ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ IPL ಕಪ್ ಗೆದ್ದು ಕನ್ನಡಿಗರಿಗೆ ಹರ್ಷ ಉಂಟು ಮಾಡಿತ್ತು. ಬರೋಬ್ಬರಿ 18 ವರ್ಷಗಳ ಬಳಿಕ ಆರ್ಸಿಬಿ ಕಪ್ ಗೆದ್ದ ಖುಷಿಯಲ್ಲಿ ಇಡೀ ಕರ್ನಾಟಕವೇ ಮುಳುಗಿತ್ತು. ಆ ಬಳಿಕ ಆಯೋಜನೆ ಆಗಿದ್ದ ಸಂಭ್ರಮಾಚರಣೆಯನ್ನು ಸರ್ಕಾರದ ಕಾರ್ಯಕ್ರಮ ಎಂಬಂತೆ ಬಿಂಬಿಸಿ ಜನರು ಸೇರುವಂತೆ ಕರೆ ನೀಡಿದ್ದು ಸ್ವತಃ ಸರ್ಕಾರ. ಅಂದು ಜೂನ್ 4ರಂದು ಚಿನ್ನಸ್ವಾಮಿ ಸ್ಟೇಡಿಯಂ ಒಳಗೆ ನುಗ್ಗಲು ಯತ್ನಿಸಿದ ಅಭಿಮಾನಿಗಳು ಕಾಲ್ತುಳಿತ ಸಂಭವಿಸಿ 11 ಮಂದಿ ಸಾವನ್ನಪ್ಪಿದ್ದರು. ಆ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂಗೆ ಕಪ್ಪುಪಟ್ಟಿ ಕಟ್ಟುವ ಯತ್ನ ನಡೀತು. ಆ ಬಳಿಕ KSCA ಗೆ ನೂತನ ಪದಾಧಿಕಾರಿಗಳು ಆಯ್ಕೆ ಆಗಿದ್ದು, ಚಿನ್ನಸ್ವಾಮಿಯಲ್ಲಿ ಮತ್ತೆ ಕ್ರಿಕೆಟ್ ಕಲರವ ಶುರುವಾಗುವ ನಿರೀಕ್ಷೆ ಮೂಡಿತ್ತು. ಆದರೀಗ ಮತ್ತೊಮ್ಮೆ ವಿಫಲವಾಗಿದೆ. ನಾಳಿನ ವಿಜಯ್ ಹಜಾರೆ ಟ್ರೋಫಿಯ ಪಂದ್ಯ ಚಿನ್ನಸ್ವಾಮಿಯಲ್ಲಿ ರದ್ದಾಗಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಾಳೆ ವಿಜಯ್ ಹಜಾರೆ ಟ್ರೋಫಿಯ ಪಂದ್ಯ ನಡೆಯಲ್ಲ. ಕೆಎಸ್‌ಸಿಎ ಕ್ರಿಕೆಟ್ ಆಯೋಜನೆಗೆ ಪರವಾನಿಗೆ ನಿರಾಕರಿಸಿದ ಸಮಿತಿ. ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದ ಸಮಿತಿ ಸದಸ್ಯರು, ಚಿನ್ನಸ್ವಾಮಿ ಸ್ಟೇಡಿಯಂ ಪರಿಶೀಲನೆ ಮಾಡಿದ್ದರು. ಸಮಿತಿಯ ಶಿಫಾರಸ್ಸಿನ ಆಧಾರದಲ್ಲಿ ನಾಳೆ ಪಂದ್ಯ ಆಯೋಜನೆಗೆ ಅವಕಾಶ ನಿರಾಕರಿಸಲಾಗಿದೆ. ಬೆಂಗಳೂರು ಪೊಲೀಸ್ ಕಮೀಷನರ್, ಜಿಬಿಎ ಕಮೀಷನರ್, ಅಗ್ನಿಶಾಮಕದಳ ಅಧಿಕಾರಿಗಳು, PWD, ಆರೋಗ್ಯಾಧಿಕಾರಿಗಳನ್ನು ಒಳಗೊಂಡಿದ್ದ ಸಮಿತಿ ರಚನೆ ಮಾಡಲಾಗಿತ್ತು. ಸುರಕ್ಷತೆ ದೃಷ್ಟಿಯಿಂದ ಪಂದ್ಯ ಆಯೋಜನೆಗೆ ಅವಕಾಶ ನೀಡದಿರಲು ಸಮಿತಿ ನಿರ್ಧಾರ ಮಾಡಿದೆ. ಪ್ರೇಕ್ಷಕರು ಇಲ್ಲದೆಯೂ ಪಂದ್ಯ ಆಯೋಜನೆಗೆ ಅವಕಾಶ ನಿರಾಕರಣೆ ಮಾಡಿರುವುದು ಅಚ್ಚರಿಗೂ ಕಾರಣವಾಗಿದೆ.

ಈಗಾಗಲೇ ವಿಜಯ್ ಹಜಾರೆ ಟ್ರೋಫಿಯ ಪಂದ್ಯದಲ್ಲಿ ಆಟವಾಡಲು ವಿರಾಟ್ ಕೊಹ್ಲಿ ಬೆಂಗಳೂರಿಗೆ ಬಂದಿದ್ದಾರೆ. ನಾಳೆಯಿಂದ ವಿಜಯ್ ಹಜಾರೆ ಟ್ರೋಫಿ ಟೂರ್ನಮೆಂಟ್ ಆರಂಭ ಆಗಬೇಕಿತ್ತು. ಮೊದಲ ಪಂದ್ಯದಲ್ಲಿ ಆಂಧ್ರಪ್ರದೇಶ ವಿರುದ್ಧ ದೆಹಲಿ ಆಟವಾಡಬೇಕಿತ್ತು. ದೆಹಲಿ ತಂಡದ ಪರವಾಗಿ ಆಟವಾಡಲು ವಿರಾಟ್ ಕೊಹ್ಲಿ ನಿನ್ನೆ ರಾತ್ರಿಯೇ ಬೆಂಗಳೂರಿಗೆ ಬಂದಿಳಿದಿದ್ದಾರೆ. ದೇವನಹಳ್ಳಿ ಬಳಿಯ NCA ಮೈದಾನದಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ನಡೆಸಲು ಅನುಮತಿ ನೀಡದಿದ್ದರೆ NCA ಮೈದಾನದಲ್ಲಿ ಪಂದ್ಯ ಆಯೋಜನೆಗೆ KSCA ನಿರ್ಧಾರ ಮಾಡಿದೆ. ಪ್ರೇಕ್ಷರಿಗೆ ಅವಕಾಶವನ್ನೇ ನೀಡದೆ ಪಂದ್ಯ ಆಯೋಜನೆ ಮಾಡಲು ಅವಕಾಶ ನೀಡುವಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಷಿಯೇಷನ್ ಮನವಿಯನ್ನೂ ತಿರಸ್ಕರಿಸಲಾಗಿದೆ. ಇದು ರಾಜಕೀಯ ಎನ್ನುವ ಸಣ್ಣ ಅನುಮಾನ ಕ್ರಿಕೆಟ್ ಅಂಗಳದಲ್ಲಿ ಓಡಾಡುತ್ತಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆ ಮಾಡುವ ವಿಚಾರವಾಗಿ ಸಣ್ಣ ರಾಜಕೀಯ ನಡೆಯುತ್ತಿದೆ ಎನ್ನಲಾಗ್ತಿದೆ. KSCA ನೂತನ ಅಧ್ಯಕ್ಷರರಾಗಿ ವೆಂಕಟೇಶ್ ಪ್ರಸಾದ್ ಆಯ್ಕೆ ಆಗಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಷ್ಟ್ರೀಯ ಪಂದ್ಯ ನಡೆಸಲು ನೂತನ ಆಡಳಿತ ಮಂಡಳಿ ಹರಸಾಸಹ ಮಾಡುತ್ತಿದೆ. ಈ ನಡುವೆ ವಿಜಯ್ ಹಜಾರೆ ಕ್ರಿಕೆಟ್ ಟೂರ್ನಮೆಂಟ್ಗೆ ಅವಕಾಶ ಪಡೆಯುವಲ್ಲಿ KSCA ಅಧ್ಯಕ್ಷ ವೆಂಕಟೇಶ್ ಪ್ರಸಾದ್ ವೈಫಲ್ಯ ಅನುಭವಿಸುವಂತೆ ಮಾಡಲಾಗಿದೆ. ಸಮಿತಿ, ಗೃಹ ಇಲಾಖೆ ಮನವೊಲಿಸುವಲ್ಲಿ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ವಿಫಲರಾಗಿದ್ದಾರೆ ಎನ್ನಲಾಗ್ತಿದೆ. ಮೂಲಭೂತ ಹಾಗೂ ಭದ್ರತಾ ಸುರಕ್ಷತಾ ದೃಷ್ಟಿಯಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಸಲು ನಿರಾಕರಣೆ ಮಾಡಲಾಗಿದೆ ಎನ್ನುವುದು ಸಮಿತಿಯ ವಾದ.
ಕ್ರೀಡಾಂಗಣದಲ್ಲಿ ಜನರೇ ಇಲ್ಲದೆ ಕ್ರಿಕೆಟ್ ಆಯೋಜನೆ ಮಾಡುವುದನ್ನು ತಡೆಯುವುದು ಯಾವ ನ್ಯಾಯ..? ಯಾವುದೇ ಪ್ರೇಕ್ಷಕರು ಇಲ್ಲದೆ ಇರುವಾಗ ಸುರಕ್ಷತೆ ದೃಷ್ಟಿಯಿಂದ ಎಂದು ಹೇಳುವುದು ಎಷ್ಟು ಸರಿ..? ಕ್ರಿಕೆಟ್ ಸ್ಟೇಡಿಯಂನಲ್ಲಿ ಕ್ರಿಕೆಟ್ ಆಟಗಾರರಿಗೆ ರಕ್ಷಣೆ ಸಿಗುವುದಿಲ್ಲ ಎನ್ನುವ ಆತಂಕ ಇದೆಯಾ..? 11 ಜನರು ಸಾವನ್ನಪ್ಪಿದರೂ ಕ್ರಿಕೆಟ್ ಆಟಗಾರರ ಜೊತೆಯಲ್ಲಿ ಕಪ್ ಹಿಡಿದು ಮುತ್ತಿಟ್ಟು ಕೇಕೆ ಹಾಕುವಾಗ ಸುರಕ್ಷತೆಯ ನೆನಪಾಗಲಿಲ್ಲವೇ..? ಜನರೇ ಇಲ್ಲದೆ ಕ್ರಿಕೆಟ್ ನಡೆಸುವುದಕ್ಕೆ ಅನುಮತಿ ನೀಡಲು ಅಡ್ಡಿಯಾಗಿದ್ದು ಯಾರು..? ಈ ಹಿಂದೆ KSCA ಆಡಳಿತ ಮಂಡಳಿ ಸೋಲುಂಡ ಬಳಿಕವೂ ರಾಜಕಾರಣಿಗಳ ಮೂಲಕ ತನ್ನ ಕೈಚಳಕ ಪ್ರದರ್ಶನ ಮಾಡುತ್ತಿದ್ಯಾ..? ಈಗ ಹೊಸದಾಗಿ ಆಯ್ಕೆ ಆಗಿರುವ ಆಡಳಿತ ಮಂಡಳಿಯಲ್ಲಿ ಕ್ರಿಕೆಟ್ ಆಟಗಾರರು ಇದ್ದು, ರಾಜಕೀಯ ನಾಯಕರ ಒಲವು ಗಳಿಸಿಲ್ಲ ಎನ್ನುವುದೇ..? ಅಥವಾ ಹೊಸ ಆಡಳಿತ ಮಂಡಳಿ ಗೆದ್ದಿರುವುದು ಕೆಲವರಿಗೆ ತಡೆದುಕೊಳ್ಳಲು ಆಗುತ್ತಿಲ್ಲವೇ..? ಯಾವುದು ಸರಿ..?


