ರಾಜ್ಯದಲ್ಲಿ ರೇಷನ್ ಕಾರ್ಡ್ ನಿಗದಿಗಿಂತ ಹೆಚ್ಚಾಗಿವೆ ಅನ್ನೋ ಕಾರಣಕ್ಕೆ ರಾಜ್ಯ ಸರ್ಕಾರ ರೇಷನ್ ಕಾರ್ಡ್ ರದ್ದು ಮಾಡುವ ಕೆಲಸ ಮಾಡಿತ್ತು. ಸಾಕಷ್ಟು ಜನರ ಕಾರ್ಡ್ ರದ್ದಾಗಿ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ರಾಜ್ಯ ಸರ್ಕಾರ ಮತ್ತೊಂದು ಅಸ್ತ್ರ ಪ್ರಯೋಗ ಮಾಡಿದ್ದು, ಇನ್ಮುಂದೆ 10 ಕೆಜಿ ಅಕ್ಕಿ ನೀಡುವುದಿಲ್ಲ. ಅನ್ನ ಭಾಗ್ಯ ಯೋಜನೆ ಅಡಿ ಐದು ಕೆಜಿ ಅಕ್ಕಿ ಕೊಟ್ಟು ಉಳಿದ 5 ಕೆಜಿ ಅಕ್ಕಿ ಬದಲು ಇಂದಿರಾ ಆಹಾರದ ಕಿಟ್ ವಿತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.
ಪ್ರತಿ ಪಡಿತರ ಚೀಟಿಗೆ ಇಂದಿರಾ ಆಹಾರ ಕಿಟ್ ವಿತರಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಒಂದು ಕೆಜಿ ತೊಗರಿ ಬೇಳೆ, ಒಂದು ಕೆಜಿ ಹೆಸರು ಕಾಳು, ಒಂದು ಲೀಟರ್ ಅಡುಗೆ ಎಣ್ಣೆ, ಒಂದು ಕೆಜಿ ಉಪ್ಪು, ಒಂದು ಕೆಜಿ ಸಕ್ಕರೆ ಇರುವ ಇಂದಿರಾ ಆಹಾರ ಕಿಟ್ ನೀಡಲು ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಒಟ್ಟು 6119.52 ಕೋಟಿ ರೂಪಾಯಿಗಳ ಅಂದಾಜು ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಿಂದ ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಸರ್ಕಾರ ಸಮ್ಮತಿ ಸೂಚಿಸಿದೆ.
ಐದು ಕೆಜಿ ಅಕ್ಕಿ ಬದಲು ಇಂದಿರಾ ಆಹಾರ ಕಿಟ್ ವಿತರಣೆ ಮಾಡುವ ವಿಚಾರವಾಗಿ ವಿಧಾನಸೌಧದಲ್ಲಿ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿ, ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ ಇಂದಿರಾ ಆಹಾರ ಕಿಟ್ ವಿತರಣೆ ಮಾಡಲು ಕ್ಯಾಬಿನೆಟ್ನಲ್ಲಿ ಅನುಮೋದನೆ ನೀಡಲಾಗಿದೆ. ಅನ್ನ ಭಾಗ್ಯ ಯೋಜನೆ ಅಡಿ ಇಂದಿರಾ ಆಹಾರ ಕಿಟ್ ನೀಡುತ್ತೇವೆ. ಆಹಾರ ಕಿಟ್ನಲ್ಲಿ ಪೌಷ್ಟಿಕ ಆಹಾರಗಳ ವಿತರಣೆ ಮಾಡಲು ನಿರ್ಧಾರ ಮಾಡಲಾಗಿದೆ. ರಾಜ್ಯ ಸರ್ಕಾರದ ಪರವಾಗಿ ಕೊಡುತ್ತಿದ್ದ 5 ಕೆಜಿ ಅಕ್ಕಿ ಬದಲು ಆಹಾರ ಧಾನ್ಯದ ಕಿಟ್ ವಿತರಣೆ ಮಾಡುತ್ತೇವೆ. ಕಿಟ್ನಲ್ಲಿ ತೊಗರಿಬೇಳೆ, ಎಣ್ಣೆ, ಉಪ್ಪು, ಸಕ್ಕರೆ ವಿತರಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ ಎಂದಿದ್ದಾರೆ.

ಅನ್ನ ಭಾಗ್ಯ ಯೋಜನೆ ಅಕ್ಕಿ ಕಳ್ಳ ಸಾಗಾಟವಾಗುತ್ತಿದ್ದ ಕಾರಣಕ್ಕೂ ಕಡಿವಾಣ ಹಾಕಲು ಸರ್ಕಾರ ನಿರ್ಧಾರ ಮಾಡಿದ್ದು, ಆಹಾರ ನಾಗರೀಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ. ಒಬ್ಬರು ಇಬ್ಬರು ಮಾತ್ರ ಪಡಿತದಾರರು ಇದ್ರೆ ಅರ್ಧ ಅರ್ಧ ಕೆಜಿ ಇರುವ ಕಿಟ್ ಕೊಡುತ್ತೇವೆ. ಮೂರು ನಾಲ್ಕು ಮಂದಿ ಇದ್ರೆ ಒಂದೊಂದು ಕೆಜಿ ಇರುವ ಕಿಟ್ ನೀಡುತ್ತೇವೆ. ಐದಕ್ಕಿಂತ ಹೆಚ್ಚು ಮಂದಿ ಇದ್ರೆ ಒಂದೂವರೆ ಕೆಜಿ ಇರುವ ಕಿಟ್ ವಿತರಣೆಗೆ ಕ್ರಮಕೈಗೊಳ್ತೇವೆ ಎಂದಿದ್ದಾರೆ. 1 ಕೋಟಿ 26 ಲಕ್ಷದ 15 ಸಾವಿರದ 815 ಪಡಿತರ ಕಾರ್ಡ್‌ಗಳು ಇವೆ. ಅದರಲ್ಲಿ 4 ಕೋಟಿ 48 ಲಕ್ಷದ 62 ಸಾವಿರದ 192 ಮಂದಿ ಅನುಕೂಲ ಪಡೆಯುತ್ತಿದ್ದಾರೆ ಎಂದಿದ್ದಾರೆ.
ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ಇಂದಿರಾ ಕಿಟ್ ಕೊಡುವುದನ್ನು ಟೀಕಿಸಿದ್ದಾರೆ. ರಾಜ್ಯ ಸರ್ಕಾರ ಎರಡೂವರೆ ವರ್ಷದಲ್ಲಿ ಅಭಿವೃದ್ಧಿ ಮಾಡದೆ ಹಳ್ಳ ಹಿಡಿದಿದೆ. ಹಾಗಾಗಿ ಹೊಸತನ್ನ ಹುಡುಕ್ತಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿ ಇದನ್ನು ಹಾಕಬೇಕಿತ್ತು. ಎಣ್ಣೆ, ಬೇಳೆ, ಸಕ್ಕರೆ, ಉಪ್ಪು ಕೊಡ್ತೇವೆ ಅಂತ. 10 ಕೆಜಿ ಕೊಡ್ತೇವೆ ಅಂದಿದ್ರು. ಈಗ ಕೇಂದ್ರದ ಅಕ್ಕಿ ಮಾತ್ರ ಬರ್ತಿದೆ. GBA ಮಾಡ್ತೇವೆ, ಟನಲ್ ಮಾಡ್ತೇವೆ ಅಂತಾರೆ. ಜನರಿಗೆ ಬೇಕಿರೋ ಕೆಲಸ ಮಾಡಬೇಕು. ಇವರು ಅದೆಲ್ಲಾ ಬಿಟ್ಟು, 6 ತಿಂಗಳಿಗೊಮ್ಮೆ ಹೊಸ ತಂತ್ರ ಹುಡುಕುತ್ತಿದ್ದಾರೆ ಎಂದಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ 10 ಕೆಜಿ ಅಕ್ಕಿ ಕೊಡ್ತೇವೆ ಎಂದು ಘೋಷಣೆ ಮಾಡಿತ್ತು. ಆದರೆ ಇದೀಗ 4 ಜನರು ಇರುವ ಕುಟುಂಬಕ್ಕೆ ತಲಾ 10 ಅಕ್ಕಿಯಂತೆ 40 ಕೆಜಿ ಅಕ್ಕಿ ಕೊಡಲಾಗ್ತಿತ್ತು. ಇದೀಗ 20 ಕೆಜಿ ಅಕ್ಕಿಯನ್ನು ಕಡಿತ ಮಾಡಿ, 1 ಕೆಜಿ ತೊಗರಿ ಬೇಳೆ, ಒಂದು ಕೇಜಿ ಸಕ್ಕರೆ, ಒಂದು ಲೀಟರ್ ಎಣ್ಣೆ, ಒಂದು ಕೆಜಿ ಉಪ್ಪು ನೀಡಲಾಗುತ್ತದೆ. ಅಂದರೆ 20 ಕೆಜಿ ಬದಲು ನಾಲ್ಕು ಕೆಜಿ ಇರುವ ಒಂದು ಕಿಟ್ ನೀಡಲಾಗುತ್ತದೆ. 20 ಕೆಜಿ ಮೌಲ್ಯಕ್ಕೆ ಈ ನಾಲ್ಕು ಕೆಜಿ ಸಮಾನವೇ ಅನ್ನೋ ಬಗ್ಗೆ ಇನ್ನಷ್ಟೇ ನಿರ್ಧಾರ ಆಗಬೇಕಿದೆ. ಜನರು ಇದನ್ನು ಹೇಗೆ ಸ್ವೀಕಾರ ಮಾಡ್ತಾರೆ ಅನ್ನೋದನ್ನು ಕಾದು ನೋಡ್ಬೇಕು.


