The Public Spot
ದೇಶ-ವಿದೇಶ

ಅಗ್ರಿಗೋಲ್ಡ್​ ಗ್ರಾಹಕರಿಗೆ ಗುಡ್​ ನ್ಯೂಸ್​.. ಹಣ ಬರುತ್ತೆ.. ಹೇಗೆ..?

ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಅಗ್ರಿಗೋಲ್ಡ್​ ಅನ್ನೋ ಇನ್ಶುರೆನ್ಸ್​ ಕಂಪನಿ ಆರಂಭ ಆಗಿತ್ತು. ಸುಮಾರು 20 -25 ವರ್ಷಗಳ ಹಿಂದೆ ಕೆಲಸ ಮಾಡಿದ್ದ ಅಗ್ರಿಗೋಲ್ಡ್​ ಕಂಪನಿ ಜನರಿಂದ ಹಣ ಪಡೆದು ಭೂಮಿ ಖರೀದಿಯಲ್ಲಿ ತೊಡಗಿತ್ತು. ಮರಗಳನ್ನು ಬೆಳೆಸುವುದು ಸೇರಿದಂತೆ 25 ವರ್ಷಗಳ ಬಳಿಕ ಇಂತಿಷ್ಟು ಹಣ ಕೊಡುವುದಾಗಿ ಜನರಿಗೆ ಭರವಸೆ ನೀಡಿತ್ತು. ಆ ಬಳಿಕ ಕಂಪನಿ ಬಾಗಿಲು ಕೂಡ ಬಂದ್​ ಆಗಿತ್ತು. ಹಣ ಕಟ್ಟಿದ್ದ ಜನರು ಎಲ್ಲಿ ಹಣ ಕೇಲುವುದು ಅನ್ನೋದೂ ಗೊತ್ತಾಗಿರಲಿಲ್ಲ. ಆದರೆ ಇದೀಗ ಆಶಾಕಿರಣವೊಂದು ಮೂಡಿದೆ.

ಅಗ್ರಿಗೋಲ್ಡ್ ಠೇವಣಿದಾರರಿಗೆ ಪರಿಹಾರ ಮತ್ತು ನ್ಯಾಯ ಒದಗಿಸುವ ಉದ್ದೇಶದಿಂದ ಸಮಿತಿ ಒಂದನ್ನ ರಚನೆ ಮಾಡಲಾಗಿದೆ. ಆಂಧ್ರಪ್ರದೇಶ ಸರ್ಕಾರದ ಐವರು ಸಚಿವರನ್ನೊಳಗೊಂಡ ಸಮಿತಿ ರಚನೆ ಮಾಡಿದ್ದು, ಅಗ್ರಿಗೋಲ್ಡ್ ಠೇವಣಿದಾರರಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಶೀಲನೆ ಮಾಡಲಿದೆ. ಜೊತೆಗೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದೆ ಈ ಸಮಿತಿ. ಆಂಧ್ರಪ್ರದೇಶ ಸಿಐಡಿ ಡಿಜಿಪಿ ಹಾಗೂ ಕರ್ನಾಟಕ ಸಿಐಡಿ ಡಿಜಿಪಿ ಜೊತೆ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯದ ಅಗ್ರಿಗೋಲ್ಡ್ ಸಂತ್ರಸ್ತರರಿಗೂ ಸಿಹಿ ಸುದ್ದಿ ಸಿಕ್ಕಿದೆ‌.

ಏಜೆಂಟರಿಂದ ಬಾಂಡ್‌ಗಳನ್ನು ಸಂಗ್ರಹಿಸಲು ಸೂಚನೆ ಕೊಡಲಾಗಿದ್ದು, ರಾಜ್ಯದ 9 ಸ್ಥಳಗಳಲ್ಲಿ ಪರಿಶೀಲನಾ ಕೇಂದ್ರಗಳನ್ನು ಸ್ಥಾಪಿಸಲು ಯೋಜನೆ ಮಾಡಲಾಗಿದೆ. ಆಂಧ್ರಪ್ರದೇಶ ಸಿಐಡಿ ಮತ್ತು ಕರ್ನಾಟಕ ಸಿಐಡಿ ಸಹಯೋಗದಲ್ಲಿ ಪರಿಶೀಲನೆ ನಡೆಯಲಿದ್ದು, ಕರ್ನಾಟಕದಲ್ಲಿ ನಿಗದಿಪಡಿಸಿದ ಸ್ಥಳಗಳಲ್ಲಿ ವಿಶೇಷ ತಂಡಗಳ ರಚನೆ ಆಗಲಿದೆ. ಈ ತಂಡಗಳಿಂದ ಠೇವಣಿದಾರರು, ಸಂತ್ರಸ್ತರು ಮತ್ತು ಏಜೆಂಟರ ಬಳಿ ಇರುವ ದಾಖಲೆಗಳ ನೋಂದಣಿ ಮಾಡಲಾಗುತ್ತದೆ. ಮೂಲ ಅಗ್ರಿಗೋಲ್ಡ್ ಬಾಂಡ್‌ಗಳು, ರಸೀದಿಗಳನ್ನು ಪರಿಶೀಲಿಸಿ ನೋಂದಣಿ ಮಾಡಿಕೊಳ್ಳಲಾಗುತ್ತದೆ.

ಕರ್ನಾಟಕ ರಾಜ್ಯದ ಅಗ್ರಿಗೋಲ್ಡ್ ಸಂತ್ರಸ್ತರು ಹಾಗೂ ಅವರ ಕಾನೂನುಬದ್ಧ ಉತ್ತರಾಧಿಕಾರಿಗಳು ಮತ್ತು ಏಜೆಂಟರು ಅಗತ್ಯ ದಾಖಲೆಗಳೊಂದಿಗೆ ನಿಗದಿಪಡಿಸಿದ ಕೇಂದ್ರಗಳಿಗೆ ಭೇಟಿ ನೀಡುವಂತೆ ಮನವಿ ಮಾಡಲಾಗಿದೆ. ಷರತ್ತು ಮತ್ತು ಸೂಚನೆಗಳ ಪರಿಶೀಲನೆಗಾಗಿ ಮೂಲ ಬಾಂಡ್ ಮಾತ್ರ ತೋರಿಸಬೇಕು. ಬಾಂಡ್‌ನ ಬಣ್ಣದ ಜೆರಾಕ್ಸ್ ಪ್ರತಿಯ ಮೇಲೆ ಸಹಿ ಮಾಡಿ ಅಧಿಕಾರಿಗಳಿಗೆ ನೀಡಬೇಕು. ಮೂಲ ಬಾಂಡ್ ಅನ್ನು ಅಧಿಕಾರಿಗಳಿಗೆ ಸಲ್ಲಿಸುವ ಅಗತ್ಯವಿಲ್ಲ. ಕರ್ನಾಟಕದಲ್ಲಿ 9 ವಿಶೇಷ ಅಗ್ರಿ ಗೋಲ್ಡ್ ಬಾಂಡ್ ಪರಿಶೀಲನಾ ಕೇಂದ್ರ ಸ್ಥಾಪನೆ ಮಾಡಲಾಗ್ತಿದೆ.

ಅಗ್ರಿ ಗೋಲ್ಡ್ ಬಾಂಡ್‌ಗಳು ಅಥವಾ ರಸೀದಿಗಳ ಪರಿಶೀಲನಾ ಪ್ರಕ್ರಿಯೆಗೆ ಸಮಯ ನಿಗದಿ ಮಾಡಿದ್ದು, ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ನಡೆಯಲಿದೆ. ಕರ್ನಾಟಕದ 9 ಪರಿಶಿಲನಾ ಕೇಂದ್ರಗಳು ಹೀಗಿದ್ದು, ಬೆಂಗಳೂರು ಸಿಐಡಿ ಕಚೇರಿ, ತುಮಕೂರು ಜಿಲ್ಲಾ ಪೊಲೀಸ್ ಹೆಡ್ ಕ್ವಾರ್ಟರ್ಸ್, ಮಂಡ್ಯ ಜಿಲ್ಲಾ ಪೊಲೀಸ್ ಹೆಡ್ ಕ್ವಾರ್ಟರ್ಸ್, ಬಾಗಲಕೋಟೆ ಜಿಲ್ಲಾ ಪೊಲೀಸ್ ಹೆಡ್ ಕ್ವಾರ್ಟರ್ಸ್, ಉಡುಪಿ ಜಿಲ್ಲಾ ಪೊಲೀಸ್ ಹೆಡ್ ಕ್ವಾರ್ಟರ್ಸ್, ರಾಯಚೂರು ಜಿಲ್ಲಾ ಪೊಲೀಸ್ ಹೆಡ್ ಕ್ವಾರ್ಟರ್ಸ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಹೆಡ್ ಕ್ವಾರ್ಟರ್ಸ್, ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಹೆಡ್ ಕ್ವಾರ್ಟರ್ಸ್, ಹಾಸನ ಜಿಲ್ಲಾ ಪೊಲೀಸ್ ಹೆಡ್ ಕ್ವಾರ್ಟರ್ಸ್ ಆಗಿವೆ.

ಒಟ್ಟಾರೆ, ಹಣ ಹೋಯ್ತು ಅಂದುಕೊಂಡಿದ್ದ ಅದೆಷ್ಟೋ ಜನರಿಗೆ ಅಗ್ರಿಗೋಲ್ಡ್​ ಹಣ ಬರುವ ನಿರೀಕ್ಷೆ ಮೂಡಿಸಿದೆ. 20 ರಿಂದ 25 ವರ್ಷಗಳ ಹಿಂದೆ ನಿಮ್ಮ ಮನೆಯಲ್ಲೂ 1000, 2000 ಕಟ್ಟಿರಬಹುದು, ಒಮ್ಮೆ ಹಳೆಯ ಪೆಟ್ಟಿಗೆ ಪರಿಶೀಲನೆ ಮಾಡಿ. ಅಥವಾ ನಿಮ್ಮ ಹಿರಿಯರನ್ನು ಕೇಳಿ ನೋಡಿ. ಪ್ರತಿ ಮನೆಯಲ್ಲೂ ಅಗ್ರಿಗೋಲ್ಡ್​ ಎನ್ನುವುದು ಜನಜನಿತ ಆಗಿತ್ತು. ಈ ವಿಷಯವನ್ನು ಆದಷ್ಟು ಜನರಿಗೆ ಶೇರ್​ ಮಾಡುವ ಮೂಲಕ ಜನರಿಗೆ ಗೊತ್ತಾಗುವಂತೆ ಮಾಡುವುದು ನಿಮ್ಮದೇ ಜವಾಬ್ದಾರಿ.

Related posts

ಲೋಕಸಭೆಯಲ್ಲಿ ಪ್ರಧಾನಿ ಮೇಲೆ ಹಲ್ಲೆಗೆ ನಡೆದಿತ್ತಾ ಪ್ಲಾನ್..? ಮೋದಿ ಗೈರಿಗೆ ಕಾರಣ ಇದೆನಾ..?

Publicspot

RSS ನೋಂದಣಿ ವಿಚಾರದಲ್ಲಿ ವಾಕ್ಸಮರ.. ಪತ್ರ ಸೋರಿಕೆ ಆಗಿದ್ಯಾ..?

Publicspot

ಕೇರಳದಲ್ಲಿ ಭೂಮಿ ಕುಸಿತಕ್ಕೆ ಐವರು ಸಾವು.. ಏಕಾಏಕಿ ಕುಸಿದ ಗುಡ್ಡ.

Publicspot

ನೀಟ್‌ ಪ್ರಶ್ನೆ ಪತ್ರಿಕೆ ಲೀಕ್‌ ಒಪ್ಕೊಂಡ್ರೆ ಸಾಕಾ..? ಮಕ್ಕಳಿಗೆ ಮಾತ್ರ ಶಿಕ್ಷೆನಾ..?

Publicspot

Central Budget; ಕೇಂದ್ರ ಸರ್ಕಾರದ ಬಜೆಟ್​ನಲ್ಲಿ ಏನಿದೆ ವಿಶೇಷತೆ..?

Publicspot

ನಾಳೆಯೇ ನಟ ವಿಜಯ್‌ ಪ್ರಮಾಣ ವಚನ.. ಇಂದು ಹಕ್ಕು ಮಂಡನೆ..!

Publicspot