ಲಿಂಗಾಯತ ಧರ್ಮ ಅನ್ನೋದು ವೀರಶೈವವೂ ಅಲ್ಲ, ಹಿಂದೂ ಧರ್ಮಕ್ಕೂ ಸೇರಿದ್ದು ಅಲ್ಲ ಎಂದು ಕರೆ ನೀಡುತ್ತಿದ್ದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಇದೀಗ ಹಿಂದೂ ಅನ್ನೋದು ಒಂದು ಧರ್ಮ ಅಲ್ಲ, ಅದೊಂದು ಆಚರಣೆಯ ಪದ್ದತಿ ಅಷ್ಟೆ ಎಂದಿದ್ದಾರೆ. ಬಸವ ಸಂಸ್ಕೃತಿ ಅಭಿಯಾನ 2025ರ ಕುರಿತು ಮಾತನಾಡಲು ಕರೆದಿದ್ದ ಮಾಧ್ಯಮಗೋಷ್ಟಿಯಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಾಲ್ಕಿಯ ಬಸವಲಿಂಗ ಪಟ್ಟದೇವರು, ಎಡೆಯೂರಿನ ತೋಂಟಾದಾರ್ಯ ಶ್ರೀಗಳು, ಬಸವ ಧರ್ಮಪೀಠದ ಮಾತೆ ಗಂಗಾದೇವಿ ಸೇರಿದಂತೆ ಹಲವು ಮಠಗಳ ಮಠಾಧೀಶರು ಉಪಸ್ಥಿತರಿದ್ದು, ಮಾಹಿತಿ ನೀಡಿದ್ದಾರೆ.
ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ಬಸವಸಂಸ್ಕೃತಿ ಅಭಿಯಾನ ಹಮ್ಮಿಕೊಂಡಿದ್ದೇವೆ. ಜಗತ್ತಿನಲ್ಲಿ ಮೊದಲ ಸಂಸತ್ತನ್ನ ಬಸವಣ್ಣ ಸ್ಥಾಪಿಸಿದ್ದರು. ಪ್ರಜಾಪ್ರಭುತ್ವದ ಮೌಲ್ಯವನ್ನ ಎತ್ತಿಹಿಡಿದಿದ್ದರು. 2021ರಲ್ಲಿ ನಾವು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಸ್ಥಾಪಿಸಿದ್ದೆವು. ಬಸವಣ್ಣನವರನ್ನ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಲು ವಿನಂತಿಸಿದ್ದೆವು. ನಂತರ ಬಸವಣ್ಣನವರನ್ನ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಲಾಗಿದೆ. ನಾವು ರಾಜ್ಯದ 30 ಜಿಲ್ಲೆಯಲ್ಲಿಯೂ ಬಸವಸಂಸ್ಕೃತಿಯ ಅಭಿಯಾನ ಮಾಡಿದ್ದೇವೆ. ಈಗ ಬೆಂಗಳೂರಿಗೆ ಆ ಅಭಿಯಾನ ಬಂದಿದೆ. ಸಮಾರೋಪ ಕಾರ್ಯಕ್ರಮ ಅಕ್ಟೋಬರ್ 5ರಂದು ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಅವರನ್ನು ಅಂದು ಅಭಿನಂದಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಸ್ವಾಮೀಜಿ ಮಾತನಾಡಿ, ಬಸವಸಂಸ್ಕೃತಿ ಅಭಿಯಾನ ಬೇರೆ ಬೇರೆ ಜಿಲ್ಲೆಯಲ್ಲಿ ನಡೆದಿದೆ. ಅಭಿಯಾನದಲ್ಲಿ ಯುವಕರೊಂದಿಗೆ ಚರ್ಚೆಗಳು ನಡೆಯುತ್ತಿತ್ತು. ಜನಜಾಗ್ರತಿ ಪಾದಯಾತ್ರೆ, ಚಿಂತನೆ, ಆಶೀರ್ವಚನ ನಡೆಯುತ್ತಿತ್ತು. ಈಗ ಸಮಾರೋಪ ಸಮಾರಂಭ ಅಕ್ಟೊಬರ್ 5ರಂದು ನಡೆಯುತ್ತದೆ. ಸಿಎಂ ಸಿದ್ದರಾಮಯ್ಯ ಅವರು ಉಪಸ್ಥಿತರಿರುತ್ತಾರೆ. ಸಿಎಂಗೆ ಸನ್ಮಾನ ಮಾಡುತ್ತೇವೆ. ನಾಡಿನ ಸಮಸ್ತ ಬಸವ ಭಕ್ತರು ಸಮಾವೇಶಕ್ಕೆ ಬರಬೇಕು ಎಂದು ಕರೆ ನೀಡಿದ್ದಾರೆ. ಇನ್ನು ಜಾತಿಗಣತಿಯಲ್ಲಿ ಲಿಂಗಾಯತ ಧರ್ಮದ ಗೊಂದಲ ವಿಚಾರವಾಗಿ ಮಾತನಾಡಿ, ನಮಗೆ ಪ್ರತ್ಯೇಕ ಕಾಲಂ ಇನ್ನು ಸಿಕ್ಕಿಲ್ಲ. ಇತರೆ ಅಂತ ಒಂದು ಕಾಲಂ ಇದೆ. ಆ ಕಾಲಂ ನಲ್ಲಿ ಲಿಂಗಾಯತ ಧರ್ಮ ಅಂತ ಬರೆಯಬೇಕು. ಜಾತಿ ಕಾಲಂನಲ್ಲಿ ಪಂಚಮಸಾಲಿ ಹಾಗೇ ಯಾವ ಪಂಗಡ ಅಂತ ಬರೆಸಿ. ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ 400 ಮಠಾಧಿಪತಿಗಳ ನಿಲುವು ಇಷ್ಟೇ ಎಂದು ಹೇಳಿದ್ದಾರೆ.
ಬೇಲಿ ಮಠದ ಶಿವರುದ್ರ ಸ್ವಾಮೀಜಿ ಮಾತನಾಡಿ, ಹಿಂದೂ ಎನ್ನುವಂತದ್ದು ಭಾರತೀಯ ಜೀವನ ಪದ್ದತಿ ಎಂದು ಸುಪ್ರೀಂ ಕೋರ್ಟ್ ಜಡ್‌ಮೆಂಟ್ ಬಂದಿದೆ. ಪ್ರಧಾನಿಯವರು ಅದನ್ನೇ ಹೇಳಿದ್ದಾರೆ. ಹೇಗೆ ಅಮೆರಿಕದಲ್ಲಿ ಇರುವ ಎಲ್ಲರೂ ಅಮೆರಿಕನ್ನರೋ, ಆಫ್ರೀಕಾದವರು ಆಫ್ರಿಕನ್ನರೋ, ಚೀನಾದಲ್ಲಿ ಇರುವ ಎಲ್ಲರೂ ಚೈನಿಸ್ಸೋ, ಅದೇ ರೀತಿ ಭಾರತದಲ್ಲಿ ಇರುವವರು ಇಂಡಿಯನ್ ಎಂದು ಬ್ರಿಟಿಷ್ನವರು ಕರೆದ್ರು. ಅದರೆ ಭಾರತೀಯ ಶಬ್ಧ ಹಿಂದೂ ಎಂದರು. ಅದನ್ನ ಇದೇ ರೀತಿಯಲ್ಲಿ ಇಟ್ಕೊಂಡು ಹೋಗಬೇಕು. ಭಾರತದಲ್ಲಿ ಹುಟ್ಟಿರೋರೆಲ್ಲರೂ ಇಂಡಿಯನ್ಸ್, ಹಿಂದೂ. ವಿವೇಕಾನಂದರೂ ಅದನ್ನೇ ಹೇಳಿದ್ದಾರೆ. ಭಾರತದಲ್ಲಿ ಹುಟ್ಟಿ ಬೆಳೆದ ಧರ್ಮ ಎಲ್ಲವೂ ಹಿಂದೂ ಸಂಸ್ಕೃತಿ ಎಂದಿದ್ದಾರೆ. ನಾವು ಸಂಸ್ಕೃತಿ, ಜಾತಿ, ಇದೆಲ್ಲವನ್ನ ಕನ್‌ಪ್ಯೂಸ್ ಮಾಡಿಕೊಂಡು ಜನರಲ್ಲಿ ಸಂಶಯದ ಮೊಳಕೆ ಬಿತ್ತಬೇಕಿಲ್ಲ ಎಂದಿದ್ದಾರೆ.
ಲಿಂಗಾಯತ ಧರ್ಮದ ಹೋರಾಟದಲ್ಲಿ ರಾಜಕೀಯ ಬಂದಿಲ್ಲ. ಉಪಪಂಡದ ವಿಚಾರವೇ ಹೊರತು ಸಾಮೂಹಿಕ ವ್ಯವಸ್ಥೆಯಲ್ಲ. ಬಸವಣ್ಣವರ ಹೇಳಿರುವ ನೆಲೆಯಲ್ಲಿ ನಾವು ಲಿಂಗಾಯತ ವ್ಯವಸ್ಥೆ ಇಟ್ಕೊಂಡು ಹೋಗ್ತಿದ್ದೇವೆ. ಧರ್ಮದ ಕಾಲಂನಲ್ಲಿ ಹಿಂದು ಎಂದು ಬರೆಸುವುದಕ್ಕೆ ವಿರೋಧ ಮಾಡ್ತಿರೋ ವಿಚಾರವಾಗಿ ಮಾತನಾಡಿದ ಬೇಲಿ ಮಠದ ಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾ ಇದನ್ನ ಹುಟ್ಟುಹಾಕಿಲ್ಲ. ವಾಸ್ತವ ಸತ್ಯವನ್ನ ಹೇಳ್ತಿದ್ದಾರೆ. ಜನಸಾಮಾನ್ಯರಲ್ಲಿ ಲಿಂಗಾಯತ ಪ್ರಜ್ಞೆ ಜಾಗೃತಿ ಮೂಡಿಸಬೇಕು. ಬಸವಣ್ಣನವರು ಹೇಳಿದ್ದ ನಾಲ್ಕು ಗುಣಗಳನ್ನು ಇಟ್ಟುಕೊಳ್ಳಬೇಕು. ಲಿಂಗಾಯತರನ್ನ ದಾರಿ ತಪ್ಪಿಸುವವರು ಈ ರೀತಿ ಮಾತಾಡ್ತಾರೆ ಅಷ್ಟೇ ಎಂದಿದ್ದಾರೆ.
ಇನ್ನೂ ಸಮೀಕ್ಷೆಯಲ್ಲಿ ಇತರೆ ಎಂದು ಬರೆಸಿದ್ರೆ, ಅದನ್ನ ಹಿಂದೂ ಎಂದು ಪರಿಗಣಿಸೋದಾಗಿ ಆಯೋಗ ಹೇಳಿರೊ ವಿಚಾರವಾಗಿ ಮಾತನಾಡಿ, ಅದರ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಸರ್ಕಾರ ಏನ್ ಮಾಡಿದ್ರು, ಈ ಮಾನ್ಯತೆ ವ್ಯವಸ್ಥೆ ನಡೆದುಕೊಂಡೇ ಬರುತ್ತದೆ. ಪ್ರಜಾಪ್ರಭುತ್ವ ಆಗಿದ್ದರಿಂದ ಶಾಸಕರ ತೀರ್ಮಾನ ಮುಖ್ಯವಲ್ಲ. ಸಮಗ್ರ ಪ್ರಜೆಗಳ ಸಮೂಹ ಶಕ್ತಿ ಬಲದಿಂದ ಯಾರು ಹೆಚ್ಚಿನ ವ್ಯವಸ್ಥೆ ಅನುಸರಿಸ್ತಾರೆ ಅದರ ಮೇಲೆ ತೀರ್ಮಾನ ಆಗುತ್ತದೆ. ಪ್ರತ್ಯೇಕ ಧರ್ಮವಲ್ಲ ಪ್ರತ್ಯೇಕ ಮತಗಳಿದೆ. ಧರ್ಮ ಪ್ರತ್ಯೇಕ ಆಗಲು ಸಾಧ್ಯವಿಲ್ಲ. ದೀಪವನ್ನ ಎಣಿಸಬಹುದು ಬೆಳಕನ್ನ ಎಣಿಸಲಾಗುತ್ತಾ..? ಧರ್ಮ ಎನ್ನುವುದು ಬೆಳಕು, ಅನುಭವಕ್ಕೆ ಸಂಬಂಧಿಸಿದ್ದು, ಜಾತಿಗಣತಿ ಮುಕ್ತಾಯದ ಹಂತಕ್ಕೆ ಬಂದಿದ್ದು ಅದರ ಬಗ್ಗೆ ಹೆಚ್ಚಿನ ಚರ್ಚೆಯ ಅಗತ್ಯವಿಲ್ಲ ಎಂದಿದ್ದಾರೆ.


