The Public Spot
ರಾಜ್ಯ

ಕಾಂಗ್ರೆಸ್‌ ಸರ್ಕಾರಕ್ಕೆ ನೇಮಕಾತಿ ಬೇಕಿಲ್ವಾ..? ಬಿಜೆಪಿ ರಾಜಕೀಯ ಲಾಭನಾ..?

ಸರ್ಕಾರಿ ಹುದ್ದೆಗಳ ನೇಮಕಾತಿ ಮಾಡುವಂತೆ ಒತ್ತಾಯಿಸಿ ಧಾರವಾಡದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು. ಮೆರವಣಿಗೆ ವೇಳೆ ಬಿಜೆಪಿ ನಾಯಕರು ಬೆಂಬಲ ಕೊಡುವ ಪ್ರಯತ್ನ ಮಾಡಿದ್ದರು. ಬಿಜೆಪಿ ಬ್ಯಾನರ್ ಗಳನ್ನೂ ಹಾಕಿಕೊಂಡಿದ್ದರು. ಆದರೆ ಪ್ರತಿಭಟನಾಕಾರರು ಪ್ರತಿಭಟನೆ ಬೆಂಬಲಿಸಿ ಹಾಕಿದ್ದ ಬ್ಯಾನರ್‌ಗಳನ್ನು ಹರಿದು ಹಾಕಿದರು. ಧಾರವಾಡದ ಸಪ್ತಾಪುರ ವೃತ್ತದಲ್ಲಿ ನಡೆದ ಪ್ರತಿಭಟನೆ ವೇಳೆ ಪ್ರಹ್ಲಾದ್ ಜೋಶಿ ಮತ್ತು ಅರವಿಂದ ಬೆಲ್ಲದ್ ಭಾವಚಿತ್ರವಿದ್ದ ಬ್ಯಾನರ್‌ ಹರಿದು ಆಕ್ರೋಶ ಹೊರಹಾಕಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಪೊಲೀಸರ ಬ್ಯಾರಿಕೇಡ್ ತಳ್ಳಿ ಮುನ್ನುಗ್ಗಿದರು. ಜೂಬ್ಲಿ ವೃತ್ತದ ಕಡೆಗೆ ನುಗ್ಗಿದ ಪ್ರತಿಭಟನಾಕಾರರ ಜೊತೆಗೆ ಪೊಲೀಸರು ಮಾತಿನ ಚಕಮಕಿ ನಡೆಸಿದರು.

ಧಾರವಾಡದ ಜ್ಯೂಬಿಲಿ ವೃತ್ತಕ್ಕೆ ನುಗ್ಗಿದ ಪ್ರತಿಭಟನಾಕಾರರು, ಸಾವಿರಾರು ಸಂಖ್ಯೆಯಲ್ಲಿ ಜಮಾವಣೆ ಆದರು. ಜ್ಯೂಬಿಲಿ ವೃತ್ತಕ್ಕೆ ಹು-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ಮಿಷನ್ ಕಾಂಪೌಂಡ್‌ನಿಂದ‌ ಜ್ಯೂಬ್ಲಿ ವೃತ್ತದ ಕಡೆ ಹೊರಟ ಪ್ರತಿಭಟನಾಕಾರರು ರಾಜಕೀಯ ನಾಯಕರ ವಿರುದ್ಧವೂ ಕಿಡಿಕಾರಿದರು. ಬಿಜೆಪಿ ನಾಯಕರಿಗೆ ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡಿದ್ದು, ನೀವು ರಾಜಕೀಯ ಮಾಡಲು ಬರಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗೋ ಬ್ಯಾಕ್ ಎಂದು ಘೋಷಣೆ ಕೂಗಿದರು. ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಅರವಿಂದ ಬೆಲ್ಲದ್‌ಗೆ ಗೋ ಬ್ಯಾಕ್ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಯಾವುದೇ ಆತಂಕ, ಬೇಸರ, ಅನಿಶ್ಚಿತತೆ ನಾನು ಅರ್ಥಮಾಡಿಕೊಂಡಿದ್ದೇನೆ. ನಾವು ಅಧಿಕಾರಕ್ಕೆ ಬಂದಾಗ 2.64 ಲಕ್ಷ ಹುದ್ದೆ ಖಾಲಿ ಇದ್ದವು. ರಾತ್ರೋ ರಾತ್ರಿ ಈ ಖಾಲಿ ಹುದ್ದೆ ಸೃಷ್ಟಿಯಾಗಿರೋದಲ್ಲ. ಬಿಜೆಪಿಯ ನಿರ್ಲಕ್ಷ್ಯದ ಪರಿಣಾಮ ಇದು ಎಂದು ಬಿಜೆಪಿ ವಿರುದ್ಧ ಟೀಕೆ ಮಾಡಿದ್ದಾರೆ. ವಿರೋಧ ಪಕ್ಷದ ನಾಯಕರು ಉದ್ಯೋಗ ಆಕಾಂಕ್ಷಿಗಳ ದಿಕ್ಕು ತಪ್ಪಿಸುತ್ತಿದ್ದಾರೆ. ಅಶಾಂತಿ ಸೃಷ್ಟಿಸಲು ಯತ್ನಿಸಲಾಗುತ್ತಿದೆ. 2019ರಿಂದ 2023ವರೆಗೆ ನಡೆದ ನೇಮಕಾತಿ ಅಕ್ರಮದಿಂದ ವ್ಯವಸ್ಥೆ ಮೇಲೆ ನಂಬಿಕೆ ಕುಸಿದಿತ್ತು. ನಮ್ಮ ಸರ್ಕಾರ ನೇಮಕಾತಿಯಲ್ಲಿ ಪಾರದರ್ಶಕತೆ ತರಲು ಬದ್ದವಾಗಿದೆ. ಆಂತರಿಕ ನೇಮಕಾತಿ ವಿಚಾರ ನ್ಯಾಯಾಲಯದಲ್ಲಿದ್ದ ಕಾರಣ ನೇಮಕಾತಿ ಪ್ರಕ್ರಿಯೆಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಯಿತು. ಸಾಮಾಜಿಕ ನ್ಯಾಯಕ್ಕೆ ಬದ್ದವಾಗಿರುವ ಸರ್ಕಾರವಾಗಿ ಸಾವಿರಾರು ವಿಧ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ತರುವ ಆತುರದ ನಿರ್ಧಾರ ತೆಗೆದುಕೊಳ್ಳಲಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ನಡೆದುಕೊಳ್ಳುವುದನ್ನ ಆಯ್ಕೆ ಮಾಡಿಕೊಂಡೆವು. ಕಾನೂನು ಸವಾಲಿನ ನಡುವೆ 40 ಸಾವಿರ ನೇಮಕಾತಿ ಮಾಡಲಾಗಿದೆ. ನೇಮಕಾತಿ ವಿಳಂಬ ವಆಗಿರುವ ಕಾರಣಕ್ಕೆ 5 ವರ್ಷ ವಯೋಮಿತಿ ಸಡಿಲಿಕೆಯನ್ನೂ ಮಾಡಲಾಗಿದೆ. ಉಳಿದ ಹುದ್ದೆಯ ನೇಮಕಾತಿಯನ್ನ ವೇಗಗೊಳಿಸುವ ಭರವಸೆ ನೀಡುತ್ತೇನೆ ಎಂದಿದ್ದಾರೆ.

ಸರ್ಕಾರಿ ಹುದ್ದೆ ಭರ್ತಿ ಮಾಡದ ಕಾಂಗ್ರೆಸ್‌‌ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ. ಸಂಪುಟ ದರ್ಜೆ ಹುದ್ದೆಗಳು ಮಾತ್ರ ಸೂಪರ್‌ ಫಾಸ್ಟ್ ಆಗಿ ಭರ್ತಿ ಆಗುತ್ತಿವೆ. ಆದರೆ ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳು ಮಾತ್ರ ಭರ್ತಿಯಾಗುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಧಾರವಾಡದಲ್ಲಿ ಅಸಂಖ್ಯಾತ ಉದ್ಯೋಗಾಕಾಂಕ್ಷಿಗಳು ಬೀದಿಗೆ ಇಳಿದಿದ್ದಾರೆ. ಇದನ್ನು ರಾಜ್ಯ ಸರಕಾರ ಲಘುವಾಗಿ ಪರಿಗಣಿಸಬಾರದು. ಸರ್ಕಾರಿ ಹುದ್ದೆಗಳನ್ನು ಕಾಲ ಕಾಲಕ್ಕೆ ತುಂಬದೇ ನಿರ್ಲಕ್ಷಿಸಿದ ಪರಿಣಾಮ, ಯುವಜನರು ಪ್ರತಿಭಟನೆ ದಾರಿ ತುಳಿದಿದ್ದಾರೆ. ಯುವ ಜನರಿಗೆ ನನ್ನ ಮನವಿ ಇಷ್ಟೇ, ನಿಮ್ಮ ಪ್ರತಿಭಟನೆ ಶಾಂತಿಯುತವಾಗಿರಲಿ, ನಿಮ್ಮೊಂದಿಗೆ ನಾನಿದ್ದೇನೆ. ರಾಜ್ಯದಲ್ಲಿ 2.94 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಬಿದ್ದಿವೆ. ಕಾಂಗ್ರೆಸ್ ಸರ್ಕಾರದ ಆದ್ಯತೆ ಯಾವ ರೀತಿಯಲ್ಲಿದೆ ಎಂಬುದು ಅರ್ಥವಾಗುತ್ತದೆ ಎಂದು ಟೀಕಿಸಿದ್ದಾರೆ.

ಆರ್.ವಿ. ದೇಶಪಾಂಡೆಯವರ ಅಧ್ಯಕ್ಷತೆಯ ಕರ್ನಾಟಕ ಆಡಳಿತ ಸುಧಾರಣೆ ಆಯೋಗದ ವರದಿಯಂತೆ ರಾಜ್ಯದಲ್ಲಿ 7 ಲಕ್ಷ ನಿರುದ್ಯೋಗಿಗಳಿದ್ದಾರೆ. ಇವರೆಲ್ಲರೂ ಸರ್ಕಾರಿ ಹುದ್ದೆಗಳ ನಿರೀಕ್ಷೆಯಲ್ಲಿದ್ದು, ಖಾಲಿ ಹುದ್ದೆಗಳನ್ನು ಸರ್ಕಾರ ಹಂತ ಹಂತವಾಗಿ ಭರ್ತಿ ಮಾಡಬೇಕಿತ್ತು. ಕುರ್ಚಿ ತಿಕ್ಕಾಟದಲ್ಲಿ ಅಮೂಲ್ಯವಾದ 3 ವರ್ಷಗಳನ್ನು ಪೋಲು ಮಾಡಿದೆ. ಯುವ ಜನರತ್ತ ಗಮನ ಹರಿಸಲು ಈ ಸರಕಾರಕ್ಕೆ ಟೈಮಿಲ್ಲ. ನಿರುದ್ಯೋಗ ಎನ್ನುವುದು ಸರಳ ಸಮಸ್ಯೆ ಅಲ್ಲ. ಅದು ಸದಾ ಕುದಿಯುವ ಜ್ವಾಲಾಮುಖಿ ಎಂಬುದನ್ನು ಸರ್ಕಾರ ಮರೆಯಬಾರದು. ಈ ಹೊತ್ತಿಗೇ ಆಡಳಿತಗಾರರು ಎಚ್ಚೆತ್ತು ಬಜೆಟ್‌ನಲ್ಲಿ ಪ್ರತ್ಯೇಕ ಹಣ ಇರಿಸಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಬೇಕಿತ್ತು. ಅತಿ ಹೆಚ್ಚು ಹುದ್ದೆಗಳು ಶಿಕ್ಷಣ, ಆರೋಗ್ಯ, ಪೊಲೀಸ್ ಇಲಾಖೆಗಳಲ್ಲಿ ಖಾಲಿ ಇವೆ. ಬೆಂಗಳೂರಿನ 18 ಆಯಕಟ್ಟಿನ ಪೊಲೀಸ್‌ ಠಾಣೆಗಳಲ್ಲಿ ಇನ್‌ಸ್ಪೆಕ್ಟರ್‌ಗಳೇ ಇಲ್ಲ. ವಿಧಾನಸೌಧದ 3ನೇ ಮಹಿಡಿಯಿಂದ ಕೆಳಗಿಳಿದು ಬಂದು ಯುವಜನರ ಸಮಸ್ಯೆ ಆಲಿಸಬೇಕು ಎಂದು ಆಗ್ರಹಿಸಿದ್ದಾರೆ.

Related posts

ರಾಜ್ಯದಲ್ಲಿ ಬೇಸಿಗೆ ಮಳೆಗೆ ಕಂಗಾಲಾದ ರೈತರು.. ಹಲವು ಬೆಳೆಗಳು ಹಾನಿ..

Publicspot

Mysore Mahisha Mandala; ಮೈಸೂರು ಚಾಮುಂಡಿಗೆ ಕೊಡುವ ಗೌರವ ಮಹಿಷನಿಗೂ ಕೊಡಿ..

Publicspot

Ration Card Cancel; ನಿಮ್ಮ ರೇಷನ್ ಕಾರ್ಡ್ ರದ್ದು ಆಗಬಹುದು.. ರಾಜ್ಯ ಸರ್ಕಾರ ಪ್ಲ್ಯಾನಿಂಗ್..

Publicspot

ಬೆಳೆ ಹಾನಿ ಬಗ್ಗೆ ಪರಿಶೀಲನೆಗೆ ನಾನೇ ಖುದ್ದು ಹೋಗ್ತೀನಿ.. ನೋಡ್ತೀನಿ.. ಗೌಡ್ರು..

Publicspot

ಮಳೆ ಸಂಭ್ರಮದ ಬದಲು ಕಣ್ಣೀರು ತರಿಸಿದ್ಯಾಕೆ..? ಇನ್ನೆಷ್ಟು ದಿನ ಮಳೆ..?

Publicspot

ದುರಾಸೆಯಿಂದ ಪ್ರಕೃತಿಯನ್ನು ನಾಶ ಮಾಡಿದರೆ ನಮ್ಮನ್ನು ನಾವೇ ನಾಶ ಮಾಡಿಕೊಂಡಂತೆ

admin