The Public Spot
ರಾಜಕೀಯ

Congress MP Opposed Cm Decision; ಸಿದ್ದರಾಮಯ್ಯ ಆಸೆಗೆ ತಣ್ಣೀರು ಎರಚಿದ ಕಾಂಗ್ರೆಸ್‌ ಸಂಸದ

ಕುರುಬರನ್ನ ಎಸ್‌ಟಿಗೆ ಸೇರಿಸೋ ವಿಚಾರ ಸಂಬಂಧ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ​ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಸಚಿವ ಸತೀಶ್‌ ಜಾರಕಿಹೊಳಿ, ಸರ್ಕಾರ ಶಿಫಾರಸು ಮಾಡಿದ ತಕ್ಷಣ ಆಗುತ್ತೆ ಎಂದು ಎನ್ನಿಸಲ್ಲ. ಕಳೆದ 20 ವರ್ಷಗಳಿಂದ ಸಾಕಷ್ಟು ಬಾರಿ ಶಿಫಾರಸು ಆಗಿವೆ. ಯಾವುದೇ ಕಾರಣಕ್ಕೂ ST ಸಮುದಾಯಗಳಿಗೆ ಆತಂಕ ಬೇಡ ಎಂದಿದ್ದಾರೆ ಸತೀಶ್ ಜಾರಕಿಹೊಳಿ. ರಾಜ್ಯ ಸರ್ಕಾರ ಶಿಫಾರಸು ಮಾಡಿದ ತಕ್ಷಣ ಆಗುತ್ತೆ ಎಂದು ಅನ್ನಿಸಲ್ಲ. ಎಸ್‌ಟಿಗೆ ಹೊಸದಾಗಿ ಸೇರಿಸಿದರೆ ಮೀಸಲಾತಿ ಏರಿಸಬೇಕಾಗುತ್ತದೆ. ಕೇಂದ್ರ ಸರ್ಕಾರ ಸುಮ್ಮನೆ ಏನನ್ನೂ ಮಾಡಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆದರೆ ದಾವಣಗೆರೆಯಲ್ಲಿ ಮಾತನಾಡಿರುವ ಬಳ್ಳಾರಿ ಸಂಸದ ಇ ತುಕಾರಾಂ, ಕುರುಬ ಸಮುದಾಯವನ್ನು ಎಸ್‌ಟಿ ಸಮುದಾಯಕ್ಕೆ ಸೇರ್ಪಡೆ ಮಾಡುವ ರಾಜ್ಯ ಸರ್ಕಾರದ ಚಿಂತನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ರಾಜ್ಯಮಟ್ಟದ ಮಹತ್ವದ ಸಭೆ ಮಾಡಿದ್ದಾರೆ. ರಾಜಕೀಯ ಸಂಸ್ಕಾರಸ್ಥನಾಗಿ ನಾನು ಮಾತನಾಡುತ್ತಿದ್ದೇನೆ. ರಾಜಕೀಯ ಸಂಸ್ಕಾರ ಬೇಕು, ನಾನು ನನ್ನ ಜವಾಬ್ದಾರಿ ಅರಿತಿದ್ದೇನೆ. ನಾನು ನಿಮಗೆ ಸಂದೇಶ ಕೊಡಬೇಕು ಅಂತಾ ಬಂದಿದ್ದೇನೆ. ರಾಜಕಾರಣಿಗಳನ್ನು ನೋಡಿ ಸಮಾಜ ಕಲಿಯಬೇಕು ಆ ರೀತಿ ರಾಜಕಾರಣಿಗಳು ಇರಬೇಕು ಎಂದಿದ್ದಾರೆ.

ಸ್ವಾತಂತ್ರ್ಯ ಬಂದು 78 ವರ್ಷ ಆದರೂ ಸುಸಂಸ್ಕೃತ ಸಭೆ ನಡೀತಿಲ್ಲ. ನಾವು ಈ ಹಿಂದೆ ತಪ್ಪು ಮಾಡಿರಬಹುದು. ಪ್ರಜ್ಞಾವಂತರಾಗಿ ನಾವು ಮಾತನಾಡಬೇಕು. ಇವತ್ತಿನ ಸಭೆ ನಡೆದಿದ್ದು, ಕಮ್ಯುನಿಕೇಷನ್ ಗ್ಯಾಪ್ ಆಗಿದೆ. ಸಚಿವ ಸತೀಶ್ ಜಾರಕಿಹೊಳಿ ಸೇರಿ ಹಲವರು ಸಭೆಗೆ ಬಂದಿಲ್ಲ. ಸಂಪುಟ ಸಭೆ ಇದೆ,ಬುಧವಾರ, ಗುರುವಾರ ಸಮಿತಿ ಸಭೆಗಳು ಇರುತ್ತವೆ. ಈ ವಿಚಾರವನ್ನು ನಾನು ಗಮನಕ್ಕೆ ತರುತ್ತಿದ್ದೇ‌ನೆ. ಎಲ್ಲರಿಗೂ ನೋಟಿಸ್ ಕಳಿಸಿ ಆಗ ಯಾರು ಬರದಿದ್ದರೆ ಹೇಳಿ, ಎಲ್ಲರನ್ನೂ ಕರೆದು ಡೇಟ್ ಫಿಕ್ಸ್ ಮಾಡಿ ಸಭೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಂತಾ ನಾನು ಸಮಾಜದ ಸಭೆಯಲ್ಲಿ ಮಾತನಾಡಿಲ್ಲ. ಎಂದೂ ಸಮಾಜದ ಸಭೆಯಲ್ಲಿ ನಾನು ರಾಜಕಾರಣ ಮಾತನಾಡಿಲ್ಲ. ಆದ್ರೆ ಈಗ ಮಾತನಾಡಬೇಕಾದ ಪರಿಸ್ಥಿತಿ ಇದೆ ಎಂದಿದ್ದಾರೆ.

ಇ‌.ತುಕಾರಾಂ ಸಂಸದರಾಗಲು ಮನಮೋಹನ ಸಿಂಗ್ ಸರ್ಕಾರ ನೀಡಿದ ಮೀಸಲಾತಿ ಕಾರಣ. ಊಳುವವನೇ ಭೂಮಿ ಒಡೆಯ ಕಾರ್ಯಕ್ರಮ ನೀಡಿದ್ದು ಯಾರು..? ಎಸ್‌ಸಿ, ಎಸ್‌ಟಿಗೆ ಹೆಚ್ಚಿನ ಸೌಲಭ್ಯ ನೀಡಿದ್ದು ಕಾಂಗ್ರೆಸ್ ಸರ್ಕಾರ ಎಂದ ಸಂಸದ ಇ ತುಕಾರಾಂ ಮಾತಿಗೆ ಸಭೆಯಲ್ಲಿ ಸೇರಿದ್ದ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಸ್‌ಟಿ ಮೀಸಲಾತಿ ಶೇಕಡ 7.5ರಷ್ಟು ಏರಿಕೆಗೆ ನಮ್ಮ ಕೊಡುಗೆ ಇಲ್ವಾ..? ಎಂದು ಪ್ರಶ್ನಿಸಿದ ಸಂಸದ ಇ.ತುಕಾರಾಂ, ನಾನು ಸಚಿವ ಸತೀಶ್ ಜಾರಕಿಹೊಳಿ ಸೇರಿ ಹಲವರು ಪ್ರಯತ್ನಪಟ್ಟಿದ್ದೇವೆ. ಮೌನದಿಂದ ಗಾಂಧೀಜಿ ಸ್ವಾತಂತ್ರ್ಯ ಪಡೆದರು. ಕೈ ಮುಗಿದು ಕೇಳ್ರೋ ಎಂದು ಸಭಿಕರಲ್ಲಿ ಮನವಿ ಮಾಡಿರುವ ಸಂಸದ ತುಕಾರಾಂ, ಸಮಾಜಕ್ಕೆ ಅನ್ಯಾಯ ಆದ್ರೆ ಅರ್ಧ ಗಂಟೆಯೂ ನಾನು ರಾಜಕಾರಣದಲ್ಲಿ ಇರಲ್ಲ. ಸಮಾಜ ನನಗೆ ಕೊಟ್ಟಿದೆ ನಾನು ಸಮಾಜಕ್ಕೆ ಏನಾದರೂ ಕೊಡಬೇಕು. ರಾಜಣ್ಣ, ಸತೀಶಣ್ಣ, ನಾಗೇಂದ್ರ ಎಲ್ಲರೂ ಸೇರಿ ಜೊತೆಗೆ ಇರ್ತೀವಿ. ನಮ್ಮ ಸಮಾಜಕ್ಕೆ ಅನ್ಯಾಯ ಆಗಲು ಬಿಡಲ್ಲ ಎಂದಿದ್ದಾರೆ.

ಎಸ್‌ಟಿ ನಕಲಿ ಪ್ರಮಾಣ ಪತ್ರ ಪಡೆದ ಬಗ್ಗೆ ಜಿಲ್ಲಾವಾರು ದಾಖಲೆ ಸಂಗ್ರಹಿಸಿ, ಅಂಕಿ ಸಂಖ್ಯೆ ಸಮೇತ ನಾವು ಮಾತನಾಡಬೇಕಾಗುತ್ತದೆ. ತೋಳ್ಬಲ ಎಲ್ಲಾ ನಡೆಯಲ್ಲ, ಮೀಸೆ ತಿರುಗಿದವರೆಲ್ಲಾ ಮಣ್ಣಾದರೋ ಎಂದಿದ್ದಾರೆ ತುಕಾರಾಂ. ನಾನೇನಾದರೂ ತಪ್ಪು ಮಾತನಾಡಿದ್ರೆ ಕ್ಷಮೆ ಇರಲಿ ಎಂದು ಭಾಷಣ ಮುಗಿಸಿದ ತುಕಾರಾಂ, ಸಿದ್ದರಾಮಯ್ಯ ನೇತೃತ್ವದಲ್ಲಿ ಕುರುಬರನ್ನು ಎಸ್‌ಟಿಗೆ ಸೇರ್ಪಡೆ ಮಾಡಬೇಕು ಅನ್ನೋ ನಿರ್ಧಾರವನ್ನು ವಿರೋಧಿಸಿದ್ದಾರೆ. ಸಚಿವ ಸತೀಶ್‌ ಜಾರಕಿಹೊಳಿ ಕೇಂದ್ರ ಸರ್ಕಾರ ಒಪ್ಪಲ್ಲ ಎನ್ನುವ ಮೂಲಕ ಏನೂ ಆಗಲ್ಲ ಎಂದಿದ್ದಾರೆ. ಆದರೆ ಕಾಂಗ್ರೆಸ್‌ ಸಂಸದ ಇ ತುಕರಾಂ ಮಾತ್ರ ನೇರವಾಗಿ ವಿರೋಧ ಮಾಡಿದ್ದಾರೆ.

Related posts

ರಾಜಣ್ಣನ ಬಳಿ ರಾಜೀನಾಮೆ ಕೇಳಿದ್ರೂ ಕೊಡ್ತಿದ್ರು.. ಆದರೆ ವಜಾ ಮಾಡಿದ್ಯಾಕೆ..?

Publicspot

ಮಾಲೂರು ಕ್ಷೇತ್ರದ ಮರು ಮತ ಎಣಿಕೆ.. ಶಾಸಕತ್ವ ಬದಲಾಗೋದು ಪಕ್ಕಾನಾ..?

Publicspot

JDS ಪಾದಯಾತ್ರೆ ಅರ್ಧಕ್ಕೆ ತಡೆದ ಪೊಲೀಸರು.. 18ಕ್ಕೆ ಬೃಹತ್​ ಹೋರಾಟ

Publicspot

ಮನರೇನಾ ಹೆಸರು ಬದಲಿಸದಂತೆ ಕಾಂಗ್ರೆಸ್‌ ಲೋಕಭವನ ಚಲೋ!

Publicspot

ಮಂತ್ರಿಯಾಗಿ ನಾಳೆ ಮೊದಲ ಸದನ.. ಖಾತೆ ಪಡೆದ ಸಚಿವರು ಏನಂದ್ರು..?

Publicspot

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸರಿಯಾದ ರೀತಿಯಲ್ಲಿ ಸಿದ್ದತೆಗಳನ್ನು ಮಾಡಿ

admin