ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ..! ಸಂಪುಟ ಪುನಾರಚನೆ ಸೇರಿದಂತೆ ಸಾಕಷ್ಟು ವಿಚಾರಗಳು ಚರ್ಚೆಯಲ್ಲಿವೆ. ಅದನ್ನು ಪಕ್ಷದಲ್ಲಿ ಹೈಕಮಾಂಡ್ ನಾಯಕರು ನಿರ್ಧಾರ ಮಾಡುತ್ತಾರೆ ಎಂದು ಶಾಸಕರು, ಸಚಿವರು ಹೇಳುತ್ತಿದ್ದಾರೆ. ಅದರಲ್ಲಿ ಏನೂ ತಪ್ಪಿಲ್ಲ. ಶಾಸಕರೇ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆ ಮಾಡಿದರೂ ಹೈಕಮಾಂಡ್ ಮಟ್ಟದಲ್ಲಿ ನಿರ್ಧಾರ ಆದ ಬಳಿಕ ಶಾಸಕಾಂಗ ಪಕ್ಷದಲ್ಲಿ ಒಮ್ಮತದಿಂದ ಸಿಎಂ ಆಯ್ಕೆ ಮಾಡಲಾಗುತ್ತದೆ. ಸಚಿವ ಸಂಪುಟ ಪುನಾರಚನೆ ವಿಚಾರದಲ್ಲೂ ಸಿಎಂ ನಿರ್ಧಾರವೇ ಅಂತಿಮ ಆದರೂ ಹೈಕಮಾಂಡ್ ನಾಯಕರ ಒಪ್ಪಿಗೆ ಪಡೆಯುವುದು ಸಹಜ. ಅದನ್ನೂ ತಪ್ಪು ಎನ್ನುವುದಕ್ಕೆ ಸಾಧ್ಯವಿಲ್ಲ. ಅಂದರೆ ತಪ್ಪು ಆಗುತ್ತಿರುವುದು ಎಲ್ಲಿ..? ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ.
ಶಾಸಕರು, ಸಚಿವರು, ಸಿಎಂ, ಡಿಸಿಎಂ ಸಹ ಹೈಕಮಾಂಡ್ ನಾಯಕರ ಕಡೆಗೆ ಬೊಟ್ಟು ಮಾಡುವುದು ಸರಿಯಾಗಿಯೇ ಇದೆ. ಆದರೆ ಕರ್ನಾಟಕದವರೇ ಆಗಿರುವ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಭಾನುವಾರ ಮಾಧ್ಯಮಗಳ ಜೊತೆಗೆ ಮಾತನಾಡಿ, ಹೇಳುವುದಕ್ಕೆ ನನ್ನ ಬಳಿ ಏನೂ ಇಲ್ಲ. ಏನೇ ತೀರ್ಮಾನ ಆದರೂ ಅದನ್ನೂ ಹೈಕಮಾಂಡ್ ನಾಯಕರು ಮಾಡುತ್ತಾರೆ. ನೀವು ಇಲ್ಲಿಗೆ ಬಂದು ಕಾಯುತ್ತಿದ್ದೀರಿ ಅನ್ನೋ ಕಾರಣಕ್ಕೆ ಮಾತನಾಡ್ತಿದ್ದೇನೆ. ಏನು ಆದರೂ ಅದನ್ನು ಹೈಕಮಾಂಡ್ ನಾಯಕರು ನಿರ್ಧಾರ ಮಾಡುತ್ತಾರೆ ಎಂದಿದ್ದಾರೆ. ಈಗ ಜನರ ಮನಸ್ಸಲ್ಲಿ ಸೃಷ್ಟಿಯಾಗುತ್ತದೆ. ಕಾಂಗ್ರೆಸ್ನಲ್ಲಿ ಹೈಕಮಾಂಡ್ ಎಂದರೆ ಯಾರು..? ಎಐಸಿಸಿ ಅಧ್ಯಕ್ಷರೇ ಹೈಕಮಾಂಡ್ ನಿರ್ಧಾರ ಎಂದರೆ ಮಲ್ಲಿಕಾರ್ಜುನ ಖರ್ಗೆ ಅವರು ನಾಮಕಾವಸ್ತೆಗೆ ಅಧ್ಯಕ್ಷರ ಪಟ್ಟದಲ್ಲಿ ಕೂತಿದ್ದಾರಾ..? ಉತ್ತರ ಸಿಗಬೇಕಿದೆ.

ಹೈಕಮಾಂಡ್ ಮಟ್ಟದಲ್ಲಿ ನಾವೆಲ್ಲಾ ಒಟ್ಟಿಗೆ ಕುಳಿತು ತೀರ್ಮಾನ ಮಾಡ್ತೇವೆ ಅಂದರೆ ಅದರ ಅರ್ಥವೇ ಬೇರೆ. ಅದನ್ನು ಬಿಟ್ಟು ಹೇಳುವುದಕ್ಕೆ ನನ್ನ ಬಳಿ ಏನು ಇಲ್ಲ, ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರೆ ಅರ್ಥ ಏನು..? ಇನ್ನೊಂದು ಕಡೆ ರಾಹುಲ್ ಪ್ರವಾಸದಲ್ಲಿ ಇದ್ದಾರೆ. ರಾಹುಲ್ ವಿದೇಶ ಪ್ರವಾಸ ಮುಗಿಸಿ ವಾಪಸ್ ಆದ ಬಳಿಕ ಈ ಬಗ್ಗೆ ನಿರ್ಧಾರ ಆಗುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅಂದರೆ ದಲಿತ ಸಮುದಾಯಕ್ಕೆ ಸೇರಿದ ನಾಯಕನನ್ನು ಮುಂದೆ ಇಟ್ಟುಕೊಂಡು ರಾಹುಲ್ ಮತ್ತು ಸೋನಿಯಾ ಗಾಂಧಿ ರಾಜಕಾರಣ ಮಾಡುತ್ತಿದ್ದಾರಾ..? ಇದು ದಲಿತ ಸಮುದಾಯಕ್ಕೆ ಮಾಡುತ್ತಿರುವ ಅವಮಾನ ಅಲ್ಲವೇ..? ಎನ್ನುವ ಪ್ರಶ್ನೆ ಸೃಷ್ಟಿಯಾಗುತ್ತದೆ. ರಾಹುಲ್ ಗಾಂಧಿ ಲೋಕಸಭಾ ವಿರೋಧ ಪಕ್ಷದ ನಾಯಕ, ಆದರೂ ಹೈಕಮಾಂಡ್ ಕಾರ್ಯ ನಿರ್ವಹಣೆ ಅಂದರೆ ಏನು..?
ದಲಿತ ಸಮುದಾಯದ ನಾಯಕ ಮುಖವಿಟ್ಟುಕೊಂಡು ನಾವು ದಲಿತರ ಪರ ಎನ್ನುವ ಕಾಂಗ್ರೆಸ್ ನಾಯಕರು, ಹೈಕಮಾಂಡ್ ಅಥವಾ ಅಧ್ಯಕ್ಷ ಸ್ಥಾನಕ್ಕೆ ಸಲ್ಲಬೇಕಾದ ಗೌರವನ್ನು ಕೊಡಬೇಕು. ಇಲ್ಲದಿದ್ರೆ ನಾಮಕಾವಸ್ತೆ ನಾಯಕ ಎನ್ನಿಸಿಕೊಳ್ಳುವ ಅಗತ್ಯವಾದರೂ ಏನಿದೆ..? ಇದೀಗ ರಾಜ್ಯದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು, ಮುನಿಸು ತಣಿಸುವ ತಾಕತ್ತು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಖಂಡಿತವಾಗಿಯೂ ಇರುತ್ತದೆ. ಆದರೆ ರಾಹುಲ್ ಗಾಂಧಿ ವಿದೇಶದಿಂದ ವಾಪಸ್ ಆದ ಬಳಿಕ ನನ್ನ ನಿರ್ಧಾರವನ್ನು ತೆಗೆದು ಹಾಕಿಬಿಟ್ಟರೆ ಎನ್ನುವ ಭಯ ಅಧ್ಯಕ್ಷರನ್ನೇ ಕಾಡುತ್ತಿದೆ. ಇದೇ ಕಾರಣಕ್ಕೆ ಖರ್ಗೆ ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಅಶಕ್ತರಾಗಿದ್ದಾರೆ. ಇದು ಬಿಜೆಪಿ ನಾಯಕರ ರಾಜಕೀಯಕ್ಕೆ ಒಂದು ರೀತಿಯ ಅಸ್ತ್ರ ಎನ್ನಬಹುದು.

ಈಗಾಗಲೇ ಬಿಜೆಪಿ ನಾಯಕರು ಮಲ್ಲಿಕಾರ್ಜುನ ಖರ್ಗೆ ಅವರ ಅಸಹಾಯಕತೆ ಬಗ್ಗೆ ಮಾತನಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಹಾಗೂ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ನಲ್ಲಿ ಮಲ್ಲಿಕಾರ್ಜುನ ಖರ್ಗೆ ನಾಮಕಾವಸ್ತೆಗೆ ಅಧ್ಯಕ್ಷರಾಗಿದ್ದಾರೆ ಎಂದು ಟೀಕಿಸಿದ್ದಾರೆ. ಹೈಕಮಾಂಡ್ ತೀರ್ಮಾನ ಎಂಬ ಖರ್ಗೆ ಹೇಳಿಕೆ ಬಗ್ಗೆ ಆರ್ ಅಶೋಕ್ ಟಾಂಗ್ ಕೊಟ್ಟಿದ್ದಾರೆ. ಖರ್ಗೆ ಕಾಂಗ್ರೆಸ್ ಪಕ್ಷದಲ್ಲಿ ಹೆಸರಿಗಷ್ಟೇ ಅಧ್ಯಕ್ಷರು. ಖರ್ಗೆ ಚೇರ್ಗೆ ಏನು ಪವರ್ ಇಲ್ಲ ಎಂದಿದ್ದಾರೆ. ಇನ್ನು ಖರ್ಗೆ ಗಾಂಧಿ ಫ್ಯಾಮಿಲಿಯ ಕಾವಲುಗಾರರು ಎಂದು ಛಲವಾದಿ ಛೇಡಿಸಿದ್ದಾರೆ. ಖರ್ಗೆ ಅವರ ಮಾತನ್ನು ಕೇಳಿದ ಬಳಿಕ ಬಿಜೆಪಿ ನಾಯಕರ ಮಾತು ತಪ್ಪು ಎಂದೇನು ಎನಿಸುವುದಿಲ್ಲ. ಹೈಕಮಾಂಡ್ ನಾಯಕರೇ ಹೈಕಮಾಂಡ್ ಎಂದರೆ ಹೇಗೆ..? ಅಲ್ಲವೇ..?


