ಓಲಾ ಸಂಸ್ಥೆ ಗ್ರಾಹಕರನ್ನು ಮಿಸ್ಲೀಡ್ ಮಾಡ್ತಿದೆ ಅನ್ನೋ ಆರೋಪವನ್ನು ಕೋರ್ಟ್ ಅಕ್ಷರಶಃ ಒಪ್ಪಿಕೊಂಡಿದೆ. ಅತ್ಯಂತ ವೇಗವಾಗಿ ಸೇವೆ ಸಿಗುವುದಕ್ಕೆ ಅವಕಾಶ ಮಾಡಿಕೊಡ್ತೇವೆ ಎನ್ನುವ ಮೂಲಕ ಹೆಚ್ಚುವರಿ ಹಣ ವಸೂಲಿ ಮಾಡಲಾಗ್ತಿದೆ. ಇದು ಸರಿಯಾದ ಕ್ರಮವಲ್ಲ ಎಂದಿರುವ ಸೆಂಟ್ರಲ್ ಕನ್ಸೂಮರ್ ಪ್ರೊಟೆಕ್ಷನ್ ಅಥಾರಿಟಿ, ದಂಡ ಪಾವತಿ ಮಾಡುವಂತೆ ಸೂಚನೆ ಕೊಟ್ಟಿದೆ.

ಬೆಂಗಳೂರು ಸೇರಿದಂತೆ ದೇಶದ ಮಹಾನಗರ ಹಾಗು ಇತರೆ ಸಣ್ಣಪುಟ್ಟ ಪಟ್ಟಣಗಳಲ್ಲೂ ಆನ್ಲೈನ್ ಆಧಾರಿದ ಆಟೋ, ಬೈಕ್ ಸೇವೆ ಸಿಗುತ್ತಿದೆ. ಅದರಲ್ಲಿ ಬಹುಮುಖ್ಯವಾಗಿ OLA, UBER, Rapido ಸಂಸ್ಥೆಗಳು ಜನರಿಗೆ ಸೇವೆ ಒದಗಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಈ ಸೇವೆ ಪಡೆಯುವ ಮೊದಲೇ ಜನರಿಂದ ಹೆಚ್ಚುವರಿ ಹಣ ವಸೂಲಿ ಮಾಡುವುದು ಅಪರಾಧ ಎಂದು ಪರಿಗಣಿಸಿದ ಕೋರ್ಟ್, ANI ಟೆಕ್ನಾಲಜೀಸ್ಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಇದರ ಜೊತೆಗೆ ಕೋರ್ಟ್ ಮಹತ್ವದ ಆದೇಶ ಮಾಡಿದ್ದು, ಕೂಡಲೇ ನಿಮ್ಮ ಆ್ಯಪ್ನಿಂದ ಎಲ್ಲಾ ರೀತಿಯ ಆಮೀಷ ಸಂದೇಶಗಳನ್ನು ತೆಗೆದು ಹಾಕಬೇಕು ಅಂತಾನೂ ಕೋರ್ಟ್ ನಿರ್ದೇಶನ ನೀಡಿದೆ. ಪ್ರೀ ಸೆಟ್ ಅಮೌಂಟ್ ಸೇರಿದಂತೆ ಯಾವುದೇ ಹಿಡನ್ ಚಾರ್ಜಸ್ ಹಾಕುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ.

ಈ ರೀತಿ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟು ಸೈಕಾಲಜಿಕಲಿ ಗ್ರಾಹಕರ ಮೇಲೆ ಒತ್ತಡ ಹಾಕಿ ಹಣ ಪಡೆಯುವ ಪ್ರವೃತ್ತಿ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ. ಟಿಪ್, ಆಡ್ ಆನ್, ಹೆಚ್ಚುವರಿ ಹಣ ಹೀಗೆ ಯಾವುದೇ ರೀತಿಯಲ್ಲಿ ಪ್ರಯಾಣಕ್ಕೂ ಮೊದಲೇ ಹೆಚ್ಚುವರಿ ಹಣ ಪಡೆಯುವುದು ಸರಿಯಲ್ಲ ಎಂದು ತೀರ್ಪು ನೀಡಿದೆ.
ಇದೇ ರೀತಿಯಲ್ಲಿ ರ್ಯಾಪಿಡೋ ಸಂಸ್ಥೆಗೂ ಸೆಪ್ಟೆಂಬರ್ನಲ್ಲಿ 10 ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು. ಇದೀಗ ಓಲಾ ಸಂಸ್ಥೆಗೆ ದಂಡ ಹಾಕಲಾಗಿದೆ. ಇನ್ನಾದರೂ ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕಿದೆ. ಹೆಚ್ಚುವರಿ ಹಣ ಕೊಡಬೇಕು ಅಂತಾ ಗ್ರಾಹಕರಿಗೆ ಅನ್ನಿಸಿದರೆ ಅವರೇ ಖುಷಿಯಿಂದ ಕೊಡುತ್ತಾರೆ. ಅದನ್ನು ಬಿಟ್ಟು ಗ್ರಾಹಕರ ಮೇಲೆ ಪರೋಕ್ಷವಾಗಿ ಒತ್ತಡ ಹೇರುವುದು ಸರಿಯಲ್ಲ ಅನ್ನೋದು ಗ್ರಾಹಕರ ನ್ಯಾಯಾಲಯದ ನಿರ್ಧಾರ.
2025ರ ಮೇನಲ್ಲಿ ಈ ದೂರು ದಾಖಲಾಗಿತ್ತು. ಗ್ರಾಹಕರು ಪ್ರಯಾಣ ಮಾಡುವ ಮೊದಲೇ ಟಿಪ್ ಕೇಳ್ತಾರೆ. ರೇಡ್ ಬುಕ್ಕಿಂಗ್ ಆಗದೆ ಇರುವ ಸಾಧ್ಯತೆ ಅಥವಾ ರೈಡರ್ ಆರ್ಡರ್ ಒಪ್ಪಿಕೊಳ್ಳುವುದಿಲ್ಲ ಎನ್ನುವ ಮೂಲಕ ಗ್ರಾಹಕರ ಮೇಲೆ ಮಾನಸಿಕವಾಗಿ ಒತ್ತಡ ಹೇರಲಾಗುತ್ತಿದೆ ಎಂದು ಆರೋಪ ಮಾಡಲಾಗಿತ್ತು.
ಆದರೆ, ನಾವು ಗ್ರಾಹಕರ ಮೇಲೆ ಯಾವುದೇ ಒತ್ತಡ ಹಾಕಿಲ್ಲ. ಬದಲಿಗೆ ಗ್ರಾಹಕರು ಸ್ವಯಂ ಪ್ರೇರಣೆಯಿಂದ ಟಿಪ್ ಹಾಕುವುದಕ್ಕೆ ಅವಕಾಶ ಕೊಟ್ಟಿದ್ದೇವೆ. ಆ ಟಿಪ್ ಹಣ ಸಂಪೂರ್ಣವಾಗಿ ಚಾಲಕನಿಗೆ ಹೋಗುತ್ತದೆ. ಅಡಿಷನಲ್ ಅಮೌಂಟ್ ಕೊಡುವ ಅಥವಾ ಹೆಚ್ಚುವರಿ ಹಣ ಕೊಡದೆ ಇರುವ ಗ್ರಾಹಕರಿಗೆ ಯಾವುದೇ ತಾರತಮ್ಯ ಮಾಡುವುದಿಲ್ಲ. ರೈಡ್ ಹಂಚಿಕೆ ಸಮಾನವಾಗಿ ನಡೆಯುತ್ತದೆ. ಆದರೆ ಚಾಲಕರು ರೇಡ್ ಸ್ವೀಕರಿಸುವುದಕ್ಕೆ ಸಹಕಾರಿ ಅಷ್ಟೆ ಎಂದು ಓಲಾ ಕಂಪನಿ ವಾದಿಸಿತ್ತು.
ಓಲಾ ಕಂಪನಿ ತನ್ನ ವಾದಕ್ಕೆ ಪೂರಕವಾದ ದಾಖಲೆಗಳನ್ನು ಸಲ್ಲಿಸುವಲ್ಲಿ ವಿಫಲ ಆಗಿದೆ. ಚಾಲಕರಿಗೆ ರೈಡ್ ಹಂಚಿಕೆ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡುವುದಿಲ್ಲ ಅನ್ನೋದಕ್ಕೆ ತಾಂತ್ರಿಕ ದಾಖಲೆ ಸಲ್ಲಿಸಬೇಕಿತ್ತು. ದಾಖಲೆ ಸಲ್ಲಿಕೆ ಆಗದೆ ಇರುವ ಕಾರಣಕ್ಕೆ ಕಂಪನಿ ವಾದ ಸುಳ್ಳು ಎನ್ನುವುದು ಸಾಬೀತಾಗಿದೆ. ಹೀಗಾಗಿ 10 ಲಕ್ಷ ರೂಪಾಯಿ ದಂಡ ಬಿದ್ದಿದೆ. ಇನ್ಮುಂದೆ ಆದರೂ ಓಲಾ, ಊಬರ್, ರ್ಯಾಪಿಡೋ ಸೇರಿದಂತೆ ಆನ್ಲೈನ್ ಫ್ಲಾಟ್ಫಾರ್ಮ್ಗಳು ಹೆಚ್ಚುವರಿ ಹಣ ಪೀಕುವುದು ನಿಲ್ಲಬೇಕಿದೆ. ಇದೊಂದು ರೀತಿಯ ಹಗಲು ದರೋಡೆ ಅನ್ನೋದನ್ನು ಕೋರ್ಟ್ ಮಾನ್ಯ ಮಾಡಿರುವುದು ಗ್ರಾಹಕರಿಗೆ ಸಿಕ್ಕ ಗೆಲುವಾಗಿದೆ.


