ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಯಶಸ್ವಿ ನಿರ್ದೇಶಕ ಎಸ್. ನಾರಾಯಣ್ ಆಗ್ಗಿಂದಾಗೆ ಕೆಲವಾರು ವಿಚಾರಗಳಿಗೆ ಸದಾ ಕಾಲ ಸುದ್ದಿಯಲ್ಲೇ ಇರ್ತಾರೆ. ಚೆಕ್ ವಂಚನೆ ಸೇರಿದಂತೆ ಹಲವಾರು ವಿಚಾರಗಳಲ್ಲಿ ಎಸ್ ನಾರಾಯಣ್ ಹೆಸರು ತಳುಕು ಹಾಕಿಕೊಂಡಿರುತ್ತದೆ. ಆದರೆ ಇದೀಗ ಮನೆ ಒಳಗಿನ ಸಮಸ್ಯೆಗೆ ನಾರಾಯಣ್ ಕುಟುಂಬ ತಲ್ಲಣಿಸಿದೆ. ಕನ್ನಡ ಸಿನಿಮಾ ರಂಗದ ಕಲಾ ಸಾಮ್ರಾಟ್, ನಿರ್ದೇಶಕನಾಗಿ, ನಟನಾಗಿ, ಕಾಮಿಡಿಯನ್ ಆಗಿ ಕನ್ನಡಿಗರ ಮನೆ ಮಾತಾಗಿದ್ದ ನಟ ಎಸ್ ನಾರಾಯಣ್ ತನ್ನ ಸೊಸೆಗೆ ವರದಕ್ಷಿಣೆ ಕಿರುಕುಳ ಕೊಟ್ಟ ಆರೋಪಕ್ಕೆ ಗುರಿಯಾಗಿದ್ದಾರೆ.
ಎಸ್ ನಾರಾಯಣ್ ಅವರ ಕಿರಿ ಸೊಸೆ ಗಂಡನೂ ಸೇರಿದಂತೆ ಅತ್ತೆ, ಮಾವನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎಸ್.ನಾರಾಯಣ್ ಅವರ ಎರಡನೇ ಪುತ್ರ ಪವನ್ 2021 ರಲ್ಲಿ ಪವಿತ್ರಾ ಎಂಬುವರ ಜೊತೆಗೆ ವಿವಾಹ ಜೀವನಕ್ಕೆ ಕಾಲಿಟ್ಟಿದ್ದರು. ಒಂದಷ್ಟು ವರ್ಷಗಳ ಕಾಲ ಸುಖ ಸಂಸಾರವನ್ನೂ ನಡೆಸಿದ್ದರು. ಆದ್ರೆ, ಇತ್ತೀಚಿಗೆ ಪವನ್ ಹಾಗೂ ಪವಿತ್ರಾ ಜೀವನದಲ್ಲಿ ಬಿರುಗಾಳಿ ಎದ್ದಿದೆ. ಅತ್ತೆ – ಮಾವ ಹಾಗೂ ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿ ದೂರು ದಾಖಲಿಸಿದ್ದಾರೆ.

2021ರಲ್ಲಿ ಪವನ್ ಹಾಗೂ ನಾನು ಮದುವೆಯಾಗಿದ್ದೆವು. ಈ ವೇಳೆ ನಮ್ಮ ಮನೆಯವರು ಆಭರಣ, ಹಣ ಕೂಡ ಕೊಟ್ಟು ಮದುವೆ ಮಾಡಿ ಕೊಟ್ಟಿದ್ದರು. ನಂತರ ಪವನ್ಗೆ ಕೆಲಸ ಇರಲಿಲ್ಲ. ಹೀಗಾಗಿ, ನಾನೇ ಕೆಲಸ ಮಾಡಿ ಮನೆ ನಡೆಸುತ್ತಿದ್ದೆ. ಈ ವೇಳೆ ಕಲಾ ಸಾಮ್ರಾಟ್ ಟೀಂ ಅಕಾಡೆಮಿ ಆರಂಭಿಸಲು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆಗ ನಾನು, ನನ್ನ ತಾಯಿಯ ಒಡವೆಯನ್ನ ಅಡವಿಟ್ಟು ಹಣ ಕೊಟ್ಟಿದ್ದೆ. ಆದರೆ ಕಲಾ ಸಾಮ್ರಾಟ್ ಟೀಂ ಅಕಾಡೆಮಿ ಲಾಸ್ ಆಗಿ ಕ್ಲೋಸ್ ಆಯ್ತು. ನಂತರವೂ ನನ್ನ ಹೆಸರಲ್ಲೇ 10 ಲಕ್ಷ ರೂಪಾಯಿ ಸಾಲ ಮಾಡಿ ಪವನ್ಗೆ ಕೊಟ್ಟಿದ್ದೆ. ಆದರೆ ಈಗ ನನ್ನನ್ನೇ ಮನೆಯಿಂದ ಹೊರಹಾಕಿದ್ದಾರೆ. ನನಗೂ ಹಾಗೂ ನನ್ನ ಮಗನಿಗೂ ಏನಾದರು ಆದರೆ ಅದಕ್ಕೆ ಈ ಮೂವರೇ ಕಾರಣ. ಎಂದು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಹಿರಿಯ ನಿರ್ದೇಶಕ ಎಸ್ ನಾರಾಯಣ್ ಕುಟುಂಬದ ಮೇಲೆ ಇಂತದ್ದೊಂದು ಆರೋಪ ಕೇಳಿ ಬಂದಾಗ ಮಾಧ್ಯಮಗಳು ಸ್ವತಃ ಎಸ್.ನಾರಾಯಣ್ ಅವರನ್ನು ಸಂಪರ್ಕಿಸುವ ಕೆಲಸ ಮಾಡಿದ್ದು, ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿರುವ ಎಸ್ ನಾರಾಯಣ್, ಆಕೆ ಮನೆಬಿಟ್ಟು ಹೋಗಿ 14 ತಿಂಗಳಾಗಿದೆ, ಈಗ ನಮ್ಮ ವಿರುದ್ಧ ಆರೋಪ ಮಾಡ್ತಿದ್ದಾರೆ. ಇಷ್ಟು ದಿನ ಯಾಕೆ ದೂರು ಕೊಟ್ಟಿರಲಿಲ್ಲ. ತೇಜೋವಧೆ ಮಾಡೋದು ಅಕ್ಷಮ್ಯ ಅಪರಾಧ, ಇದಕ್ಕೆ ಕೋರ್ಟ್‌ನಲ್ಲಿ ಸೂಕ್ತ ಉತ್ತರ ಕೊಡ್ತೀನಿ. ಕಲಾ ಸಾಮ್ರಾಟ್ ಇನ್‌ಸ್ಟಿಟ್ಯೂಟ್ ನಿರ್ಮಿಸಿದ್ದು ನಾನು. ಅದಕ್ಕೆ ಹಣ ತಂದಿದ್ದೇಗೆ, ಯಾವ ರೀತಿ ಸಾಲ ತೀರಿಸಲಾಯ್ತು ಅನ್ನೋದಕ್ಕೆ ನನ್ನ ಬಳಿ ದಾಖಲೆ ಇದೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ..


