ಶಿಕ್ಷಕರು ಎಂದರೆ ಮುಂದಿನ ತಲೆಮಾರನ್ನು ಶಿಕ್ಷಿತರನ್ನಾಗಿ ಮಾಡಿ, ಮುಂದಿನ ಸಮಾಜವನ್ನು ರೂಪಿಸುವ ಜವಾಬ್ದಾರಿಯುತ ಕೆಲಸ ಅವರ ಮೇಲಿರುತ್ತದೆ. ಆದರೆ ಶಿಕ್ಷಕರು ಶಿಕ್ಷೆ ಕೊಟ್ಟು ಮಕ್ಕಳಿಗೆ ಪಾಠ ಕಲಿಸುವ ಪದ್ಧತಿ ಈಗ ಬದಲಾಗಿದೆ. ಆದರೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ವೇದಾಧ್ಯಾಯನ ಶಾಲೆಯಲ್ಲಿ ಶಿಕ್ಷಕನಾಗಿದ್ದ ವೀರೇಶ್ ಹಿರೇಮಠ್ ಬಾಲಕನೊಬ್ಬನಿಗೆ ಹಿಗ್ಗಾಮುಗ್ಗಾ ಬಾರಿಸುವ ದೃಶ್ಯ ವೈರಲ್ ಆಗಿ9ದೆ. ಆ ವಿಡಿಯೋ ನೋಡಿದ ಎಲ್ಲರ ಮನಸ್ಸಲ್ಲೂ ಆಕ್ರೋಶ ಕಟ್ಟೆಯೊಡೆದಿದೆ. ಪಾಠ ಪ್ರವಚನ ಮಾಡುವಾಗ ಓದದೇ ಇದ್ದಿದ್ರೆ, ಹೇಳಿದ್ದನ್ನು ಕೇಳದಿದ್ರೆ, ತಪ್ಪು ಮಾಡಿದ್ರೆ ಸಣ್ಣಪುಟ್ಟ ಶಿಕ್ಷೆ ಕೊಡುವುದು ಸಹಜ. ಆದರೆ ಅಜ್ಜಿಗೆ ಫೋನ್ ಮಾಡಿದ್ದಾನೆ ಅನ್ನೋ ಕಾರಣಕ್ಕೆ ರಣ ರಾಕ್ಷಸನ ರೀತಿ ವರ್ತಿಸಿದ್ದಾನೆ. ಪುಟ್ಟ ಬಾಲಕ ಅನ್ನೋದನ್ನೂ ನೋಡದೆ ಕಾಲಿನಲ್ಲಿ ಒದ್ದಿದ್ದಾನೆ. ಗುರುಜೀ ತಪ್ಪಾಯ್ತು ಬಿಟ್ಬಿಡಿ ಅಂದ್ರೂ ಕೇಳದೆ ದನಕ್ಕೆ ಬಡಿಯುವ ಹಾಗೆ ಬಡಿದಿದ್ದಾನೆ. ಇನ್ಮುಂದೆ ತಪ್ಪು ಮಾಡಲ್ಲ ಅಂದ್ರೂ ಆತನ ಮನಸ್ಸು ಕರಗಿಲ್ಲ.

8 ತಿಂಗಳ ಹಿಂದಿನ ವಿಡಿಯೋ ವೈರಲ್ ಆಗಿದ್ರಿಂದ ಗೂಂಡಾ ಶಿಕ್ಷಕನನ್ನು ಅರೆಸ್ಟ್ ಮಾಡಲಾಗಿದೆ. ಆರೇಳು ವರ್ಷದ ಬಾಲಕನಿಗೆ ಮನಸೋ ಇಚ್ಛೆ ಬಾರಿಸಿದ್ದಾನೆ. ತನ್ನ ಅಜ್ಜಿಗೆ ಯಾರದ್ದೋ ಮೊಬೈಲ್‌ನಲ್ಲಿ ಫೋನ್ ಮಾಡಿದ್ದಾನೆ ಅನ್ನೋ ಕಾರಣಕ್ಕೆ ವ್ಯಾಘ್ರನಾಗಿದ್ದಾನೆ. ತಾನೂ ಸೂಚಿಸಿದ ವ್ಯಕ್ತಿಯ ಮೊಬೈಲ್‌ನಿಂದ ಮಾತ್ರ ಫೋನ್ ಮಾಡಬೇಕು. ಬೇರೆಯವರಿಂದ ಫೋನ್ ಮಾಡಿಸಿದ್ರೆ ರಣರಾಕ್ಷಸ ಆಗ್ತಾನಂತೆ. ಹೊರಗಿನವರ ಮೊಬೈಲ್‌ನಲ್ಲಿ ತನ್ನ ಅಜ್ಜಿಗೆ ಫೋನ್ ಮಾಡಿದ ಅನ್ನೋ ಒಂದೇ ಕಾರಣಕ್ಕೆ ಯಮಲೋಕದ ನರಕ ತೋರಿಸಿದ್ದಾರೆ. ಈ ಶಾಲೆಯಲ್ಲಿ ಸಂಸ್ಕೃತ ವೇದಾಧ್ಯಾಯನ ಮಾಡ್ತಿದ್ದ. ಈ ಶಾಲೆಗೆ ಸೇರಿದ್ಮೇಲೆ ಆಟ, ಪಾಠ, ಓದು ಎಲ್ಲವೂ ಆಗಿತ್ತು. ಹಲವಾರು ತಿಂಗಳಿಗೊಮ್ಮೆ ಮಾತ್ರ ಊರಿಗೆ ಹೋಗ್ತಿದ್ದ ಬಾಲಕ ಅಜ್ಜಿಯ ನೆನಪಾಗಿ ಫೋನ್ ಮಾಡಿದ್ದ. ಯಾರದ್ದೋ ಮೊಬೈಲ್‌ನಲ್ಲಿ ಅಜ್ಜಿಗೆ ಫೋನ್ ಮಾಡಿ ಮಾತನಾಡಿದ್ದ.. ಈ ವಿಷ್ಯ ಅದೇಗೋ ಮುಖ್ಯ ಶಿಕ್ಷಕ ವೀರೇಶ್ ಹಿರೇಮಠಗೆ ಗೊತ್ತಾಗಿತ್ತು. ಇಷ್ಟಕ್ಕೇ ಕೆರಳಿ ಕೆಂಡವಾದ ಶಿಕ್ಷಕ ರೌದ್ರಾವತಾರ ತೋರಿಸಿದ್ದಾನೆ.
ಸಂಸ್ಕೃತ ವೇದಾಧ್ಯಾಯನ ಶಾಲೆಯಲ್ಲಿ ವೀರೇಶ್ ಹಿರೇಮಠ ಹೇಳಿದ್ದೇ ನಿಯಮ. ಆತ ಆಡಿದ್ದೇ ಆಟ ಎನ್ನುವಂತಾಗಿತ್ತು. ಯಾವುದೇ ಮಕ್ಕಳು ಪೋಷಕರಿಗೆ ಫೋನ್ ಮಾಡ್ಬೇಕು ಅಂದ್ರೆ, ಈತ ಹೇಳಿದ ವ್ಯಕ್ತಿಯ ಮೊಬೈಲ್ಗೆ ಹಣ ಹಾಕಿಸಿ ಫೋನ್ ಮಾಡ್ಬೇಕು ಅಂತ ನಿಯಮ ಮಾಡಿದ್ದ. ಬೇರೆಯವ್ರ ಮೊಬೈಲ್‌ನಲ್ಲಿ ಕಾಲ್ ಮಾಡಿದ್ರೆ ರಣ ರಾಕ್ಷಸನಾಗಿ ಬಿಡ್ತಿದ್ದ. ಇದೇ ಕಾರಣಕ್ಕಾಗಿಯೇ ಬಾಲಕನ ಮೇಲೆ ಮೃಗೀಯ ವರ್ತನೆ ತೋರಿಸಿದ್ದಾನೆ. ಶಿಕ್ಷಕನ ಅಟ್ಟಹಾಸಕ್ಕೆ ನಲುಗಿ ಹೋಗಿದ್ದ ವಿದ್ಯಾರ್ಥಿ ಸಾಯೋದಕ್ಕೆ ಹೋಗಿದ್ದನಂತೆ. ನಾಯಕನಹಟ್ಟಿ ಕೆರೆಗೆ ಬಿದ್ದು ಸಾಯಲು ಮುಂದಾದ ವೇಳೆ ಆಟೋ ಚಾಲಕನೊಬ್ಬ ಬಾಲಕನನ್ನ ರಕ್ಷಣೆ ಮಾಡಿ, ಶಾಲಾ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ರಂತೆ. ಆದರೆ ಹಲ್ಲೆಯ ವಿಡಿಯೋ ವೈರಲ್ ಆದ ಬಳಿಕ ಸ್ಥಳೀಯರು ರೊಚ್ಚಿಗೆದ್ದಿದ್ದಾರೆ. ಶಾಲೆಗೆ ಮುತ್ತಿಗೆ ಹಾಕಿದ ಸ್ಥಳೀಯರು ಹಾಗೂ ಕನ್ನಡ ಪರ ಸಂಘಟನೆಗಳು ಶಿಕ್ಷಕ ವೀರೇಶ್ ವಿರುದ್ಧ ಕ್ರಮ ಕೈಗೊಳ್ಬೇಕು ಅಂತಾ ದೇವಸ್ಥಾನ ಆಡಳಿತ ಮಂಡಳಿ ಇಓ ಗಂಗಾಧರಪ್ಪಗೆ ಕ್ಲಾಸ್ ತೆಗೆದುಕೊಂಡಿದ್ದರು.
ನಾಯಕನಹಟ್ಟಿ ಶಾಲೆಗೆ ಭೇಟಿ ನೀಡಿದ ಚಳ್ಳಕೆರೆ ತಹಶೀಲ್ದಾರ್ ರೆಹಾನ್ ಪಾಷಾ, ಡಿಡಿಪಿಐ ಮಂಜುನಾಥ್ ಘಟನೆ ಬಗ್ಗೆ ಎಲ್ಲಾ ಮಾಹಿತಿ ಸಂಗ್ರಹಿಸಿದ್ರು. ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಕೂಡಾ ಭೇಟಿ ನೀಡ್ತಿದ್ದಂತೆ, ಶಿಕ್ಷಕ ವೀರೇಶ್‌ನನ್ನ ನಾಯಕನಹಟ್ಟಿ ಪೊಲೀಸರು ಬಂಧಿಸಿದ್ದಾರೆ. ವಿಡಿಯೋ ವೈರಲ್ ಆಗ್ತಿದ್ದಂತೆ ನಾವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡೋದನ್ನ ನಾವು ಒಪ್ಪಲ್ಲ. ಶಿಕ್ಷಕ ವೀರೇಶ್ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸ್ತೀನಿ ಎಂದಿದೆ ಶಾಲಾ ಆಡಳಿತ ಮಂಡಳಿ. ಚಿತ್ರದುರ್ಗ ವೇದಾಧ್ಯಯನ ಶಾಲೆ ಮುಜರಾಯಿ ಇಲಾಖೆ ಅಡಿಯಲ್ಲಿ ಬರುತ್ತದೆ. ಹೀಗಾಗಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಕೂಡಾ ಮಾತನಾಡಿ, ಶಿಕ್ಷಕನನ್ನ ಅಮಾನತು ಮಾಡಲು ಸೂಚನೆ ನೀಡಿದ್ದೇನೆ. ಜೊತೆಗೆ ಆಡಳಿತ ಮಂಡಳಿ ಮೇಲೂ ಕ್ರಮ ಕೈಗೊಳ್ತೀವಿ ಎಂದಿದ್ದಾರೆ. ಇದೀಗ ಚಳ್ಳಕೆರೆ ಕೋರ್ಟ್ ಆರೋಪಿ ವೀರೇಶ್‌ನನ್ನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಮಾಡಿದೆ.


