ಬೆಂಗಳೂರಲ್ಲಿ ಮೂಲಭೂತ ಸೌಕರ್ಯ ಬಗ್ಗೆ ಉದ್ಯಮಿ ಮಜುಂದಾರ್ ಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಗುಂಡಿ, ಕಸದ ಅವಾಂತರದ ಬಗ್ಗೆ ಉದ್ಯಮಿ ಬಯೋಕಾನ್ ಸಂಸ್ಥೆ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಆಕ್ರೋಶ ಹೊರ ಹಾಕಿದ್ದಾರೆ. ರಾಜ್ಯ ಸರ್ಕಾರ ವಿರುದ್ಧ ಅಸಮಾಧಾನ ಹೊರಹಾಕಿದ ಕಿರಣ್ ಮಜುಂದಾರ್ ಶಾ, ಬಯೋಕಾನ್ ಪಾರ್ಕ್ಗೆ ಚೀನಾದಿಂದ ಉದ್ಯಮಿಯೊಬ್ರು ಬೇಟಿ ನೀಡಿದ್ದರು. ಸಿಟಿಯಲ್ಲಿ ಹದಗೆಟ್ಟ ರಸ್ತೆ, ಕಸದ ಬಗ್ಗೆ ನನ್ನನ್ನು ಪ್ರಶ್ನಿಸಿದ್ರು. ರಸ್ತೆಗಳು ಏಕೆ ಇಷ್ಟೊಂದು ಕೆಟ್ಟದಾಗಿವೆ, ಇಷ್ಟೊಂದು ಕಸ ಯಾಕಿದೆ..? ಎಂದು ಪ್ರಶ್ನಿಸಿದ್ರು ಅಂತಾ ಎಕ್ಸ್ ಪೋಸ್ಟ್ ಮಾಡಿ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು.

ಕಿರಣ್ ಮಜುಂದಾರ್ ಶಾ ಎಕ್ಸ್ ಪೋಸ್ಟ್ ಬಗ್ಗೆ ಸಚಿವ ಎಂ.ಬಿ ಪಾಟೀಲ್ ಅಸಮಾಧಾನ ಹೊರಹಾಕಿದ್ದಾರೆ. ಕಿರಣ್ ಮಜುಂದಾರ್ ಅವರು ಬೆಂಗಳೂರಿಗೆ ಸಾಕಷ್ಟು ಬಯೋ ಟೆಕ್ನಾಲಜಿ ಕಾಣಿಕೆ ಕೊಟ್ಟಿದ್ದಾರೆ. ಬೆಂಗಳೂರು ಕೂಡ ಅವರಿಗೆ ಎಲ್ಲವನ್ನೂ ಕೊಟ್ಟಿದೆ. ಮಳೆ ಹಾನಿಗೆ ಇಡೀ ರಾಜ್ಯದಲ್ಲಿ ನ್ಯಾಷನಲ್ ಹೈವೇ, ಸ್ಟೇಟ್ ಹೈವೇ, ಅಂಗನವಾಡಿಗಳು ಅನಾಹುತ ಆಗಿವೆ. ನಾನು ಕೂಡ ಸಿಎಂಗೆ ಈ ಬಗ್ಗೆ ಮನವಿ ಮಾಡಿದ್ದೇನೆ. ಮೂಲಭೂತ ಸೌಕರ್ಯಗಳ ಹಾನಿಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. 1,000 ಕೋಟಿ ರೂಪಾಯಿಯಲ್ಲಿ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುತ್ತಿದ್ದೇವೆ. ಸ್ವಲ್ಪ ಸಮಯ ಬೇಕು ಅಷ್ಟೇ ಎಂದಿದ್ದಾರೆ. ಬೆಂಗಳೂರಿಗೆ ಬೇರೆ ಕಡೆಗಳಿಂದ ಸಾಕಷ್ಟು ಮಂದಿ ಬಂದು ನೆಲೆಸಿದ್ದಾರೆ. ನಾವು ನಮ್ಮ ಕೆಲಸವನ್ನು ಮಾಡ್ತಿದ್ದೇವೆ. ಈಗ ಮಜಂದೂರ್ ಶಾ ಈ ಮಾತು ಆಡುವ ಅವಶ್ಯಕತೆ ಇರಲಿಲ್ಲ. ಪದೇ ಪದೇ ಮಾತಾಡ್ತಿರುವ ಉದ್ದೇಶ ಆದರೂ ಏನು..? ಎಂದು ಪ್ರಶ್ನಿಸಿದ್ದಾರೆ.
ಕಿರಣ್ ಮಜುಂದಾರ್ ಶಾ ಬೇಸರ ವಿಚಾರವಾಗಿ ಸಚಿವ ರಾಮಲಿಂಗರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಕಿರಣ್ ಮಜುಂದಾರ್ ಶಾ ಹಾಗೂ ಮೋಹನ್ ದಾಸ್ ಪೈ ರಸ್ತೆ ಗುಂಡಿಗಳ ಬಗ್ಗೆ ಮಾತಾಡಿದ್ದಾರೆ. ಗುಂಡಿಗಳು ಇವೆ. ಇಲ್ಲ ಅಂದರೆ ತಪ್ಪು ಆಗುತ್ತದೆ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೇ ಹೈಕೋರ್ಟ್ ಮಾನಿಟರಿಂಗ್ ಮಾಡ್ತಿತ್ತು. ಆ ಹಿಂದಿನ ಪಾಠವನ್ನು ನಾವು ನೋಡಿ ಕಲಿತುಕೊಳ್ಳಬೇಕಿತ್ತು. ಮಳೆಗಾಲದಲ್ಲಿ ಗುಂಡಿಗಳು ಬೀಳೋದು ಸಹಜ. ಅದಕ್ಕೆ ಬೇಕಾದ ಸಿದ್ದತೆ ಮಾಡಿಕೊಂಡು, ರಸ್ತೆ ಸರಿಪಡಿಸುವ ಕೆಲಸ ನಮ್ಮದು. ಮೋಹನ್ ದಾಸ್ ಪೈ ಹಾಗೂ ಕಿರಣ್ ಮಜುಂದಾರ್ ಶಾ ರವರ ಸಲಹೆಗಳಂತೆ ಸರ್ಕಾರ ಆದಷ್ಟು ಬೇಗ ಗುಂಡಿ ಮುಚ್ಚುತ್ತದೆ. ಒಂದ್ಸಾರಿ ಹೇಳಿದ್ರೆ ಸರ್ಕಾರಕ್ಕೆ ಅರ್ಥ ಆಗುತ್ತದೆ. ಬಿಜೆಪಿ ಸರ್ಕಾರದ ಇದ್ದಾಗ ಅವರ ತಪ್ಪು ಹೇಳಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗ ಯಾವಾಗಲೂ ಹೇಳ್ತಾರೆ ಎಂದಿದ್ದಾರೆ.

ಕಿರಣ್ ಮಜುಂದಾರ್ ಶಾ ಎಕ್ಸ್ ಪೋಸ್ಟ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. X ಖಾತೆಯಲ್ಲೇ ಪೋಸ್ಟ್ ಮಾಡಿ ತಿರುಗೇಟು ನೀಡಿದ್ದು, ಬೆಂಗಳೂರನ್ನು ಒಡೆಯುವ ಬದಲು ಒಟ್ಟಾಗಿ ಕಟ್ಟೋಣ. ಬೆಂಗಳೂರು ಲಕ್ಷಾಂತರ ಜನರಿಗೆ ಅವಕಾಶಗಳನ್ನು, ಗುರುತನ್ನು ಮತ್ತು ಯಶಸ್ಸನ್ನು ನೀಡಿದೆ. ಇದು ಸಾಮೂಹಿಕ ಪ್ರಯತ್ನಕ್ಕೆ ಅರ್ಹವಾಗಿದೆ, ನಿರಂತರ ಟೀಕೆಯಲ್ಲ. ಸವಾಲುಗಳು ಅಸ್ತಿತ್ವದಲ್ಲಿವೆ. ಆದರೆ ನಾವು ಅವುಗಳನ್ನು ಗಮನ ಮತ್ತು ತುರ್ತುಸ್ಥಿತಿಯೊಂದಿಗೆ ಪರಿಹರಿಸುತ್ತಿದ್ದೇವೆ. ರಸ್ತೆ ದುರಸ್ತಿಗಾಗಿ 1,100 ಕೋಟಿ ಮಂಜೂರಾಗಿದೆ. 10,000 ಕ್ಕೂ ಹೆಚ್ಚು ಗುಂಡಿಗಳನ್ನು ಗುರುತಿಸಲಾಗಿದೆ. 5 ಸಾವಿರಕ್ಕೂ ಹೆಚ್ಚು ಗುಂಡಿಗಳನ್ನು ಆದ್ಯತೆಯ ಮೇಲೆ ಈಗಾಗಲೇ ಮುಚ್ಚಲಾಗಿದೆ.
ಬೆಂಗಳೂರನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸಲು ಪ್ರಮುಖ ಮೂಲಸೌಕರ್ಯ ಕಾಮಗಾರಿಗಳು ನಡೆಯುತ್ತಿವೆ. ಬೃಹತ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ, ಈಸ್ಟ್ ಕಾರ್ಪೊರೇಷನ್ ಈಗ 50 ವಾರ್ಡ್‌ಗಳಲ್ಲಿ ನೇರವಾಗಿ ಮೂಲ ಸೌಕರ್ಯವನ್ನು ಸುಧಾರಿಸಲು ₹1,673 ಕೋಟಿ ತನ್ನ ಸ್ವಂತ ಆದಾಯವನ್ನು ಉಳಿಸಿಕೊಳ್ಳುತ್ತದೆ. ಇದು ನಮ್ಮ ಐಟಿ ಕಾರಿಡಾರ್‌ಗಳಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ. ಎಲಿವೇಟೆಡ್ ಕಾರಿಡಾರ್‌ಗಳಂತಹ ಪ್ರಮುಖ ಕೆಲಸಗಳನ್ನು ಮಾಡುತ್ತಿದ್ದೇವೆ. ನಾವು ನಾಗರಿಕರು, ಉದ್ಯೋಗಿಗಳು ಮತ್ತು ಕಂಪನಿಗಳಿಗೆ ಸಮಾನವಾಗಿ ಮೂಲಸೌಕರ್ಯಗಳನ್ನು ಬಲಪಡಿಸುತ್ತಿದ್ದೇವೆ. ಬೆಂಗಳೂರನ್ನು ಒಡೆಯುವ ಬದಲು ಒಟ್ಟಾಗಿ ಕಟ್ಟೋಣ. ಜಗತ್ತು ಬೆಂಗಳೂರಿನ ಮೂಲಕ ಭಾರತವನ್ನು ನೋಡುತ್ತದೆ ಎಂದಿದ್ದಾರೆ.
ನಗರದ ರಸ್ತೆ ಗುಂಡಿ ಬಗ್ಗೆ ಉದ್ಯಮಿ ಮೋಹಂದಾಸ್ ಪೈ ಎಕ್ಸ್ ಪೋಸ್ಟ್ ಮೂಲಕ ಟಾಂಟ್ ಕೊಟ್ಟಿದ್ದು, ರಸ್ತೆಗಳಲ್ಲಿ ಮಾಡಿರುವ ಗುಂಡಿ ತುಂಬುವ ಕೆಲಸದ ಗುಣಮಟ್ಟವನ್ನು ಪರಿಶೀಲಿಸಿ. ಅನೇಕ ನಾಗರಿಕರು ಗುಂಡಿಗಳು ಮತ್ತೆ ಬಿದ್ದಿವೆ ಎಂದು ದೂರು ಕೊಡುತ್ತಿದ್ದಾರೆ. ಕೆಳಮಟ್ಟದ ಅಧಿಕಾರಿಗಳು ನಿಮ್ಮ ಪ್ರಯತ್ನಗಳನ್ನು ಹಾಳು ಮಾಡುತ್ತಿರುವ ಸಾಧ್ಯತೆ ಇದೆ. GBA ಪ್ರಯತ್ನಗಳು ವ್ಯರ್ಥವಾಗದಂತೆ, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಿ. ಕೆಟ್ಟ ಕೆಲಸ ಹಾಗೂ ಭ್ರಷ್ಟಾಚಾರದ ವಿರುದ್ಧ ಕಠಿಣ ನಿಲುವು ಅಗತ್ಯ. ಎಲ್ಲ ನಾಗರಿಕರೂ ನಿಮ್ಮೊಂದಿಗೆ ಇದ್ದಾರೆ ಎಂದು ಸಲಹೆ ರೂಪದಲ್ಲಿ ಕಿಚಾಯಿಸಿದ್ದಾರೆ.


