The Public Spot
ರಾಜ್ಯ

Independence Day: 79ನೇ ಸ್ವಾತಂತ್ರ್ಯೋತ್ಸವಕ್ಕೆ ನೀವೂ ಹೋಗಬಹುದು.. ಪಾಸ್‌ ಎಲ್ಲಿ ಸಿಗುತ್ತೆ ಗೊತ್ತಾ..?

ದೇಶಾದ್ಯಂತ 79ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಆಗಸ್ಟ್ 15ರಂದು ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ಮಾಡಲಿದ್ದು, ರಾಜ್ಯ ಗೃಹ ಇಲಾಖೆ ಮಾಣಿಕ್‌ ಷಾ ಪರೇಡ್‌ ಮೈದಾನದ ಸುತ್ತಲೂ ಬಿಗಿ ಬಂದೋಬಸ್ತ್ ಮಾಡಿಕೊಂಡಿದೆ.. ಶುಕ್ರವಾರ ಬೆಳಗ್ಗೆ 9 ಗಂಟೆಗೆ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ಮಾಡಲಿದ್ದು, ಪರೇಡ್ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಧ್ವಜಾರೋಹಣ ಬಳಿಕ ತೆರೆದ ಜೀಪ್‌ನಲ್ಲಿ ಮುಖ್ಯಮಂತ್ರಿ ಗೌರವರಕ್ಷೆ ಸ್ವೀಕರಿಸಲಿದ್ದಾರೆ. KSRP, CRPF, BSF, CAR, GOA POLICE, KSISF, ಟ್ರಾಫಿಕ್ ಪೊಲೀಸರು, ಮಹಿಳಾ ಪೊಲೀಸರು, ಗೃಹರಕ್ಷಕ ದಳ, ಟ್ರಾಫಿಕ್ ವಾರ್ಡನ್ಸ್‌, ಅಗ್ನಿಶಾಮಕ ದಳ, ಶ್ವಾನದಳ ಹಾಗೂ ಬ್ಯಾಂಡ್‌ ಸೇರಿದಂತೆ 35 ತುಕಡಿಗಳಿಂದ 1,150 ಮಂದಿ ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ.

ಸ್ವಾತಂತ್ರ್ಯೋತ್ಸವ ಸಮಾರಂಭಕ್ಕೆ ಬರುವ ಸಾರ್ವಜನಿಕರಿಗೆ ಇದೇ ಮೊದಲ ಬಾರಿ ಆನ್‍ಲೈನ್ ಮೂಲಕ ಇ-ಪಾಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಆಸಕ್ತರು ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ಆಧಾರ್ ಹಾಗೂ ಮೊಬೈಲ್ ನಂಬರ್ ನಮೂದಿಸಿ ಉಚಿತವಾಗಿ ಪಾಸ್‌ ಪಡೆದುಕೊಳ್ಳಬಹುದಾಗಿದೆ. ಈ ಬಾರಿ 3 ಸಾವಿರ ಇ-ಪಾಸ್‌ ನೀಡಲು ನಿರ್ಧಾರ ಮಾಡಿದ್ದು, ಒಂದು ವೇಳೆ ಆನ್‌ಲೈನ್‌ನಲ್ಲಿ ನಿರೀಕ್ಷಿತ ಟಿಕೆಟ್‌ ಬುಕ್ಕಿಂಗ್ ಆಗದಿದ್ದರೆ ಮಾತ್ರ ಉಳಿದ ಪಾಸ್‌ಗಳನ್ನ ಆಫ್‌ಲೈನ್ ಮೂಲಕ ವಿತರಿಸಲು ನಿರ್ಧಾರ ಮಾಡಲಾಗಿದೆ ಎಂದು ಬೆಂಗಳೂರು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.

ಮಾಣಿಕ್‌ ಷಾ ಪರೇಡ್‌ ಮೈದಾನದ ಸುತ್ತಮುತ್ತ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ 2 ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.. ಮಾಣಿಕ್‌ ಷಾ ಪರೇಡ್ ಮೈದಾನದ ಸುತ್ತಮುತ್ತಲು ಈಗಾಗಲೇ ಸುಮಾರು 500 ಸಿಸಿ ಕ್ಯಾಮೆರಾಗಳಿದ್ದು, ಸ್ವಾತಂತ್ರ್ಯೋತ್ಸವದ ಅಂಗವಾಗಿ ಹೆಚ್ಚುವರಿಯಾಗಿ 100 ಸಿಸಿಟಿವಿ ಹಾಗೂ 2 ಬ್ಯಾಗೇಜ್ ಸ್ಕ್ಯಾನರ್‌ಗಳನ್ನ ಅಳವಡಿಸಲಾಗಿದೆ‌. ಜೊತೆಗೆ ಆ್ಯಂಬುಲೆನ್ಸ್ ಮತ್ತು ವೈದ್ಯಕೀಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ವಾಹನಗಳನ್ನ ನಿಯೋಜಿಸಲಾಗಿದೆ. ಸಮಾರಂಭಕ್ಕೆ ಬರುವ ಜನರು ಬೆಳಗ್ಗೆ 8.30ರ ಒಳಗಾಗಿ ತಮ್ಮ ತಮ್ಮ ಆಸನಗಳಲ್ಲಿ ಆಸೀನರಾಗಿರಬೇಕು. ಇ-ಪಾಸ್ ಹೊಂದಿರುವವರು ಮಣಿಪಾಲ್ ಸೆಂಟರ್ ಕಡೆಯಿಂದ ಕಬ್ಬನ್ ರಸ್ತೆ ಮೂಲಕ ಗೇಟ್ ನಂಬರ್ 5 ರಲ್ಲಿ ಆಗಮಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರು ತಮ್ಮೊಂದಿಗೆ ಅನಗತ್ಯ ಲಗೇಜ್ ಹಾಗೂ ಇತರೆ ನಿಷೇಧಿತ ವಸ್ತುಗಳನ್ನ ತರುವಂತಿಲ್ಲ. ಸಿಗರೇಟ್, ಬೆಂಕಿ ಪೊಟ್ಟಣ, ಕರಪತ್ರಗಳು, ಬಣ್ಣದ ದ್ರಾವಣ, ವೀಡಿಯೋ ಮತ್ತು ಸ್ಟಿಲ್ ಕ್ಯಾಮರಾ, ನೀರಿನ ಬಾಟಲ್ ಅಥವಾ ಕ್ಯಾನ್‌ಗಳು, ಶಸ್ತ್ರಾಸ್ತ್ರಗಳು, ಹರಿತವಾದ ವಸ್ತು ಅಥವಾ ಚಾಕು ಚೂರಿ, ಕಪ್ಪು ಕರವಸ್ತ್ರಗಳು, ತಿಂಡಿ ತಿನಿಸು, ಮದ್ಯದ ಬಾಟಲ್, ಮಾದಕ ವಸ್ತುಗಳು, ಪಟಾಕಿ ಮತ್ತು ಸ್ಫೋಟಕ ವಸ್ತುಗಳು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಜೊತೆಗೆ ಜನರು ತಮ್ಮ ತಮ್ಮ ಪಾಸ್‌ಗಳಲ್ಲಿ ನಮೂದಿಸಲ್ಪಟ್ಟ ಗೇಟ್‌ನ ಮೂಲಕ ಮೈದಾನದೊಳಗೆ ಪ್ರವೇಶಿಸಬೇಕು ಎಂದು ಸೂಚಿಸಲಾಗಿದೆ.

ಆಗಸ್ಟ್ 15ರಂದು ಬೆಳಗ್ಗೆ 8 ಗಂಟೆಯಿಂದ 11 ಗಂಟೆ ವರೆಗೆ ಕಬ್ಬನ್ ರಸ್ತೆಯ ಬಿಆರ್‌ವಿ ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್‌ನ ಎರಡೂ ದಿಕ್ಕುಗಳಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಮಾಡಲಾಗಿದೆ.. ಸೆಂಟ್ರಲ್ ಸ್ಟ್ರೀಟ್‌ನ, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೆ. ಕಬ್ಬನ್ ರಸ್ತೆಯ, ಸಿಟಿಓ ವೃತ್ತದಿಂದ ಕೆ.ಆರ್.ರಸ್ತೆ ಹಾಗೂ ಕಬ್ಬನ್ ರಸ್ತೆ ಜಂಕ್ಷನ್‌ವರೆಗೆ ಎಂ.ಜಿ.ರಸ್ತೆಯ ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ಪಾರ್ಕಿಂಗ್‌ ನಿಷೇಧಿಸಲಾಗಿದೆ. ಆದಷ್ಟು ಸಾರ್ವಜನಿಕ ಸಾರಿಗೆ ವಾಹನಗಳಾದ ಬಿಎಂಟಿಸಿ, ಮೆಟ್ರೋ ಸೇವೆಗಳನ್ನ ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.. ಈ ಬಾರಿ ಪಂಚ ಗ್ಯಾರಂಟಿಗಳ ಆರ್ಥಿಕ ಸ್ವಾತಂತ್ರ್ಯ ಹೆಸರಿನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಯೋಧರಿಂದ ನಡೆಯುತ್ತಿದ್ದ ಪರೇಡ್ ಈ ಬಾರಿ ಇರಲ್ಲ.

Related posts

Kannada Sahithya Academy; ಯುವ ಪತ್ರಕರ್ತರಿಗೆ ಕೋಟೆ ನಾಡಲ್ಲಿ ಕನ್ನಡ ಸಾಹಿತ್ಯದ ರಸದೌತಣ

Publicspot

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆಸಿದ ಎತ್ತಿನಹೊಳೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು:

admin

ಜ್ಞಾನಭಾರತಿ ಆವರಣದಲ್ಲಿ ತಿಮ್ಮಕ್ಕ ಅಂತ್ಯಕ್ರಿಯೆ.. ವೃಕ್ಷಮಾತೆಯ ಕೊನೆ ಆಸೆ ಏನು ಗೊತ್ತಾ..?

Publicspot

RAIN DAMAGES IN KARNATAKA: ಕರ್ನಾಟಕದಲ್ಲಿ ಮಳೆ ಅಬ್ಬರದ ಎಫೆಕ್ಟ್‌ ಹೇಗಿದೆ..?

Publicspot

Caste Census Extended: ಈ ತಿಂಗಳಾಂತ್ಯಕ್ಕೆ ಜಾತಿಜನಗಣತಿ ಸಮೀಕ್ಷೆ ನಿಜವಾಗಲೂ ಮುಗಿಯುತ್ತಾ..?

Publicspot

ಮೀಸಲಾತಿ ಮಸೂದೆಗೆ ಅಂಕಿತ.. ಆದರೂ ಹಳೇ ಮೀಸಲಾತಿಯಲ್ಲಿ ನೇಮಕಾತಿ ಯಾಕೆ..?

Publicspot