ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೀನಿ ಎನ್ನುವ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿದ ಬಳಿಕ ರಚನೆ ಆಗಿದ್ದ ವಿಶೇಷ ತನಿಖಾ ತಂಡ ತನಿಖೆ ಪೂರ್ಣಗೊಳಿಸಿ ಕೋರ್ಟ್‌ಗೆ ವರದಿ ಸಲ್ಲಿಕೆ ಆಗಿದೆ. 2025ರ ಜೂನ್ ಜೂನ್ 22 ರಿಂದ ಶುರುವಾದ ಧರ್ಮಸ್ಥಳದಲ್ಲಿ ಹೂತಿಟ್ಟ ಬುರುಡೆ ಪ್ರಕರಣ ನಿನ್ನೆ ಗುರುವಾರಕ್ಕೆ 153 ದಿನ ಪೂರೈಸಿದ್ದಾರೆ. ವೈರಲ್ ಪತ್ರ ಶುರುವಾದ 28 ದಿನದ ಬಳಿಕ ಸರ್ಕಾರ ಎಸ್‌ಐಟಿ ರಚನೆ ಮಾಡಿತ್ತು. ಬುರುಡೆ ರಹಸ್ಯಗಳನ್ನ ಹುಡುಕಾಡಿದ ಎಸ್‌ಐಟಿ ಅಧಿಕಾರಿಗಳು 36 ದಿನಗಳ ಕಾಲ ಚಿನ್ನಯ್ಯ ಹೇಳಿದ ಕಡೆಯೆಲ್ಲಾ ಹುಡುಕಾಡಿದ್ರು. ಕೊನೆಗೆ ಆಗಸ್ಟ್ 23ಕ್ಕೆ ಚಿನ್ನಯ್ಯನನ್ನ ಬಂಧಿಸಿದ್ದರು.
ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಬಂಧಿಸಿ ಬರೋಬ್ಬರಿ 90 ದಿನಗಳಾಗಿದ್ದು, ಧರ್ಮಸ್ಥಳ ಪ್ರಕರಣದಲ್ಲಿ ಇಲ್ಲೀವರೆಗೂ ಆಗಿರುವ ಸಮಗ್ರ ತನಿಖೆಯ ವರದಿಯನ್ನ ಎಸ್.ಐ.ಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಮತ್ತು ತಂಡ ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ. ಬೆಳ್ತಂಗಡಿ ಕೋರ್ಟ್‌ಗೆ 3,923 ಪುಟಗಳ ತನಿಖಾ ವರದಿ ಸಲ್ಲಿಕೆ ಮಾಡಿದ್ದು, ಕಳೆದ 6 ತಿಂಗಳಿಂದ ಧರ್ಮಸ್ಥಳ ಸುತ್ತಮುತ್ತ ನಡೆದಿರುವ ಬೆಳವಣಿಗೆಗಳ ಬಗ್ಗೆ ವರದಿಯಲ್ಲಿ ಬೆಳಕು ಚೆಲ್ಲಲಾಗಿದೆ. ಎಸ್‌ಐಟಿ ರಚನೆಯಾದ ಮೇಲೆ 4 ತಿಂಗಳ ಕಾಲ ಸಮಗ್ರವಾಗಿ ತನಿಖೆ ನಡೆಸಿ, ಒಟ್ಟು 3,923 ಪುಟಗಳ ಎಸ್‌ಐಟಿ ತನಿಖಾ ವರದಿ ಕೋರ್ಟ್‌ಗೆ ಸಲ್ಲಿಕೆ ಆಗಿದೆ.

SIT ಅಧಿಕಾರಿಗಳು ವಿಚಾರಣೆ ಕರೆದಾಗ ಕೋರ್ಟ್ನಿಂದ ತಡೆಯಾಜ್ಞೆ ತಂದ ವಿಚಾರದ ಬಗ್ಗೆಯೂ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ ಎನ್ನಲಾಗಿದೆ. ಇನ್ನುಳಿದಂತೆ ಚಿನ್ನಯ್ಯನ ಹೇಳಿಕೆ, ಮಹಜರು ಪ್ರಕ್ರಿಯೆ, 17ಕ್ಕೂ ಹೆಚ್ಚು ಜಾಗದಲ್ಲಿ ನಡೆಸಿದ ಶೋಧ ಕಾರ್ಯಾಚರಣೆ, ಪೂರಕ ಸಾಕ್ಷಿಗಳು, ಫೋಟೋಗಳು, ವಿಡಿಯೋ ಹೇಳಿಕೆಗಳನ್ನು ಉಲ್ಲೇಖ ಮಾಡಲಾಗಿದೆ. FSL ಲ್ಯಾಬ್‌ಗಳ ವರದಿಗಳ ಬಗ್ಗೆಯೂ ಎಸ್‌ಐಟಿ ಉಲ್ಲೇಖ ಮಾಡಿದ್ದು, ಧರ್ಮಸ್ಥಳ ವಿರುದ್ಧ ಹೇಗೆಲ್ಲಾ ಷಡ್ಯಂತ್ರ ರೂಪಿಸಿದ್ರು..? ಧರ್ಮಸ್ಥಳ ವಿರುದ್ಧ ಷಡ್ಯಂತ್ರಕ್ಕೆ ಪ್ರೇರಣೆ ಕೊಟ್ಟಿದ್ಯಾರು..? ತಲೆಬುರುಡೆ ಎಲ್ಲೆಲ್ಲಿಗೆ ತೆಗೆದುಕೊಂಡು ಹೋಗಿದ್ದರು..? ಬುರುಡೆ ತಂದಿದ್ಯಾರು..? ಕೊಟ್ಟಿದ್ಯಾರು? ಎಲ್ಲಿಂದ ತಂದ್ರು? ಅನ್ನೋ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಧರ್ಮಸ್ಥಳ ವಿರುದ್ಧ ದೊಡ್ಡ ಮಟ್ಟದ ಷಡ್ಯಂತ್ರ ನಡೆಸಿದ್ದಾರೆ ಅನ್ನೋದನ್ನು ಎಸ್‌ಐಟಿ ಟೀಂ ಪತ್ತೆ ಮಾಡಿದೆ. ಈಗ ಸಲ್ಲಿಸಿರುವ ತನಿಖಾ ವರದಿಯನ್ನ ಸರ್ಕಾರಕ್ಕೂ ಎಸ್‌ಐಟಿ ಸಲ್ಲಿಸ್ತಿದೆ. ಡಿಸೆಂಬರ್ 8ರಿಂದ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ತನಿಖಾ ವರದಿಯ ಪ್ರಮುಖಾಂಶಗಳನ್ನ ಜನರ ಮುಂದಿಡ್ತೀವಿ ಅಂತ ಗೃಹಸಚಿವ ಪರಮೇಶ್ವರ್ ಹೇಳಿದ್ದಾರೆ. 22 ಜೂನ್ 2025ರಂದು ಧರ್ಮಸ್ಥಳದಲ್ಲಿ ಅನೇಕ ಶವಗಳನ್ನ ಹೂತಿಡಲಾಗಿದೆ ಅಂತ ವಕೀಲರು ಬರೆದಿದ್ದ ಪತ್ರದಿಂದ ವಿವಾದ ಶುರುವಾಯ್ತು. ಜುಲೈ 11ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ತಲೆ ಬುರುಡೆ ಸಮೇತ ನ್ಯಾಯಾಧೀಶರ ಎದುರು ಚಿನ್ನಯ್ಯ ದೂರು ಹಾಜರಾಗಿದ್ದನು. ಜುಲೈ 19ಕ್ಕೆ ರಾಜ್ಯ ಸರ್ಕಾರ ಸಮಗ್ರ ತನಿಖೆಗೆ ಎಸ್‌ಐಟಿಯನ್ನೂ ರಚಿಸಿತ್ತು.
ಆದರೆ ಸಿಕ್ಕಿರುವ ತಲೆ ಬುರುಡೆಗಳು ಯಾರವು..? ಆ ಬುರುಡೆಗಳ ಪಕ್ಕದಲ್ಲೇ ಅಡ್ರೆಸ್ ಪ್ರೂಫ್ ಸಿಕ್ಕ ಮೇಲೆ ವಾರಸುದಾರರಿಗೆ ಯಾಕೆ ಮೃತದೇಹ ಕೊಡಲಿಲ್ಲ..? ಯಾರಾದರೂ ಒಬ್ಬರು ಸತ್ತಾಗ ಅವರ ಮೃತದೇಹವನ್ನು ಸಂಬಂಧಿಸಿ ನಾಪತ್ತೆ ಕೇಸ್ ಕೊತೆಗೆ ಪೊಲೀಸರು ತಾಳೆ ಹಾಕಿ ನೋಡಬೇಕು ಅನ್ನೊ ನಿಯಮ ಇಲ್ಲಿ ಪಾಲನೆ ಆಗಲಿಲ್ಲ ಯಾಕೆ..? ವಯಸ್ಸಿಗೆ ಬಂದ ಮಹಿಳೆಯರು ಇಲ್ಲಿ ಸಾಕಷ್ಟು ಜನರು ನಾಪತ್ತೆ ಆಗಿದ್ದಾರೆ. ಅವರ ಮೃತದೇಹವನ್ನು ಪೋಸ್ಟ್ ಮಾಡದೆ ಹೂಳಲಾಗಿದೆ ಎನ್ನೋ ವರದಿಗಳ ಬಗ್ಗೆ ಎಸ್‌ಐಟಿ ಯಾವ ನಿರ್ಧಾರ ಮಾಡಿದೆ. ಕೇವಲ ಧರ್ಮಸ್ಥಳದ ವಿರುದ್ಧ ಆರೋಪ ಮಾಡಿದ್ದ ಕಾರಣಕ್ಕೆ ಷಡ್ಯಂತ್ರ ಅನ್ನೋ ನಿರ್ಧಾರಕ್ಕೆ ಬಂದಿದ್ಯಾ..? ಅಥವಾ ನಿಜವಾಗಲೂ ಷಡ್ಯಂತ್ರ ಆಗಿತ್ತಾ..? ಅನ್ನೋ ಬಗ್ಗೆಯೂ ವರದಿಯಲ್ಲಿ ಸಂಫೂರ್ಣ ಮಾಹಿತಿ ಕೊಡಲಾಗಿದ್ಯಾ..? ಅನ್ನೋದು ವರದಿ ಬಹಿರಂಗ ಆದ ಬಳಿಕ ತಿಳಿಯಬೇಕಿದೆ. ಸದ್ಯಕ್ಕೆ ಗೊತ್ತಾಗಿರುವ ಎಲ್ಲಾ ಮಾಹಿತಿ ಕಾಗಕ್ಕ ಗುಬ್ಬಕ್ಕನ ಕಥೆ ಅಷ್ಟೆ.


