ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB ಹಾಗೂ CSK ನಡುವೆ ಹಣಾಹಣಿ ನಡೆಯಲಿದೆ. ಯಾವುದೇ ಅನಾಹುತಗಳು ನಡೆಯದಂತೆ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಈ ಕುರಿತು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ಕಳೆದ ಪಂದ್ಯದಂತೆಯೇ ಈ ಪಂದ್ಯಕ್ಕೂ ಟಿಕೆಟ್ ಇದ್ದವರಿಗೆ ಮಾತ್ರ ಎಂಟ್ರಿ ಇರುತ್ತದೆ. ಅನಾವಶ್ಯಕವಾಗಿ ಯಾರು ಕೂಡ ಸ್ಟೇಡಿಯಂ ಸುತ್ತಮುತ್ತ ಓಡಾಡಬೇಡಿ. ಮೆಟ್ರೋದಲ್ಲಿ ಕಳೆದ ಬಾರಿ 15 ಸಾವಿರ ಜನರು ಟಿಕೆಟ್ ಅನ್ವಯ ಬಂದಿದ್ರು. ಹೋಗುವಾಗ 22 ಸಾವಿರ ಪ್ರೇಕ್ಷಕರು ವಾಪಸ್ ಹೋಗಿದ್ರು. ಈ ಬಾರಿಯೂ ಅದೇ ರೀತಿಯಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

M. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ RCB ಮತ್ತು CSK ನಡುವಿನ ಐಪಿಎಲ್ ಪಂದ್ಯಕ್ಕೆ ಈಗಾಗಲೇ ಸಿಲಿಕಾನ್ ಸಿಟಿ ಸಜ್ಜಾಗಿದೆ. ಪಂದ್ಯದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಟೇಡಿಯಂ ಸುತ್ತಮುತ್ತ ಪೊಲೀಸ್ರು ಬಂದೋಬಸ್ತ್ ಮಾಡಿದ್ದಾರೆ. ಈ ಬಾರಿಯೂ ಟಿಕೆಟ್ ಇದ್ದವ್ರಿಗೆ ಮಾತ್ರ ಎಂಟ್ರಿ ಇರಲಿದೆ. ಕಳೆದ ಬಾರಿ RCB ವರ್ಸಸ್ SRH ಪಂದ್ಯದ ವೇಳೆ ಮೊಬೈಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಒಟ್ಟು 51 ಮೊಬೈಲ್ಗಳನ್ನ ಪೊಲೀಸ್ರು ಜಪ್ತಿ ಮಾಡಿದ್ದಾರೆ. ಜಾರ್ಖಂಡ್ ಮೂಲದ 18 ಮಂದಿ ಅಪ್ರಾಪ್ತ ಬಾಲಕರಿಂದ ಫೋನ್ಗಳನ್ನ ಸೀಜ್ ಮಾಡಿದ್ದು, ಕಳ್ಳತನದ ಮಾಸ್ಟರ್ ಮೈಂಡ್ ಶುಭಮ್ ಎಂಬಾತನನ್ನು ಕಬ್ಬನ್ ಪಾರ್ಕ್ ಪೊಲೀಸ್ರು ಬಂಧಿಸಿದ್ದಾರೆ.

RCB ಅಭಿಮಾನಿಗಳ ಅಭಿಮಾನವನ್ನೇ ಕೆಲವು ಖದೀಮರು ಬಂಡವಾಳ ಮಾಡಿಕೊಂಡಿದ್ದಾರೆ. ಟಿಕೆಟ್ ಬುಕ್ಕಿಂಗ್ ನೆಪದಲ್ಲಿ ವಂಚಿಸುವ ಕೆಲಸ ಮಾಡಿದ್ದಾರೆ. IPL Dhamaka Sale ಎಂಬ ನಕಲಿ ಅಕೌಂಟ್ ಕ್ರಿಯೇಟ್ ಮಾಡಿ ವಂಚನೆ ಮಾಡಲಾಗ್ತಿದೆ. RCB vs CSK ಮ್ಯಾಚ್ ಟಿಕೆಟ್ ಬುಕ್ಕಿಂಗ್ ನೆಪದಲ್ಲಿ ಫೇಸ್‌ಬುಕ್‌ನಲ್ಲಿ RCB vs CSK ಮ್ಯಾಚ್ ಟಿಕೆಟ್ ಲಭ್ಯವಿದೆ ಅಂತಾ ಲಿಂಕ್ ಕಳುಹಿಸುವ ಕೆಲಸ ಮಾಡ್ತಿದ್ದಾರೆ. ಲಿಂಕ್ ಓಪನ್ ಮಾಡಿ ಟಿಕೆಟ್ ಬುಕ್ಕಿಂಗ್ ಮಾಡುತ್ತಿದ್ದಂತೆ ಹಣ ಕಡಿತವಾಗಲಿದೆ. ಆದ್ರೆ ಟಿಕೆಟ್ ಮಾತ್ರ ಸಿಗುವುದಿಲ್ಲ. ಈ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಕೊಂಡಿದ್ದಾರೆ. FACEBOOK ಸಂಸ್ಥೆಗೂ ನಕಲಿ ವೆಬ್‌ಸೈಟ್ ಡಿಲೀಟ್ ಮಾಡಲು ಮನವಿ ಮಾಡಲಾಗಿದೆ. ಅಷ್ಟರಲ್ಲಿ ಈಗಾಗಲೇ ಹಲವು ಮಂದಿಗೆ ವಂಚಿಸಲಾಗಿದೆ. ಟಿಕೆಟ್ ವಿಚಾರದಲ್ಲಿ ಯಾರೂ ಹಣ ಕಳೆದುಕೊಳ್ಳಬಾರದು ಎಂದು ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಡಿಸಿಪಿ ಎಂ ನಾರಾಯಣ್ ಮನವಿ ಮಾಡಿದ್ದಾರೆ.
ವಿಧಾನಸೌಧದ ಸ್ಪೀಕರ್ ಕಚೇರಿಯಲ್ಲಿ ಶಾಸಕರು IPL ಟಿಕೆಟ್‌ಗಾಗಿ ಸಾಲುಗಟ್ಟಿ ನಿಲ್ಲುವ ಕೆಲಸ ಮಾಡಿದ್ದಾರೆ. ತಮ್ಮ ಆಪ್ತ ಸಹಾಯಕರನ್ನು ಕಳುಹಿಸಿ ಟಿಕೆಟ್ ಪಡೆದುಕೊಂಡಿದ್ದಾರೆ. ವಿಧಾನಸಭಾ ಸದಸ್ಯರು ಹಾಗೂ ಪರಿಷತ್ ಸದಸ್ಯರಿಗೆ ತಲಾ 3 IPL ಟಿಕೆಟ್ ನೀಡಲಾಗಿದೆ. ಎಲ್ಲಾ ಶಾಸಕರು ಹಾಗೂ ಪರಿಷತ್ ಸದಸ್ಯರು ಟಿಕೆಟ್ ಪಡೆದುಕೊಂಡಿದ್ದು, ಕೇವಲ ಮೂವರು ಶಾಸಕರು ನಮಗೆ IPL ಟಿಕೆಟ್ ಬೇಡ ಎಂದು ನಿರಾಕರಣೆ ಮಾಡಿದ್ದಾರೆ. ತಮಗೆ ಟಿಕೆಟ್ ಬೇಡ ಅನ್ನೋದ್ರ ಜೊತೆಗೆ ತಮ್ಮ ಹೆಸರಿನಲ್ಲಿ ಯಾರಿಗೂ ಟಿಕೆಟ್ ಕೊಡಬೇಡಿ ಅಂತಾನೂ ತಿಳಿಸಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್, ಸುರೇಶ್ ಕುಮಾರ್, ರವಿಸುಬ್ರಹ್ಮಣ್ಯ ಟಿಕೆಟ್ ನಿರಾಕರಣೆ ಮಾಡಿದ್ದಾರೆ.

ಐಪಿಎಲ್ ಟಿಕೆಟ್‌ಗಾಗಿ ಶಾಸಕರ ಪಿಎಗಳ ಕ್ಯೂ ವಿಚಾರವಾಗಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಈ ದೇಶದ ದೌರ್ಭಾಗ್ಯ ಎಂದಿರುವ ನಾರಾಯಣಗೌಡ, ಒಂದು ಕಡೆ ಉಳ್ಳವರು IPL ಟಿಕೆಟ್‌ಗಾಗಿ ಕ್ಯೂ ನಿಂತಿದ್ದಾರೆ. ಇನ್ನೊಂದು ಕಡೆ ಬಡವರು ಹೊತ್ತಿನ ಊಟಕ್ಕಾಗಿ ಕ್ಯೂ ನಿಂತಿದ್ದಾರೆ. ಗ್ಯಾಸ್ ಇಲ್ಲ ಅಂತಾ ಆಟೋ ಚಾಲಕರು ರಾತ್ರಿಯಿಡೀ ಬೀದಿಯಲ್ಲಿ ನಿಂತಿದ್ದಾರೆ. ಅದೇ ಶ್ರೀಮಂತರು ತಮ್ಮ ಮಕ್ಕಳು, ಮನೆಯವರಿಗೆ ಟಿಕೆಟ್ ಬೇಕು ಅಂತಾ ನಿಂತಿದ್ದಾರೆ. ಶಾಸಕರುಗಳು ನಾಚಿಕೆಯಿಲ್ಲದೆ ಟಿಕೆಟ್‌ಗಾಗಿ ಕ್ಯೂ ನಿಲ್ಲಿಸಿದ್ದಾರೆ ಎಂದು ಕರವೇ ನಾರಾಯಣ ಗೌಡ ಕಿಡಿಕಾರಿದ್ದಾರೆ. ಐಪಿಎಲ್ ಟಿಕೆಟ್ ವಿಚಾರವಾಗಿ ಕುಮಾರಸ್ವಾಮಿ ದಾವಣಗೆರೆಯಲ್ಲಿ ಮಾತನಾಡಿ ಐಪಿಎಲ್ ವಿಷಯದಲ್ಲಿ ಸರಕಾರ ನಗೆಪಾಟಲು ಮಾಡಿಕೊಂಡಿದೆ. ಉಪ ಮುಖ್ಯಮಂತ್ರಿಯಿಂದ ಹಿಡಿದು, ಕೆಲವು ಶಾಸಕರುಗಳು ವಿಧಾನಸೌಧದಲ್ಲಿ ಈ ವಿಚಾರ ಮಾತಾಡಿ ನಗಪಾಟಲು ಮಾಡಿಕೊಂಡಿದ್ದಾರೆ. ಈ ಮೊದಲ ಶಾಸಕರನ್ನು ಹುಡುಕಿಕೊಂಡು ಬಂದು ಟಿಕೆಟ್ ಕೊಡ್ತಿದ್ರು ಎಂದು ನೆನಪಿಸಿಕೊಂಡಿದ್ದಾರೆ.


