ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಕಲಬುರಗಿ ಹೈಕೋರ್ಟ್ ಅನುಮತಿ ನೀಡಿದೆ. ಈ ಬಗ್ಗೆ ಇದುವರೆಗು ಹಠ ಸಾಧಿಸುತ್ತಾ ಬಂದಿದ್ದ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿದ್ದು, ಕೋರ್ಟ್ ಷರತ್ತು ಬದ್ದವಾಗಿ ಅನುಮತಿ ನೀಡಿದೆ. ರಾಜ್ಯ ಸರ್ಕಾರ ಸೂಕ್ತ ಅನಿಸಿದ್ರೆ ಅನುಮತಿ ಕೊಡುತ್ತೆ ಎಂದು ಹೇಳಿತ್ತು. ಒಂದು ತಿಂಗಳ ಹಿಂದೆಯೇ ಪಥಸಂಚಲನ ಆಗಬೇಕಿತ್ತು. ಆದರೆ ಶಾಂತಿ ಸಭೆಯಲ್ಲಿ ಬಿಜೆಪಿಯವರು ಗಲಾಟೆ ಮಾಡಿದ್ರು. ಇನ್ನೊಮ್ಮೆ ಪ್ರಯತ್ನ ಮಾಡಿ ಎಂದ ಮೇಲೆ ಸಂಧಾನ ಮಾಡಲಾಗಿತ್ತು. RSS ನವರು ಇನ್ನಾದರೂ ಸರ್ಕಾರಕ್ಕೆ ಗೌರವ ಕೊಟ್ಟು ಅನುಮತಿ ಕೇಳೋದನ್ನು ಪ್ರಾರಂಭ ಮಾಡಲಿ ಎಂದಿದ್ದಾರೆ.
ಇನ್ನು RSS ಪಥಸಂಚಲನದಲ್ಲಿ ಚಿತ್ತಾಪುರದವರು ಮಾತ್ರ ಇರಬೇಕು, ಹೊರಗಡೆಯವರು ಬರಬಾರದು ಎಂದು ಕೋರ್ಟ್ ಹೇಳಿದೆ. ಅಹಿತಕರ ಘಟನೆ ನಡೆದ್ರೆ ಅವರೇ ಜವಾಬ್ದಾರಿ ಎಂದು ಕೋರ್ಟ್ ತಿಳಿಸಿದೆ. ಮೊದಲು ಸಂವಿಧಾನ ಹಾಗೂ ಕಾನೂನನ್ನ ಗೌರವಿಸುವುದನ್ನ ಕಲಿಯಲಿ ಎಂದಿದ್ದಾರೆ. RSS ಪಥಸಂಚಲನಕ್ಕೆ ರೂಟ್ ಮ್ಯಾಪನ್ನು ನಾವೇ ಮಾಡಿಕೊಟ್ಟಿದ್ದೇವೆ. ಧಾರವಾಡ ಹೈಕೊರ್ಟ್‌ನಲ್ಲಿ ಮಧ್ಯಂತರ ತಡೆಯಾಜ್ಞೆ ಇದೆ. ನಮ್ಮ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ಇರುವ ಕಾರಣಕ್ಕಾಗಿ ತಾತ್ಕಾಲಿಕವಾಗಿ, ಕಾನೂನು ಬದ್ದವಾಗಿ ಅವಕಾಶ ಕೊಡಬಹುದಾಗಿದೆ. ಒನ್ ಟೈಮ್ ಪರ್ಮಿಶನ್ ಇದು. ಸ್ಟೇ ವೆಕೇಟ್ ಆದ್ರೆ ಅದಕ್ಕೂ ಅವಕಾಶ ಇರೋದಿಲ್ಲ ಎಂದಿದ್ದಾರೆ.

ಕಲಬುರಗಿಯಲ್ಲಿ ನವೆಂಬರ್ 16 ರಂದು ಪಥಸಂಚಲನ ನಡೆಸಲು ಆರ್‌ಎಸ್‌ಎಸ್‌ಗೆ ಗ್ರೀನ್ ಸಿಗ್ನಲ್ ಸಿಕ್ಕಿರುವ ಹಿನ್ನಲೆಯಲ್ಲಿ RSS ಪಥಸಂಚಲನಕ್ಕೆ ಮತ್ತೆ ಅಡ್ಡಿಪಡಿಸಲು ಭೀಮ್ ಆರ್ಮಿ ಸಂಘಟನೆ ಸಜ್ಜಾಗಿದೆ. ಆರ್‌ಎಸ್‌ಎಸ್ ಪಥಸಂಚಲನಕ್ಕೆ ವಿರುದ್ಧವಾಗಿ ನವೆಂಬರ್ 16 ರಂದೇ ಭೀಮ್ ಪಥಸಂಚಲನ ಮಾಡುತ್ತೇವೆ ಎಂದು ಕಲಬುರಗಿಯಲ್ಲಿ ಭೀಮ್ ಆರ್ಮಿ ರಾಜ್ಯ ಯುವ ಘಟಕ ಅಧ್ಯಕ್ಷ ಸಂತೋಷ್ ಪಾಳಾ ಹೇಳಿದ್ದಾರೆ. ನವೆಂಬರ್ 2 ರಂದು ಪಥಸಂಚಲನಕ್ಕೆ ಅವಕಾಶ ನೀಡಲು ಮನವಿ ಮಾಡಿದ್ದೆವು. ಆದರೆ ನಮಗೆ ಜಿಲ್ಲಾಡಳಿತದಿಂದ ಅನುಮತಿ ನೀರಾಕರಿಸಿ ಯಾವುದೇ ಹಿಂಬರಹ ನೀಡಿರಲಿಲ್ಲ. ಆರ್‌ಎಸ್‌ಎಸ್‌ಗೆ ಪಥಸಂಚಲನ ಮಾಡಲು ಜಿಲ್ಲಾಡಳಿತ ಅನುಮತಿ ನೀಡಿದ್ದು ಸ್ವಾಗತಾರ್ಹ. ಆದರೆ ನಾವು ಅಂದೇ ಚಿತ್ತಾಪುರದಲ್ಲಿ ಭೀಮ್ ಪಥಸಂಚಲನ ಮಾಡುತ್ತೇವೆ. ಈ ಬಗ್ಗೆ ಇವತ್ತು ಎಲ್ಲಾ ದಲಿತಪರ ಸಂಘಟನೆಗಳ ಸಭೆ ನಡೆಸಿ ತೀರ್ಮಾನಕ್ಕೆ ಬರುತ್ತೆವೆ ಎಂದಿದ್ದಾರೆ.
RSS ಸಂಘಟನೆಯವರು 600 ಮಂದಿ ಪಥಸಂಚಲನ ಮಾಡುತ್ತೇವೆ ಎಂದು ಕೋರ್ಟ್‌ಗೆ ತಿಳಿಸಿದ್ದರು. ಆದರೆ ಕೋರ್ಟ್ ಮಾತ್ರ 300 ಮಂದಿ ಗಣವೇಶಧಾರಿಗಳು ಹಾಗೂ 50 ಜನರು ಬ್ಯಾಂಡ್‌ನವರು ಭಾಗವಹಿಸಲು ಅವಕಾಶ ನೀಡಿದೆ. ಏನಾದರೂ ಕಾನೂನು ಸಮಸ್ಯೆ ಆಗದಂತೆ ಶಾಂತಿಯಿಂದ ಮಧ್ಯಾಹ್ನ 3.30ರಿಂದ ಸಂಜೆ 5.30ರ ಅವಧಿಯಲ್ಲಿ ಮುಕ್ತಾಯ ಮಾಡುವಂತೆ ಕೋರ್ಟ್ ಷರತ್ತು ವಿಧಿಸಿದೆ. ಇದೀಗ ಭೀಮ್ ಆರ್ಮಿ ಕೂಡ ಅಂದೇ ಭೀಮ್ ಪಥಸಂಚಲನ ಮಾಡ್ತೇವೆ ಎಂದು ಹೊರಟಿದ್ದು, ಜಿಲ್ಲಾಡಳಿತ ಯಾವ ಕ್ರಮ ತೆಗೆದುಕೊಳ್ಳುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ. ಎರಡೂ ಸಂಘಟನೆಗಳು ಒಂದೇ ದಿನ ಪಥಸಂಚಲನಕ್ಕೆ ಬಂದರೆ ಅದರಿಂದ ಜನಸಾಮಾನ್ಯರಿಗೆ ಸಮಸ್ಯೆ ಉಂಟಾಗಬಹುದು ಅಥವಾ ಒಂದೇ ದಿನ ಪಥಸಂಚನ ಆದರೆ ಘರ್ಷಣೆಗೂ ಕಾರಣ ಆಗಬಹುದು ಎನ್ನಲಾಗ್ತಿದೆ.


