಾಜಿಕ ಆರ್ಥಿಕ ಹಿಂದುಳಿದಿರುವಿಕೆಯ ಅಂಕಿ ಅಂಶ ಸಂಗ್ರಹಿಸುತ್ತೇವೆ ಎಂದು ಪ್ರತಿವಾದ ಮಾಡಿದ್ರು. ಅರ್ಜಿದಾರರ ವಾದದಲ್ಲಿ ಹುರುಳಿರುವಂತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ CJ ವಿಭು ಬಖ್ರು, ಸದ್ಯಕ್ಕೆ ಸರ್ವೆ ಮುಂದೂಡಲು ಸಾಧ್ಯವೇ..? ಎಂದು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ. ಈಗ ಸರ್ವೆಗೆ ಅವಕಾಶ ನೀಡಿದರೆ ಅಂಕಿ ಅಂಶ ಸಂಗ್ರಹವಾಗುತ್ತದೆ. ಒಮ್ಮೆ ಅಂಕಿ ಅಂಶ ಸಂಗ್ರಹವಾದರೆ, ಮರಳಿಸಲು ಸಾಧ್ಯವಿಲ್ಲ. ಹೀಗಾಗಿ ಮಧ್ಯಾಹ್ನ 2.30 ಕ್ಕೆ ಮಧ್ಯಂತರ ತಡೆಯಾಜ್ಞೆ ಬಗ್ಗೆ ವಿಚಾರಣೆ ಮಾಡೋಣ ಎಂದು ತಿಳಿಸಿ ಅರ್ಜಿಯನ್ನು ಇಂದಿಗೆ ಮುಂದೂಡಿಕೆ ಮಾಡಲಾಗಿದೆ.

Related posts

ಕಾಡು ಪ್ರಾಣಿಗಳು – ಮಾನವ ಸಂಘರ್ಷ ಹೆಚ್ಚಳ.. ಸರ್ಕಾರದ ಮುಂದಿನ ನಡೆ ಏನು..?

Publicspot

Heavy Rain All Over India: ರಾಜ್ಯ ಮತ್ತು ದೇಶದಲ್ಲಿ ಹೇಗಿದೆ ಮಳೆ ಅಬ್ಬರ.. ಎಲ್ಲೆಲ್ಲಿ ರಜೆ..?

Publicspot

SC ಕ್ಯಾಸ್ಟ್ ಸೆನ್ಸ್; ದಲಿತರನ್ನು ಕ್ರಿಶ್ಚಿಯನ್ ಮಾಡಲು ಹೊರಟಿದೆ ರಾಜ್ಯ ಸರ್ಕಾರ.. ಬಿಜೆಪಿ ನಿಯೋಗ ಕಿಡಿ..

ಯಶವಂತಿ

Ration Card Cancel; ನಿಮ್ಮ ರೇಷನ್ ಕಾರ್ಡ್ ರದ್ದು ಆಗಬಹುದು.. ರಾಜ್ಯ ಸರ್ಕಾರ ಪ್ಲ್ಯಾನಿಂಗ್..

Publicspot

SSLC ಪರೀಕ್ಷೆ ಮತ್ತು ಶಿಕ್ಷಣ ಇಲಾಖೆ ಹಾಗೂ ಸಚಿವರ ಎಡವಟ್ಟುಗಳು..

Publicspot

ಆನೆ ದಾಳಿಗೆ ಇನ್ನೆಷ್ಟು ಬಲಿ ಬೇಕು..? ಸರ್ಕಾರಕ್ಕೆ ಯಾಕಿಲ್ಲ ಕಾಳಜಿ..?

Publicspot