ಬೆಂಗಳೂರಿನಲ್ಲಿ ಕೆಲವರು ಸರ್ಕಾರಿ ಭೂಮಿಯನ್ನು ಕಬಳಿಸಲು ಸಾಕಷ್ಟು ಪ್ರಯತ್ನ ಮಾಡ್ತಾರೆ. ಅದೇ ರೀತಿ ಕೆಲವರು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದ್ದನ್ನು ತೆರವು ಮಾಡಿಸಲು ಕೆಲಸ ಮಾಡ್ತಾರೆ. ಈ ಪ್ರಕರಣದಲ್ಲೂ ಅದೇ ರೀತಿಯ ಘಟನೆಗಳು ನಡೆದಿದ್ದು, ಒಬ್ಬರು ಜಾತಿ ಹಾಗೂ ಪ್ರಭಾವ ಬಳಸಿ ಸರ್ಕಾರಿ ಭೂಮಿ ಕಬಳಿಸಿದ್ರೆ, ಗ್ರಾಮಸ್ಥರೆಲ್ಲಾ ಸೇರಿಕೊಂಡು ಸರ್ಕಾರಿ ಭೂಮಿ ಉಳಿಸುವ ಸಲುವಾಗಿ ಹೈಕೋರ್ಟ್ನಲ್ಲಿ ಹೋರಾಡಿ ಜಯ ಸಾಧಿಸಿದ್ದಾರೆ. ಗ್ರಾಮಸ್ಥರ ವಾದವನ್ನು ಮಾನ್ಯ ಮಾಡಿರುವ ಘನ ಉಚ್ಚ ನ್ಯಾಯಾಲಯ ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡಲು ಆದೇಶ ಮಾಡಿದೆ.

ಬೆಂಗಳೂರಿನ ತಿರುಪಾಳ್ಯದಲ್ಲಿ ಸುಮಾರು 2 ಎಕರೆಯಷ್ಟು ಸರ್ಕಾರಿ ಭೂಮಿ (ಸರ್ವೇ ನಂಬರ್ 2/15) ಅಕ್ರಮವಾಗಿ ಒತ್ತುವರಿ ಮಾಡಿಕೊಂಡ ಆರೋಪ ಟಿ ಕೃಷ್ಣ ಎಂಬಾತನ ಮೇಲೆ ಕೇಳಿ ಬಂದಿತ್ತು. ಗ್ರಾಮಸ್ಥರಾದ ಸಂಪಂಗಿ ರೆಡ್ಡಿ, ಮಂಜುನಾಥ್ ಹಾಗೂ ಇತರರು ಒಟ್ಟಾಗಿ ಸೇರಿ ಕರ್ನಾಟಕ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ಸ್ಪಷ್ಟವಾದ ಆದೇಶ ಮಾಡಿದ್ದು, ಕೂಡಲೇ ಒತ್ತುವರಿ ತೆರವು ಮಾಡುವಂತೆ ಸಂಬಂಧಪಟ್ಟ ತಹಶೀಲ್ದಾರ್ಗೆ ಸೂಚನೆ ಕೊಟ್ಟಿದೆ.

ಟಿ.ಕೃಷ್ಣ ಎಂಬಾತ ಸೂರ್ಯೋದಯ ಟ್ರಸ್ಟ್ ಹೆಸರಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು, ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಿ ಸ್ವತ್ತನ್ನು ತನ್ನ ಸ್ವತ್ತು ಎಂದು ವಿವಿಧ ಇಲಾಖೆಗಳ ಎದುರು ತೋರ್ಪಡಿಸಿದ್ದಾನೆ. ಈತ ಸ್ಥಳೀಯವಾಗಿ ಪ್ರಭಾವಿಯಾಗಿದ್ದು, ಕಾನೂನು ಮೀರಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು, ಕೋರ್ಟ್ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೂ ಸುಳ್ಳು ಮಾಹಿತಿ ಕೊಟ್ಟಿರುವುದು ಇದೀಗ ಸಾಬೀತಾಗಿದೆ. ಗ್ರಾಮಸ್ಥರು ಸರ್ಕಾರಿ ಭೂಮಿ ತೆರವು ಮಾಡಿಸುವಂತೆ ಸರ್ಕಾರ ಹಾಗೂ ಕೋರ್ಟ್ ಮೊರೆ ಹೋದಾಗ, ನಾನು ಪರಿಶಿಷ್ಟ ಜಾತಿಗೆ ಸೇರಿದ್ದು, ನಿಂದನೆ ಮಾಡಿದ್ದಾರೆ ಎನ್ನುವ ಸುಳ್ಳು ಆರೋಪ ಮಾಡಿ ಜಾತಿ ನಿಂದನೆ ಕೇಸ್ ಕೂಡ ಹಾಕಿದ್ದನು. ಇದೀಗ ಆ ಕೇಸ್ಗಳೂ ಕೂಡ ಕೋರ್ಟ್ನಲ್ಲಿ ವಜಾ ಆಗಿವೆ.
ದೂರುದಾರರಾದ ಗ್ರಾಮಸ್ಥರಿಗೆ ಮಾಜಿ ಅಡ್ವೊಕೇಟ್ ಜನರಲ್ ಒಬ್ಬರು ಒತ್ತಡ ಹೇರಿದ್ದು, ಈ ಕೇಸ್ನಿಂದ ದೂರ ಇದ್ದರೆ ಒಳಿತು ಎಂದು ಬೆದರಿಸಿದ್ದಾರೆ ಎನ್ನುವುದು ಗ್ರಾಮಸ್ಥರ ಆರೋಪ. 1994 ರಿಂದ ಭೂ ಒತ್ತುವರಿ ಕಾನೂನು ಸಂಘರ್ಷ ನಡೆಯುತ್ತಿದ್ದು, ಇದೀಗ 2023ರಲ್ಲಿ PIL ಮುಖಾಂತರ (WP 20413 / 2023) ಗ್ರಾಮಸ್ಥರು ಹೈಕೋರ್ಟ್ ಮೊರೆ ಹೋಗಿದ್ದರು. ಯುವ ವಕೀಲ ಶುಭಂಕರ್ ಸಿ, 2025ರಲ್ಲಿ ಹೈಕೋರ್ಟ್ನಲ್ಲಿ ಕೇಸ್ ಮುನ್ನಡೆಸಿ ಸರ್ಕಾರಿ ಜಮೀನು ಉಳಿಸುವ ಗ್ರಾಮಸ್ಥರ ಪರವಾಗಿ ಆದೇಶ ಪಡೆದಿದ್ದಾರೆ. ಆನೇಕಲ್ ತಹಶೀಲ್ದಾರ್ ಶಶಿಧರ್ ಮಾರ್ಡಿಯಾಳ್ ಹೈಕೋರ್ಟ್ ಆದೇಶವನ್ನು ಜವಾಬ್ದಾರಿಯುತವಾಗಿ, ಯಾವುದೇ ಒತ್ತಡಕ್ಕೆ ಮಣಿಯದೆ ಕ್ರಮ ಕೈಗೊಳ್ಳಬೇಕಿದೆ.

ಈ ಬಗ್ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಗದೀಶ್ ಅವರನ್ನೂ ಗ್ರಾಮಸ್ಥರು ಹಾಗೂ ವಕೀಲರು ಭೇಟಿ ಮಾಡಿ ಮನವಿ ಮಾಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಟಿ ಕೃಷ್ಣ ಮೇಲೆ ರೌಡಿಶೀಟ್ ಇರುವುದಾಗಿಯೂ ಗ್ರಾಮಸ್ಥರು ಆರೋಪಿಸಿದ್ದು, ವಕೀಲರುಗಳು ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಅವರಿಗೆ ಭದ್ರತೆಗಾಗಿ ಮನವಿ ಪತ್ರ ನೀಡಿದ್ದಾರೆ. ಸ್ಥಳೀಯ ಎಸಿಪಿ, ಡಿಸಿಪಿ ಗಮನಕ್ಕೂ ತಂದಿದ್ದಾರೆ. ಈ ಸರ್ಕಾರಿ ಭೂಮಿಯನ್ನು ಆದಷ್ಟು ಬೇಗ ಒತ್ತುವರಿ ತೆರವು ಮಾಡಬೇಕಿದೆ. ಶಾಲೆ ಇದ್ದರೆ ಬಾರ್ ತೆರೆಯಲು ಅವಕಾಶ ಆಗುವುದಿಲ್ಲ ಎನ್ನುವ ಕಾರಣಕ್ಕೆ ಬಾರ್ ಮಾಫಿಯಾ ಕೆಲಸ ಮಾಡುತ್ತಿದೆ ಎನ್ನುವ ಕೃಷ್ಣ ಅವರು ಮತ್ತೊಂದು ಕೇಸ್ ದಾಖಲಿಸಿ ಬಾರ್ ಮಾಫಿಯ ವಿರುದ್ಧ ಹೋರಾಟ ಮಾಡುವ ಅವಕಾಶವಿದೆ.



