ಹಾಸನಾಂಬೆ ದರ್ಶನ ಈ ಬಾರಿ ದಾಖಲೆ ಮಟ್ಟದಲ್ಲಿ ಆಗಲಿದೆ ಅನ್ನೋ ನಿರೀಕ್ಷೆ ಹಾಸನ ಜಿಲ್ಲಾಡಳಿತಕ್ಕೆ ಮೊದಲೇ ಗೊತ್ತಿತ್ತು. ಅದರಂತೆ ಈ ಬಾರಿ ಹಾಸನಾಂಬೆ ದರ್ಶನಕ್ಕೆ ಜನರು ಮುಗಿಬೀಳ್ತಿದ್ದಾರೆ. ಉಚಿತ ದರ್ಶನ ಅಲ್ಲ 300 ರುಪಾಯಿ ಟಿಕೆಟ್ ಪಡೆದು ಕ್ಯೂನಲ್ಲಿ ನಿಂತರೂ ಮೂರ್ನಾಲ್ಕು ಕಿಲೋ ಮೀಟರ್ ದೂರದಿಂದ ಬಂದು ಹೋಗುವಂತಾಗಿದೆ. ಕಳೆದ ವರ್ಷದ ಶುಕ್ರವಾರದ ದಿನ 300 ರೂಪಾಯಿ ಟಿಕೆಟ್ 11 ಸಾವಿರ ಸೇಲಾಗಿತ್ತು. ಆದರೆ ಈ ವರ್ಷ ಒಂದೇ ದಿನ 27 ಲಕ್ಷದಷ್ಟು 300 ರೂಪಾಯಿ ಟಿಕೆಟ್ ಸೇಲಾಗಿದೆ. ಮೊನ್ನೆ ಒಂದೇ ದಿನ ಸಾವಿರ ರೂಪಾಯಿ ಬೆಲೆಯ 30,900 ಟಿಕೆಟ್ ಸೇಲ್ ಆಗಿದೆ. ಕಳೆದ ವರ್ಷ ಕೇವಲ 13,500 ಟಿಕೆಟ್ ಮಾತ್ರ ಸೇಲ್ ಆಗಿತ್ತು. ಕಳೆದ ವರ್ಷ ಒಟ್ಟು 1,40,000 ಟಿಕೆಟ್ಗಳು ಮಾತ್ರ ಸೇಲ್ ಆಗಿತ್ತು. ಈ ವರ್ಷ ಇನ್ನು ಆರು ದಿನ ಬಾಕಿ ಇರುವಾಗಲೇ 1,97,000 ಮೌಲ್ಯದ ಟಿಕೆಟ್ ಸೇಲ್ ಆಗಿದೆ.
ಕಳೆದ ವರ್ಷ ಆನ್ಲೈನ್ನಲ್ಲಿ ಕೇವಲ ಎರಡೂವರೆ ಸಾವಿರ ಟಿಕೆಟ್ ಮಾರಾಟ ಆಗಿತ್ತು. ಈ ವರ್ಷ ಆನ್ಲೈನಲ್ಲೇ 48,000 ಟಿಕೆಟ್ ಮಾರಾಟವಾಗಿದೆ. ಸಾಗರೋಪಾದಿಯಲ್ಲಿ ಜನ ಹಾಸನದ ಕಡೆಗೆ ಬರುತ್ತಿದ್ದಾರೆ. ಆದ್ದರಿಂದ ಈ ರೀತಿ ಪರಿಸ್ಥಿತಿ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ. ಕೆಲವು ವಾಸ್ತವ ಅಂಶಗಳನ್ನು ನಾವು ಹೇಳಲೇಬೇಕಾಗುತ್ತದೆ. ಬೇಗ ದರ್ಶನ ಆದಾಗ ಕೆಲವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಹೆಚ್ಚು ಸಮಯ ತೆಗೆದುಕೊಂಡಾಗ ಬೇಸರ ಆಕ್ರೋಶವನ್ನು ಹೊರಹಾಕಿದ್ದಾರೆ. ಆರಂಭದಲ್ಲಿ ಬೇಗ ದರ್ಶನ ಆಗಿದ್ದು ಕೂಡ ನಿಜ. ಮುಂದಿನ ದಿನಗಳಲ್ಲಿ ಕನಿಷ್ಠ 5 ರಿಂದ 8 ಗಂಟೆ ಸಮಯ ತೆಗೆದುಕೊಳ್ಳುತ್ತದೆ ಎಂದು ನಮ್ಮ ನಿರೀಕ್ಷೆ ಇದೆ. ಬರುವಂತವರು ದರ್ಶನಕ್ಕೆ ಕಾಯೋದಕ್ಕೆ ತಯಾರಾಗಿ ಬರಬೇಕು ಎಂದು ಸಚಿವರು ಮೊದಲೇ ಎಚ್ಚರಿಸಿದ್ದಾರೆ.

ಹಾಸನಾಂಬೆ ದರ್ಶನ ಚೆನ್ನಾಗಿ ದರ್ಶನ ಆಗ್ತಿದೆ ಅಂತ ಮಾಧ್ಯಮದಲ್ಲಿ ಮತ್ತು ಬಾಯಿಂದ ಬಾಯಿಗೆ ಹರಡಿದೆ. ಕಳೆದ ವರ್ಷ ದಕ್ಷಿಣಕ್ಕೆ ಬಂದಾಗ 15 ರಿಂದ 20 ಗಂಟೆ ಸಮಯ ಅವಕಾಶ ತೆಗೆದುಕೊಂಡಿದೆ. ಈ ವರ್ಷ ಅದಕ್ಕಿಂತ ಡಬಲ್ ಜನ ಬರುತ್ತಿದ್ದಾರೆ. ಏಳೆಂಟು ಗಂಟೆಯಲ್ಲಿ ದರ್ಶನಾಗುತ್ತಿದೆ. ಶನಿವಾರ ಹೆಚ್ಚಿನ ಜನರು ಬರುವ ನಿರೀಕ್ಷೆ ಇದೆ. ನಾನು ಭಕ್ತರಲ್ಲಿ ಮನವಿ ಮಾಡುತ್ತೇನೆ ಸಮಯವನ್ನು ಹೆಚ್ಚಿಗೆ ತೆಗೆದುಕೊಳ್ಳುತ್ತದೆ. ಇದು ನಿಮಗೆ ಇಷ್ಟ ಆಗಲಿ ವಾಸ್ತವ ಅಷ್ಟೇ. ದರ್ಶನಕ್ಕೆ ಹೆಚ್ಚಿನ ಸಮಯ ತೆಗೆದುಕೊಂಡರು ಅದಕ್ಕೆ ತಯಾರಾಗಿ ಬರಬೇಕಾಗಿ ಮನವಿ ಮಾಡಿದ್ದಾರೆ ಸಚಿವ ಕೃಷ್ಣ ಬೈರೇಗೌಡ. ದೇವಾಲಯದಲ್ಲಿ ಜನಸಂದಣಿ ಏಕಾಏಕಿ ಹೆಚ್ಚಾಗಿದ್ರಿಂದ ರಾತ್ರೋರಾತ್ರಿ ಹಾಸನಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಬಂದ ಕೂಡಲೇ ಮೈಕ್ ಹಿಡಿದು ಭಕ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ ಸಚಿವರು.
ಹಾಸನಾಂಬೆ ದರ್ಶನ ಬೇಗ ಬೇಗ ಮಾಡಬೇಕು, ಯಾರೂ ಕೂಡ ನಿಧಾನವಾಗಿ ಹೋಗಬೇಡಿ ಎಂದು ಮನವಿ ಮಾಡಿದ್ದಾರೆ ಸಚಿವರು. ನೀವು ನಿಧಾನವಾದರೆ ನಮ್ಮ ಸಿಬ್ಬಂದಿ ನಿಮ್ಮನ್ನ ಎಳೆಯಲೇ ಬೇಕಾಗಿದೆ. ಒಂದು ದಿನಕ್ಕೆ ಮೂರು ಲಕ್ಷ ಜನ ದರ್ಶನ ಮಾಡಿದ್ದಾರೆ. ರಾಜ್ಯದ ಯಾವುದೇ ದೇವಾಲಯದಲ್ಲಿ ಇಷ್ಟು ದರ್ಶನ ಸಾಧ್ಯವಾಗೋದಿಲ್ಲ. ಭಕ್ತರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ ಕೃಷ್ಣ ಬೈರೇಗೌಡ. ಇನ್ನೂ ಹಾಸನಾಂಬೆ ಉತ್ಸವ ವೇಳೆ ಕರ್ತವ್ಯ ಲೋಪದ ಆರೋಪದ ಮತ್ತೆ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಮೂವರು ಅಡುಗೆ ಸಿಬ್ಬಂದಿ ಅಮಾನತುಗೊಳಿಸಿ ಆದೇಶ ಮಾಡಲಾಗಿದೆ. ಆನಂದ ಹರಿಜನ್, ಪ್ರಸಾದ್. ಹೆಚ್, ಮಧುಕುಮಾರ್ ಅವರನ್ನು ಅಮಾನತು ಮಾಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕುಮಾರ.ಎಂ. ಆದೇಶ ಮಾಡಿದ್ದಾರೆ. ಹಾಸನಾಂಬ ಜಾತ್ರಾ ಮಹೋತ್ಸವದ ಕರ್ತವ್ಯನಿರತ ಅಧಿಕಾರಿಗಳು. ಆದರೆ ಈ ವೇಳೆ ಮೂವರು ಅಡುಗೆ ಕೆಲಸದವರು ಗೈರಾಗಿದ್ದರು. ಹೀಗಾಗಿ ಶಿಸ್ತು ಕ್ರಮ ಜರುಗಿಸಲಾಗಿದೆ.
ಹಾಸನಾಂಬೆ ದರ್ಶನಕ್ಕೆ ಇಂದಿನಿಂದ ನೂರ್ನಾಲ್ಕು ದಿನ ಲಕ್ಷ ಲಕ್ಷ ಜನರು ಆಗಮಿಸಿದರೂ ಅಚ್ಚರಿಯೇನಿಲ್ಲ. ಇಂದಿನಿಂದ ಸಾಲು ಸಾಲು ದೀಪಾವಳಿ ರಜೆ ಇರುವುದರಿಂದ ಜನಸಂಖ್ಯೆ ನಿಯಂತ್ರಣಕ್ಕೆ ಜಿಲ್ಲಾಡಲಿತ ಪರದಾಡುವುದು ಕಟ್ಟಿಟ್ಟ ಬುತ್ತಿ. ಒಂದು ವೇಳೆ ಸಾವಿರ ಸಾವಿರ ಜನರು ಒಂದು ಕಡೆ ಜಮಾವಣೆ ಆದಾಗ ತಳ್ಳಾಟ ನೂಕಾಟ ಆಗುವ ಸಾಧ್ಯತೆ ಇರುತ್ತದೆ. ಈ ವೇಳೆ ಉಸಿರುಗಟ್ಟುವ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಇದೆ. ವಯಸ್ಸಾದವರು, ಗರ್ಭಿಣಿಯರು, ಮಕ್ಕಳನ್ನು ಕರೆದೊಯ್ಯುವ ಮಹಿಳೆಯರು ಸ್ವಲ್ಪ ಎಚ್ಚರವಹಿಸಿದ್ರೆ ಉತ್ತಮ. ಎಲ್ಲರೂ ದರ್ಶನ ಮಾಡುವ ಆತುರದಲ್ಲೇ ಇರುತ್ತಾರೆ. ಪಕ್ಕದಲ್ಲಿ ನಿಂತವನು ಬಿದ್ದವನನ್ನು ನೋಡುವ ಉಸಾಬರಿಗೆ ಹೋಗುವುದಿಲ್ಲ ಎನ್ನುವುದನ್ನು ಜನರು ಅರ್ಥ ಮಾಡಿಕೊಂಡರೆ ಅನಾಹುತ ಆಗುವುದನ್ನು ತಪ್ಪಿಸಿದಂತೆಯೇ ಸರಿ.


