The Public Spot
ರಾಜ್ಯ

ಕೊಲ್ಲಿ ರಾಷ್ಟ್ರದ ಯುದ್ಧ ಕರ್ನಾಟಕದಲ್ಲಿ ಭಾರೀ ಸಂಕಷ್ಟ..!

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದಿಂದ ಇರಾನ್​ ಸಾಕಷ್ಟು ನೊಂದು ಬೆಂದು ಹೋಗಿದೆ. ಆದರೆ ಕರ್ನಾಟಕದಲ್ಲೂ ಸಾಕಷ್ಟು ಜನರು ನೊಂದುಕೊಳ್ಳುವಂತೆ ಮಾಡಿದೆ ಈ ಯುದ್ಧದ ಪರಿಣಾಮ. ಹೋಟೆಲ್​ಗಳಿಗೆ ವಾಣಿಜ್ಯ ಬಳಕೆಯ ಸಿಲಿಂಡರ್​ ಸಿಗದೆ ಪ್ರಾರಂಭದಲ್ಲಿ ಸಂಕಷ್ಟ ಎದುರಾಗಿತ್ತು. ಆ ಬಳಿಕ ಉದ್ಯಮಿಗಳ ಹಿತಬಯಸಿದ ಸರ್ಕಾರ, ಹೋಟೆಲ್​ ಉದ್ಯಮಿಗಳಿಗೆ ಸಮಸ್ಯೆ ಆಗದಂತೆ ಸಿಲಿಂಡರ್​ ಪೂರೈಕೆ ಮಾಡುವ ನಿರ್ಧಾರ ಮಾಡಿತ್ತು. ಆದರೆ ಇದೀಗ ಗ್ರಾಮೀಣ ಪ್ರದೇಶದ ಬಡ ಜನರಿಗೆ ಗ್ಯಾಸ್​ ಸಿಗ್ತಿಲ್ಲ. ಅಷ್ಟೇ ಅಲ್ಲ ಆಟೋ ಗ್ಯಾಸ್​ ಲಭ್ಯವಾಗದೆ ತಳ್ಳಿಕೊಂಡು ಮನೆಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ.

ಚಿಕ್ಕಮಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ಪಡೆಯಲು ಸಾರ್ವಜನಿಕರು ಪರದಾಡಿದ್ದಾರೆ. ಮಹಾರುದ್ರ ಇಂಡೇನ್ ಗ್ಯಾಸ್ ಏಜೆನ್ಸಿ ಮುಂಭಾಗ ನೋ ಸ್ಟಾಕ್ ಬೋರ್ಡ್ ಹಾಕಲಾಗಿದೆ. ಏಜೆನ್ಸಿನಲ್ಲಿ ಕೇವಲ 12 ಕಮರ್ಷಿಯಲ್ ಸಿಲಿಂಡರ್ ಮಾತ್ರ ಇದ್ದು, ಶಾಲೆ ಮತ್ತು ಹಾಸ್ಟೆಲ್​ ಹೊರತು ಪಡಿಸಿ ಬೇರೆ ಯಾರಿಗೂ ನೀಡಲ್ಲ ಎಂದಿದ್ದಾರೆ. ಹೀಗಾಗಿ ಗ್ರಾಹಕರು ಸಿಲಿಂಡರ್ ಸಿಗದೇ ಪರದಾಡ್ತಿದ್ದಾರೆ. 20 ದಿನಗಳ ಹಿಂದೆ ಗ್ಯಾಸ್ ಬುಕ್‌ ಮಾಡಿದರೂ ಗ್ಯಾಸ್​ ಸಿಕ್ಕಿಲ್ಲ. ನಾವು ಅಡುಗೆ ಮಾಡೋದು ಹೇಗೆ ಅಂತಾ ಗ್ರಾಹಕರು ಅಳಲು ತೋಡಿಕೊಂಡಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದಲ್ಲೂ ಗ್ಯಾಸ್ ಸಿಲಿಂಡರ್​ಗಳ ಅಭಾವ ಉಂಟಾಗಿದೆ. ಕಮರ್ಷಿಯಲ್ ಸಿಲಿಂಡರ್ ಸಿಗದೇ ಸೌದೆ ಒಲೆಯಲ್ಲಿ ಹೋಟೆಲ್​ ಮಾಲೀಕರು ಅಡುಗೆ ತಯಾರಿ ಮಾಡ್ತಿದ್ದಾರೆ. ಹತ್ತು ಸಾವಿರ ಖರ್ಚು ಮಾಡಿ ಕಬ್ಬಿಣದ ಒಲೆ ನಿರ್ಮಾಣ ಮಾಡಿ ಕಟ್ಟಿಗೆ ಬಳಸಿಕೊಂಡೇ ದೋಸೆ ತಯಾರಿಸುತ್ತಿದ್ದಾರೆ. ಯುದ್ಧದಿಂದಾಗಿ ಪ್ರಾಣಿಗಳ ಆಶ್ರಮಕ್ಕೂ ಗ್ಯಾಸ್ ಬಿಸಿ ತಟ್ಟಿದೆ. ಬೆಂಗಳೂರಿನ ಕಗ್ಗಲಿಪುರದಲ್ಲಿರುವ ಪ್ರಾಣಿ ಆಶ್ರಮದಲ್ಲಿ ಸೌದೆ ಒಲೆ ಅಡುಗೆ ಮಾಡಲಾಗ್ತಿದೆ. ಗ್ಯಾಸ್ ಸಮಸ್ಯೆ, ಅಡುಗೆ ಮಾಡಲು ಕಷ್ಟವಾಗ್ತಿದೆ. ಪ್ರಾಣಿಗಳಿಗೆ ಆಹಾರ ಒದಗಿಸಲು ನಾವು ಹರಸಾಹಸ ಮಾಡುತ್ತಿದ್ದೇವೆ. ದಯವಿಟ್ಟು ಜನರು ತಮ್ಮ ಕೈಲಾದ ಸಹಾಯ ಮಾಡಿ ಅಂತ ಟ್ರಸ್ಟ್​ ಮನವಿ ಮಾಡಿದೆ.

ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗ್ಯಾಸ್ ಏಜೆನ್ಸಿ ಕಳ್ಳಾಟ ಆಡ್ತಿದೆ ಅಂತಾ ಜನರು ಆರೋಪ ಮಾಡಿದ್ದಾರೆ. ಗ್ಯಾಸ್ ಬುಕ್ ಮಾಡಿದ್ರೂ ಕೂಡಾ ಗ್ಯಾಸ್ ವಿತರಣೆ ಮಾಡ್ತಿಲ್ಲ. ಬೆಳಗ್ಗೆಯಿಂದಲೇ ಗ್ಯಾಸ್ ಸಿಲಿಂಡರ್ ಪಡೆಯಲು ಕ್ಯೂನಲ್ಲಿ ನಿಂತಿದ್ದರೂ ಗ್ಯಾಸ್​​ ಕೊಡ್ತಿಲ್ಲ ಎಂದು ಜನ ದೂರಿದ್ದಾರೆ. ನಾಗಮಂಗಲದ ಸೌಮ್ಯಕೇಶವ ದೇಗುಲದ ಮುಂಭಾಗ ಗ್ಯಾಸ್ ಪಡೆಯಲು ಜನರು ಬೆಳಗ್ಗೆಯಿಂದಲೇ ಕ್ಯೂ ನಿಂತಿದ್ದಾರೆ. ಇನ್ನು ಬುಕ್ ಆಗಿರೋ ಸಿಲಿಂಡರ್ ಕೊಡದೇ ಏಜೆನ್ಸಿಯವರು ಕಾಳಸಂತೆಯಲ್ಲಿ ಮಾರಾಟ ಮಾಡ್ತಿದ್ದಾರೆ ಅಂತ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಯಚೂರಿನಲ್ಲಿ ರೊಟ್ಟಿ ಕೇಂದ್ರಗಳಿಗೆ ಯುದ್ಧದ ಬಿಸಿ ತಟ್ಟಿದೆ. ವಾಣಿಜ್ಯ ಸಿಲಿಂಡರ್ ಸಮಸ್ಯೆಯಿಂದ ರೊಟ್ಟಿ ಕೇಂದ್ರಗಳು ಬಂದ್ ಆಗಿವೆ. ಸಿಲಿಂಡರ್ ಇಲ್ಲದ ಕಾರಣ ಕೆಲಸಗಾರರನ್ನು ಮಾಲೀಕರು ಕೆಲಸದಿಂದ ಬಿಡಿಸಿ ವಾಪಸ್​ ಕಳುಹಿಸಿದ್ದಾರೆ.

ಧಾರವಾಡದಲ್ಲಿ ಯುದ್ಧದ ಪರಿಣಾಮ ಸಿಲಿಂಡರ್ ಸಮಸ್ಯೆಗೆ ಕಾರಣವಾಗಿದೆ. SSLC, ನವೋದಯ ಸೇರಿದಂತೆ ಹಲವು ಕೋಚಿಂಗ್​​ ಕೇಂದ್ರಗಳಿಗೆ ಸಂಕಷ್ಟ ಎದುರಾಗಿದೆ. ಕೋಚಿಂಗ್ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನ ಮಾಲೀಕರು ಇಳಿಸಿದ್ದಾರೆ. ಶೇಕಡ 20 ರಷ್ಟು ವಿದ್ಯಾರ್ಥಿಗಳ ಸಂಖ್ಯೆ ಇಳಿಸಲಾಗಿದೆ. ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಲು ಸಮಸ್ಯೆ ಆಗಿದೆ. ಬೇಡಿಕೆ ಇದ್ದರೂ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಆಗ್ತಿಲ್ಲ. ಸರ್ಕಾರ ಈ ಸಮಸ್ಯೆಯನ್ನ ಶೀಘ್ರವಾಗಿ ಬಗೆಹರಿಸಬೇಕೆಂದು ಕೋಚಿಂಗ್ ಮಾಲೀಕರು ಮನವಿ ಮಾಡಿಕೊಂಡಿದ್ದಾರೆ.

ಕೊಪ್ಪಳದಲ್ಲಿ ಇರುವುದೇ ಎರಡು ಅಟೋ ಗ್ಯಾಸ್ ಬಂಕ್. ಆದರೆ ಎರಡೂ ಬಂಕ್​ಗಳು ಕಳೆದ ಮೂರು ದಿನಗಳಿಂದ ಬಂದ್ ಆಗಿವೆ. ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ದ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಟೋ ಚಾಲಕರ ದುಡಿಮೆಗೆ ಕತ್ತರಿ ಬಿದ್ದಿದೆ. ಅಟೋ ಗ್ಯಾಸ್ ಸಿಗದ ಹಿನ್ನೆಲೆಯಲ್ಲಿ ಅಟೋಗಳನ್ನು ನಿಲ್ಲಿಸಿದ್ದಾರೆ ಅಟೋ ಮಾಲೀಕರು. ಅಟೋಗಳ EMI, ಮನೆ ಖರ್ಚಿಗೆ ಅಟೋ ಓಡಿಸಲೇ ಬೇಕು. ಈಗ ಗ್ಯಾಸ್ ಸಿಗದ ಹಿನ್ನೆಲೆಯಲ್ಲಿ ಬಂಕ್​ಗಳಿಗೆ ಅಲೆಯುವಂತಾಗಿದೆ. ಕೊಪ್ಪಳದಲ್ಲಿ ಗ್ಯಾಸ್ ಬಳಸುವ ಸುಮಾರು 300 ಅಟೋ ಮಾಲೀಕರು ಸಂಕಷ್ಟದಲ್ಲಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಯುದ್ದ ಪರಿಣಾಮ ಆಟೋ ತಳ್ಳುವಂತಾಗಿದೆ. ದಾರಿ ಮಧ್ಯದಲ್ಲಿ ಗ್ಯಾಸ್ ಖಾಲಿ ಆಗಿ ಆಟೋ ಚಾಲಕರು ಪರದಾಡುತ್ತಿದ್ದಾರೆ. ಆಟೋಗಳನ್ನು ತಳ್ಳಿಕೊಂಡು ಮನೆಗೆ ವಾಪಸ್ ಆಗುವ ಪರಿಸ್ಥಿತಿ ನಿರ್ಮಾಣ ಆಗಿದೆ. ಅರ್ಧ ದಾರಿಯಲ್ಲೇ ಪ್ಯಾಸೆಂಜರ್ಸ್​​ ಬಿಟ್ಟು ಮನೆಗೆ ಹೋಗುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಗ್ಯಾಸ್ ಸಿಗದೇ ಆಟೋ ಚಾಲಕರ ಪರದಾಡುತ್ತಿದ್ದಾರೆ. 3 ದಿನಗಳಿಂದ ಬಂಕ್ ಮುಂದೆ ಆಟೋ ಗಳನ್ನು ನಿಲ್ಲಿಸಿಕೊಂಡು ಗ್ಯಾಸ್​ಗಾಗಿ ಕಾಯುತ್ತಿದ್ದಾರೆ. ಗ್ಯಾಸ್​ ತುಂಬಿಸಲು ಗ್ಯಾಸ್​ ಇಲ್ಲ.. ಆಟೋ ಓಡಿಸಲು ಆಗದಿದ್ರೆ ಕಾಸಿಲ್ಲ. ಒಟ್ಟಾರೆ ಜೀವನ ನಡೆಸುವುದೇ ದುರ್ಲಬ ಆಗಿದೆ.

Related posts

ಕಾಡು ಪ್ರಾಣಿಗಳು – ಮಾನವ ಸಂಘರ್ಷ ಹೆಚ್ಚಳ.. ಸರ್ಕಾರದ ಮುಂದಿನ ನಡೆ ಏನು..?

Publicspot

T.B DAM GATE JAM : 6 ಗೇಟ್​ಗಳು ಕೆಲಸ ಮಾಡ್ತಿಲ್ಲ, ಮುರಿದು ಹೋಗುವ ಭೀತಿ..

Publicspot

Independence Day: 79ನೇ ಸ್ವಾತಂತ್ರ್ಯೋತ್ಸವಕ್ಕೆ ನೀವೂ ಹೋಗಬಹುದು.. ಪಾಸ್‌ ಎಲ್ಲಿ ಸಿಗುತ್ತೆ ಗೊತ್ತಾ..?

ಯಶವಂತಿ

No Namma Metro, Basava Metro; ನಮ್ಮ ಮೆಟ್ರೋ ಬದಲಿಸ್ತೇನೆ.. ಲಿಂಗಾಯತ ಸಮಾವೇಶದಲ್ಲಿ ಸಿಎಂ ದಾಳ..

Publicspot

Cast Censes Karnataka Highcourt Conditions; ಜಾತಿ ಸಮೀಕ್ಷೆ ಅಲ್ಲ.. ಆರ್ಥಿಕ, ಸಾಮಾಜಿಕ ಸಮೀಕ್ಷೆ.. ವಾದ ಒಪ್ಪಿದ ಹೈಕೋರ್ಟ್‌

Publicspot

HEAVY RAIN ALERT: ರಾಜ್ಯದಲ್ಲಿ ಮಳೆ ಆರ್ಭಟ.. 5 ಜಿಲ್ಲೆಗೆ ರೆಡ್ ಅಲರ್ಟ್‌

Publicspot