ಕರ್ನಾಟಕದಲ್ಲಿ ಇಡೀ ಮಾನವ ಸಂಕುಲವೇ ತಲೆತಗ್ಗಿಸಬೇಕಾದ ಘಟನೆಯೊಂದು ನಡೆದಿದೆ. ಮೈಸೂರು ದಸರಾ ಮೂಲಕ ಹೆಚ್ಚು ಸುದ್ದಿಯಲ್ಲಿ ಇರುವ ಸಮಯದಲ್ಲೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಂಸ್ಕೃತಿ ಹೀನ ಘಟನೆಯೊಂದು ಬೆಳಕಿಗೆ ಬಂದಿದೆ. ಋತುಮತಿಯಾದ ಅಪ್ರಾಪ್ತ ಬಾಲಕಿ ಜೊತೆ ಮೊಟ್ಟ ಮೊದಲ ಬಾರಿಗೆ ಲೈಂಗಿಕ ಸಂಪರ್ಕ ಬೆಳೆಸಲು 20 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ ಆರೋಪದ ಮೇಲೆ ಓರ್ವ ಮಹಿಳೆ ಹಾಗೂ ಓರ್ವ ಪುರುಷನನ್ನ ಬಂಧಿಸಲಾಗಿದೆ. ಮೈಸೂರಿನ ವಿಜಯನಗರ ಪೊಲೀಸರು. ಸದ್ಯ ಬಾಲಕಿಯನ್ನ ರಕ್ಷಣೆ ಮಾಡಿದ್ದಾರೆ. ಬೆಂಗಳೂರಿನ ನಿವಾಸಿ ಶೋಭಾ ಹಾಗೂ ಈಕೆಯ ಜೊತೆಗಿದ್ದ ತುಳಸಿಕುಮಾರ್ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ಹಾಗೂ ಮಕ್ಕಳ ಕಲ್ಯಾಣ ಸಮಿತಿ ಮತ್ತು ವಿಜಯನಗರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬೆಚ್ಚಿ ಬೀಳಿಸುವ ಸಂಗತಿಯೊಂದು ಬೆಳಕಿ ಬಂದಿದೆ. ಋತುಮತಿಯಾದ ಬಾಲಕಿಯರನ್ನ ವೇಶ್ಯಾವಟಿಕೆ ದಂಧೆಗೆ ಇಳಿಸುವ ರಾಕೆಟ್ ಭೇದಿಸಿದ್ದಾರೆ ಒಡನಾಡಿ ಸಂಸ್ಥೆ ಹಾಗೂ ವಿಜಯನಗರ ಠಾಣೆ ಪೊಲೀಸರು. ಋತುಮತಿಯಾದ ಬಾಲಕಿಯರ ಜೊತೆ ಮೊದಲ ಲೈಂಗಿಕ ಸಂಪರ್ಕ ಬೆಳೆಸಿದ್ರೆ ಪುರುಷತ್ವ ಶಕ್ತಿ ಹೆಚ್ಚಳವಾಗುತ್ತದೆ. ಮಾನಸಿಕ ಮತ್ತು ಲೈಂಗಿಕ ಸಮಸ್ಯೆ ದೂರ ಆಗ್ತಾವೆ ಅನ್ನೋ ನಂಬಿಕೆಯನ್ನು ಸೃಷ್ಟಿಸಿ, ಶ್ರೀಮಂತರ ಬಳಿ ಹಣ ಪಡೆದು ಅಪ್ರಾಪ್ತ ಬಾಕಲಿಯರನ್ನು ಬೇಟೆ ಆಡುವುದನ್ನೇ ಕಾಯಕ ಮಾಡಿಕೊಂಡಿದ್ದಳು ಎನ್ನಲಾಗಿದೆ.
ಶ್ರೀಮಂತರನ್ನ ಭೇಟಿಯಾಗಿ ಎಳೆ ಹುಡುಗೀರು ಇದ್ದಾರೆ ಎಂದು ಮಸಲತ್ತು ಮಾಡಿ ರೇಟ್ ಫಿಕ್ಸ್ ಮಾಡಿಕೊಂಡು ಬರುತ್ತಿದ್ದ ಶೋಭಾ, ಲೈಂಗಿಕ ಶಕ್ತಿ ಹೆಚ್ಚಳದ ಬಗ್ಗೆಯೂ ಸುಂದರ ಪ್ರೇಮ ಕಾವ್ಯವನ್ನೇ ಸೃಷ್ಟಿ ಮಾಡುತ್ತಿದ್ದಳು. ನಮ್ಮ ಬಳಿ ಋತುಮತಿಯಾದ ಹತ್ತಾರು ಜನರಿದ್ದಾರೆ. ನೀವು ಒಕೆ ಮಾಡಿದ್ರೆ ನೀವು ಕೇಳಿದವರನ್ನು ಕಳುಹಿಸಿ ಕೊಡ್ತೇನೆ ಎಂದು ಮಾತನಾಡಿ, ವ್ಯವಹಾರ ಕುದುರಿದ ಬಳಿಕ ಹುಡುಗಿ ಪೋಷಕರ ಬಳಿ ಹಣದ ಆಸೆ ಸೃಷ್ಟಿಸಿ ಕರೆದುಕೊಂಡು ಹೋಗುತ್ತಿದ್ದಳು ಎನ್ನುವ ಮಾಹಿತಿ ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೆ ಬಲ್ಲ ಮೂಲಗಳ ಪ್ರಕಾರ ಈ ಹೆಂಗಸು, ಪೋಷಕರಿಗೆ ಹಣದ ಆಸೆ ತೋರಿಸಿ ಲಕ್ಷ ಲಕ್ಷ ಹಣ ಪಡೆದು ಬಾಲಕಿಯರನ್ನೇ ಮಾರಾಟ ಮಾಡುತ್ತಿದ್ದಳು ಎನ್ನುವ ಕಠೋರ ಮಾತುಗಳೂ ಕೇಳಿ ಬಂದಿವೆ.

ಮುದುಕರ ಮಂಚಕ್ಕೆ ಮಕ್ಕಳನ್ನು ಹತ್ತಿಸಿ ಲಕ್ಷ ಲಕ್ಷ ಹಣ ಮಾಡ್ತಿರೋ ಮಾಹಿತಿ ಮೈಸೂರಿನ ಒಡನಾಡಿ ಸಂಸ್ಥೆಗೆ ಸಿಕ್ಕಿತ್ತು. ಕೂಡಲೇ ಅಲರ್ಟ್ ಆದ ಒಡನಾಡಿ ಸಂಸ್ಥೆ ಪೊಲೀಸರಿಗೆ ದೂರನ್ನು ಕೊಟ್ಟಿತ್ತು. ಜೊತೆಗೆ ಒಡನಾಡಿ ಸೇವಾ ಸಂಸ್ಥೆ, ಮಕ್ಕಳ ಕಲ್ಯಾಣ ಸಮಿತಿ ಹಾಗೂ ಪೊಲೀಸರು ಜಂಟಿಯಾಗಿ ಫೀಲ್ಡ್ಗೆ ಇಳಿದಿದ್ರು. ಶೋಭಾಳ ನಂಬರ್ ಕಲೆಕ್ಟ್ ಮಾಡಿ ಫೋನ್ ಮಾಡಿ ನಮಗೆ ಎಳೆ ವಯಸ್ಸಿನ ಹುಡುಗಿ ಬೇಕು ಅಂತಿದ್ದೇ ತಡ, ಮೈಸೂರಿಗೆ ಬಾಲಕಿ ಸಮೇತ ಬಂದಿದ್ದ ಶೋಭಾ, 20 ಲಕ್ಷ ರೂಪಾಯಿಗೆ ಡೀಲ್ ಮುಗಿಸಿದ್ದಳು. ಭಾನುವಾರ ಮಧ್ಯಾಹ್ನ ಹಣ ಕೈಸೇರಿದ ಬಳಿಕ ಬಾಲಕಿಯನ್ನು ಕಳುಹಿಸಿ ಕೊಡುವುದಾಗಿಯೂ ಹೇಳಿದ್ದಳು. ತುಳಸಿಕುಮಾರ್ ಎಂಬಾತನ ಜೊತೆಗೆ ಬಂದಿದ್ದ ಶೋಭಾ ಕಂತೆ ಕಂತೆ ಹಣದ ಗುಂಗಿನಲ್ಲಿ ಕುಳಿತಿದ್ದಾಗ ಎಂಟ್ರಿಯಾದ ಪೊಲೀಸರು ರೆಡ್ ಹ್ಯಾಂಡ್ ಆಗಿ ಕೋಳ ಹಾಕಿದ್ದಾರೆ.
ಅಪ್ರಾಪ್ತ ಬಾಲಕಿಯನ್ನ ರಕ್ಷಣೆ ಮಾಡಿ ಬಾಲಮಂದಿರದಲ್ಲಿ ಇರಿಸಲಾಗಿದೆ. ಆರೋಪಿಗಳಾದ ಶೋಭಾ ಮತ್ತು ತುಳಸಿಕುಮಾರ್‌ನನ್ನ ವಶಕ್ಕೆ ಪಡೆದು ವಿಚಾರಣೆ ಮಾಡ್ತಿದ್ದಾರೆ. ಬಾಲಕಿಯರನ್ನ ಇಟ್ಕೊಂಡು ವೇಶ್ಯಾವಾಟಿಕೆ ಮಾಡ್ತಿದ್ವಿ ಅಂತ ಆರೋಪಿ ಶೋಭಾ ಹೇಳಿದ್ದಾಳೆ ಎನ್ನಲಾಗಿದೆ. ಆದರೆ ಆ ಬಾಲಕಿ ಯಾರು..? ಆಕೆಯ ಪೋಷಕರು ಈಕೆಯ ಜೊತೆಗೆ ಕಳುಹಿಸಿದ್ಯಾಕೆ..? ವೇಶ್ಯಾವಾಟಿಕೆಯಲ್ಲಿ 20 ಲಕ್ಷ ರೂಪಾಯಿ ಕೊಟ್ಟು ಯಾಕೆ ಕರೆಸ್ತಾರೆ..? 20 ಲಕ್ಷಕ್ಕೆ ಆ ಬಾಲಕಿಯನ್ನು ಮಾರಾಟ ಮಾಡಲಾಗುತ್ತಾ..? ಅಥವಾ ಬೇರೆ ಏನಿದೆ ಇದರ ಹಿಂದಿನ ಕರಾಮತ್ತು ಅನ್ನೋ ಬಗ್ಗೆ ಪೊಲೀಸ್ರು ತನಿಖೆ ಮಾಡ್ತಿದ್ದಾರೆ. ಸಂಪೂರ್ಣ ತನಿಖೆ ಆದ ಬಳಿಕ ಇಲ್ಲೀವರೆಗೂ ಎಷ್ಟು ಹೆಣ್ಣು ಮಕ್ಕಳನ್ನು ಮಂಚಕ್ಕೆ ಹತ್ತಿಸಿದ್ದಾಳೆ. ಯಾರನ್ನೆಲ್ಲಾ ಮಾರಾಟ ಮಾಡಿದ್ದಾಳೆ ಅನ್ನೋ ಬಗ್ಗೆಯೂ ಸ್ಪಷ್ಟ ಮಾಹಿತಿ ಹೊರ ಬೀಳಬೇಕಿದೆ. ಜೊತೆಗೆ ಇಂತಹ ಹೆಣ್ಣು ಕುಲಕ್ಕೇ ಅವಮಾನ ಆಗುವಂತಹ ಶೋಭಾಳಿಗೆ ಕಠಿಣ ಶಿಕ್ಷೆ ವಿಧಿಸಬೇಕಿದೆ.


