The Public Spot
ಅಂಕಣ

ಧರ್ಮಸ್ಥಳ ರಹಸ್ಯ ಮತ್ತುಆಡಳಿತ ಮಂಡಳಿ ಆಕ್ರೋಶ.. ರಾಜಕಾರಣದ ನೆರಳು..

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ, ನನ್ನ ಮೇಲೆ ಒತ್ತಡ ಹೇರಿ ಸಾಕಷ್ಟು ಕಾನೂನು ಬಾಹಿರ ಕೆಲಸಗಳನ್ನು ಮಾಡಿಸಲಾಯ್ತು ಎಂದು ಅನಾಮಿಕ ವ್ಯಕ್ತಿಯೊಬ್ಬ ಮೊದಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೇಟಿ ಮಾಡಿದ ಬಳಿಕ ಕೋರ್ಟ್‌ನಲ್ಲಿ ನ್ಯಾಯಾಧೀಶರ ಎದುರಲ್ಲಿ ತನ್ನ ಹೇಳಿಕೆ ದಾಖಲು ಮಾಡಿದ್ದಾನೆ. ಆತ ಹೇಳುತ್ತಿರುವುದು ಸತ್ಯ, ನಾವು ಎಲ್ಲಾ ದಾಖಲಾತಿ ಮಾಡಿ ಕೆಲಸಗಾರರನ್ನು ಬಳಸಿಕೊಂಡು ಹೆಣ ಹೂಳಿಸುವ ಕೆಲಸ ಮಾಡಿದ್ದೇವೆ. ಎಲ್ಲದ್ದಕ್ಕೂ ದಾಖಲೆಗಳಿವೆ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷರೇ ಹೇಳಿದ್ದರು. ಹೀಗಿದ್ದ ಮೇಲೇ ಆತಂಕ ಯಾಕೆ..? ರಾಜಕಾರಣ ಶುರು ಆಗುತ್ತಿರುವುದು ಯಾಕೆ..? ಬಿಜೆಪಿ ನಾಯಕರು ಮನಸ್ಸಿಗೆ ಬಂದಂತೆ ಮಾತನಾಡುತ್ತಿರುವುದು ಯಾಕೆ..? ಅನ್ನೋ ಗೊಂದಲ ಸಾಮಾನ್ಯರಲ್ಲಿ ಮೂಡುತ್ತಿದೆ.

ಧರ್ಮಸ್ಥಳದಲ್ಲಿ SIT ತನಿಖೆ ನಡೆಯುತ್ತಿರುವ ವಿಚಾರವಾಗಿ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದ್ದಾರೆ. ಇಡೀ ಧರ್ಮಸ್ಥಳವನ್ನು ಟಾರ್ಗೆಟ್ ಮಾಡ್ತಿದ್ದಾರೆ. ಅಲ್ಲಿ SDPI ಅವರಿಗೆ ಏನು ಕೆಲಸ ಇದೆ..? ಅವರು ಪ್ರತಿಭಟನೆ ಮಾಡ್ತಾರೆ. ಅವರು ಯಾರು ? ದೇಶ ದ್ರೋಹಿಗಳು.. ಅಲ್ಲಿ ಏನೂ ಸಿಕ್ಕಿಲ್ಲ, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರನ್ನ ಒಂದು ರೀತಿ ಅಪಮಾನ ಮಾಡಬೇಕು. ಹಿಂದೂ ಧರ್ಮದ ದೇವಸ್ಥಾನಗಳನ್ನ ಟಾರ್ಗೆಟ್ ಮಾಡ್ತಿದ್ದಾರೆ. ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಾಡಿದ್ರು, ಶನಿ ಸಿಂಗ್ಣಾಪುರದಲ್ಲಿ ಮಾಡಿದ್ರು, ಇವತ್ತು ಧರ್ಮಸ್ಥಳ, ನಾಳೆ ವೀರಭದ್ರೇಶ್ವರ ಅಂತಾ ಬರ್ತಾರೆ. ವೆಂಕಟೇಶ್ವರನದ್ದು ಈಗಾಗಲೇ ಮುಗಿದಿದೆ, ಅಲ್ಲಿಯೂ ಹುಂಡಿಯೊಳಗೆ ಏನೋ ಹಾಕಿದ್ದಾರೆ ಅಂತ ಬಂದಿತ್ತಲ್ಲ ಎಂದಿದ್ದಾರೆ.

ಒಟ್ಟಾರೆ ಈ ದೇಶದಲ್ಲಿ ಕಮ್ಯುನಿಸ್ಟರು, ಕಮ್ಯುನಿಸ್ಟರಿಗೆ ಬೆಂಬಲ ಕೊಡುವ ಈ ರಾಜ್ಯದ ದುರ್ದೈವದ ಮುಖ್ಯಮಂತ್ರಿ ಸಿದ್ದರಾಮಯ್ಯ. ಸಿದ್ದರಾಮಯ್ಯ ಕೃಪಾ ಪೋಷಿತ SIT ಎಂದು ಯತ್ನಾಳ್‌ ಟೀಕಿಸಿದ್ದಾರೆ. ಆ SIT ಅವರಿಗೆ ಅಲ್ಲಿ ಏನೂ ಸಿಗುತ್ತಿಲ್ಲ. ಅವನು ಯಾವನೋ ಒಬ್ಬ ಮುಖವಾಡದ ಲೋಪರ್ ಸೂ… ಮಗನ ಮಾತುಕೇಳಿ, SIT ನೇಮಿಸಿ, ಐಜಿಪಿ ಲೇವಲ್‌ ಅಧಿಕಾರಿ ಅಲ್ಲಿ ಕುಳಿತು, ಅಲ್ಲಿ ಹಿಂದುಗಳನ್ನ ಅಪಮಾನ ಮಾಡೋದು ನಡೀತಿದೆ ಎಂದಿದ್ದಾರೆ. ಒಟ್ಟಾರೆ ಈ ದೇಶದಲ್ಲಿ ಹಿಂದುಗಳ ಟಾರ್ಗೆಟ್ ಆಗ್ತಿದೆ. ನರೇಂದ್ರ ಮೋದಿಯವರು, ಯೋಗಿ ಆದಿತ್ಯನಾಥ್ ಅವರು ಇದ್ದಾರೆ ಅಂತ ಹಿಂದೂಗಳು ಸುಮ್ಮನೆ ಇದ್ದಾರೆ. ಕರ್ನಾಟಕದಲ್ಲಂತೂ ಸಾಬರ ಪಾರ್ಟಿ ಇದೆ. ಸಾಬರ ಸರ್ಕಾರ ಎಂದು ಯತ್ನಾಳ್‌ ಕಿಡಿಕಾರಿದ್ದಾರೆ.

ಆಗಸ್ಟ್‌ 16ರಂದು BJP ಶಾಸಕ ಎಸ್‌.ಆರ್‌ ವಿಶ್ವನಾಥ್‌ ಧರ್ಮಸ್ಥಳ ಉಳಿಸಿ ಅಭಿಯಾನಕ್ಕೆ ಚಾಲನೆ ಕೊಡುವ ಮಾತನ್ನಾಡಿದ್ದಾರೆ. ಆ ಬಳಿಕ 200 ಕಾರುಗಳ ಜೊತೆಗೆ ಧರ್ಮಸ್ಥಳಕ್ಕೆ ರ್ಯಾಲಿ ಮಾಡುವುದಾಗಿಯೂ ತಿಳಿಸಿದ್ದಾರೆ. ಬಿ.ಎಲ್‌ ಸಂತೋಷ್‌ ಕೂಡ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದ ಮಾತುಗಳನ್ನೇ ಹೇಳಿದ್ದರು. ಅದೇ ಮಾತುಗಳನ್ನು ಯತ್ನಾಳ್‌ ಪುನರುಚ್ಛಾರ ಮಾಡಿದ್ದಾರೆ. ಯಡಿಯೂರಪ್ಪ, ಆರ್‌. ಅಶೋಕ್‌, ವಿಜಯೇಂದ್ರ ಸೇರಿದಂತೆ ಬಿಜೆಪಿಯ ಬಹುತೇಕ ನಾಯಕರು ಕಾಂಗ್ರೆಸ್‌ ಸರ್ಕಾರ ತೆಗೆದುಕೊಂಡ ನಿಲುವಿನ ಬಗ್ಗೆ ಕಿಡಿಕಾರುತ್ತಿದ್ದಾರೆ. ಆದರೆ ಇಡೀ ಕರ್ನಾಟಕ ಮಾತ್ರವಲ್ಲದೆ ಅಕ್ಕಪಕ್ಕದ ರಾಜ್ಯಗಳಲ್ಲೂ ಧರ್ಮಸ್ಥಳದ ವಿಚಾರ ಭಾರೀ ಸದ್ದು ಮಾಡುತ್ತಿದೆ. ತನಿಖೆಗೆ ಆಗ್ರಹ ಕೂಡ ಮಾಡಿದ್ದರು.

ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ, ಹರ್ಷೇಂದ್ರ ಕುಮಾರ್‌ ಜೈನ್‌ ಸೇರಿದಂತೆ ಧರ್ಮಸ್ಥಳ ಆಡಳಿತ ಮಂಡಳಿ ಹೆಸರನ್ನು ಬಳಸದಂತೆ ಕೋರ್ಟ್‌ನಿಂದ ತಡೆಯಾಜ್ಞೆ ತರಲಾಗಿತ್ತು. ಆದರೆ ಕುಡ್ಲ ರ್ಯಾಂಪೇಜ್‌ ಯೂಟ್ಯೂಬರ್‌‌ ಹೈಕೋರ್ಟ್‌ಗೆ ಹೋಗಿ ಕೋರ್ಟ್‌ ಆದೇಶ ರದ್ದು ಮಾಡಿಸುವಲ್ಲಿ ಯಶಸ್ವಿ ಆಗಿದ್ದರು. ಆ ಬಳಿಕ ಧರ್ಮಸ್ಥಳ ಆಡಳಿತ ಮಂಡಳಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದರೂ ಮಾಧ್ಯಮಗಳಲ್ಲಿ ಹೆಸರು ಬಳಸಬಾರದು, ಸುದ್ದಿ ಪ್ರಸಾರಕ್ಕೆ ತಡೆ ನೀಡಬೇಕು ಎಂದು ಕೇಳಿಕೊಂಡ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾ ಮಾಡಿತ್ತು. ವಾಕ್‌ ಸ್ವಾತಂತ್ಯವನ್ನು ಧಮನ ಮಾಡಿದಂತೆ ಆಗಲಿದೆ ಎಂದು ಕೋರ್ಟ್‌ ಹೇಳಿತ್ತು. ಅವಶ್ಯಕತೆ ಇದ್ದರೆ ಮತ್ತೆ ಸ್ಥಳೀಯ ಕೋರ್ಟ್‌ ಮೊರೆ ಹೋಗುವಂತೆಯೂ ಹೇಳಲಾಗಿತ್ತು.

ಧರ್ಮಸ್ಥಳದ ಸುದ್ದಿಗಳು ಪ್ರಮುಖ ಮಾಧ್ಯಮಗಳಲ್ಲಿ ಬರುವುದಕ್ಕಿಂತ ಯೂಟ್ಯೂಬ್‌, ಫೇಸ್‌ಬುಕ್‌, ಇನ್‌ಸ್ಟಾಗಳಲ್ಲೇ ಅತ್ಯಧಿಕವಾಗಿ ಪ್ರಚಾರ ಪಡೆಯುತ್ತಿರುವುದು. ಯಾವಾಗ ಕೋರ್ಟ್‌ನಲ್ಲಿ ತಡೆಯಾಜ್ಞೆ ಸಿಗಲಿಲ್ಲವೋ ಆಗ ಯೂಟ್ಯೂಬರ್ಸ್‌ ಮೇಲೆ ಹಲ್ಲೆ ಮಾಡಿದ ಪ್ರಕರಣ ನಡೀತು. ಇದೀಗ ಬಿಜೆಪಿ ನಾಯಕರು ತನಿಖೆ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯುವ ಯತ್ನ ಎಂದು ಆರೋಪ ಮಾಡಲಾಗ್ತಿದೆ. ಕಾಂಗ್ರೆಸ್‌ ಸರ್ಕಾರ ಹಾಗೂ SIT ವಿರುದ್ಧವೂ ಮಾತನಾಡ್ತಿದ್ದಾರೆ. ಇದೆಲ್ಲವನ್ನೂ ಗಮನಿಸಿದಾಗ ಧರ್ಮಸ್ಥಳದ ಆಡಳಿತ ಮಂಡಳಿಯವರು ಏನಾದರೂ ವಿಚಾರವನ್ನೂ ಮುಚ್ಚಿಡುವ ಪ್ರಯತ್ನ ಮಾಡ್ತಿದ್ದಾರಾ..? ಅನ್ನೋ ಅನುಮಾನ ಸಾಮಾನ್ಯ ಜನರ ಮನಸ್ಸಿನಲ್ಲಿ ಮೂಡುವುದು ಸಹಜ. ತನಿಖೆ ಆಗುವುದಕ್ಕೆ ಸಂಪೂರ್ಣ ಸಹಕಾರ ಕೊಟ್ಟು ಆ ಬಳಿಕ ತನಿಖೆ ಪೂರ್ಣಗೊಂಡು ಯಾವುದೇ ತಪ್ಪಿಲ್ಲ ಎಂದು ತೀರ್ಪು ಬಂದರೆ ಇಡೀ ಕಳಂಕಕ್ಕೆ ಇತಿಶ್ರೀ ಹಾಡಬಹುದು.

ಧರ್ಮಸ್ಥಳ ಹೆಸರು ಬಳಸುವ ಮೂಲಕ ಪುಣ್ಯಕ್ಷೇತ್ರದ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಲಾಗ್ತಿದೆ ಅನ್ನೋದು ಧರ್ಮಸ್ಥಳ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣ ಎನ್ನುವ ವಾದವೂ ಇದೆ. ಆದರೆ ಧರ್ಮಸ್ಥಳ ಮತ್ತು ಮಂಜುನಾಥ ಸ್ವಾಮಿಯ ಮೇಲಿರುವ ನಂಬಿಕೆಯೇ ಬೇರೆ. ಅಲ್ಲಿ ನಡೆದಿದೆ ಎನ್ನಲಾಗ್ತಿರುವ ಪ್ರಕರಣಗಳಿಂದ ಭಕ್ತರ ಭಾವನೆಗಳಿಗೆ ಧಕ್ಕೆ ಬಂದಿಲ್ಲ ಎನ್ನಲು ಸಾಧ್ಯವಿಲ್ಲ. ಆದರೆ ಅದೆಲ್ಲವನ್ನೂ ನಿರಾಕರಿಸಲು ಇರುವ ಮಾರ್ಗ ತನಿಖೆ ಮಾತ್ರ. ಇದು ಭಕ್ತರ ಮನಸ್ಸಲ್ಲೂ ಇದೆ. ತನಿಖೆ ನಡೆದು ಮುಕ್ತವಾಗಿ ಬರಲಿ ಅನ್ನೋ ಬಗ್ಗೆ ಸಾರ್ವಜನಿಕರೇ ಹೇಳುತ್ತಿದ್ದಾರೆ. ಅಲ್ಲೀವರೆಗೂ ಆಗುವ ಅನಾಹುತಕ್ಕೆ ಹೊಣೆ ಯಾರು..? ಎಂದು ಕೇಳಬಹುದು. ಆದರೆ ಈ ರೀತಿಯ ಆರೋಪ ಬರುವುದಕ್ಕೆ ಅನುವು ಮಾಡಿಕೊಟ್ಟಿದ್ದು ತಪ್ಪಲ್ಲವೇ..?

ಸಾಮಾನ್ಯವಾಗಿ ಈ ರೀತಿಯ ಆರೋಪಗಳು ಬಂದಾಗ ಸ್ವತಃ ರಾಜ್ಯಸಭಾ ಸದಸ್ಯರೂ ಆಗಿರುವ ವೀರೇಂದ್ರ ಹೆಗ್ಗಡೆ ಅವರೇ ಮುಂದೆ ನಿಂತು ತನಿಖೆಯನ್ನು ನಡೆಸುವಂತೆ ಹೇಳಬೇಕಿತ್ತು. ಈ ಎಲ್ಲಾ ಆರೋಪಗಳಿಂದ ಮುಕ್ತವಾಗಿ ಮಂಜುನಾಥ ತನ್ನ ಸತ್ಯವನ್ನು ಉಳಿಸಿಕೊಳ್ತಾನೆ, ಧರ್ಮಸ್ಥಳದ ಮೇಲೆ ಆರೋಪ ಮಾಡಿಕೊಂಡು ಕ್ಷೇತ್ರಕ್ಕೆ ಅಪಮಾನ ಮಾಡಿದವರಿಗೂ ಮಂಜುನಾಥ ಮುಂದಿನ ದಿನಗಳಲ್ಲಿ ಒಳ್ಳೆಯ ಬುದ್ಧಿ ಕೊಡಲಿ ಎಂದು ಮಾಧ್ಯಮಗೋಷ್ಟಿ ಕರೆದು ಮಾತನಾಡಿದ್ದರೆ, ಇಷ್ಟೆಲ್ಲಾ ರಂಪಾಟವೇ ಆಗುತ್ತಿರಲಿಲ್ಲ. ಇನ್ನೂ 2013ರಲ್ಲಿ ಸ್ವತಃ ಗೃಹ ಸಚಿವರಾಗಿದ್ದ ಆರ್‌ ಅಶೋಕ್‌, ಕೊಲೆ ನಡೆದ ಸ್ಥಳಕ್ಕೆ ಹೋಗಿ ಧರ್ಮಸ್ಥಳಕ್ಕೆ ಹೋಗದೆ ವಾಪಸ್‌ ಆಗಿದ್ದು ತಪ್ಪಲ್ಲವೇ..? ಆರೋಪಿ ಕೋರ್ಟ್‌ನಲ್ಲಿ ಖುಲಾಸೆ ಆದ ಬಳಿಕ ನಿಜವಾದ ಆರೋಪಿ ಯಾರು ಅನ್ನೋದು ಜನರ ಪ್ರಶ್ನೆ. ಇದಕ್ಕೆ ಉತ್ತರ ಸಿಗಬೇಕು ಅಲ್ಲವೇ..? ಇದನ್ನೇ ಎಲ್ಲರೂ ಕೇಳುತ್ತಿರುವುದು. ಆದರೆ ಕೋಪ ಯಾಕೆ..? ತನಿಖೆ ಆಗಲಿ ಬಿಡಿ.

Related posts

ರಾಜ್ಯದಲ್ಲಿ ಶುರುವಾಯ್ತು ಆಶಾ ಮಿಡ್‌ನೈಟ್‌ ಹೋರಾಟ.. ಹೇಗಿದೆ ಕಿಚ್ಚು..?

ಯಶವಂತಿ

Cricket and Politics; ಕ್ರೀಡೆ ಮತ್ತು ಸ್ನೇಹ.. ಕ್ರಿಕೆಟ್​ ಮತ್ತು ರಾಜಕೀಯ.. ಭಾರತ ತಪ್ಪು ಮಾಡಿದ್ದೆಲ್ಲಿ..?

Publicspot

ಕಾಂಗ್ರೆಸ್​ನಲ್ಲಿ ಹೈಕಮಾಂಡ್ ಅಂದ್ರೆ ಯಾರು..? ಹೀಗೆ ಮಾಡೋದು ಸರೀನಾ..?

Publicspot

ಧರ್ಮಸ್ಥಳ ಅಸ್ಥಿ ಶೋಧ.. ಏನೆಲ್ಲಾ ಆಗ್ತಿದೆ..? ಯಾರು ಏನಂದ್ರು..?

ಯಶವಂತಿ

ಕೋಗಿಲು ಕ್ರಾಸ್​ ಡೆಮಾಲಿಷನ್​.. ಮಾನವೀಯತೆಯೋ..? ಮುಸ್ಲಿಂ ಅನ್ನೋ ಕಾರಣಕ್ಕೋ..?

Publicspot

Banu Musthaq Not So Great: ಬಾನು ಮುಷ್ತಾಕ್​ ದೊಡ್ಡವರಾಗಲು ಹೀಗೆ ಮಾಡಬೇಕಿತ್ತು..

Publicspot