ಕರ್ನಾಟಕದಲ್ಲಿ ಮತಗಳ್ಳತನ ಆಗಿದೆ ಎಂದು ಆರೋಪ ಮಾಡಿದ್ದ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಇದೀಗ ಬಿಹಾರ ಚುನಾವಣೆಗೂ ಮುನ್ನ ಮತ್ತೊಂದು ಬಾಂಬ್ ಹಾಕಿದ್ದಾರೆ. ಕರ್ನಾಟಕ ಬಳಿಕ ಹರಿಯಾಣದಲ್ಲೂ ವೋಟ್ ಚೋರಿ ನಡೆದಿದೆ ಎಂದಿರುವ ರಾಹುಲ್ ಗಾಂಧಿ, ವೋಟ್ ಚೋರಿ ಬಗ್ಗೆ ರಾಹುಲ್ ‘ ಹೆಚ್ ಫೈಲ್ಸ್’ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದಾರೆ. ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಹರಿಯಾಣಕ್ಕೆ ಸಂಬಂಧಿಸಿದ ದಾಖಲೆ ರಿಲೀಸ್ ಮಾಡಿದ್ದಾರೆ.
ಹರಿಯಾಣದಲ್ಲಿ ಶೇಕಡ 100 ರಷ್ಟು ಮತಗಳ್ಳತನ ನಡೆದಿದೆ ಎಂದಿರುವ ರಾಹುಲ್ ಗಾಂಧಿ, ಕೇಂದ್ರ ಚುನಾವಣಾ ಆಯೋಗ ಯಾವ ರೀತಿ ಕೆಲಸ ಮಾಡಿದೆ..? ವೋಟ್ ಚೋರಿ ಬಗ್ಗೆ ಚುನಾವಣಾ ಆಯೋಗ ಉತ್ತರ ನೀಡಬೇಕು ಎಂದು ಆಗ್ರಹ ಮಾಡಿದ್ದಾರೆ. ಒಬ್ಬರೇ ವ್ಯಕ್ತಿ ಹಲವು ಬಾರಿ ಮತದಾನ ಮಾಡಿದ್ದಾರೆ. ಓರ್ವ ಮಹಿಳೆ 10 ಬೂತ್‌ನಲ್ಲಿ ಮತಹಾಕಿದ್ದಾರೆ. ಇದು ಚುನಾವಣಾ ಆಯೋಗದ ಗಮನಕ್ಕೆ ಬಂದಿಲ್ಲವೇ ಎಂದು ಹರಿಯಾಣ ವೋಟ್ ಚೋರಿ ಬಗ್ಗೆ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.

ಹರಿಯಾಣದಲ್ಲಿ 25 ಲಕ್ಷ ನಕಲಿ ಮತದಾನ ಆಗಿದೆ ಎಂದಿರುವ ರಾಹುಲ್, ಮತಗಳ್ಳತನಕ್ಕೆ ನಮ್ಮಲ್ಲಿ ಸ್ಪಷ್ಟವಾದ ಸಾಕ್ಷ್ಯ ಇದೆ. 8 ಮತದಾರರಲ್ಲಿ 1 ನಕಲಿ ಮತದಾನವಾಗಿದೆ ಎಂದು ಆರೋಪಿಸಿದ್ದಾರೆ. ಒಬ್ಬರೇ ಮಹಿಳೆ ಹೆಸರಿನಲ್ಲಿ 100 ವೋಟ್ ಚಲಾವಣೆ ಆಗಿದೆ. ಸಾಕಷ್ಟು ಜನರ ಹೆಸರಿನಲ್ಲಿ ಹಲವು ಬಾರಿ ಮತದಾನವಾಗಿದೆ ಎಂದಿದ್ದಾರೆ. ಪ್ರತಿ 8 ಮತಗಳಲ್ಲಿ 1 ಮತಗಳ್ಳತನ ಆಗಿದೆ. ಒಂದೇ ಫೋಟೋ 4 ಹೆಸರಿನಲ್ಲಿ ಮತದಾರ ಆಗಿದ್ದಾರೆ. ಒಂದೇ ಹೆಸರಲ್ಲಿ ಹತ್ತಾರು ಮಹಿಳೆಯರ ಕಾರ್ಡ್ ಪ್ರದರ್ಶನ ಮಾಡಿದ್ದಾರೆ ರಾಹುಲ್ ಗಾಂಧಿ. ಜೊತೆಗೆ ಹರಿಯಾಣದಲ್ಲಿ 3.5 ಲಕ್ಷ ಮತಗಳು ಡಿಲೀಟ್ ಆಗಿದೆ ಎಂದು ದೂರಿದ್ದಾರೆ.
ಬ್ರೆಜಿಲ್ ಮಾಡೆಲ್ ಒಬ್ಬರು 22 ಬಾರಿ ಮತ ಹಾಕಿದ್ದಾರೆ. ಈ ಮಾಡೆಲ್ ಸೀಮಾ, ಸ್ವೀಟಿ ಹೆಸರಿನಲ್ಲಿ ಮತ ಹಾಕಿದ್ದಾರೆ. 10 ಬೂತ್ಗಳಲ್ಲಿ ವಿವಿಧ ಹೆಸರುಗಳಲ್ಲಿ ಮತದಾನ ಮಾಡಿದ್ದಾರೆ. ಬ್ರೆಜಿಲ್ ನ ಮಾಡೆಲ್ ವೋಟ್ ಹಾಕಿದ್ಹೇಗೆ..? ಆ ಮಾಡೆಲ್ ಭಾರತದಲ್ಲಿ ಮತ ಹಾಕಲು ಅವಕಾಶ ಸಿಕ್ಕಿದ್ದು ಹೇಗೆ..? ಎಂದು ಚುನಾವಣಾ ಆಯೋಗಕ್ಕೆ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ. ಇದೇ ವೇಳೆ ಕರ್ನಾಟಕದಲ್ಲಿ ನಡೆದಿದ್ದ ಮತಗಳ್ಳತನದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.
ಕರ್ನಾಟಕದ ಕಲಬುರಗಿ ಜಿಲ್ಲೆಯ ಆಳಂದ, ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದ ಬಗ್ಗೆ ಮತ್ತೆ ಪ್ರಸ್ತಾಪ ಮಾಡಿರುವ ರಾಹುಲ್ ಗಾಂಧಿ, ಈ ಹಿಂದೆ ಆಳಂದ, ಮಹದೇವಪುರದ ಬಗ್ಗೆ ನಾವು ಪ್ರಸ್ತಾಪ ಮಾಡಿದ್ದೆವು. ಆ ಬಳಿಕ ಚುನಾವಣಾ ಆಯೋಗ ಕೆಲವು ಮಾಹಿತಿಯನ್ನೇ ಕೊಡ್ತಿಲ್ಲ ಎಂದು ದೂರಿದ್ದಾರೆ. ಚುನಾವಣಾ ಆಯೋಗ ಫಾರ್ಮ್ 6 & 7 ಮಾಹಿತಿ ಕೊಡ್ತಿಲ್ಲ. ಈ ಹಿಂದೆ ಮಹದೇವಪುರ ಕ್ಷೇತ್ರದಲ್ಲಿ ನಮಗೆ ಮಾಹಿತಿ ಸಿಕ್ಕಿತ್ತು. ಆದರೆ ನಾವು ಬಹಿರಂಗವಾಗಿ ಸಾಕ್ಷ್ಯ ಸಮೇತ ಆರೋಪ ಮಾಡಿದ ಬಳಿಕ ಚುನಾವಣಾ ಆಯೋಗ ಆ ಮಾಹಿತಿಯನ್ನು ಕೊಡ್ತಿಲ್ಲ. ಗೌಪ್ಯವಾಗಿ ಇಡುವ ಮೂಲಕ ಮತಗಳ್ಳತನ ಮುಚ್ಚಿಡುವ ಪ್ರಯತ್ನ ಮಾಡಿದ್ದಾರೆ ಎಂದಿದ್ದಾರೆ.


