The Public Spot
ರಾಜಕೀಯ

JDS – BJP ಮೈತ್ರಿ ಹಾಳಾದರೆ ಹಾಸನದ ಕಿತಾಪತಿಯೇ ಕಾರಣ..?

ಕೋಲಾರದ ಕಾರ್ಯಕ್ರಮದಲ್ಲಿ ಮಾತನಾಡಿದ ನಿಖಿಲ್​ ಕುಮಾರಸ್ವಾಮಿ, ಬಿಜೆಪಿ – ಜೆಡಿಎಸ್​ ನಡುವೆ ಯಾವುದೇ ಸಮಸ್ಯೆ ಇಲ್ಲ. ನಾವು ಗ್ರೇಟರ್​ ಬೆಂಗಳೂರು ಚುನಾವಣೆಯನ್ನು ಎದುರು ನೋಡುತ್ತಿದ್ದು, ಎರಡೂ ಪಕ್ಷಗಳೂ ಒಟ್ಟಾಗಿ ಸೇರಿ ಉತ್ತಮ ಫಲಿತಾಂಶ ಪಡೆಯುವ ನಿರೀಕ್ಷೆಯಿದೆ ಎಂದು ಮಾತನಾಡುತ್ತಿದ್ದರೆ, ಮತ್ತೊಂದು ಕಡೆ ಜೆಡಿಎಸ್​ ತವರು ಜಿಲ್ಲೆ ಹಾಸನದಲ್ಲಿ ಸ್ವತಃ ಮಾಜಿ ಶಾಸಕ ಪ್ರೀತಂಗೌಡ, ಮೈತ್ರಿ ಪಕ್ಷದ ವಿರುದ್ಧ ಗುಡುಗುತ್ತಿದ್ದ ಸನ್ನಿವೇಶ ಎದುರಾಗಿತ್ತು. ಸ್ವತಃ ಮೈತ್ರಿ ಪಕ್ಷದ ನಾಯಕನಿಗೆ ಆಗಿರುವ ಅವಮಾನ ಅಥವಾ ಪ್ರೋಟೋಕಾಲ್​ ಪಾಲನೆ ಮಾಡಿಲ್ಲದೆ ಇರುವುದನ್ನು ಖಂಡಿಸಬೇಕಿತ್ತು. ಆದರೆ ಸ್ವಹಿತಾಸಕ್ತಿಯ ಕಾರಣಕ್ಕೆ ಪ್ರೀತಂಗೌಡ ಮೈತ್ರಿ ಪಕ್ಷದ ವಿರುದ್ಧವೇ ಗುಡುಗಿದ್ದಾರೆ.

ಹಾಸನಾಂಬ ದೇಗುಲದಲ್ಲಿ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಅಗೌರವ ಆರೋಪದಲ್ಲಿ ಜೆಡಿಎಸ್ ಪ್ರತಿಭಟನೆ ಮಾಡಿದ್ದಕ್ಕೆ ಮಾಜಿ ಶಾಸಕ ಪ್ರೀತಂಗೌಡ ಹಾಲಿ ಶಾಸಕರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಶಾಸಕ ಹೆಚ್.ಪಿ ಸ್ವರೂಪ್‌ ಪ್ರಕಾಶ್ ವಿರುದ್ಧ ವಾಗ್ದಾಳಿ ಮಾಡಿದ್ದು, ಸ್ಥಳೀಯ ಶಾಸಕರಿಗೆ ಚುನಾಯಿತ ಪ್ರತಿನಿಧಿಗಳಿಗೆ ಗೌರವ ಕೊಟ್ಟಿಲ್ಲ. ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಮುಖ್ಯದ್ವಾರದಲ್ಲಿ ಪ್ರತಿಭಟನೆ ಮಾಡಿದ್ದಾರೆ. ಒಬ್ಬ ಜವಾಬ್ದಾರಿಯುತ ನಾಗರೀಕನಾಗಿ ಇದು ಬಹಳ ಬಾಲೀಷ ಅನ್ನಿಸುತ್ತೆ. ಸ್ಥಳೀಯ ಶಾಸಕರು ನನಗಿಂತ ಕಿರಿಯರಿದ್ದಾರೆ. ಅವರಿಗೆ ರಚನಾತ್ಮಕ ಸಲಹೆ ಕೊಡುತ್ತಿದ್ದೇನೆ. ಮನೆಯ ಕಾರ್ಯಕ್ರಮದ ರೀತಿಯಲ್ಲಿ ಸ್ಥಳೀಯ ಶಾಸಕರು ಕೆಲಸ ಮಾಡಬೇಕು ಎಂದಿದ್ದಾರೆ.

ಹಾಸನಾಂಬ ಉತ್ಸವ ಅಂದರೆ ಹಾಸನ ಕ್ಷೇತ್ರದ ತಾಯಿಯ ಉತ್ಸವ. ನಮ್ಮ ಮನೆ ಕಾರ್ಯಕ್ರಮದಂತೆ ಕೆಲಸ ಮಾಡಬೇಕು. ನಾನು ಶಾಸಕನಾಗಿ ನಾಲ್ಕು ವರ್ಷ ಜಾತ್ರಾ ಮಹೋತ್ಸವ ಮಾಡಿದ್ದೇನೆ. ವಿಪರ್ಯಾಸ ಅಂದರೆ ಶಾಸಕರು ಹಾಸನಾಂಬ ಹಾಗೂ ಸಿದ್ದೇಶ್ವರಸ್ವಾಮಿ ಯಾವುದೇ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿಲ್ಲ ಎಂದು ಜೆಡಿಎಸ್​ ಶಾಸಕರನ್ನು ಟೀಕಿಸಿದ್ದಾರೆ. ಹೀಗಿರುವಾಗ ಇವತ್ತು ಬಂದು ಶಾಸಕರನ್ನು ನಿರ್ಲಕ್ಷ್ಯ ಮಾಡಿದ್ದಾರೆ ಅಂತಾ ಹೇಳುತ್ತಿದ್ದಾರೆ. ಸ್ಥಳೀಯ ಶಾಸಕರು ಬಹಳ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು. ಜಾತ್ರಾ ಮಹೋತ್ಸವ ಮೊದಲೇ ನಿಶ್ಚಯವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ. ಗೆಸ್ಟ್ ರೀತಿಯಲ್ಲಿ ಹಾಸನಾಂಬ ದೇವಿ ಬಾಗಿಲು ತೆರೆಯುವಾಗ ಬಂದು ಇವತ್ತು ದಿಢೀರ್ ಕಾಣಿಸಿಕೊಳ್ತಾರೆ. ಹತ್ತು, ಹನ್ನೆರಡು ದಿನ ಆದ ಮೇಲೆ ನನಗೆ ಗೌರವ ಕೊಡ್ತಿಲ್ಲ ಎಂದು ರಾತ್ರೋರಾತ್ರಿ ಅವರ ಮನಸ್ಸಿಗೆ ಅನ್ನಿಸಿದೆ ಎಂದು ಹಾಸನದ ಜನ ಪ್ರಶ್ನೆ ಮಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಡಿಸಿ, ಉಸ್ತುವಾರಿ ಸಚಿವರನ್ನು ದೂಷಿಸುವುದು ಸುಲಭ. ಡಿಸಿ ಅವರು ಈ ವರ್ಷ ಇರ್ತರೆ ಮುಂದಿನ ವರ್ಷ ಬೇರೆಯವರು ಇರ್ತಾರೆ. ಉಸ್ತುವಾರಿ ಸಚಿವರು ಇವತ್ತು ಇರ್ತರೆ ಸರ್ಕಾರ ಬದಲಾದರೆ ಬೇರೆಯವರು ಬರ್ತಾರೆ. ಆದರೆ ಐದು ವರ್ಷಗಳ ಕಾಲಕ್ಕೆ ನಮ್ಮ ಹಾಸನ ಕ್ಷೇತ್ರವನ್ನು ಪ್ರತಿನಿಧಿಸುವಂತೆ ಶಾಸಕರನ್ನು ಆಯ್ಕೆ ಮಾಡ್ತಾರೆ. ಆ ಶಾಸಕರು ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಗೌರವವನ್ನು ಕೇಳಿ ಪಡೆಯುವುದಲ್ಲ, ದುಡಿಮೆ ಮಾಡಿ ಪಡೆಯಬೇಕು. ಜಾತ್ರಾ ಮಹೋತ್ಸವಕ್ಕೆ ಏನೇನು ಆಗಬೇಕು ಎಂದು ಎಷ್ಟು ಬಾರಿ ಉಸ್ತುವಾರಿ ಸಚಿವರು, ಸರ್ಕಾರ, ಡಿಸಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೀರಿ ಮೊದಲು ಅದನ್ನು ಹೇಳಿ ಎಂದಿದ್ದಾರೆ. ಆಮೇಲೆ ನಿಮಗೆ ಗೌರವ ಕೊಟ್ಟಿಲ್ಲ ಅಂದರೆ ಪಕ್ಷಾತೀತವಾಗಿ ಹಾಸನ ಜಿಲ್ಲೆಯ ಜನ ನಿಮ್ಮ ಜೊತೆ ನಿಲ್ತಾರೆ. ನಿಮ್ಮ ಕೆಲಸ ಆಗಬೇಕು ಅಂದಾಗ ಎಲ್ಲಾ ಮಂತ್ರಿಗಳ ಹತ್ತಿರ ಹೋಗ್ತಿರಿ. ಹಾಸನಾಂಬ ಜಾತ್ರಾ ಮಹೋತ್ಸವ ಅಂದರೆ ಉದ್ಘಾಟನೆಗೆ ಹೋಗಿ ನಿಲ್ತೀರಿ ಎಂದು ಕುಟುಕಿದ್ದಾರೆ.

ಕೇಂದ್ರ ಸಚಿವ ಎಚ್.ಡಿ‌.ಕುಮಾರಸ್ವಾಮಿ ಅವರಿಗೆ ಗೌರವ ಕೊಡ್ತಿಲ್ಲ ಅಂತ ಹೇಳುತ್ತಿದ್ದೀರಿ ಅದಕ್ಕೆ ನನ್ನ ಸಹಮತ ಇದೆ. ಕುಮಾರಸ್ವಾಮಿ ಅವರು ಎನ್‌ಡಿಎ ಸರ್ಕಾರದ ಕ್ಯಾಬಿನೆಟ್ ಸಚಿವರು. ಅವರಿಗೆ ಯಾರಾದರೂ ಅವಮಾನ ಮಾಡಿದ್ದಾರೆ ಅದು ಶಾಸಕ ಸ್ವರೂಪ್‌ಪ್ರಕಾಶ್. ಸ್ಥಳೀಯ ಶಾಸಕರಾದವರು ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಂಡು ಅವರಿಗೆ ಸನ್ಮಾನ ಮಾಡಿಸಿ, ಗೌರವ ಕೊಡದಿರುವುದು ಅಕ್ಷಮ್ಯ ಅಪರಾಧ. ಹಾಸನ ಜನ ನಿಮ್ಮನ್ನು ಪ್ರತಿನಿಧಿಯಾಗಿ ನಿಮ್ಮನ್ನು ಆಯ್ಕೆ ಮಾಡಿದ್ದಾರೆ. ಕುಮಾರಸ್ವಾಮಿ ಅವರಿಗೆ ಅಗೌರವ ತೋರಿಸಿರುವುದು ಸ್ವರೂಪ್. ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಳ್ಳದೆ ಹೋದರೆ ಶಾಸಕರಾಗಿರುವುದು ಏಕೆ ಎಂದು ಜನರಿಗೆ ತಿಳಿಸಬೇಕು ಎಂದು ಒತ್ತಾಯ ಮಾಡಿದ್ದಾರೆ. ಯಾವುದೇ ಚುನಾಯಿತ ಪ್ರತಿನಿಧಿ ಬಂದರು ಅವರಿಗೆ ಏನು ಗೌರವ ಕೊಡಬೇಕು ಅದನ್ನು ಕೊಡಬೇಕು. ಕುಮಾರಸ್ವಾಮಿ ಅವರಿಗೆ ಜಿಲ್ಲಾಡಳಿತ ಮಾಡಿರುವುದು ಅಕ್ಷಮ್ಯ ಅಪರಾಧ ಎಂದು ಕೊನೆಯಲ್ಲಿ ತೇಪೆ ಸಾರಿಸಿದ್ದಾರೆ.

ಪ್ರೀತಂಗೌಡ ಇದೇ ಮೊದಲೇನು ಅಲ್ಲ, ಈ ಮೊದಲಿನಿಂದಲೂ ಮಧ್ಯೆ ಮಧ್ಯೆ ಈ ರೀತಿಯ ಕೆಲಸ ಮಾಡುತ್ತಲೇ ಇದ್ದಾರೆ. ಈ ಮೊದಲು ರಾಜ್ಯ ಸಮಿತಿಯಲ್ಲಿ ಸ್ಥಾನ ಪಡೆದ ಬಳಿಕ ಜೆಡಿಎಸ್​ ವಿರುದ್ಧವೇ ಕತ್ತಿ ಮಸೆಯುವ ಕೆಲಸ ಮಾಡಿದ್ದರು. ಆಗ ವಿರೋಧ ಹೆಚ್ಚಾದಾಗ ಅವರನ್ನು ಬದಲಾಯಿಸಲಾಗಿತ್ತು. ಇದೀಗ ಮತ್ತೆ ಕುಮಾರಸ್ವಾಮಿ ಅವರಿಗೆ ಅವಮಾನ ಮಾಡಲಾಗಿದೆ ಎಂದು ವಿರೋಧ ಮಾಡುವಾಗ ಕಾಂಗ್ರೆಸ್​ ನಾಯಕರು ಹಾಗೂ ಜಿಲ್ಲಾಡಳಿತವನ್ನೇ ಹೊಗಳುವುದು, ಮೈತ್ರಿ ಪಕ್ಷವನ್ನೂ ಹೀಗಳೆಯುವುದು ಮಾಡುತ್ತಿದ್ದಾರೆ. ಮುಂದಿನ ಚುನಾವಣೆ ತನಕ ಮೈತ್ರಿ ಉಳಿದು ಬಿಟ್ಟರೆ ನನ್ನ ಪಾಡೇನು ಅನ್ನೋ ಚಿಂತೆಯಲ್ಲಿ ಪ್ರೀತಂಗೌಡ ಅವರು ಇದ್ದಂತೆ ಕಾಣ್ತಿದೆ. ಅದೇ ಕಾರಣಕ್ಕೆ ಅವಕಾಶ ಸಿಕ್ಕಾಗ ಈ ರೀತಿಯ ದಾಳಿ ನಡೆಯುವುದು ಶತಸಿದ್ಧ. ಒಂದು ವೇಳೆ ಮೈತ್ರಿ ಮುಂದುವರಿದರೆ ಮುಂದಿನ ಬಾರಿ ಪ್ರೀತಂಗೌಡ ಅವರಿಗೆ ಟಿಕೆಟ್​ ಸಿಗಲ್ಲ ಅನ್ನೋದು ಕೂಡ ಕಟ್ಟಿಟ್ಟ ಬುತ್ತಿ.

Related posts

ಕಾಂಗ್ರೆಸ್‌ ಹೈಕಮಾಂಡ್‌ ದಿಕ್ಕು ತಪ್ಪಿದ ನಾವಿಕನಂತೆ ಆಗಿದ್ಯಾ..? ಮುಂದೇನು..?

Publicspot

ಪರಿಸರವನ್ನು ಪಠ್ಯಕ್ರಮವಾಗಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

admin

ಲಾಡ್ಲೆ ಮಶಾಕ್‌ ದರ್ಗಾ ಕೇಸ್‌.. ಆರೋಪಿಗಳ ವಿರುದ್ಧ ಕೇಸ್‌ ಮನ್ನಾ..

Publicspot

November Action; ದೆಹಲಿಯಿಂದ ಬಂದ ಸತೀಶ್​ ಜಾರಕಿಹೊಳಿ ಹೇಳಿದ್ದೇನು..?

Publicspot

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸರಿಯಾದ ರೀತಿಯಲ್ಲಿ ಸಿದ್ದತೆಗಳನ್ನು ಮಾಡಿ

admin

Congress Protest Vote Chori; ಮತಗಳ್ಳತನ ವಿರುದ್ಧ ಕಾಂಗ್ರೆಸ್‌ ತೀವ್ರ ಹೋರಾಟ..

Publicspot