The Public Spot
ದೇಶ-ವಿದೇಶ

ದೇಶಾದ್ಯಂತ CJP ಹೋರಾಟ ಅಂತ್ಯ.. ಎಲ್ಲಾ ಬೇಡಿಕೆಗಳಿಗೂ ಮೋದಿ ಸರ್ಕಾರ ಒಪ್ಪಿಗೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಕೊನೆಗೂ ರಾಜೀನಾಮೆ ನೀಡಿದ್ದಾರೆ. ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ವಿದ್ಯಾರ್ಥಿಗಳ ನಿರಂತರ ಪ್ರತಿಭಟನೆಗೆ ಕೇಂದ್ರ ಸರ್ಕಾರ ಕೊನೆಗೂ ಮಣಿದಿದೆ. ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. CJP ಜೊತೆಗಿನ 3ನೇ ಸುತ್ತಿನ ಮಾತುಕತೆಗೂ ಮುನ್ನವೇ ರಾಜೀನಾಮೆ ಸಲ್ಲಿಸಿದ್ದಾರೆ. ಕಳೆದ 10 ದಿನಗಳಿಂದ ನಾನು ತುಂಬಾ ದುಃಖಿತನಾಗಿದ್ದೆ. ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಹೊಣೆ ಹೊತ್ತು ರಾಜೀನಾಮೆ ನೀಡಿದ್ದೇನೆ. ಜವಾಬ್ದಾರಿಯಿಂದ ನಾನು ಯಾವತ್ತೂ ಹಿಂದೆ ಸರಿದಿಲ್ಲ ಅಂತ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ.

ಮೋದಿ ಆಡಳಿತದಲ್ಲಿ ಜನಸೇವೆಗೆ ಅವಕಾಶ ಸಿಕ್ಕಿದ್ದಕ್ಕೆ ಕೃತಜ್ಞತೆ ಇದೆ ಅಂತ ಧರ್ಮೇಂದ್ರ ಪ್ರಧಾನ್​ ತಿಳಿಸಿದ್ದಾರೆ. ರಾಜೀನಾಮೆ ಪತ್ರದಲ್ಲಿ ಹಲವು ವಿಚಾರಗಳನ್ನ ಉಲ್ಲೇಖಿಸಿರುವ ಪ್ರಧಾನ್‌, 2026ರ ಮೇ 3ರಂದು ನಿಗದಿಯಾಗಿದ್ದ NEET ಪರೀಕ್ಷೆಯಲ್ಲಿ ಅಕ್ರಮಗಳು ಆಗಿದ್ದವು. ಸರ್ಕಾರ ತಕ್ಷಣ ಕ್ರಮ ಕೈಗೊಂಡು ತನಿಖೆಯನ್ನು ಸಿಬಿಐಗೆ ನೀಡಿತ್ತು. ನಾನು ಪ್ರಜಾಪ್ರಭುತ್ವದ ಶಕ್ತಿಯ ಮೇಲೆ ಅಚಲ ವಿಶ್ವಾಸವಿಟ್ಟಿದ್ದೇನೆ. ಯುವಜನರ ಆಶಯಗಳು, ನಿರೀಕ್ಷೆಗಳಿಗೆ ಸದಾ ಗೌರವ ನೀಡಿದ್ದೇನೆ. ಕಳೆದ 10 ದಿನಗಳ ಬೆಳವಣಿಗೆ ನೋಡಿ ನನಗೆ ತುಂಬಾ ದುಃಖವಾಗಿದೆ. ಭಾರತದ ಯುವಶಕ್ತಿಯೇ ಈ ದೇಶದ ನಿಜವಾದ ಬಲ. ಯುವಕರನ್ನ ಸಂಚಿನ ಬಲೆಗೆ ಬೀಳಲು ಬಿಡಲ್ಲ. ಇದು ನನ್ನ ಸಂಕಲ್ಪ. ದೇಶದ ಏಕತೆ ಅಚಲವಾಗಿರಬೇಕು. ವಿದ್ಯಾರ್ಥಿಗಳ ಭವಿಷ್ಯವೂ ಕಾನೂನು ಪ್ರಕ್ರಿಯೆಗಳಲ್ಲಿ ಸಿಲುಕಬಾರದು.. ದೇಶವನ್ನು ಒಗ್ಗೂಡಿಸಿ, ಬಲಿಷ್ಠವಾಗಿಸಲು ಒಟ್ಟಾಗಿ ಕೆಲಸ ಮಾಡಬೇಕು. ಇದೇ ವಿಚಾರವನ್ನು ನಮ್ಮ ಪ್ರಧಾನ ಮಂತ್ರಿ ತಿಳಿಸಿದ್ದಾರೆ. ಪ್ರಧಾನಿಗಳ ವಿಶ್ವಾಸ ಮತ್ತು ನಿರಂತರ ಸಹಕಾರಕ್ಕಾಗಿ ಕೃತಜ್ಞತೆಗಳು ಅಂತ ಹೇಳಿದ್ದಾರೆ.

ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಸಿಜೆಪಿ ಸಂತಸ ವ್ಯಕ್ತಪಡಿಸಿದೆ.. ಹೋರಾಟದಲ್ಲಿ ನಾವು ಗೆದ್ದಿದ್ದೇವೆ ಅಂತ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಹೇಳಿದ್ದಾರೆ. ದೆಹಲಿಯ ಜಂತರ್​ ಮಂತರ್​ನಲ್ಲಿ ವಿದ್ಯಾರ್ಥಿಗಳು ವಿಜಯೋತ್ಸವ ಆಚರಿಸಿದ್ದಾರೆ.. ಅಭಿಜಿತ್ ದೀಪ್ಕೆ ಕಣ್ಣೀರು ಹಾಕಿ ಸಂತಸ ವ್ಯಕ್ತಪಡಿಸಿದ್ದಾರೆ. ಅಂಬೇಡ್ಕರ್ ಭಾವಚಿತ್ರ ಹಿಡಿದು ಹೋರಾಟಕ್ಕೆ ಜಯ ಸಿಕ್ಕಿದೆ ಅಂತ ಸಂಭ್ರಮಿಸಿದ್ದಾರೆ.

ಯುವಜನತೆ ಹೋರಾಟಕ್ಕೆ ಸೋನಮ್​ ವಾಂಗ್​ಚುಕ್ ಶ್ಲಾಘಿಸಿದ್ದಾರೆ. ಇದು ಬೀದಿಗಳಿಂದ ನೇರವಾಗಿ ಧ್ವನಿಸಿದ ಪ್ರಜಾಪ್ರಭುತ್ವದ ವಿಜಯ. ಶಾಂತಿ, ಸಮಾಧಾನ ಮತ್ತು ನಿರಂತರ ಶ್ರಮಕ್ಕೆ ಸಿಕ್ಕ ಪ್ರತಿಫಲ ಅಂತ ಎಕ್ಸ್​ನಲ್ಲಿ ಪೋಸ್ಟ್​ ಮಾಡಿ, ದೇಶದ ಪ್ರಜೆಗಳನ್ನು ಹಾಗೂ ಯುವಜನತೆಯನ್ನು ಶ್ಲಾಘಿಸಿದ್ದಾರೆ. ಭಯವನ್ನು ಬದಿಗೊತ್ತಿ ದೇಶದ ಮೂಲೆ ಮೂಲೆಯಿಂದ ಎದ್ದು ನಿಂತು ಹೋರಾಡಿದ ಸಿಜೆಪಿ ಹಾಗೂ ನಾಗರಿಕರಿಗೆ ಅಭಿನಂದನೆಗಳು. ಪಾರದರ್ಶಕತೆಗಾಗಿ ನಡೆದ ಈ ಹೋರಾಟವು ಸಫಲವಾಗಿದ್ದು, ಇನ್ಮುಂದೆ ವ್ಯವಸ್ಥೆಯ ಸಮಗ್ರ ಸುಧಾರಣೆಗಳತ್ತ ಗಮನಹರಿಸಬೇಕಿದೆ ಎಂದು ಕರೆ ನೀಡಿದ್ದಾರೆ..

ಆ ಬಳಿಕ ಸಿಜೆಪಿ ನಾಯಕರ ಜೊತೆಗೆ 3ನೇ ಸುತ್ತಿನ ಸಭೆ ನಡೆಸಿದ ಕೇಂದ್ರ ಸಚಿವರಾದ ಜೆ.ಪಿ ನಡ್ಡಾ ಹಾಗೂ ಜಿತೇಂದ್ರ ಸಿಂಗ್‌ ಕಾಕ್ರೋಚ್‌ ಪಾರ್ಟಿ ಮುಂದಿಟ್ಟ ಎಲ್ಲಾ ಬೇಡಿಕೆಗಳನ್ನು ಒಪ್ಪಿಕೊಂಡಿದೆ. ನೀಟ್‌ ವಿಚಾರದಲ್ಲಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ 1 ಕೋಟಿ ನೆರವು ನೀಡಬೇಕು ಎಂದು ಬೇಡಿಕೆ ಇಡಲಾಗಿತ್ತು. ಆದರೆ 1 ಕೋಟಿ ಅನ್ನೋದನ್ನು ಖಚಿತಪಡಿಸಿಲ್ಲ. ಆದರೆ ಕಾನೂನು ಪ್ರಕಾರ ಸೂಕ್ತ ಪರಿಹಾರ ಕೊಡುತ್ತೇವೆ ಎನ್ನುವುದನ್ನು ಒಪ್ಪಿದೆ. ಇನ್ನು ಪ್ರತಿಭಟನಾಕಾರರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಒಪ್ಪಿದೆ. ಹೀಗಾಗಿ ಜಂತರ್ ಮಂತರ ಸೇರಿದಂತೆ ದೇಶಾದ್ಯಂತ ಪ್ರತಿಭಟನೆ ಕೈಬಿಡಲಾಗಿದೆ.

Related posts

Central Budget; ಕೇಂದ್ರ ಸರ್ಕಾರದ ಬಜೆಟ್​ನಲ್ಲಿ ಏನಿದೆ ವಿಶೇಷತೆ..?

Publicspot

Sugar Rate hike; ಸಕ್ಕರೆ MSP ದರ ಹೆಚ್ಚಳಕ್ಕೆ ಕೇಂದ್ರದ ಚಿಂತನೆ.. ಯಾರಿಗೆ ಲಾಭ..?

Publicspot

ರಾಹುಲ್‌ ಗಾಂಧಿಗೆ ಚುನಾವಣಾ ಆಯೋಗದಿಂದ ನೋಟಿಸ್‌..! ಕಾರಣ ಏನು..?

Publicspot

ತಮಿಳರ ಮನ ಗೆದ್ದ ವಿಜಯ್‌ ಕೊಟ್ಟ ಮಾತು ಉಳಿಸಿಕೊಳ್ತಾರಾ..?

Publicspot

ಇರಾನ್‌ ಶರಣಾಗುತ್ತೆ ಎಂದಿದ್ದ ಅಮೆರಿಕಕ್ಕೆ ಡಿಚ್ಚಿ.. ಇಸ್ರೇಲ್‌ ಪ್ರಧಾನಿ ಹತ್ಯೆ ಪ್ರತಿಜ್ಞೆ

Publicspot

ಲೋಕಸಭೆಯಲ್ಲಿ ಪ್ರಧಾನಿ ಮೇಲೆ ಹಲ್ಲೆಗೆ ನಡೆದಿತ್ತಾ ಪ್ಲಾನ್..? ಮೋದಿ ಗೈರಿಗೆ ಕಾರಣ ಇದೆನಾ..?

Publicspot