The Public Spot
ರಾಜ್ಯ

No Rain Only Flood; ಉತ್ತರ ಕರ್ನಾಟಕದಲ್ಲಿ ಮಳೆಯಿಲ್ಲ.. ಪ್ರವಾಹ ಮಾತ್ರ.. ಕಾರಣ ನಮ್ಮದೇ ಸರ್ಕಾರ..!!

ಮಹಾರಾಷ್ಟ್ರದಲ್ಲಿ ನಿರಂತರ ಮಳೆ ಬಿದ್ದರೆ ಅದರ ಪರಿಣಾಮ ಉತ್ತರ ಕರ್ನಾಟಕದ ಜನರ ಮೇಲೆ ಬೀಳುತ್ತದೆ. ಭೀಮಾ ನದಿ ಉಕ್ಕಿ ಹರಿದರೆ ಉತ್ತರ ಕರ್ನಾಟಕದ 6 ಜಿಲ್ಲೆಗಳ ನದಿ ತೀರದ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ. ಇದೀಗ ಭೀಮಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ವಿಜಯಪುರ, ಬೀದರ್, ಬೆಳಗಾವಿ, ಕಲಬುರಗಿ, ಯಾದಗಿರಿ, ಬಾಗಲಕೋಟೆ ಜಿಲ್ಲೆಗಳ ಜನರು ಬೇಡಪ್ಪ ಬೇಡ ಈ ಸಹವಾಸ ಎನ್ನುವಂತಹ ಪರಿಸ್ಥಿತಿಗೆ ಬರ್ತಾರೆ. ಬೆಳೆದ ಬೆಳೆಯೆಲ್ಲಾ ನದಿಯ ಪಾಲಾಗುತ್ತದೆ. ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಹೊನ್ನಾಳ ಗ್ರಾಮದಲ್ಲಿ ಭೋಜಲಿಂಗೇಶ್ವರ ದೇವಸ್ಥಾನಕ್ಕೆ ಪ್ರವಾಹದ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಅರ್ಧದಷ್ಟು ದೇವಸ್ಥಾನ ನೀರಿನಲ್ಲಿ ಮುಳುಗಡೆಯಾಗಿದೆ. ಅಪಾರ ಪ್ರಮಾಣದ ದವಸ ಧಾನ್ಯಗಳು ನೀರು ಪಾಲಾಗಿವೆ.

ಕಲಬುರಗಿ ಜಿಲ್ಲೆಯ ರೈತರು ಭೀಮಾ ನದಿ ಆರ್ಭಟಕ್ಕೆ ಸಿಲುಕಿ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಉಕ್ಕಿ ಹರಿಯುತ್ತಿರುವ ಭೀಮಾ ನದಿ ತೀರದಲ್ಲಿರುವ ಸರಡಗಿ ಬಿ ಗ್ರಾಮದ ಜಮೀನುಗಳು ಜಲಾವೃತವಾಗಿವೆ. ಕಬ್ಬು, ತೊಗರಿ, ಸೋಯಾ, ಹತ್ತಿ ಬೆಳೆಗಳು ನಾಶವಾಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ರೈತರು ಕಂಗಾಲಾಗಿದ್ದಾರೆ. ಯಾದಗಿರಿ ಜಿಲ್ಲೆ ನಾಯ್ಕಲ್ ಗ್ರಾಮದಲ್ಲಿ ಮನೆಗೆ ನೀರು ನುಗ್ಗಿ ಸಂಕಷ್ಟ ಎದುರಾಗಿದೆ. ದಸರಾ, ದೀಪಾವಳಿಗೆ ಸಿದ್ಧಪಡಿಸಿದ್ದ ಹಣತೆ, ಮಡಿಕೆಗಳು ನಾಶವಾಗಿವೆ. ಮಳೆ ನೀರು ನುಗ್ಗಿ, ಮನೆಯೇ ಜಲಾವೃತ ಆಗಿರೋದ್ರಿಂದ 2 ತಿಂಗಳ ಹಸುಗೂಸಿನೊಂದಿಗೆ ಮಹಡಿ ಹತ್ತಿ ಕೂರುವ ಪರಿಸ್ಥಿತಿ ಎದುರಾಗಿದೆ. ಯಾದಗಿರಿಯಲ್ಲಿ ನಿರಂತರ ಸುರಿಯುತ್ತಿರೋ ಮಳೆಯಿಂದ 12ನೇ ಶತಮಾನದ ಐತಿಹಾಸಿಕ ಕೋಟೆ ಕುಸಿದು ಬಿದ್ದಿದೆ. ಯಾದಗಿರಿಯ ವೀರಭದ್ರೇಶ್ವರ ಬಡಾವಣೆಯ ನೂರಾರು ಮನೆಗಳು ಸಂಪೂರ್ಣ ಜಲಾವೃತ ಆಗಿವೆ. ಪ್ರವಾಹದಲ್ಲಿ ಸಿಲುಕಿದ್ದ ಜನರನ್ನ SDRF ಟೀಂ ರಕ್ಷಣೆ ಮಾಡಿ, ಬೋಟ್ ಮೂಲಕ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಿದೆ.

ಭೀಮಾನದಿ ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಭೀಮಾ ನದಿಯಲ್ಲಿ ಕೊಚ್ಚಿ ಹೋಗ್ತಿದ್ದ ವ್ಯಕ್ತಿಯನ್ನು ಸ್ಥಳೀಯ ಯುವಕನೊಬ್ಬ ಜೀವದ ಹಂಗು ತೊರೆದು ಪ್ರಾಣ ರಕ್ಷಣೆ ಮಾಡಿದ್ದಾನೆ. ವಿಜಯಪುರದಲ್ಲಿ ಪ್ರವಾಹದ ನಡುವೆ ಮೂಕಪ್ರಾಣಿಗಳ ರೋದನೆ ಮುಗಿಲು ಮುಟ್ಟಿದೆ. ಪ್ರವಾಹದಿಂದ ಕಾಳಜಿ ಕೇಂದ್ರಕ್ಕೆ ಬಂದ ಜಾನುವಾರುಗಳಿಗೆ 4-5 ದಿನಗಳಿಂದ ಮೇವು ಇಲ್ಲದೇ ಕಿರುಚಾಡುತ್ತಿವೆ. ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮದ ಕಾಳಜಿ ಕೇಂದ್ರದಲ್ಲಿ‌ ಹಸುಗಳ ಆರೈಕೆಯೇ ದೊಡ್ಡ ಸವಾಲಾಗಿದೆ. ಮಿರಗಿ ಗ್ರಾಮ ಮುಳುಗಡೆಯಾಗಿದ್ದು, ಜನರು ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ. ಸ್ಥಳೀಯ ಮೀನುಗಾರರು ಬೋಟ್​ ಬಳಸಿ ಸಂಚಾರ ಮಾಡ್ತಿದ್ದು, ಸುಮಾರು 15ಕ್ಕೂ ಹೆಚ್ಚು ಕುಟುಂಬಗಳನ್ನು ಬೋಟ್ ಮೂಲಕ ರಕ್ಷಣೆ ಮಾಡಲಾಗಿದೆ.

ಬೀದರ್​​ ಜಿಲ್ಲೆ ಬಸವಕಲ್ಯಾಣದಲ್ಲಿ ಧಾರಾಕಾರ ಮಳೆಗೆ ಐತಿಹಾಸಿಕ ತ್ರಿಪುರಾಂತ ಕೆರೆ ಒಡೆದು ಹೋಗಿದೆ. ಕೆರೆಯ ನೀರು ನುಗ್ಗಿದ ಪರಿಣಾಮ ಬಸವಕಲ್ಯಾಣ ಸಂಪರ್ಕ ಕಡಿತವಾಗಿದೆ. ಜಮೀನುಗಳು, ಕೆಲವು ಬಡಾವಣೆ ಜಲಾವೃತವಾಗಿದೆ. ಜೊತೆಗೆ ಐತಿಹಾಸಿಕ ಕೆರೆಯ ಕೆಳಭಾಗದಲ್ಲಿರುವ ಗಾರ್ಡನ್‌ ಕೂಡಾ ಮುಳುಗಿದೆ. ಬಸವ ಕಲ್ಯಾಣ ತಾಲೂಕಿನ ಬೆಟಬಾಲಕುಂದಾದಲ್ಲಿ 12 ಎಕರೆ ಜಮೀನಿನಲ್ಲಿ ಮಿಶ್ರ ಬೆಳೆ ಬೆಳೆಯಲಾಗಿತ್ತು. ಆದ್ರೆ ಮಹಾ ಮಳೆ, ರೈತರ ಬೆಳೆಯನ್ನ ಸಂಪೂರ್ಣವಾಗಿ ನಾಶ ಮಾಡಿದೆ. ಇಷ್ಟಕ್ಕೆಲ್ಲಾ ಪ್ರಮುಖ ಕಾರಣ ರಾಜ್ಯ ಸರ್ಕಾರದ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ಎನ್ನಲಾಗ್ತಿದೆ. ಮಹಾರಾಷ್ಟ್ರದಲ್ಲಿ ಮಳೆಯಾದ ಬಳಿಕ ಡ್ಯಾಂನಲ್ಲಿ ನೀರಿನ ಸಂಗ್ರಹ ನೋಡಿಕೊಂಡು ನದಿಗೆ ಹೆಚ್ಚುವರಿ ನೀರು ಬಿಡಲಾಗುತ್ತದೆ. ಮಹಾರಾಷ್ಟ್ರ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ ಮುಂಜಾಗ್ರತೆ ವಹಿಸಿ ಹಂತಹಂತವಾಗಿ ನೀರನ್ನು ಬಿಡುಗಡೆ ಮಾಡುವಂತೆ ಮಾಡಿದ್ರೆ ಪ್ರವಾಹ ಇಷ್ಟೊಂದು ಪ್ರಮಾಣದಲ್ಲಿ ಆಗುವುದಿಲ್ಲ. ಆದರೆ ಅಧಿಕಾರಿಗಳು ಪ್ರವಾಹ ಆಗ ಬಳಿಕ ಈ ಬಗ್ಗೆ ಯೋಜನೆ ಮಾಡ್ತಾರೆ ಎನ್ನುತ್ತಾರೆ ಸ್ಥಳೀಯರು.

ಇವತ್ತು ಸಿಎಂ ಸಿದ್ದರಾಮಯ್ಯ ಉತ್ತರ ಕರ್ನಾಟಕಕ್ಕೆ ತೆರಳುತ್ತಿದ್ದು, ಕಲಬುರಗಿಯಲ್ಲಿ ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಿದ್ದಾರೆ. ಇದರ ಜೊತೆಗೆ ಬಿ.ವೈ ವಿಜಯೇಂದ್ರ ಕೂಡ ಹಲವಾರು ನಾಯಕರ ಜೊತೆಗೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದು, ರಾಜಕೀಯ ವಾಕ್ಸಮರ ಏರ್ಪಡುವ ಸಾಧ್ಯತೆ ದಟ್ಟವಾಗಿದೆ. ಇವರ ರಾಜಕೀಯ ಒಂದು ಬದಿಗಿಟ್ಟು ಜನರ ಸಮಸ್ಯೆಗೆ ಸಿದ್ದರಾಮಯ್ಯ ಪರಿಹಾರ ಕೊಡಲಿ ಅಂತಿದ್ದಾರೆ ಜನ.

Related posts

SSLC ಪರೀಕ್ಷೆ ಮತ್ತು ಶಿಕ್ಷಣ ಇಲಾಖೆ ಹಾಗೂ ಸಚಿವರ ಎಡವಟ್ಟುಗಳು..

Publicspot

Banu Selection Reaction: ಬಾನು ಆಯ್ಕೆ ಬಗ್ಗೆ ಯಾರು ಏನಂದ್ರು..?

Publicspot

Independence Day: 79ನೇ ಸ್ವಾತಂತ್ರ್ಯೋತ್ಸವಕ್ಕೆ ನೀವೂ ಹೋಗಬಹುದು.. ಪಾಸ್‌ ಎಲ್ಲಿ ಸಿಗುತ್ತೆ ಗೊತ್ತಾ..?

ಯಶವಂತಿ

ದುರಾಸೆಯಿಂದ ಪ್ರಕೃತಿಯನ್ನು ನಾಶ ಮಾಡಿದರೆ ನಮ್ಮನ್ನು ನಾವೇ ನಾಶ ಮಾಡಿಕೊಂಡಂತೆ

admin

KARNATAKA SCHOOL LEAVE: ಇವತ್ತು 4 ಜಿಲ್ಲೆಗೆ ಮಳೆಯಬ್ಬರ.. 8 ಜಿಲ್ಲೆಗಳ ಶಾಲಾ ಕಾಲೇಜಿಗೆ ರಜೆ

Publicspot

ಸಾವಿರ ದಿನಗಳ ಪೂರೈಕೆ ಸಂಭ್ರಮದಲ್ಲಿರುವ ಸರ್ಕಾರದಿಂದ ಇದೆಂಥಾ ಎಡವಟ್ಟು..?

Publicspot