ಉಪರಾಷ್ಟ್ರಪತಿಗಳಾಗಿದ್ದ ಜಗದೀಪ್ ಧನಕರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ತಮಿಳುನಾಡು ಮೂಲದ ಬಿಜೆಪಿ ನಾಯಕ ಸಿ.ಪಿ ರಾಧಾಕೃಷ್ಣ ಅವರನ್ನು NDA ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಅಭ್ಯರ್ಥಿಯನ್ನು ಅಂತಿಮ ಮಾಡಲಾಗಿದೆ. ಭಾನುವಾರ ಸಂಜೆ ನಡೆದ ಸಭೆಯಲ್ಲಿ ಮಹಾರಾಷ್ಟ್ರ ರಾಜ್ಯಪಾಲರಾಗಿ ಇರುವ ಸಿ.ಪಿ ರಾಧಾಕೃಷ್ಣನ್ ಅವರ ಹೆಸರನ್ನ ಒಮ್ಮತದಿಂದ ಆಯ್ಕೆ ಮಾಡಲಾಗಿದೆ. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಎನ್‌ಡಿಎ ಬಣದ ನಾಯಕರು ಭಾಗಿಯಾಗಿದ್ದರು.

ತಮಿಳುನಾಡು ಮೂಲದ ಬಿಜೆಪಿ ನಾಯಕ ಆಗಿರುವ 67 ವರ್ಷದ ಸಿ.ಪಿ ರಾಧಾಕೃಷ್ಣ ಅವರು RSS ಮೂಲದಿಂದ ಬಂದವರಾಗಿದ್ದಾರೆ. ಹಾಲಿ ಮಹಾರಾಷ್ಟ್ರದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸುತ್ತಿರುವ ಸಿ.ಪಿ ರಾಧಾಕೃಷ್ಣ, ಎರಡು ಬಾರಿ ಲೋಕಸಭೆಗೂ ಆಯ್ಕೆ ಆಗಿದ್ದರು. ತಮಿಳುನಾಡಿನ ಪ್ರಭಾವಿ ಗೌಂಡರ್ ಜಾತಿಗೆ ಸೇರಿದ ಸಿ.ಪಿ ರಾಧಾಕೃಷ್ಣ ಅವರು OBC ಸಮುದಾಯಕ್ಕೆ ಸೇರಿದವರು. ಸಿ.ಪಿ ರಾಧಾಕೃಷ್ಣ ಅವರನ್ನು ವಿರೋಧ ಪಕ್ಷಗಳೂ ಕೂಡ ಬೆಂಬಲಿಸುವ ನಿರೀಕ್ಷೆ ಇದೆ ಎಂದಿದ್ದಾರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ. ಮುಂದಿನ ಉಪರಾಷ್ಟ್ರಪತಿ ಅವರನ್ನು ನಾವು ಒಮ್ಮತದಿಂದ ಆಯ್ಕೆ ಮಾಡಬೇಕೆಂದು ಬಯಸುತ್ತೇವೆ. ವಿರೋಧ ಪಕ್ಷಗಳ ನಾಯಕರ ಜೊತೆಗೂ ಮಾತನಾಡಿದ್ದೇವೆ ಎಂದಿದ್ದಾರೆ.

ಸೆಪ್ಟೆಂಬರ್ 9ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಆಗಸ್ಟ್ 22 ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ. NDA ಮೈತ್ರಿಕೂಟ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಬಹುಮತ ಹೊಂದಿದ್ದು, ಸಿ.ಪಿ ರಾಧಾಕೃಷ್ಣ ಅವರ ಆಯ್ಕೆಗೆ ಯಾವುದೇ ಅಡ್ಡಿಯಿಲ್ಲ ಎನ್ನಬಹುದು. ಆದರೆ INDIA ಒಕ್ಕೂಟ ಚುನಾವಣೆ ನಡೆಯಬೇಕು ಎಂದು ಬಯಸಿದರೆ ಮಾತ್ರ ಚುನಾವಣೆ ನಡೆಯಲಿದೆ. ಒಂದು ವೇಳೆ INDIA ಒಕ್ಕೂಟ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಸ್ಪರ್ಧೆಗೆ ಇಳಿಸದಿದ್ದರೆ ಅವಿರೋಧ ಆಯ್ಕೆ ಆಗಲಿದೆ. ಒಂದು ವೇಳೆ ಚುನಾವಣೆ ನಡೆದರೂ ಬಿಜೆಪಿ ನೇತೃತ್ವದ NDA ಅಭ್ಯರ್ಥಿ ಸಿ.ಪಿ ರಾಧಾಕೃಷ್ಣ ನಿರಾತಂಕವಾಗಿ ಆಯ್ಕೆ ಆಗಲಿದ್ದಾರೆ.

1957ರಲ್ಲಿ ತಮಿಳುನಾಡಿನ ತಿರುಪ್ಪೂರ್‌ನಲ್ಲಿ ಜನಿಸಿದ ಸಿ.ಪಿ ರಾಧಾಕೃಷ್ಣ, 1998ರಲ್ಲಿ ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆ ಆಗಿದ್ದರು. ಆ ಬಳಿಕ 1999ರಲ್ಲಿ ಅದೇ ಕ್ಷೇತ್ರದಿಂದ ಪುನರಾಯ್ಕೆ ಆಗಿದ್ದರು. ಆ ಬಳಿಕ 2004ರಿಂದ 2007ರ ತನಕ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಕೆಲಸ ಮಾಡಿದರು. 2020 ರಿಂದ 2022ರ ತನಕ ಕೇರಳ ರಾಜ್ಯ ಉಸ್ತುವಾರಿಯಾಗಿ ಕೆಲಸ ಮಾಡಿದ್ದರು. 2023ರ ಫೆಬ್ರವರಿಯಿಂದ 2024 ಜುಲೈ ತನಕ ಜಾರ್ಖಂಡ್ ರಾಜ್ಯಪಾಲರಾಗಿ, ಜೊತೆಗೆ ತೆಲಂಗಾಣ ಮತ್ತು ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಆಗಿ ಹೆಚ್ಚುವರಿ ಹೊಣೆ ನಿರ್ವಹಿಸಿದ್ದರು. 2024ರ ಜುಲೈನಿಂದ ಮಹಾರಾಷ್ಟ್ರ ರಾಜ್ಯಪಾಲರಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ದೇಶದ ಉಪರಾಷ್ಟ್ರಪತಿ ಪಟ್ಟಕ್ಕೆ ಅಭ್ಯರ್ಥಿ ಆಗಿದ್ದಾರೆ.


