ಬಾಗಲಕೋಟೆ ಕಾಂಗ್ರೆಸ್ ಶಾಸಕ ಹೆಚ್.ವೈ ಮೇಟಿ ವಯೋಸಹಜ ಕಾಯಿಲೆಯಿಂದ ವಿಧಿವಶರಾಗಿದ್ದಾರೆ. ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಹೆಚ್.ವೈ ಮೇಟಿ ನಿಧನರಾಗಿದ್ದಾರೆ. ಮೈಸೂರಿಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ ಹೆಚ್.ವೈ ಮೇಟಿ ನಿಧನ ಹಿನ್ನೆಯಲ್ಲಿ ಮೈಸೂರಿನಿಂದ ವಾಪಸ್ ಆಗಿ, ನೇರವಾಗಿ ಅಪೋಲೋ ಆಸ್ಪತ್ರೆಗೆ ತೆರಳಿ ಅಂತಿಮ ದರ್ಶನ ಪಡೆದಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಮಧ್ಯಾಹ್ನ 12.30ಕ್ಕೆ ಹೆಚ್.ವೈ ಮೇಟಿ ನಿಧನರಾಗಿದ್ದಾರೆ. ನಾನು ಮೂರು ದಿನಗಳ ಹಿಂದೆ ಅವರನ್ನು ಭೇಟಿ ಮಾಡಿದ್ದೆ. ಆಗ ಆಕ್ಸಿಜನ್ ಸಹಾಯದೊಂದಿಗೆ ಇದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೆ ನಿಧನರಾಗಿದ್ದಾರೆ ಎಂದಿದ್ದಾರೆ.
H.Y ಮೇಟಿ ಅತ್ಯಂತ ನಿಷ್ಠಾವಂತ, ನನಗೆ ಬಹಳ ಆತ್ಮೀಯ ಆದಂತವರು. ಮಾಜಿ ಮಂತ್ರಿ ಆಗಿದ್ದವನು, ಒಮ್ಮೆ ಸಂಸದರಾಗಿ ಇದ್ದಂತವರು. ನಾನು 1996ರಲ್ಲಿ ಲೋಕಸಭಾ ಚುನಾವಣೆಯಲ್ಲಿ ನಿಲ್ಲುವಂತೆ ಹೇಳಿದ ಕೂಡಲೇ ಮಂತ್ರಿ ಆದರೂ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಅಷ್ಟರ ಮಟ್ಟಿಗೆ ಬಹಳ ನಿಯತ್ತಾದ ಮನುಷ್ಯ. ನನಗೆ ನೂರಕ್ಕೆ ನೂರರಷ್ಟು ನಿಷ್ಠಾವಂತ ಆಗಿದ್ದವನು. ಇವತ್ತು ನಮ್ಮೆಲ್ಲ ಅಗಲಿದ್ದಾರೆ. ಅವರಿಗೆ ನಾಲ್ಕು ಜನ ಮಕ್ಕಳು ಇದ್ದಾರೆ. ಮೂಲತಃ ವ್ಯವಸಾಯಗಾರರು, ಆಮೇಲೆ ರಾಜಕೀಯಕ್ಕೆ ಬಂದವರು. ಆ ಭಾಗದ ಗುಳೇದಗುಡ್ಡದಿಂದ ಶಾಸಕರಾಗಿ ಆಯ್ಕೆ ಆಗಿ ಬಂದವರು. ಈಗ ಆ ಕ್ಷೇತ್ರ ಇಲ್ಲ, ಅಲ್ಲಿ ಮೂರು ಬಾರಿ ಶಾಸಕರಾಗಿದ್ದವರು. ಆಮೇಲೆ ಲೋಕಸಭೆಯಲ್ಲಿ ನಿಂತರು. ನನಗಿಂತ ಒಂದು ವರ್ಷ ದೊಡ್ಡವರು. ಅವರಿಗೆ 80 ವರ್ಷ ಆಗಿದೆ, ನನಗೆ 79 ವರ್ಷ ನಡೀತ್ತಿದೆ ಎಂದಿದ್ದಾರೆ.

ಮಂಗಳವಾರ ಸಂಜೆ 7 ಗಂಟೆ ತನಕ RT ನಗರದಲ್ಲಿ ಇರುವ ಮೇಟಿ ಅವರ ಮಗಳ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆ ಬಳಿಕ ಪಾರ್ಥೀವ ಶರೀರವನ್ನು ರಸ್ತೆ ಮಾರ್ಗದಲ್ಲಿ ಬಾಗಲಕೋಟೆಗೆ ತೆಗೆದುಕೊಂಡು ಹೋಗಲಾಗ್ತಿದೆ. ಬುಧವಾರ ಮಧ್ಯಾಹ್ನ 2 ಗಂಟೆ ತನಕ ಅಂತಿಮ ನಮನ ಸಲ್ಲಿಸಲು ಜಿಲ್ಲಾ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಿದ್ದು, ಆ ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಬಾಗಲಕೋಟೆಗೆ ತೆರಳಲಿದ್ದು, ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ. ಸಚಿವ ಹೆಚ್.ಸಿ ಮಹದೇವಪ್ಪ ಮಾತನಾಡಿ, ಬಹಳ ಸರಳ ಸಜ್ಜನಿಕೆಗೆ ಹೆಸರಾಗಿದ್ದರು. ಇಷ್ಟು ವರ್ಷ ಬಹಳ ಜನ ವಿಶ್ವಾಸ ಸಂಪಾದನೆ ಮಾಡಿದ್ದರು. ಆ ವಿಶ್ವಾಸವೇ ರಾಜಕೀಯವಾಗಿ ಮೇಲೆ ಬರೋಕೆ ಸಾಧ್ಯ ಆಗಿದ್ದು. ಮಂತ್ರಿಯಾಗಿ, ಶಾಸಕಾರಾಗಿ, ಸಂಸದರಾಗಿ ಜನರ ಪ್ರೀತಿ ಗಳಿಸಿದ್ರು ಎಂದಿದ್ದಾರೆ.
ಮೇಟಿ ನಿಧನಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಿಕೆಶಿ, ಶಾಸಕ ಮೇಟಿ ಅವರ ಆರೋಗ್ಯ ಏರುಪೇರಾಗಿತ್ತು. ಬುಧವಾರ ನೀರಿನ ಹೆಜ್ಜೆ ಪುಸ್ತಕ ಬಿಡುಗಡೆ ಕಾರ್ಯಕ್ರಮವಿತ್ತು. ಆದರೆ ಮೇಟಿ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಬೇಕಾದ ಕಾರಣ ಕಾರ್ಯಕ್ರಮ ಮುಂದೂಡುತ್ತೇವೆ. ಮೇಟಿ ಅವರ ನಿಧನದಿಂದಾಗಿ ದುಖಃತಪ್ತರಾಗಿರುವ ಕುಟುಂಬಕ್ಕೆ ನನ್ನ ಸಂತಾಪ ಎಂದು ಹೇಳಿದ್ದಾರೆ. ಇದೇ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಚಿವ ತಿಮ್ಮಾಪೂರ, ಎಸ್.ಆರ್ ಪಾಟೀಲ್ ಕೂಡ ಮೇಟಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆಯುತ್ತಿದ್ದು, ಬುಧವಾರ ಬೆಳಗ್ಗೆ ವೇಳೆಗೆ ಪಾರ್ಥಿವ ಶರೀರ ಬಾಗಲಕೋಟೆಗೆ ತಲುಪಲಿದೆ. ಬುಧವಾರ ಹಿಂದೂ ಸಂಪ್ರಾದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ. ಮೇಟಿ ಅವರ ಅಂತಿಮ ದರ್ಶನಕ್ಕೆ ಬಾಗಲಕೋಟೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಿದ್ಧತೆ ಮಾಡಲಾಗಿದ್ದು, ಬಾಗಲಕೋಟೆ ಡಿಸಿ ಸಂಗಪ್ಪ ಹಾಗೂ ಎಸ್ಪಿ ಸಿದ್ದಾರ್ಥ್ ಗೋಯೆಲ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಕ್ರೀಡಾಂಗಣದಲ್ಲಿ ಮೇಟಿ ಅಭಿಮಾನಿಗಳು ಜಮಾಯಿಸಿದ್ದು, ಮೇಟಿ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ.


