ಮಂಡ್ಯ ಜಿಲ್ಲೆ ನಾಗಮಂಗಲ ವಿಧಾನಸಭಾ ಕ್ಷೇತ್ರದ ಹೊನ್ನಾವರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜನರು ಅಭಿವೃದ್ಧಿಯನ್ನೇ ಕಾಣದೆ, ಕನಿಷ್ಠ ಮೂಲಭೂತ ಸೌಕರ್ಯಗಳೂ ಇಲ್ಲದೆ ಬದುಕುತ್ತಿದ್ದಾರೆ. ಹಾಸನ ಜಿಲ್ಲೆಗೆ ಅಂಟಿಕೊಂಡಂತೆ ಇರುವ ಜಿಲ್ಲಾ ಗಡಿಯ ಕೊನೆಯ ಗ್ರಾಮ ಪಂಚಾಯ್ತಿ ಇದಾಗಿದ್ದು, ಅಧಿಕಾರಿಗಳ ಬೇಜವಾಬ್ದಾರಿಗೆ ಸ್ಪಷ್ಟ ನಿದರ್ಶನವಾಗಿದೆ. ಈ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ 18 ಹಳ್ಳಿಗಳೂ ಅಭಿವೃದ್ಧಿ ಆಗಿಲ್ಲ. ಅದರಲ್ಲೂ ವಿಶೇಷವಾಗಿ ಹೊನ್ನಾವರ ಗ್ರಾಮ ಪಂಚಾಯ್ತಿಯ 2ನೇ ವಾರ್ಡ್ ಆಗಿರುವ ಹೊನ್ನಾವರ ಗ್ರಾಮದ ಅರ್ಧ ಗ್ರಾಮವಂತೂ ತೀರ ಹಿಂದುಳಿದಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊನ್ನಾವರ ಗ್ರಾಮ ಪಂಚಾಯ್ತಿಯ ಮೊದಲ ವಾರ್ಡ್ನಲ್ಲಿ ಕನಿಷ್ಠ ಪ್ರಮಾಣದ ರಸ್ತೆ, ಚರಂಡಿ ವ್ಯವಸ್ಥೆ ಇದೆ. ಆದರೆ 2ನೇ ವಾರ್ಡ್ನಲ್ಲಿ ರಸ್ತೆಯೂ ಇಲ್ಲ, ಚರಂಡಿಯೂ ಇಲ್ಲ, ಬೀದಿ ದೀಪಗಳೂ ಇಲ್ಲ ಎನ್ನುವಂತಾಗಿದೆ. ಪಕ್ಕದ ಮನೆಯಲ್ಲಿ ಸ್ನಾನ ಮಾಡಿದ ನೀರು ರಸ್ತೆಗೆ ಹರಿದು ಬಂದು ಇನ್ನೊಂದು ಮನೆ ಬಾಗಿಲಿನಲ್ಲಿ ನಿಲ್ಲುತ್ತದೆ. ಪಾತ್ರೆ ತೊಳೆದ ನೀರೂ ಕೂಡ ರಸ್ತೆಯಲ್ಲೇ ಹರಿಯಬೇಕಿದೆ. ಸೊಳ್ಳೆಗಳ ಕಾಟದಿಂದ ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ಕಾಯಿಲೆಗಳ ಕೂಪದಂತಿದೆ. ಆಳುವ ಸರ್ಕಾರ, ಸ್ಥಳೀಯ ಪಂಚಾಯ್ತಿ ಆಡಳಿಯತ ನಿರ್ಲಷ್ಯದ ವಿರುದ್ಧ ಜನ ರೊಚ್ಚಿಗೆದ್ದಿದ್ದಾರೆ.

ಗ್ರಾಮ ಸಭೆ ನಡೆಯುವಾಗ ಹೊನ್ನಾವರ ವಾರ್ಡ್ 2ರ ನಿವಾಸಿಗಳು ಏಕಾಏಕಿ ದಾಳಿ ಮಾಡಿ ಪಂಚಾಯ್ತಿಗೆ ಬೀಗ ಹಾಕಿ ಅಧಿಕಾರಿಗಳಿಗೆ ಘೇರಾವ್ ಹಾಕಿದ್ದಾರೆ. ನಾಗಮಂಗಲ ಕ್ಷೇತ್ರದಿಂದ ಆಯ್ಕೆಯಾಗಿ ರಾಜ್ಯ ಸಂಪುಟದಲ್ಲಿ ಕೃಷಿ ಸಚಿವರಾಗಿರುವ ಎನ್.ಚಲುವರಾಯಸ್ವಾಮಿ ಆಯ್ಕೆಯಾದ ಬಳಿಕ ಒಮ್ಮೆಯೂ ನಮ್ಮ ಗ್ರಾಮಕ್ಕೆ ಬಂದಿಲ್ಲ. ಜನರ ಸಮಸ್ಯೆ ಏನು ಅನ್ನೋದನ್ನು ಕೇಳಿಲ್ಲ. ಕೇವಲ ಅಧಿಕಾರಕ್ಕಾಗಿ ನಮ್ಮ ಮತಗಳನ್ನು ಪಡೆದು ಅಧಿಕಾರ ಅನುಭವಿಸಿದರೆ ಶ್ರೀಸಾಮಾನ್ಯನ ಗೋಳು ಕೇಳೋದು ಯಾರು..? ಇತ್ತ ಸ್ಥಳೀಯ ಆಡಳಿತವಾದರೂ ಜನರ ಕಷ್ಟಗಳಿಗೆ ಸ್ಪಂದಿಸದಿದ್ದ ಮೇಲೆ ಸ್ಥಳೀಯ ಪಂಚಾಯ್ತಿ ಅಗತ್ಯವಾದರೂ ಏನಿದೆ ಎಂದು ಜನರು ಪ್ರಶ್ನೆ ಮಾಡಿದ್ದಾರೆ.

ಜನರ ಆಕ್ರೋಶಕ್ಕೆ ಪಂಚಾಯ್ತಿ ಅಧಿಕಾರಿಗಳು ಸಮರ್ಪಕ ಉತ್ತರ ಕೊಡದೆ ಇದ್ದಾಗ, ಜನರು ಪಂಚಾಯ್ತಿಯನ್ನೇ ಮುಚ್ಚಿ ಪ್ರತಿಭಟನೆ ಮಾಡಿದ್ದಾರೆ. ಆ ಬಳಿಕ ಬಿಂಡಿಗನವಿಲೆ ಪೊಲೀಸ್ ಠಾಣೆಯಿಂದ ಆರಕ್ಷಕರು ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣ ಮಾಡುವ ಕೆಲಸ ಮಾಡಿದ್ದಾರೆ. ಪೊಲೀಸರು ಅಂತಿಮವಾಗಿ ಜನರ ಮನವೊಲಿಸಿ ಬೀಗ ತೆಗೆಸಿದ್ದಾರೆ. ಇನ್ನು ಮಳೆಗಾಲದಲ್ಲಿ ರಸ್ತೆಗಳು ಗದ್ದೆಗಳಾಗಿ ಪರಿವರ್ತನೆ ಆಗುತ್ತವೆ ಎಂದು ರಸ್ತೆ ಮಧ್ಯದಲ್ಲೇ ಪೈರು ನಾಟಿ ಮಾಡುವ ಮೂಲಕ ಸರ್ಕಾರವನ್ನು ವ್ಯಂಗ್ಯ ಮಾಡಿದ್ದಾರೆ ಜನ. ಜನರು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದ್ದಾರೆ.

ರಾಜ್ಯದಲ್ಲಿ ಗ್ಯಾರಂಟಿ ಸರ್ಕಾರ ಅಧಿಕಾರದಲ್ಲಿ ಇದ್ದು, ಜನರಿಗೆ ಅಭಿವೃದ್ಧಿ ಗ್ಯಾರಂಟಿ ಇಲ್ಲದಂತಾಗಿದೆ ಎಂದು ಜನರು ಕಿಡಿಕಾರಿದ್ದಾರೆ. ಗ್ರಾಮ ಪಂಚಾಯ್ತಿ ಅಧ್ಯಕ್ಷ ಕುಳ್ಳೇಗೌಡ, ತನ್ನ ಊರಾದ ಹೆಚ್. ಕ್ಯಾತನಹಳ್ಳಿಗೆ ಹೆಚ್ಚಿನ ಅನುದಾನ ಬಳಕೆ ಮಾಡಿಕೊಂಡು ಊಲಿದ ಗ್ರಾಮಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಜನರು ಆರೋಪ ಮಾಡಿದ್ದಾರೆ. ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರ ಸ್ವಕ್ಷೇತ್ರದಲ್ಲೇ ಈ ರೀತಿಯ ಸಮಸ್ಯೆ ಇರುವಾಗ ಬೇರೆ ಬೇರೆ ಗ್ರಾಮಗಳ ಪರಿಸ್ಥಿತಿ ಹೇಗಿದೆ ಎಂದು ನಾವು ಊಹಿಸಬೇಕಾಗಿದೆ. ಇನ್ನಾದ್ರೂ ಉಳಿದ ಅವಧಿಯಲ್ಲಿ ಗ್ಯಾರಂಟಿ ಸರ್ಕಾರ ಅಭಿವೃದ್ಧಿ ಮಾಡಲಿ ಎಂದು ಜನತೆ ಕಿಡಿಕಾರುತ್ತಿದ್ದಾರೆ. ಅಭಿವೃದ್ಧಿ ಕಾಣದ ಹೊನ್ನಾವರ ಗ್ರಾಮ ಪಂಚಾಯ್ತಿ ಜನ ಮುಂದಿನ ದಿನಗಳಲ್ಲಿ ಸಚಿವರಿಗೂ ಘೇರಾವ್ ಮಾಡಲು ಚಿಂತನೆ ನಡೆಸಿದೆ.



