IPL ಸೀಸನ್ 18ರಲ್ಲಿ ಕಪ್ ಗೆಲ್ಲುವ ಮೂಲಕ ಕಪ್ ನಮ್ದೇ ಅನ್ನೋ ಅಭಿಮಾನಿಗಳ ಕೂಗಿದೆ ಕೊನೆಗೂ ಫಲ ಸಿಕ್ಕುವಂತೆ ಆಟವಾಡಿದ್ದ RCB ಆಟಗಾರರು ಸೀಸನ್ 19ರಲ್ಲೂ ಭರ್ಜರಿ ಆಟವನ್ನು ಮುಂದುವರಿಸಿದ್ದಾರೆ. ಬೆಂಗಳೂರಿನಲ್ಲಿ ಕಳೆದ ವಾರ ಮಾರ್ಚ್ 28ರಂದು ಉದ್ಘಾಟನಾ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ಗೆ ಸೋಲುಣಿಸಿದ್ದ RCB ಟೀನ ಆಟಗಾರರು, ಇದೀಗ ಭಾನುವಾರ (April 05) ನಡೆದ ಪಂದ್ಯದಲ್ಲಿ ಕಟ್ಟಾ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ಮಣಿಸುವ ಮೂಲಕ ಜಯದ ನಾಗಾಲೋಟ ಮುಂದುವರಿಸಿದ್ದಾರೆ. ಅದರಲ್ಲೂ ಚೆನ್ನೈ ವಿರುದ್ಧದ ಗೆಲುವು ಅಭಿಮಾನಿಗಳ ಪಾಲಿಗೆ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತಾಗಿದೆ.

ಸನ್ ರೈಸರ್ಸ್ ವಿರುದ್ಧ ಟಾಸ್ ಗೆದ್ದಿದ್ದ RCB ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಕರಾರುವಕ್ಕು ಪ್ರತಿದಾಳಿ ಮೂಲಕ ಇನ್ನೂ 4 ಓವರ್ ಬಾಕಿ ಇರುವಾಗಲೇ ಜಯದ ನಗೆ ಬೀರಿತ್ತು. ಆದರೆ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಟಾಸ್ ಕೈಕೊಟ್ಟಿತ್ತು. ಚಿನ್ನಸ್ವಾಮಿಯಲ್ಲಿ ಪ್ರತಿದಾಳಿ ಮೂಲಕ ಗೆಲುವು ಸುಲಭ ಅನ್ನೋದನ್ನು ಅರಿತಿದ್ದ ಚೆನ್ನೈ ನಾಯಕ ಋತುರಾಜ್ ಗಾಯಕ್ವಾಡ್, ಮೊದಲು ಬ್ಯಾಟಿಂಗ್ಗೆ ಬರುವಂತೆ RCB ಆಹ್ವಾನ ಕೊಟ್ರು. ಆದರೆ ಬ್ಯಾಟಿಂಗ್ನಲ್ಲಿ ರನ್ಗಳ ಶಿಖರ ಕಟ್ಟುವ ಲೆಕ್ಕಾಚಾರದೊಂದಿಗೆ ಫೀಲ್ಡ್ಗೆ ಇಳಿದ ರಜತ್ ಪಾಟೀದಾರ್ ಬಳಗ, 20 ಓವರ್ಗಳಲ್ಲಿ ಬರೋಬ್ಬರಿ 250 ರನ್ಗಳನ್ನು ಸಿಡಿಸುವ ಮೂಲಕ ಚೆನ್ನೈ ತಂಡದ ಎದುರು ಚೀನಾ ಗೋಡೆಯನ್ನೇ ನಿರ್ಮಿಸಿತ್ತು.
ವಿರಾಟ್ ಕೊಹ್ಲಿ 18 ಎಸೆತದಲ್ಲಿ 28 ರನ್ ಸಿಡಿಸಿ ಕ್ಯಾಚ್ ನೀಡಿ ನಿರ್ಗಮಿಸಿದ ಬಳಿಕ ಉತ್ತರ ಜೊತೆಯಾಟದ ಮೂಲಕ ದೇವದತ್ ಪಡಿಕ್ಕಲ್ 29 ಎಸೆತಕ್ಕೆ 50 ರನ್ ಸಿಡಿಸಿದ್ರು. ಅದೇ ರೀತಿ ಫಿಲಿಪ್ ಸಾಲ್ಟ್ 30 ಎಸೆತದಿಂದ 46 ರನ್, ರಜತ್ ಪಾಟೀದಾರ್ 19 ಎಸೆತಕ್ಕೆ 48 ರನ್, ಟಿಮ್ ಡೆವಿಡ್ ಕೇವಲ 25 ಎಸತಕ್ಕೆ 70 ರನ್ ಸಿಡಿಸುವ ಮೂಲಕ ಚೆನ್ನೈ ಬೌಲರ್ಗಳನ್ನು ಅಟ್ಟಾಡಿಸಿ ರನ್ ಮಳೆ ಸುರಿಸಿದ್ರು. ಈ ಮೂಲಕ 3 ವಿಕೆಟ್ ನಷ್ಟಕ್ಕೆ 250 ರನ್ ಸೇರಿಸಿ, 251 ರನ್ ಟಾರ್ಗೆಟ್ ನೀಡಿದ್ರು. ಚೆನ್ನೈ ಕಡೆ ಸರ್ಫರಾಜ್ ಖಾನ್ 50 ರನ್, ಪ್ರಶಾಂತ್ ವೀರ್ 43 ರನ್, ಜೇಮಿ ಓವರ್ಟನ್ 37 ರನ್ ಗಳಿಸಿದ್ದು ಬಿಟ್ಟರೆ ಉಳಿದವರ ಹೋರಾಟ ಅಷ್ಟೊಂದು ತೀಕ್ಷ್ಣವಾಗಿ ಇರಲಿಲ್ಲ. ಹೀಗಾಗಿ 207 ರನ್ ಗಳಿಸುವ ಹೊತ್ತಿಗೆ ಇನ್ನೂ 2 ಎಸೆತಗಳು ಬಾಕಿ ಇರುವಾಗಲೇ ಆಲೌಟ್ ಆಗಿ ಸೋಲನಪ್ಪಿದರು.

RCB ಪರವಾಗಿ ಬ್ಯಾಟಿಂಗ್ ಅತ್ಯುತ್ತಮವಾಗಿ ಇತ್ತು ಎನ್ನಬಹುದು. ಆದರೆ ಬೌಲಿಂಗ್ನಲ್ಲೂ RCB ಆಟಗಾರರು ಉತ್ತಮ ಕೈಚಳಕ ತೋರಿಸಿ, ಆಲೌಟ್ ಮಾಡುವಲ್ಕಲಿ ಯಶಸ್ವಿ ಆದರು. ಆದರೆ 15 ಓವರ್ಗಳಲ್ಲೇ ಆಲೌಟ್ ಮಾಡುವ ಹಂತದಲ್ಲಿದ್ದರು. ಆದರೆ ಆರಂಭದಿಂದಲೂ ಚೆನ್ನೈ ಆಟಗಾರರು ಮಾಡು ಇಲ್ಲವೇ ಮಡಿ ಹೋರಾಟ ನಡೆಸಿದ್ದರಿಂದ ಬೌಲರ್ಗಳು ರನ್ ಕೊಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೂ ಭುವನೇಶ್ವರ್ ಕುಮಾರ್ 4 ಓವರ್ನಲ್ಲಿ 41 ರನ್ ನೀಡಿ 3 ವಿಕೆಟ್ ಕಬಳಿಸಿದ್ರೆ, ಜಾಕಬ್ ಡಫಿ 58 ರನ್ ನೀಡಿ 2 ವಿಕೆಟ್ ಕಬಳಿಸಿದ್ರು. ಇನ್ನು ಕೃನಾಲ್ ಪಾಂಡ್ಯ 3 ಓವರ್ಗೆ 36 ರನ್ ಕೊಟ್ಟು 2 ವಿಕೆಟ್, ಅಭಿನಂದನ್ ಸಿಂಗ್ 3.4 ಓವರ್ನಲ್ಲಿ 30 ರನ್ ಕೊಟ್ಟು 2 ವಿಕೆಟ್ ಪಡೆದ್ರು. ಸುಯಾಸ್ ಶರ್ಮಾ 4 ಓವರ್ಗೆ 21 ರನ್ ಕೊಟ್ಟು 1 ವಿಕೆಟ್ ಪಡೆದರೂ ರನ್ಗಳ ಓಟಕ್ಕೆ ಬ್ರೇಕ್ ಹಾಕಿದ್ರು. ಒಂದೇ ಓವರ್ನಲ್ಲಿ 19 ರನ್ ನೀಡಿ ಶೆಫರ್ಡ್ ಕೊಂಚ ದುಬಾರಿಯೂ ಆದರು.
ಆದರೆ ಆರ್ಸಿಬಿ-ಚೆನ್ನೈ ನಡುವಿನ ಪಂದ್ಯವನ್ನು RCB ಅಭಿಮಾನಿಗಳು ಇಂಡಿಯಾ – ಪಾಕಿಸ್ತಾನದ ರೀತಿಯಲ್ಲೇ ನೋಡುವುದರಿಂದ ಈ ಪಂದ್ಯದ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಈಗಾಗಲೇ 2 ಪಂದ್ಯಗಳಲ್ಲಿ ಸೋಲುಂಡು ಬೆಂಗಳೂರಿಗೆ ಬಂದಿದ್ದ ಸಿಎಸ್ಕೆ ಟೀಂ, ಬೆಂಗಳೂರಿನಲ್ಲಾದರೂ ಗೆಲುವಿನ ಲಯಕ್ಕೆ ಮರಳಬಹುದು ಎನ್ನಲಾಗಿತ್ತು. ಆದರೆ RCB ಅಭಿಮಾನಿಗಳ ಝೇಂಕಾರದ ಎದುರು ಮಂಕಾದ ಚೆನ್ನೈನ ಸಿಂಹಗಳು RCB ಸಿಂಹಗಳ ಎದುರು ಮಂಡಿಯೂರುವಂತಾಯ್ತು. ಸತತ ಹ್ಯಾಟ್ರಿಕ್ ಸೋಲಿನಿಂದ ಪಾಯಿಂಟ್ ಟೇಬಲ್ನ ಕೊನೇ ಸ್ಥಾನದಲ್ಲಿ ಉಳಿದಿದ್ರೆ RCB ಮಾತ್ರ ಪಾಯಿಂಟ್ ಟೇಬಲ್ನಲ್ಲಿ ಮೊದಲ ಸ್ಥಾನ ಅಲಂಕರಿಸಿ ನಾನೇ ಈ ಬಾರಿಯ ಚಾಂಪಿಯನ್ ಅನ್ನೋ ಸುಳಿವು ಕೊಡುತ್ತಿದೆ.




