ರಾಜ್ಯ ಸರ್ಕಾರದ ಜಾತಿ ಗಣತಿ ಪ್ರಶ್ನಿಸಿ ಸಲ್ಲಿಕೆ ಆಗಿದ್ದ ಪಿಐಎಲ್ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್ ವಿಭಾಗೀಯ ಪೀಠ ಅರ್ಜಿಯನ್ನು ಗುರುವಾರಕ್ಕೆ (ಸೆಪ್ಟೆಂಬರ್ 25) ಮುಂದೂಡಿಕೆ ಮಾಡಿದೆ. ಸರ್ಕಾರದ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದು, ಸಂವಿಧಾನದ 342 A(3) ವಿಧಿಯನ್ನು ಅರ್ಜಿದಾರರು ಪ್ರಶ್ನಿಸಿಲ್ಲ, ಹಿಂದುಳಿದ ವರ್ಗಗಳ ಸೆಕ್ಷನ್ 9 ಹಾಗೂ 11ಕ್ಕೆ ತಡೆ ನೀಡುವಂತೆ ಅರ್ಜಿದಾರರು ಕೋರಿಲ್ಲ. ಸರ್ವೆಯಲ್ಲಿ ಯಾವ ತಪ್ಪಿದೆ ಎಂದು ಅರ್ಜಿದಾರರು ಹೇಳಿಲ್ಲ. ಹೀಗಾಗಿ ಸರ್ವೆಗೆ ತಡೆಯಾಜ್ಞೆ ನೀಡದಂತೆ ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲವೆಂದು ಅರ್ಜಿದಾರರು ಹೇಳಿಲ್ಲ, ಆದರೆ ಸರ್ವೆ ನಡೆಸುತ್ತಿರುವ ರೀತಿಯನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ ಎಂದಿರುವ ಹೈಕೋರ್ಟ್ ನ್ಯಾಯಮೂರ್ತಿಗಳು, ಜಾತಿಗಳ ನಡುವೆ ಧರ್ಮವನ್ನು ಸೇರಿಸಿದ್ದಾರೆಂಬ ಆರೋಪವಿದೆ. ಜಾತಿಗಳ ಪಟ್ಟಿ ಪ್ರಕಟಿಸುವ ಮುನ್ನ ವಿಶ್ಲೇಷಣೆಯಿಲ್ಲ ಎಂಬ ಆರೋಪವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಜಾತಿಗಣತಿಯಲ್ಲಿ ಅಂಕಿ ಅಂಶ ಸಂಗ್ರಹಿಸುವ ಮುನ್ನವೇ ತಪ್ಪು ಹುಡುಕುವುದು ತಪ್ಪು. ಜಾತಿಗಳ ಅಂಕಿ ಅಂಶ ಸಂಗ್ರಹಿಸದೇ ಯೋಜನೆಗಳನ್ನು ರೂಪಿಸಲು ಸಾಧ್ಯವಿಲ್ಲ ಎಂದು ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದಾರೆ. ಸರ್ವೆ ನಡೆದ ಬಳಿಕ ಅದರಲ್ಲಿ ಲೋಪವಿದ್ದರೆ ಪ್ರಶ್ನಿಸಲಿ, ಆದರೆ ಸರ್ವೆ ಆರಂಭಕ್ಕೂ ಮೊದಲೇ ಪ್ರಶ್ನಿಸುತ್ತಿದ್ದಾರೆ. ಸರ್ವೆ ಹೇಗೆ ತಪ್ಪೆಂದು ಅರ್ಜಿದಾರರು ಹೇಳಿಲ್ಲ, ಹೀಗಾಗಿ ಮಧ್ಯಂತರ ತಡೆ ಬೇಡ. ಹಿಂದುಳಿದ ಜನರಿಗೆ ಸವಲತ್ತು ನೀಡಲು ಸರ್ವೆ ಮಾಡಲಾಗುತ್ತಿದೆ. ಇದಕ್ಕಾಗಿ ಮಾಹಿತಿಗಳನ್ನು ಸಂಗ್ರಹಿಸುವುದು ಹಕ್ಕಿನ ಉಲ್ಲಂಘನೆಯಾಗುವುದಿಲ್ಲ ಎಂದು ಸರ್ಕಾರದ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮುಗಿಸಿದ್ದಾರೆ. ಕೇಂದ್ರ ಸರ್ಕಾರದ ಪರ ASG ಅರವಿಂದ್ ಕಾಮತ್ ವಾದ ಮಂಡಿಸಿ, 2027 ರಲ್ಲಿ ಕೇಂದ್ರ ಸರ್ಕಾರವೇ ಜಾತಿಗಣತಿ ಆರಂಭಿಸಲಿದೆ. ರಾಜ್ಯದ ಸರ್ವೆಯಲ್ಲಿ ಜನ ಉತ್ತರ ನೀಡುವುದು ಕಡ್ಡಾಯವಿಲ್ಲ. ಇಂತಹ ಸರ್ವೆ ನಡೆಸುವುದರಿಂದ ಪ್ರಯೋಜನವೇನು ಎಂದು ಪ್ರಶ್ನಿಸಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗದ ಪರ ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್ ವಾದ ಮಂಡಿಸಿ, ಆಯೋಗದ ಸರ್ವೆಯ ಅನುಕೂಲಕ್ಕಾಗಿ 1561 ಜಾತಿ ಗುರುತಿಸಲಾಗಿದೆ. ನಮ್ಮ ಜಾತಿ ಸೇರಿಸಿಲ್ಲವೆಂಬ ಕೆಲವರ ಮನವಿ ಮೇರೆಗೆ ಸೇರಿಸಲಾಗಿದೆ. ಜನರು ಹೇಳುವ ಜಾತಿಗಳನ್ನು ನಮೂದಿಸಿಕೊಳ್ಳುತ್ತೇವೆ. 1918 ರಿಂದಲೂ ಸಾಮಾಜಿಕ, ಆರ್ಥಿಕ ಸರ್ವೆಗಳನ್ನು ನಡೆಸಲಾಗಿದೆ. ಬ್ರಿಟಿಷ್ ಕಾಲದಲ್ಲೂ ಮಿಲ್ಲರ್ ಸಮಿತಿ ವರದಿ ನೀಡಿದೆ. ಈಗ 2 ಕೋಟಿ ಮನೆಗಳಿಗೆ ಜಿಯೋ ಟ್ಯಾಗ್ ಮಾಡಲಾಗಿದೆ. ಇದಕ್ಕಾಗಿ ಮಾತ್ರವೇ ಮೀಟರ್ ರೀಡರ್‌ಗಳನ್ನು ಬಳಸಿಕೊಳ್ಳಲಾಗಿದೆ. ಸ್ಟಿಕರ್ ಅಂಟಿಸಿ ಕ್ಯೂಆರ್ ಕೋಡ್ ನಮೂದಿಸಲಾಗಿದೆ. ಸರ್ವೆ ನಂತರವೇ ಈ ಸ್ಟಿಕರ್ ಭರ್ತಿ ಮಾಡಲಾಗುತ್ತದೆ. ದೇಶದಲ್ಲೇ ಮೊದಲಿಗೆ ಹೌಸ್ ಲಿಸ್ಟಿಂಗ್ ಮಾಡಲಾಗಿದೆ ಎಂದಿದ್ದಾರೆ. ಆಧಾರ್ ನಂಬರ್‌ಗಳನ್ನು ಪಡೆಯಲು ಕಾರಣವೇನು ಎಂದು ಹೈಕೋರ್ಟ್ ಪ್ರಶ್ನಿಸಿದೆ. ಸ್ಟಿಕ್ಕರ್‌ಗಳನ್ನು ಹಾಕಲು ನಿಮಗಿರುವ ಅಧಿಕಾರವೇನು..? ಎಂದು ಹೈಕೋರ್ಟ್ ಕೇಳಿದೆ. ಕೇವಲ ಗುರುತಿಗಾಗಿ ಆಧಾರ್ ನಂಬರ್ ಪಡೆಯಲಾಗುತ್ತಿದೆ. ಬೇರೆ ರಾಜ್ಯದವರನ್ನು ಪರಿಗಣಿಸದಿರಲು ಆಧಾರ್ ಪಡೆಯಲಾಗುತ್ತಿದೆ ಅಷ್ಟೇ. ಸ್ಟಿಕ್ಕರ್ ತೆಗೆಯದಂತೆ ಬಲವಂತವಿಲ್ಲ, ಮನವಿಯಷ್ಟೇ. 60 ಪ್ರಶ್ನೆಗೆ ಉತ್ತರಿಸುವಂತೆ ಒತ್ತಾಯ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಜಾತಿಗಳ ಪಟ್ಟಿ ತಯಾರಿಸಲು ಇಂದಿರಾ ಸಹಾನಿ ತೀರ್ಪಿನಲ್ಲಿ ಅವಕಾಶವಿದೆ ಎಂದಿರುವ ಹೈಕೋರ್ಟ್, ಮೀಸಲಾತಿಗೆ ಅಲ್ಲದಿದ್ದರೂ ಸವಲತ್ತು ನೀಡಲು ಬೇಕಾಗಬಹುದಲ್ಲ ಎಂದಿರುವ ಹೈಕೋರ್ಟ್, ಪ್ರಶ್ನೆಗಳನ್ನು 60 ರಿಂದ 5 ಕ್ಕೆ ಇಳಿಸಬೇಕೆಂಬುದು ನಿಮ್ಮ ಬೇಡಿಕೆಯೇ..? ಪ್ರತಿ ಮನೆಯ ಸರ್ವೆ ಮಾಡಬಾರದೆಂದು ಕೇಳುತ್ತಿದ್ದಾರಾ ಎಂದು ಅರ್ಜಿದಾರರನ್ನು ಹೈಕೋರ್ಟ್ ಪ್ರಸ್ನಿಸಿದೆ. ಬೆಂಗಳೂರಿನ ಶ್ರೀಮಂತರಿರುವ ಮನೆಗೂ ಹೋಗಿ ಸಮೀಕ್ಷೆಯ ಅಗತ್ಯವೇನಿದೆ..? ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆಗೆ ಮಿತಿಯಿದೆ. ಸರ್ವೆ ಹೆಸರಿನಲ್ಲಿ ಸರ್ಕಾರ ಜನಗಣತಿ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರ ವಾದ ಮಂಡಿಸಿದೆ. ಮಾಹಿತಿ ನೀಡುವುದು ಬಿಡುವುದು ಜನರ ಆಯ್ಕೆಯೆಂದು ತಿಳಿಸಿದ್ದೀರಾ, 1.60 ಲಕ್ಷ ಜನರ ಸರ್ವೆ ವೇಳೆ ಈ ಮಾಹಿತಿ ನೀಡಿದ್ದೀರಾ..? ಎಂದು ಹಿಂದುಳಿದ ವರ್ಗಗಳ ಆಯೋಗಕ್ಕೆ ಹೈಕೋರ್ಟ್ ಪ್ರಶ್ನೆ ಮಾಡಿದೆ. ಕೈಪಿಡಿಯಲ್ಲಿ ಸರ್ವೆ ನಿರಾಕರಿಸುವ ಆಯ್ಕೆಯನ್ನು ನೀಡಿಲ್ಲವಲ್ಲ ಎಂದಿರುವ ಹೈಕೋರ್ಟ್, ಪ್ರತಿ ಮನೆ ಸರ್ವೆ ಮಾಡಲೇಬೇಕೆಂದು ಕೈಪಿಡಿಯಲ್ಲಿದೆ. ಉತ್ತರ ನೀಡುವುದು ಕಡ್ಡಾಯ ಇಲ್ಲವೆಂದು ಎಲ್ಲಿ ಹೇಳಿದ್ದೀರಾ..? ಸರ್ವೆಗೂ ಮೊದಲೇ ಸೂಕ್ತ ಸಮಾಲೋಚನೆ ಮಾಡಿಲ್ಲವೇಕೆ ಎಂದು ಪ್ರಸ್ನಿಸಿದೆ.
ಜಾತಿಗಣತಿಗೆ ತಡೆಕೋರಿ ಮೇಲ್ವರ್ಗಗಳು ಹೈಕೋರ್ಟ್ ಮೊರೆ ಹೋಗಿದೆ. ಕೋರ್ಟ್‌ನಲ್ಲಿ ವ್ಯತಿರಿಕ್ತ ತೀರ್ಪು ಬಂದ್ರೆ ಕಾನೂನು ಹೋರಾಟ ಮಾಡಿ ಅಂತಾ ಸಿಎಂ ಸಿದ್ದರಾಮಯ್ಯಗೆ ಎಐಸಿಸಿ ನಾಯಕರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇಂದು ಜಾತಿಗಣತಿ ಸಂಬಂಧ ಹೈಕೋರ್ಟ್ ತೀರ್ಪು ನೀಡುವ ಸಾಧ್ಯತೆಯಿದೆ. ತೀರ್ಪು ಏನೇ ಬರಲಿ ಜಾತಿ ಗಣತಿ ನಮ್ಮಪಕ್ಷದ ಪ್ರಣಾಳಿಕೆ.. ಜಾತಿಗಣತಿ ಯಾವುದೇ ಕಾರಣಕ್ಕೂ ನಿಲ್ಲಬಾರದು ಅಂತಾ ಸಿಎಂ ಸಿದ್ದರಾಮಯ್ಯಗೆ ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್ ಸೂಚನೆ ನೀಡಿದ್ದಾರಂತೆ. ಪಾಟ್ನಾದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದರು. ಈ ವೇಳೆ ಎಐಸಿಸಿ ನಾಯಕರು ಸಿಎಂ ಸಿದ್ದರಾಮಯ್ಯರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ..


